ರಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದ “ಸಾಕ್ಷಿ ಮಲ್ಲಿಕ್”

ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲ್ಲಿಕ್ ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ 58 ಕೆ.ಜಿ ಫ್ರೀ ಸ್ಟೈಲ್ ವಿಭಾಗದಲ್ಲಿ ರಿಪಿಚೇಜ್ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದಾರೆ. ಆ ಮೂಲಕ ಈ ಒಲಂಪಿಕ್ಸ್ನಲ್ಲಿ ಪದಕಕ್ಕೆ ಎದುರು ನೋಡುತ್ತಿದ್ದ ಭಾರತಕ್ಕೆ ಮೊದಲ ಪದಕ ತಂದಿಟ್ಟರು. ಮಹಿಳೆಯರ 58 ಕೆಜಿ ಫ್ರೀ ಸ್ಟೈಲ್ ರಿಪಿಚೇಜ್ ಸ್ಪರ್ಧೆಯಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಸಾಕ್ಷಿ ಮಲಿಕ್ ಅವರು ಕಿರ್ಗಿಸ್ತಾನದ ಐಸಿಲೂ ಟೈನೀಬೆಕೋವಾ ಅವರನ್ನು 8-5 ಅಂತರದಿಂದ ಮಣಿಸಿ ಕಂಚಿನ ಪದಕ ಬಾಚಿಕೊಂಡರು.

  • ಸಾಕ್ಷಿ ಮಲಿಕ್ ಒಲಿಂಪಿಕ್ಸ್ ಪದಕ ಜಯಿಸಿದ ಬಾರತದ ಮೊದಲ ಮಹಿಳಾ ಕುಸ್ತಿಪಟು ಹಾಗೂ ದೇಶದ ನಾಲ್ಕನೇ ಮಹಿಳಾ ಕ್ರೀಡಾಪಟು ಇದರೊಂದಿಗೆ ಒಲಿಂಪಿಕ್ಸ್ ನಲ್ಲಿ ಭಾರತ ಜಯಿಸಿದ ಪದಕದ ಸಂಖ್ಯೆ 25 ಕ್ಕೆ ಏರಿದೆ.

ಸಾಕ್ಷಿ ಮಲ್ಲಿಕ್ ಬಗ್ಗೆ:      

  • ಸಾಕ್ಷಿ ಮಲಿಕ್ ಸೆಪ್ಟೆಂಬರ್ 3, 1992 ರಂದು ಹರ್ಯಾಣದ ರೋಹತಕ್ ನಲ್ಲಿ ಜನಿಸಿದ್ದರು. ಅವರ ತಂದೆ ಸುದೇಶ್ ಮತ್ತು ತಾಯಿ ಸುಖ್ಬೀರ್. ತಮ್ಮ 12ನೇ ವಯಸ್ಸಿಗೆ ಚೋಟು ರಾಮ್ ಕ್ರೀಡಾಂಗಣದ ಕುಸ್ತಿ ಅಖಾಡದಲ್ಲಿ ಈಶ್ವರ್ ದಹಿಯಾ ಮಾರ್ಗದರ್ಶನದಲ್ಲಿ ಕುಸ್ತಿ ತರಬೇತಿ ಪಡೆಯಲಾರಂಭಿಸಿದ್ದರು.
  • 2010: ಜೂನಿಯರ್-ಮಟ್ಟದ ಸ್ಪರ್ಧೆಗಳಲ್ಲಿ ಜಯಿಸಿದ್ದ ಸಾಕ್ಷಿ 2010ರಲ್ಲಿ 59 ಕೆಜಿ ವಿಭಾಗದಲ್ಲಿ 2010 ಕಿರಿಯರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು.
  • 2014: ಡೇವ್ ಷುಲ್ಟ್ಜ್ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ (60 ಕೆಜಿ)ಯಲ್ಲಿ ಚಿನ್ನ ಜಯಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು.
  • 2014 ಆಗಸ್ಟ್: ಗ್ಲಾಸ್ಗೋದಲ್ಲಿ 2014 ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ, ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭ.
  • 2015ಮೇ: ದೋಹಾದಲ್ಲಿ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್‌ನಲ್ಲಿ ಕಂಚು.
  • ಮೇ 2016: ಇಸ್ತಾಂಬುಲ್‌ನಲ್ಲಿ ರಿಯೋ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯ ಸೆಮಿಫೈನಲ್ ನಲ್ಲಿ ಚೀನಾದ ಲ್ಯಾನ್ ಝಾಂಗ್‌ ಅವರನ್ನು ಸೋಲಿಸಿ ಒಲಿಂಪಿಕ್ಸ್ ಗೆ ಪ್ರವೇಶ
  • ಜುಲೈ 2016: ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿ 60 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಕಂಚು.

ಹಿಂದೆ ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಮಹಿಳೆಯರು:

  • ಕರ್ಣ ಮಲ್ಲೇಶ್ವರಿ, ವೇಟ್ ಲಿಪ್ಟಿಂಗ್, ಸಿಡ್ನಿ ಒಲಂಪಿಕ್ಸ್, 2000
  • ಎಂ.ಸಿ.ಮೇರಿ ಕೋಮ್, ಬಾಕ್ಸಿಂಗ್, ಲಂಡನ್ ಒಲಂಪಿಕ್ಸ್, 2012
  • ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್, ಲಂಡನ್ ಒಲಂಪಿಕ್ಸ್, 2012

ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಗೆ ತಮಿಳು ರತ್ನ ಪ್ರಶಸ್ತಿ

ವಿಶ್ವ ಪ್ರಸಿದ್ದ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರಿಗೆ ತಮಿಳು ರತ್ನ ಪ್ರಶಸ್ತಿಯನ್ನು ನೀಡಿ ಗೌರವಸಿಲಾಗಿದೆ. ನ್ಯೂಯಾರ್ಕ್ ಮೂಲದ ತಮಿಳು ಸಂಗಮ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಖ್ಯಾತಿಯ ಎಂ.ಎಸ್.ಸುಬ್ಬುಲಕ್ಷಿ ರವರ ಜನ್ಮಶತಾಬ್ದಿ ಅನ್ವಯ ಏರ್ಪಡಿಸದ್ದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟ ಬಳಿಕ ರೆಹಮಾನ್ ಅವರಿಗೆ ಪ್ರಶಸ್ತಿಯನ್ನು ನೀಡಲಾಯಿತು.

  • ಪ್ರಶಸ್ತಿಯನ್ನು ಈ ಮುಂಚೆ ಭರತ ನಾಟ್ಯ ಪ್ರವೀಣೆ ಕಮಲ ಲಕ್ಷಣ್, ಖ್ಯಾತ ತಮಿಳು ನಿರ್ದೇಶಕ ಭಾರತಿ ರಾಜ ಮತ್ತು ಗಣಿತಶಾಸ್ತ್ರಜ್ಞ ಶ್ರೀನಿವಾಸ ವರ್ಧನ್ ಪಡೆದುಕೊಂಡಿದ್ದಾರೆ

ರೆಹಮಾನ್ ಬಗ್ಗೆ:

  • ಎ.ಆರ್.ರೆಹಮಾನ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಭಾರತದ ಪ್ರಸಿದ್ದ ಸಂಗೀತ ನಿರ್ದೇಶಕ. “ಮೊಜಾರ್ಟ್ ಆಫ್ ಮೈಸೂರು” ಎಂದೇ ಇವರು ಖ್ಯಾತರಾಗಿದ್ದಾರೆ.
  • ಪೌರತ್ಯ ಸಂಗೀತದೊಂದಿಗೆ ವಿದ್ಯುನ್ಮಾನ ಸಂಗೀತವನ್ನು ಸಂಯೋಜಿಸುವುದರಲ್ಲಿ ಇವರು ಪ್ರಸಿದ್ದಿ ಹೊಂದಿದ್ದಾರೆ. ಇತ್ತೀಚೆಗೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡುವ ಮೂಲಕ ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದರು.
  • ತಮ್ಮ ಸಂಗೀತ ಮೂಲಕ ವಿಶ್ವದ ಜನರನ್ನು ಮೋಡಿ ಮಾಡಿರುವ ಇವರು ಆಸ್ಕರ್ ಪ್ರಶಸ್ತಿ, 2 ಬಾರಿ ಗ್ರಾಮಿ ಪ್ರಶಸ್ತಿ, ಬಾಫ್ತ ಪ್ರಶಸ್ತಿ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿ ಅಭಿವೃದ್ದಿಪಡಿಸಲು ರಾಜ್ಯ ಸರ್ಕಾರ ಒಪ್ಪಿಗೆ

ರಾಜ್ಯದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತವನ್ನು ಸರ್ವಋತು ಜಲಪಾತವನ್ನಾಗಿಸಿ ವರ್ಷಪೂರ್ತಿ ಪ್ರವಾಸಿಗರ ಮನತಣಿಸಲು ಮಹತ್ವದ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ವಿಷಯವನ್ನು ಖಚಿತಪಡಿಸಿದ್ದಾರೆ.

ಏನಿದು ಸರ್ವಋತು ಜಲಪಾತ ಯೋಜನೆ:

ಜೋಗ ಜಲಪಾತ ಪ್ರದೇಶದಲ್ಲಿ ನೀರಿನ ಪುನರ್‌ ಬಳಕೆ ಮಾಡಿ ಸರ್ವಋತು ಜಲಪಾತ ನಿರ್ಮಿಸುವುದು ಯೋಜನೆಯ ಉದ್ದೇಶ. ಸದ್ಯ ಜೋಗ ಜಲಪಾತ ಮಳೆಗಾಲದಲ್ಲಿ ಮೈದುಂಬಿ ಹರಿಯುವ ಮೂಲಕ ರಮಣೀಯ ದೃಶ್ಯ ಸೃಷ್ಟಿಸಿ ಪ್ರಮುಖ ಪ್ರವಾಸಿ ತಾಣವಾಗಿದೆ.  ಈ ಯೋಜನೆಯ ಪರಿಕಲ್ಪನೆ 9 ವರ್ಷದ ಹಳೆಯದಾಗಿದ್ದು, ರಾಜ್ಯ ಸರ್ಕಾರ ಈಗ ಒಪ್ಪಿಗೆ ಸೂಚಿಸಿದೆ.

ಯೋಜನೆಯ ಅನುಷ್ಟಾನ:

ಈ ಯೋಜನೆಯನ್ನು ಅಬುದಾಬಿಯ ಬಿಆರ್‌ಎಸ್ ವೆಂಚರ್ಸ್‌ ಸಂಸ್ಥೆಗೆ ವಹಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಅನಿವಾಸಿ ಭಾರತೀಯ ಬಿ.ಆರ್.ಶೆಟ್ಟಿ ಒಡೆತನದ ಸಂಸ್ಥೆಯ 450 ಕೋಟಿ ರೂ.ಗಳನ್ನು ಈ ಯೋಜನೆಗೆ ವಿನಿಯೋಗಿಸಲು ಮುಂದೆ ಬಂದಿದೆ. ಯೋಜನೆ ಅನುಷ್ಠಾನಕ್ಕೆ ಬಂದ ನಂತರ ಜೋಗ ಜಲಪಾತ ಅಭಿವೃದ್ಧಿ ಪ್ರಾಧಿಕಾರವು ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಕನಿಷ್ಠ ದರ ನಿಗದಿಗೊಳಿಸಲಿದೆ. ಕಳೆದ ವರ್ಷ ಸುಮಾರು 8 ಲಕ್ಷ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಸರ್ವಋತು ಜಲಪಾತ ಅನುಷ್ಠಾನಗೊಂಡರೆ ಪ್ರವಾಸಿಗರ ಸಂಖ್ಯೆಯು ಹೆಚ್ಚಲಿದೆ.

ವಿಶ್ವದ ಅತಿದೊಡ್ಡ ವಿಮಾನ “ಏರ್ ಲ್ಯಾಂಡರ್-10” ಪರೀಕ್ಷಾರ್ಥ ಹಾರಾಟ ಯಶಸ್ವಿ

ವಿಶ್ವದ ಅತಿದೊಡ್ಡ ವಿಮಾನ “ಏರ್ ಲ್ಯಾಂಡರ್-10 (Airlander-10)”ನ ಮೊದಲ ಪರೀಕ್ಷಾರ್ಥ ಹಾರಾಟವನ್ನು ಕೇಂದ್ರ ಇಂಗ್ಲೆಂಡ್‌ನ ಕಾರ್ಡಿಂಗ್ಟನ್ ವಾಯುನೆಲೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸರಕು ಸಾಗಣೆ ಸೇರಿದಂತೆ ವಾಣಿಜ್ಯವಲಯದಲ್ಲೂ ಬಳಸಬಹುದಾದ ಈ ವಿಮಾನವನ್ನು ಯುನೈಟೆಡ್ ಕಿಂಗ್ಡಮ್ ನ ಹೈಬ್ರೀಡ್ ಏರ್ ವೆಹಿಕಲ್ಸ್ ಅಭಿವೃದ್ದಿಪಡಿಸಿದೆ. ಇದೇ ಜಾಗದಲ್ಲಿ 86 ವರ್ಷಗಳ ಹಿಂದೆ ಅಂದರೆ 1930ರ ಅಕ್ಟೋಬರ್‌ನಲ್ಲಿ ಮೊಟ್ಟಮೊದಲ ಗಗನನೌಕೆ ಆರ್-101 ಹಾರಾಟ ನಡೆಸಲಾಗಿತ್ತು. ಆದರೆ ಈ ವಾಯುನೌಕೆ ಫ್ರಾನ್ಸ್‌ನಲ್ಲಿ ಅಪಘಾತಕ್ಕೀಡಾಗಿ 48 ಮಂದಿಯನ್ನು ಬಲಿ ಪಡೆದಿತ್ತು

ಏರ್ ಲ್ಯಾಂಡರ್-10 ವಿಶೇಷತೆಗಳು:

  • ಏರ್ ಲ್ಯಾಂಡರ್-10 ಭಾಗಶಃ ವಿಮಾನ ಮತ್ತು ಭಾಗಶಃ ವಾಯುನೌಕೆಯಾಗಿದ್ದು, ಹೀಲಿಯಂ ಅನಿಲ ತುಂಬಲಾಗಿದೆ. ಏರ್‌ಲ್ಯಾಂಡರ್ 10 ವಿಮಾನ 92 ಮೀಟರ್ ಉದ್ದ ಮತ್ತು 43.5 ಮೀ ಅಗಲವಿದೆ.
  • ಏರ್‌ಲ್ಯಾಂಡರ್ 4880 ಮೀಟರ್ ಎತ್ತರದವರೆಗೂ ಹಾರಬಲ್ಲದು ಮತ್ತು 148 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ ಮತ್ತು 10 ಟನ್ ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
  • ಇದು ಗಾಳಿಯಲ್ಲಿ ಎರಡು ವಾರಗಳ ಕಾಲ ಮಾನವರಹಿತವಾಗಿ ತೇಲುವ ಮತ್ತು ಜನರು ಇರುವಾಗ ಐದು ದಿನಗಳ ಕಾಲ ಆಗಸದಲ್ಲಿ ತೇಲಾಡುವ ಸಾಮರ್ಥ್ಯ ಹೊಂದಿದೆ.
  • ಅಮೆರಿಕನ್ ಸೇನೆಯ ಗಸ್ತು ವಿಮಾನವಾಗಿ ಈ ಏರ್‌ಲ್ಯಾಂಡರ್-10 ಅಭಿವೃದ್ಧಿಪಡಿಸಲಾಗಿತ್ತು ಆದರೆ ಈಗ ಉದ್ದೇಶವನ್ನು ಕೈಬಿಡಲಾಗಿದೆ. ಸರಕು ಸಾಗಾಣಿಕೆಯಂಥ ಉದ್ದೇಶಕ್ಕೆ ವಾಣಿಜ್ಯ ವಲಯದಲ್ಲೂ ಈ ವಿಮಾನವನ್ನು ಬಳಸಬಹುದಾಗಿದೆ.

ಕುಡಿಯುವ ನೀರಿನಲ್ಲಿ ವಿಷಕಾರಿ ಕ್ರೋಮಿಯಂ ಪತ್ತೆ ಹಚ್ಚಲು ಪೋರ್ಟಬಲ್ ಕಿಟ್ ಅಭಿವೃದ್ದಿಪಡಿಸಿದ BARC

ಕುಡಿಯುವ ನೀರಿನಲ್ಲಿ ವಿಷಕಾರಿ ಹೆಕ್ಸಾವೆಲೆಂಟ್ ಕ್ರೋಮಿಯಂಯನ್ನು ಸ್ಥಳದಲ್ಲೇ ಪತ್ತೆ ಹಚ್ಚುವ ಪೋರ್ಟಬಲ್ (Portable) ಕಿಟ್ಅನ್ನು ಬಾಬಾ ಅಣು ಸಂಶೋಧನಾ ಸಂಸ್ಥೆ (BARC) ಅಭಿವೃದ್ದಿಪಡಿಸಿದೆ. ಇದೊಂದು ಸರಳ, ಬಳಕೆದಾರ ಸ್ನೇಹಿ, ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸ್ಥಳದಲ್ಲೇ ನೀರಿನ ಗುಣಮಟ್ಟವನ್ನು ಪರೀಕ್ಷಿಸುವ ಸಾಮರ್ಥ್ಯದಿಂದ ಕೂಡಿದೆ.

  • ಕುಡಿಯುವ ನೀರು ಮತ್ತು ನೆಲ್ಲಿ ನೀರು, ನದಿಗಳು, ಸರೋವರಗಳು ಹಾಗೂ ಅಂತರ್ಜಲದಲ್ಲಿ ಕ್ರೋಮಿಯಂ ಮಟ್ಟವನ್ನು ಮಟ್ಟವನ್ನು ಸ್ಥಳದಲ್ಲೇ ಅಳೆಯುವ ಮೂಲಕ ಅಗತ್ಯ ಪರಿಹಾರ ಒದಗಿಸಲಿದೆ.
  • ನೀರಿನ ಮಾದರಿಗೆ ನಿರ್ದಿಷ್ಟ ಪ್ರಮಾಣದ ನಿರ್ದಿಷ್ಟ ಕಾರಕಗಳನ್ನು ಸೇರಿಸಿ ಮತ್ತು ಬಣ್ಣದಲ್ಲಾಗುವ ಬದಲಾವಣೆಯನ್ನು ಗುರುತಿಸುವ ವಿಧಾನದ ಮೂಲಕ ಪರೀಕ್ಷಿಸಲಾಗುತ್ತದೆ.
  • ಕೇವಲ ಐದು ನಿಮಿಷದಲ್ಲಿ ಬಣ್ಣದಲ್ಲಿ ಬದಲಾವಣೆಯಾಗಲಿದ್ದು, ಬರಿಗಣ್ಣಿನಿಂದ ನೋಡುವ ಮೂಲಕ ನೀರಿನ ಗುಣಮಟ್ಟವನ್ನು ತಿಳಿಯಬಹುದು. ಕಿಟ್ ಜೊತೆಗೆ ನೀಡಿರುವ ಕಲರ್ ಚಾರ್ಟ್ ನಿಂದ ಸುಲಭವಾಗಿ ಹೋಲಿಕೆ ಮಾಡಬಹುದಾಗಿದೆ. ಕಲರ್ ಚಾರ್ಟ್ ನೊಂದಿಗೆ ಹೋಲಿಕೆ ಮಾಡುವ ಮೂಲಕ ನೀರು ಕುಡಿಯಲು ಯೋಗ್ಯವಾಗಿದೆಯೋ ಅಥವಾ ವಿಷಯುಕ್ತವೊ ಎಂಬುದನ್ನು ಸ್ಥಳದಲ್ಲಿಯೇ ತಿಳಿಯಬಹುದು.

ಈ ಕಿಟ್ನ ಉಪಯೋಗಗಳು:

  • ಸ್ಥಳದಲ್ಲಿಯೇ ನೀರಿನ ಮಾದರಿ ಪರೀಕ್ಷಿಸುವ ಸಾಮರ್ಥ್ಯ, ಯಾವುದೇ ಉಪಕರಣಗಳ ಅಗತ್ಯವಿಲ್ಲ, ಕಡಿಮೆ ಬಂಡವಾಳ, ಉತ್ತಮ ಫಲಿತಾಂಶ ಮತ್ತು ಸರಳ ಬಳಕೆ ವಿಧಾನ.

ಹಿನ್ನಲೆ:

  • ಕ್ರೋಮಿಯಂ ವ್ಯಾಪಕವಾಗಿ ಉಕ್ಕು, ಚರ್ಮ, ಕ್ರೋಮ್ ಲೋಹ ಲೇಪ, ಬಣ್ಣ ತಯಾರಿಕೆ, ಮರದ ಸಂರಕ್ಷಣೆ ಮುಂತಾದ ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಈ ಕೈಗಾರಿಕೆಗಳಿಂದ ಬರುವ ನೀರನ್ನು ಸಂಸ್ಕರಿಸಿದೆ ನೇರವಾಗಿ ಜಲಮೂಲಗಳಿಗೆ ಬಿಡುತ್ತಿರುವ ಕಾರಣ ನೀರಿನ ವ್ಯಾಪಕ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
  • ಪರಿಸರದಲ್ಲಿ ಕ್ರೋಮಿಯಂ ಪ್ರಮುಖವಾಗಿ ತ್ರಿವೆಲೆಂಟ್ ಕ್ರೋಮಿಯಂ ಸಿಆರ್ (III) ಮತ್ತು ಹೆಕ್ಸಾವೆಲೆಂಟ್ ಕ್ರೋಮಿಯಂ CR (VI) ರೂಪದಲ್ಲಿ ಕಾಣಬಹುದಾಗಿದೆ. ಕ್ರೋಮಿಯಂ ಸಿಆರ್ (III)ಗೆ ಹೋಲಿಸಿದರೆ ಹೆಕ್ಸಾವೆಲೆಂಟ್ ಕ್ರೋಮಿಯಂ CR (VI) ಹೆಚ್ಚು ವಿಷಕಾರಿಯಾಗಿರುತ್ತದೆ.
  • ವಿಶ್ವ ಆರೋಗ್ಯ ಸಂಸ್ಥೆ (WHO) ಹೆಕ್ಸಾವೆಲೆಂಟ್ ಕ್ರೋಮಿಯಂ CR (VI) ಕ್ಯಾನ್ಸರ್ ಕಾರಕ ಎಂದು ವರ್ಗೀಕರಿಸಲಾಗಿದ್ದು, ಹೊಟ್ಟೆ ಹುಣ್ಣು, ಕ್ಯಾನ್ಸರ್ ಮತ್ತು ಮೂತ್ರ ಪಿಂಡ ಮತ್ತು ಯಕೃತ್ತು ಸಂಬಂಧಿತ ಕಾಯಿಲೆಗೆ ಕಾರಣವಾಗುತ್ತದೆ.
  • ಇಂಡಿಯನ್ ಸ್ಟಾಂಡರ್ಡ್ IS10500 ಪ್ರಕಾರ, ಕುಡಿಯುವ ನೀರಿನಲ್ಲಿ CR (VI) ಗರಿಷ್ಠ ಅನುಮತಿ ಸಾಂದ್ರತೆ ಪ್ರತಿ ಲೀಟರ್ಗೆ 50 ಮಿಲಿಗ್ರಾಂನಷ್ಟಿರಬೇಕು.

2 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 18, 2016”

  1. Anonymous

    super.good work

  2. rock

    super good work

Leave a Comment

This site uses Akismet to reduce spam. Learn how your comment data is processed.