ಭಾರತ ಮತ್ತು ವಿಯಟ್ನಾಂ ನಡುವೆ 12 ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ ಮತ್ತು ವಿಯಟ್ನಾಂ ನಡುವೆ ಪರಸ್ಪರ ಸಂಬಂಧವನ್ನು ವೃದ್ದಿಸುವ ಸಲುವಾಗಿ 12 ಮಹತ್ವದ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ವಿಯಟ್ನಾಂ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ಮೋದಿ ಹಾಗೂ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್ ನಡುವೆ ನಡೆದ ಸುದೀರ್ಘ ಮಾತುಕತೆ ಬಳಿಕೆ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.  ಮೋದಿ ಅವರು 15 ವರ್ಷಗಳ ಬಳಿಕ ವಿಯಟ್ನಾಂಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಆಗಿದ್ದಾರೆ. 2001 ರಲ್ಲಿ ಅಂದಿನ ಭಾರತದ ಪ್ರಧಾನಿಯಾದ ಅಟಲ್ ಬಿಹಾರಿ ವಾಜಪೇಯಿ ವಿಯಟ್ನಾಂಗೆ ಭೇಟಿ ನೀಡಿದ ಕೊನೆಯ ಪ್ರಧಾನಿ.

ಯಾವ ಕ್ಷೇತ್ರದಲ್ಲಿ ಒಪ್ಪಂದ:

  • ಶಾಂತಿಯುತ ಬಳಕೆಗಾಗಿ ಹೊರ ಬಾಹ್ಯಕಾಶದಲ್ಲಿ ಸಂಶೋಧನೆ, ದುಪ್ಟಟ ತೆರಿಗೆ ನಿವಾರಣೆ, ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಯಲ್ಲಿ ಪರಸ್ಪರ ಸಹಕಾರ.
  • ಆರೋಗ್ಯ, ಮಾಹಿತಿ ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಉಭಯ ದೇಶಗಳ ಸಾಗರ ಸಾರಿಗೆ ಮಾಹಿತಿ ವಿನಿಮಯ.
  • ಇದೇ ವೇಳೆ ಉಭಯ ದೇಶಗಳ ನಡುವೆ ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಸಲುವಾಗಿ ಪ್ರಧಾನಿ ಮೋದಿ ಅವರು 500 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ವಿಯಟ್ನಾಂಗೆ ನೀಡುವುದಾಗಿ ಘೋಷಿಸಿದರು. ಇದರಡಿ ಭಾರತದ ಎಲ್&ಟಿ ಕಂಪನಿಯು 100 ಮಿಲಿಯನ್ ಡಾಲರ್ ಬಳಸಿಕೊಂಡು ವಿಯಟ್ನಾಂನ ಕರಾವಳಿ ತೀರದಲ್ಲಿ ಗಸ್ತು ನೌಕೆಗಳನ್ನು ಅಭಿವೃದ್ದಿಪಡಿಸಲಿದೆ.
  • ವಿಯೆಟ್ನಾಂನಲ್ಲಿ ಸಾಫ್ಟ್ವೇರ್ ಪಾರ್ಕ್ ಸ್ಥಾಪನೆಗಾಗಿ ಭಾರತವು 5 ದಶಲಕ್ಷ ಡಾಲರ್ ಧನಸಹಾಯ ಮಾಡುವುದಾಗಿ ಪ್ರಧಾನಿಯವರು ಈ ಸಂದರ್ಭದಲ್ಲಿ ಘೋಷಿಸಿದರು.
  • ಎರಡು ದೇಶಗಳು 2017 ಅನ್ನು “ಸ್ನೇಹ ವರ್ಷ (Year of Friendship)ವನ್ನಾಗಿ ಆಚರಿಸಲು ಒಪ್ಪಿಗೆ ಸೂಚಿಸಿದವು. ಪ್ರಧಾನಿ ಮೋದಿ ಅವರು ವಿಯಟ್ನಾಂನ ಹನೊಯಿಯಲ್ಲಿರುವ 15ನೇ ಶತಮಾನದ “ಕ್ವಾನ್ ಸು ಪಗೋಡ (QUAN SU PAGODA)ಕ್ಕೂ ಭೇಟಿ ನೀಡಿದರು.

 

ಪೆಲೆಟ್ ಗನ್ ಬದಲಿಗೆ ಪಾವಾ (PAVA) ಶೆಲ್ಸ್ ಬಳಸಲು ಕೇಂದ್ರ ಸರ್ಕಾರ ಒಪ್ಪಿಗೆ

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಜನರನ್ನು ನಿಯಂತ್ರಿಸಲು ಪೆಲೆಟ್ ಗನ್ ಬದಲಿಗೆ ಪಾವಾ ಶೆಲ್ಸ್ ಬಳಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಪಾವಾ ಶೆಲ್ಸ್ ಅಥವಾ ಪೆಲರ್ಗೊನಿಕ್ ಆಸಿಡ್ ವನಿಲಿಲ್ಲ್ ಅಮೈಡ್ (Pelargonic Acid Vanillyl Amide (PAVA)) ಮೆಣಸಿನಪುಡಿ ಆಧಾರಿತ ಗ್ರೆನೇಡ್ ಆಗಿದ್ದು, ನೊನಿವಮೈಡ್ (Nonivamide) ಎಂತಲೂ ಕರೆಯಲಾಗುತ್ತದೆ. ಪೆಲೆಟ್ ಗನ್ಗೆ ಹೋಲಿಸಿದರೆ ಇದು ಕಡಿಮೆ ಅಪಾಯಕಾರಿಯಾಗಿದ್ದು,ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ.

 ಪ್ರಮುಖಂಶಾಗಳು

  • ಕಾಳು ಮೆಣಸಿನಲ್ಲಿ ನೈಸರ್ಗಿಕವಾಗಿ ದೊರೆಯುವ ಆರ್ಗಾನಿಕ್ ವಸ್ತುವಾದ “ಪೆಲರ್ಗೊನಿಕ್ ಆಸಿಡ್ ವನಿಲಿಲ್ಲ್ ಅಮೈಡ್” ಅನ್ನು ಪಾವಾ ಶೆಲ್ ಗಳಲ್ಲಿ ಬಳಸಲಾಗಿದೆ. ಈ ಆರ್ಗಾನಿಕ್ ವಸ್ತುವಿನಿಂದಾಗಿ ಇದಕ್ಕೆ ಪಾವಾ ಹೆಸರನ್ನು ಇಡಲಾಗಿದೆ.
  • ಪೆಲೆಟ್ ಗನ್ ಗಳಿಗೆ ಹೋಲಿಸಿದರೆ ಪಾವಾ ಶೆಲ್ ಗಳಿಂದ ದೇಹಕ್ಕೆ ಅಪಾಯವಾಗುವ ಸಂಭವ ತೀರ ಕಡಿಮೆ. ಈ ಶೆಲ್ ದಾಳಿಗೆ ಒಳಗಾದವರು ಸ್ವಲ್ಪ ಕಾಲ ತೀವ್ರ ಹುರಿ ಮತ್ತು ಸ್ತಬ್ದವಾಗುತ್ತಾರೆ.
  • ಆದಾಗ್ಯೂ ಪೆಲೆಟ್ ಗನ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಪೆಲೆಟ್ ಗನ್ ಬಳಸಲಾಗುವುದು.
  • ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರೀಯಲ್ ರಿಸರ್ಚ್ (CSIR)ನ ಅಂಗಸಂಸ್ಥೆಯಾದ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟಾಕ್ಸಿಕಲಾಜಿ ಪಾವಾ ಸೆಲ್ ಅಭಿವೃದ್ದಿಪಡಿಸಿದೆ.

ಹಿನ್ನಲೆ:

  • ಕೇಂದ್ರ ಸರ್ಕಾರ ಇತ್ತೀಚೆಗೆ ರಚಿಸಿದ್ದ ಟಿವಿಎಸ್ಎನ್ ಪ್ರಸಾದ್ ನೇತೃತ್ವದ ಸಮಿತಿಯ ಶಿಫಾರಸ್ಸಿನ ಮೇರೆಗೆ ಪಾವಾ ಶೆಲ್ ಬಳಸಲು ತೀರ್ಮಾನಿಸಲಾಗಿದೆ.
  • ಪೆಲೆಟ್ ಗನ್ ಪರ್ಯಾಯವಾಗಿ ಹಾನಿಕಾರಕವಲ್ಲದ ಆಯುಧವನ್ನು ಶಿಫಾರಸ್ಸು ಮಾಡಲು ಸಮಿತಿಯನ್ನು ರಚಿಸಲಾಗಿತ್ತು.
  • ಪೆಲೆಟ್ ಗನ್ ಬಳಕೆ ತೀವ್ರ ವಿವಾದವನ್ನು ಸೃಷ್ಟಿಸಿತ್ತು. ಇದರಿಂದ ಸಾವಿರಾರು ಜನರು ಹಾನಿಗೊಳಗಾಗಿದ್ದರು. ಅನೇಕ ಜನರು ಕಣ್ಣುಗಳನ್ನು ಕಳೆದುಕೊಂಡಿದ್ದರು. ಆದ್ದರಿಂದ ಪೆಲೆಟ್ ಗನ್ ಬಳಸದಂತೆ ತೀರ್ವ ಒತ್ತಡವನ್ನು ಕೇಂದ್ರ ಸರ್ಕಾರದ ಮೇಲೆ ಹಾಕಲಾಗಿತ್ತು.

 

ಭೂಕಬಳಿಕೆ ವಿಶೇಷ ನ್ಯಾಯಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011ರಡಿ ಸರ್ಕಾರಿ ಭೂಮಿ ಒತ್ತುವರಿದಾರರಿಗೆ ಶಿಕ್ಷೆ ವಿಧಿಸುವ ಸಲುವಾಗಿ ವಿಶೇಷ ನ್ಯಾಯಾಲಯವನ್ನು ರಾಜ್ಯ ಸರ್ಕಾರ ರಚಿಸಿದೆ. ಈ ನ್ಯಾಯಾಲಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಭೂಕಬಳಿಕೆಯನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ 2007ರಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿತು. 2014ರ ಡಿಸೆಂಬರ್‌ನಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಅನ್ನು ಜಾರಿಗೊಳಿಸಿಲಾಗಿದೆ.

ಹಿನ್ನಲೆ:

  • ಇತ್ತೀಚಿನ ದಿನಗಳಲ್ಲಿ ಭೂಕಬಳಿಕೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಭೂಕಬಳಿಕೆಗಾರರಿಗೆ ಶಿಕ್ಷೆ ವಿಧಿಸುವ ಸಲುವಾಗಿ ಕರ್ನಾಟಕ ರಾಜ್ಯ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಅನ್ನು 2014ರ ಡಿಸೆಂಬರ್ ನಲ್ಲಿ ಜಾರಿಗೊಳಿಸಿದೆ. ಈ ಕಾಯಿದೆಯ ಸೆಕ್ಷನ್‌ 39, 94, 104ರ ಪ್ರಕಾರ ಭೂ ಕಬಳಿಕೆದಾರರಿಗೆ ಶಿಕ್ಷೆ ವಿಧಿಸಲು ಅವಕಾಶ ಇದೆ. ಆದರೆ, ಈ ಸೆಕ್ಷನ್ ಗಳು ಸರಿಯಾಗಿ ಬಳಕೆಯಾಗಿಲ್ಲ. ಭೂಕಬಳಿಕೆಯನ್ನು ತಡೆಯಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಅನೇಕ ಸಂಘ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನಲೆಯಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ.

ಎ ಟಿ ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ಸಮಿತಿ:

  • ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಯನ್ನು ಅಧ್ಯಯನ ನಡೆಸುವ ಸಲುವಾಗಿ ಎ.ಟಿ.ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು 2007 ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ನಿವೃತ್ತ ಐಎಎಸ್ ಅಧಿಕಾರಿಯಾದ ವಿ. ಬಾಲಸುಬ್ರಮಣ್ಯಂ ಅಧ್ಯಕ್ಷತೆಯ ಕಾರ್ಯಪಡೆಯನ್ನು ಸಹ ರಚಿಸಲಾಗಿತ್ತು. ಈ ಎರಡು ಸಮಿತಿಗಳ ಅಧ್ಯಯನದ ವರದಿಯಲ್ಲಿ ರಾಜ್ಯದಾದ್ಯಂತ ಸುಮಾರು 5ಲಕ್ಷ ಕೋಟಿಗೂ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆಯಾಗಿರುವುದಾಗಿ ಕಂಡು ಬಂದಿತ್ತು.

ವಿಶೇಷ ನ್ಯಾಯಾಲದ  ಅಧಿಕಾರಿಗಳು:

  • ಈ ನ್ಯಾಯಾಲಯವು ಕರ್ನಾಟಕ ಭೂಕಬಳಿಕೆ ತಡೆ ಕಾಯ್ದೆ 2011ರ ಸೆಕ್ಷನ್‌ 7ರ ಅಡಿ ಬರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಿದೆ.
  • ವಕ್ಫ್, ಹಿಂದೂ ಧಾರ್ಮಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಭೂಮಿ ಕಬಳಿಸಿದವರಿಗೆ 1 ವರ್ಷದಿಂದ 3 ವರ್ಷದವರೆಗೆ ಶಿಕ್ಷೆ ವಿಧಿಸಲು ನ್ಯಾಯಾಲಕ್ಕೆ ಅವಕಾಶವಿದೆ
  • ಇದರಡಿ ಭೂಗಳ್ಳರಿಗೆ ಗರಿಷ್ಠ ₹25 ಸಾವಿರ ದಂಡ ವಿಧಿಸಬಹುದಾಗಿದೆ.
  • ಭೂ ಮಾಫಿಯಾದ ಜತೆಗೆ ಕೈಜೋಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಶಿಫಾರಸು ಮಾಡಬಹುದು.
  • ಗ್ರಾಮಿಣ ಪ್ರದೇಶಗಳಲ್ಲಿ ಕೃಷಿಗೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವುದನ್ನು ಸಕ್ರಮಗೊಳಿಸಲು ಅವಕಾಶ ಇದೆ. ಹಾಗಾಗಿ ಅಂತಹ ಪ್ರಕರಣಗಳ ವಿಚಾರಣೆ ಈ ವಿಶೇಷ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ.
  • ನ್ಯಾಯಾಲಯದ ವ್ಯಾಪ್ತಿ ರಾಜ್ಯದಾದ್ಯಂತ ಇರಲಿದೆ. ನ್ಯಾಯಾಲಯ ಸ್ವಯಂಪ್ರೇರಿತ ಪ್ರಕರಣಗಳನ್ನೂ ದಾಖಲಿಸಿ ವಿಚಾರಣೆ ನಡೆಸಲಿದೆ.

ನ್ಯಾಯಾಲಯದ ರಚನೆ:

  • ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾರಾಯಣ ನ್ಯಾಯಾಲಯದ ಅಧ್ಯಕ್ಷರನ್ನಾಗಿ ನೇಮಕಮಾಡಲಾಗಿದೆ.
  • ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಆರ್‌.ಎಚ್‌.ರೆಡ್ಡಿ, ಬಿ.ಬಾಲಕೃಷ್ಣ ನ್ಯಾಯಿಕ ಸದಸ್ಯರಾಗಿರುವರು.
  • ಜಿಲ್ಲಾಧಿಕಾರಿ ಮಟ್ಟದ ಇಬ್ಬರು ಅಧಿಕಾರಿಗಳು ಕಂದಾಯ ಸದಸ್ಯರಾಗಿರುವರು. ನಿವೃತ್ತ ಅಧಿಕಾರಿಗಳನ್ನೂ ನೇಮಿಸಲು ಅವಕಾಶ ಇದೆ. ಆರಂಭದಲ್ಲಿ ಮುನೀಶ್ ಮೌದ್ಗಿಲ್ ಅವರನ್ನು ಕಂದಾಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರ ವರ್ಗಾವಣೆಯಾಗಿತ್ತು. ಈವರೆಗೆ ಬೇರೆ ಅಧಿಕಾರಿಗಳ ನೇಮಕ ಆಗಿಲ್ಲ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೆ ರಾಷ್ಟ್ರೀಯ ಪಕ್ಷ ಸ್ಥಾನಮಾನ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಸ್ಥಾನವನ್ನು ಭಾರತೀಯ ಚುನಾವಣಾ ಆಯೋಗ ನೀಡಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಲು ಬೇಕಾದ ಮಾನದಂಡಗಳ ಪೈಕಿ ಒಂದನ್ನು (4 ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಸ್ಥಾನಮಾನ ಪಡೆದಿರಬೇಕು) ಟಿಎಂಸಿ ಪೂರೈಸಿದೆ. ಹೀಗಾಗಿ ಚುನಾವಣಾ ಆಯೋಗ ಟಿಎಂಸಿಯನ್ನು ರಾಷ್ಟ್ರೀಯ ಪಕ್ಷವನ್ನಾಗಿ ಪರಿಗಣಿಸಲು ಒಪ್ಪಿಕೊಂಡಿದೆ. ಪ್ರಸ್ತುತ ಟಿಎಂಸಿ ಪಶ್ಚಿಮಬಂಗಾಳದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದೆ ಹಾಗೂ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಟಿಎಂಸಿ ರಾಜ್ಯ ಪಕ್ಷ ಎನಿಸಿಕೊಂಡಿದೆ. ಚುನಾವಣಾ ಆಯೋಗದ ಈ ನಿರ್ಧಾರದಿಂದ ತೃಣಮೂಲ ಕಾಂಗ್ರೆಸ್ 7ನೇ ರಾಷ್ಟ್ರೀಯ ಪಕ್ಷ ಎನಿಸಿಕೊಂಡಿದೆ. ಸದ್ಯ ಕಾಂಗ್ರೆಸ್‌, ಬಿಜೆಪಿ, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ ಮತ್ತು ಸಿಪಿಎಂಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿವೆ.

ರಾಷ್ಟ್ರೀಯ ಪಕ್ಷ ಸ್ಥಾನ ಪಡೆಯಲು ಬೇಕಾದ ಅರ್ಹತೆ:

ಕೇಂದ್ರ ಚುನಾವಣಾ ಆಯೋಗದ ನಿಯಮದ ಪ್ರಕಾರ ಒಂದು ರಾಜಕೀಯ ಪಕ್ಷ ರಾಷ್ಟ್ರೀಯ ಮಾನ್ಯತೆ ಪಡೆಯಲು ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಲೋಕಸಭೆಯ ಒಟ್ಟು ಬಲದ ಶೇ.2ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಅಥವಾ ನಾಲ್ಕು ವಿಭಿನ್ನ ರಾಜ್ಯಗಳಿಂದ ಕನಿಷ್ಠ ಶೇ.6ರಷ್ಟು ಮತ ಪಡೆಯಬೇಕು ಅಥವಾ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ರಾಜ್ಯ ಪಕ್ಷದ ಸ್ಥಾನಮಾನ ಪಡೆದಿರಬೇಕು.

ಗಮನಿಸಿ:

  • ಆಗಸ್ಟ್-2016 ಭಾರತ ಚುನಾವಣಾ ಆಯೋಗ ಚುನಾವಣಾ ಚಿಹ್ನೆ ನಿಯಮ 1968ಕ್ಕೆ ತಿದ್ದುಪಡಿ ತಂದಿದೆ. ಆ ಮೂಲಕ ರಾಜಕೀಯ ಪಕ್ಷಗಳ ಸ್ಥಾನಮಾನ ನೀಡುವ ಪ್ರಕ್ರಿಯೆಯನ್ನು ಇನ್ನು ಮುಂದೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಮಾತ್ರ ನಡೆಸಲು ನಿರ್ಧರಿಸಿದೆ.
  • ಇದರಿಂದಾಗಿ 2014ರ ಲೋಕಸಭೆ ಚುನಾವಣೆಯಲ್ಲಿನ ಕಳಪೆ ಸಾಧನೆ ಕಾರಣಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದ್ದ ಬಿಎಸ್ಪಿ, ಸಿಪಿಐ ಹಾಗೂ ಎನ್‌ಸಿಪಿ ನಿರಾಳವಾದಂತಾಗಿದೆ.
  • ಸದ್ಯ 5 ವರ್ಷಕ್ಕೊಮ್ಮೆ ರಾಜಕೀಯ ಪಕ್ಷಗಳ ಸ್ಥಾನಮಾನ ಕುರಿತಂತೆ ಚುನಾವಣಾ ಆಯೋಗ ನಿರ್ಧರಿಸುತ್ತದೆ. ಇದರ ಪರಿಣಾಮವಾಗಿ ಐದು ವರ್ಷಕ್ಕೊಮ್ಮೆ ಒಂದು ಪಕ್ಷ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಅದರ ಸ್ಥಾನಮಾನದಲ್ಲೂ ಏರುಪೇರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ಲೋಕಸಭೆ ಅಥವಾ ಎರಡು ವಿಧಾನಸಭೆ ಚುನಾವಣೆ ಅಥವಾ 10 ವರ್ಷಗಳಿಗೊಮ್ಮೆ ಸ್ಥಾನಮಾನ ಕುರಿತಂತೆ ಪರಾಮರ್ಶೆ ನಡೆಸಲು ಆಯೋಗ ನಿರ್ಧರಿಸಿದೆ.

Leave a Comment

This site uses Akismet to reduce spam. Learn how your comment data is processed.