ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2016-17ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಕರ್ನಾಟಕ ಕಲಾಶ್ರೀ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕಲಾವಿದರನ್ನು ಆಯ್ಕೆ ಮಾಡಲು ಕಲಾವಿದರ ಪ್ರತಿಭೆ, ಸೇವಾ ಹಿರಿತನ, ಶಿಷ್ಯರನ್ನು ತಯಾರು ಮಾಡಿರುವುದು, ಗ್ರಂಥಗಳ ರಚನೆ, ಪ್ರಸ್ತುತ ಸಂಬಂಧಪಟ್ಟ ಪ್ರಕಾರಕ್ಕೆ ಮಾಡುತ್ತಿರುವ ಸೇವೆ ಇವುಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲಾಗಿದೆ. 2016-17ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ವಾರ್ಷಿಕ ಪ್ರಶಸ್ತಿಗೆ ಖ್ಯಾತ ತಬಲಾ ವಾದಕ (ಹಿಂದುಸ್ತಾನಿ) ಧಾರವಾಡದ ಪಂ. ರವೀಂದ್ರ ಯಾವಗಲ್ ಮತ್ತು ಗಮಕ ಕಲಾವಿದ ಕಾಸರಗೋಡಿನ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.

ಇತರೆ ಪ್ರಶಸ್ತಿಗಳು

  • ವಾರ್ಷಿಕ ಪ್ರಶಸ್ತಿ ಕರ್ನಾಟಕ ಸಂಗೀತ ಗಾಯನ: ಡಾ. ಕೆ. ವರದರಂಗನ್ ಬೆಂಗಳೂರು ಪಿಟೀಲು- ನಾಗರತ್ನಮ್ಮ ಮೈಸೂರು ಮೃದಂಗ-ಸೂರ್ಯನಾರಾಯಣಾಚಾರ್ಯ ಕೋಲಾರ ಮೋರ್ಚಿಂಗ್ – ಗುರುರಾಜ್ ಬಳ್ಳಾರಿ
  • ಹಿಂದುಸ್ತಾನಿ ಸಂಗೀತ ಗಾಯನ: ಪರಮೇಶ್ವರ ಹೆಗಡೆ ಹೊನ್ನಾವರ ಉ.ಕ ಗಾಯನ- ರಾಮುಲ ಗಾದಗಿ ಬೀದರ್ ತಬಲ- ಬಂಡೋಪಂತ್ ಕುಲಕರ್ಣಿ ಬೆಳಗಾವಿ.
  • ಸುಗಮ ಸಂಗೀತ: ಆಮಯ್ಯಮಠ ಯಾದಗಿರಿ ವೀರೇಶ ಕಿತ್ತೂರ ಗದಗ ಸುಕುಮಾರ ಬಾಬು ಬೆಂಗಳೂರು (ಲಯವಾದ್ಯ)
  • ನೃತ್ಯ: ಶೀಲಾ ಶ್ರೀಧರ್ ಮೈಸೂರು ಸತ್ಯನಾರಾಯಣರಾಜು ಬೆಂಗಳೂರು ಪೂರ್ಣಿಮಾ ಅಶೋಕ್ ಬೆಂಗಳೂರು ಕಥಾಕೀರ್ತನ-ಹನುಮಂತದಾಸ್ ತುಮಕೂರು
  • ಗಮಕ: ಭಾರತಿ ಭಟ್ ಬೆಳಗಾವಿ ಶೈಲಜಾ ಚಂದ್ರಶೇಖರ್ ಮಂಡ್ಯ

ಎಂ.ಎಸ್.ಸುಬ್ಬುಲಕ್ಷಿ ಜನ್ಮಶತಾಬ್ದಿ ಅಂಗವಾಗಿ ವಿಶ್ವಸಂಸ್ಥೆಯಿಂದ ಅಂಚೆ ಚೀಟಿ

ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜನ್ಮ ಶತಮಾನೋತ್ಸವದ ಗೌರವಾರ್ಥ ವಿಶ್ವಸಂಸ್ಥೆಯು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿಯು ಕಚೇರಿಯು ಈ ವಿಷಯವನ್ನು ಖಚಿತಗೊಳಿಸಿದೆ.

  • ಭಾರತದ 70ನೇ ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15ರಂದು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯುವ ಸಾಮಾನ್ಯ ಅಧಿವೇಶನದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು.
  • 1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸುಬ್ಬುಲಕ್ಷ್ಮಿ ಅವರು ಸಂಗೀತ ಕಾರ್ಯಕ್ರಮ ನೀಡಿದ್ದರು. ಈ ವರ್ಷ ಅದಕ್ಕೆ 50 ವರ್ಷ ತುಂಬುತ್ತದೆ. ಆ ಕಾರಣ ಮತ್ತು ಜನ್ಮಶತಾಬ್ದಿ ಅಂಗವಾಗಿ ವಿಶೇಷ ಅಂಚೆ ಚೀಟಿ ಹೊರತರಲಾಗುತ್ತಿದೆ.
  • ಇದೇ ವೇಳೆ ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಯನ್ನು ಬಿಂಬಿಸುವ ಅವರ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ.
  • ಈ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಮೂಲಕ ಸುಬ್ಬುಲಕ್ಷಿ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಸುಬ್ಬುಲಕ್ಷಿ ನಂತರ ವಿಶ್ವಸಂಸ್ಥೆಯಲ್ಲಿ ಸಂಗೀತ ನಡೆಸಿಕೊಟ್ಟ ಎರಡನೇ ಭಾರತೀಯ ಇವರಾಗಲಿದ್ದಾರೆ.

ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2016ಗೆ ಸಂಸತ್ತು ಅನುಮೋದನೆ

ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ-2016 ಸಂಸತ್ತಿನಲ್ಲಿ ಅನುಮೋದನೆಗೊಂಡಿದೆ. ಈ ಮಸೂದೆಯಿಂದ ಈಶಾನ್ಯ ರಾಜ್ಯಗಳಲ್ಲಿ ಪಶಯಸಂಗೋಪನೆ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಕಾಣಲು ಅನುಕೂಲವಾಗಲಿದೆ. ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಕಾಯಿದೆ-1992ಗೆ ತಿದ್ದುಪಡಿಯನ್ನು ತರುವ ಮೂಲಕ, ನಾಗಲ್ಯಾಂಡ್ ರಾಜ್ಯವನ್ನು ಇಂಫಾಲ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸುವ ಸಲುವಾಗಿ ಈ ಮಸೂದೆಯನ್ನು ಮಂಡಿಸಲಾಗಿದೆ.

  • ಈ ತಿದ್ದುಪಡಿಯಿಂದ ನಾಗಲ್ಯಾಂಡ್ ರಾಜ್ಯವು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಂಫಾಲ ಕೃಷಿ ವಿಶ್ವವಿದ್ಯಾಲಯದಡಿ ಅನುಕೂಲ ಪಡೆಯಲು ಸಹಾಯವಾಗಲಿದೆ.
  • ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಕಾಯಿದೆ-1992ರ ಅನ್ವಯ ಈಶಾನ್ಯ ವಲಯದಲ್ಲಿ ಕೃಷಿ ಮತ್ತು ಕೃಷಿಯೇತರ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅವಕಾಶ ಕಲ್ಪಿಸಿಲಾಗಿದೆ.
  • ಕಾಯಿದೆ ಅನ್ವಯ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಈಶಾನ್ಯ ರಾಜ್ಯಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಬೋಧನೆ ಮತ್ತು ಸಂಶೋಧನೆ ಕೈಗೊಳ್ಳುವ ಜವಬ್ಧಾರಿಯನ್ನು ಹೊಂದಿದೆ.
  • ಈ ಹಿಂದೆ ಕಾಯಿದೆಯಡಿ ಈಶಾನ್ಯ ವಲಯ ಎಂದರೆ ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಮಿಜೋರಾಂ, ಸಿಕ್ಕಿಂ ಮತ್ತು ತ್ರಿಪುರ ರಾಜ್ಯಗಳನ್ನು ಒಳಗೊಂಡ ಪ್ರದೇಶವೆಂದು ವ್ಯಾಖ್ಯಾನಿಸಲಾಗಿತ್ತು.

ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಹೊಸ ಜಲ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಒಪ್ಪಿಗೆ

ರಾಜ್ಯ ಸರ್ಕಾರದ ಪ್ರಮುಖ ನೀರಾವರಿ ಯೋಜನೆಗಳಾದ ಭದ್ರಾ ಮೇಲ್ದಂಡೆ ಮತ್ತು ಎತ್ತಿನ ಹೊಳೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸಲು ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಹೊಸ ಜಲ ನಿಗಮ ಸ್ಥಾಪಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಹೊಸ ನಿಗಮದ ನಿರ್ದೇಶಕ ಮಂಡಳಿಗೆ 15 ಸದಸ್ಯರನ್ನು ನೇಮಿಸಲಾಗುವುದು. ಹೊಸ ನಿಗಮಕ್ಕೆ ವಿಶೇಷಾಧಿಕಾರಿಯಾಗಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್.ರುದ್ರಯ್ಯ ಅವರನ್ನು ಈಗಾಗಲೇ ನೇಮಿಸಲಾಗಿದ್ದು, ಅವರು ಪೂರ್ವಭಾವಿ ಕೆಲಸ ಆರಂಭಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ

  • ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿನ 367 ಸಣ್ಣ ನೀರಾವರಿ ಕೆರೆಗಳನ್ನು ತುಂಬಿಸಲು, ವಾಣಿ ವಿಲಾಸ ಸಾಗರಕ್ಕೆ ಸುಮಾರು 2 ಟಿಎಂಸಿ ಅಡಿ ನೀರು ಪೂರೈಸಲು ಸಾಧ್ಯವಿದೆ. ಈ ಯೋಜನೆಗೆ ರೂ 12,340 ಕೋಟಿ ಪರಿಷ್ಕೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ರಾಜ್ಯ ಸರ್ಕಾರ ನೀಡಿದೆ.

ಎತ್ತಿನಹೊಳೆ ಯೋಜನೆ:

  • ರೂ 12,912.36 ಕೋಟಿಯ ಈ ಯೋಜನೆಯ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು , ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಆಯ್ದ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ.

ಚಡಚಣ ಏತ ನೀರಾವರಿಗೆ ಒಪ್ಪಿಗೆ

  • ರೂ 413.20 ಕೋಟಿ ಅಂದಾಜು ಮೊತ್ತದ ಚಡಚಣ ಏತ ನೀರಾವರಿ ಯೋಜನೆಯು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಜಾರಿಗೊಳಿಸಲಾಗುತ್ತಿದೆ. ಚಡಚಣ ಸುತ್ತಮುತ್ತಲಿನ ಗ್ರಾಮಗಳಾದ ಬರಡೋಲ, ಗೋಡಿಹಾಳ, ಹಾವಿನಹಾಳ, ಹಾಲಹಳ್ಳಿ, ಶಿರಡೋಣ, ರೇವತಗಾಂವ್, ನಿವರಗಿ ಹಾಗೂ ಇತರ ಗ್ರಾಮಗಳು ಬರಪೀಡಿತವಾಗಿದ್ದು, ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಈ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಭೀಮಾ ನದಿಗೆ ಅಡ್ಡಲಾಗಿ ಈಗಾಗಲೇ ನಿರ್ಮಾಣ ಮಾಡಲಾಗುತ್ತಿರುವ ಸಂಖ್ ಬ್ಯಾರೇಜ್ನ ಮೇಲ್ಭಾಗದಲ್ಲಿ ಚಡಚಣ ಏತ ನೀರಾವರಿ ಯೋಜನೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಭೀಮಾ ನದಿಯಿಂದ 1.72 ಟಿಎಂಸಿ ಅಡಿ ನೀರನ್ನು ಪಡೆಯಲಾಗುವುದು. 9,215 ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ, ಜನ, ಜಾನುವಾರುಗಳ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬಹುದಾಗಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 12, 2016”

    1. Anonymous

      It is very less information

Leave a Comment

This site uses Akismet to reduce spam. Learn how your comment data is processed.