“ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇದ್ರ ಮೋದಿ ಅವರು 70ನೇ ಸ್ವಾತಂತ್ರ್ಯೊತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ‘ಆಜಾದಿ 70 ಸಾಲ್-ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮಕ್ಕೆ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಹುಟ್ಟೂರು ಮಧ್ಯಪ್ರದೇಶದ ಅಲಿರಾಜ್ಪುರ್ ನಲ್ಲಿ ಚಾಲನೆ ನೀಡಿದರು. ಯಾದ್ ಕರೋ ಕುರ್ಬಾನಿ  15 ದಿನಗಳ ಕಾರ್ಯಕ್ರಮವಾಗಿದ್ದು, 70ನೇ ಸ್ವಾತಂತ್ರ್ಯೊತ್ಸವ ಹಾಗೂ ಕ್ವಿಟ್ ಇಂಡಿಯಾ ಚಳವಳಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೇಂದ್ರದ ಸಚಿವರು, ಬಿಜೆಪಿಯ ಹಿರಿಯ ನಾಯಕರು ಮುಂದಿನ 15 ದಿನಗಳ ಕಾಲ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

  • “70 ಸಾಲ್-ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮ ಪ್ರತಿ ವ್ಯಕ್ತಿಯಲ್ಲೂ ದೇಶ ಮೊದಲು ನಂತರ ತಾನು ಎಂಬ ಭಾವನೆ ಬಿತ್ತುವ ಧ್ಯೇಯೋದ್ದೇಶವನ್ನು ಹೊಂದಿದೆ.
  • ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಾತಂತ್ರ್ಯ ಯೋಧರು ಮಾಡಿದ ಸರ್ವೋಚ್ಚ ತ್ಯಾಗವನ್ನು ಜನರು ಸ್ಮರಿಸಲು ಈ ಕಾರ್ಯಕ್ರಮ ವೇದಿಕೆ ಸೃಷ್ಟಿಸಲಿದೆ.
  • ಈ ಕಾರ್ಯಕ್ರಮದಲ್ಲಿ ಕೇಂದ್ರದ ಸಚಿವರು ದೇಶದ ನಾನಾ ಭಾಗದಲ್ಲಿ ಸ್ವಾತಂತ್ರ ಹೋರಾಟ ಇತಿಹಾಸ ಹಿನ್ನಲೆ ಇರುವ ಸ್ಥಳಗಳಿಗೆ ಭೇಟಿ ನೀಡಿ ರಾಷ್ಟ್ರಭಕ್ತಿ ಭಾವನೆಯನ್ನು ಪ್ರೇರಿಪಿಸಲಿದ್ದಾರೆ. ಇದರ ಜೊತೆಗೆ ದೇಶದ ಯುವ ಜನತೆಗೆ ದೇಶಕ್ಕಾಗಿ ಸ್ವಾತಂತ್ರ ಹೋರಾಟಗಾರರು ಮಾಡಿದೆ ತ್ಯಾಗ ಮತ್ತು ಸ್ವಾತಂತ್ರ ಪೂರ್ವ ಭಾರತದ ಇತಿಹಾಸದ ಮಾಹಿತಿಯನ್ನು ರವಾನಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಕ್ವಿಟ್ ಇಂಡಿಯಾ ಚಳುವಳಿ:

  • ಭಾರತ ಬಿಟ್ಟು ತೊಲಗಿ ಚಳುವಳಿಯು ಒಂದು ಅಸಹಕಾರ ಚಳುವಳಿಯಾಗಿದ್ದು ಆಗಸ್ಟ್ ೧೯೪೨ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. ೮ ಆಗಸ್ಟ್ ರಂದು ಮುಂಬಯಿಯ ಗೊವಾಳಿಯ ಮೈದಾನ(ಇಂದಿನ ಹೆಸರು – ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು. ಆದರೆ ಈ ಘೋಷಣೆಯ ೨೪ ಗಂಟೆಗಳೊಳಗೆ ಬಹುತೇಕ ಕಾಂಗ್ರೆಸ್ ನಾಯಕರು ಬಂಧಿತರಾಗಿ ಆ ವರ್ಷವನ್ನು ಕಾರಾಗೃಹದಲ್ಲಿ ಕಳೆಯಬೇಕಾಯಿತು.

16 ವರ್ಷ ಸುದೀರ್ಘ ಕಾಲದ ಉಪವಾಸ ಸತ್ಯಾಗ್ರಹಕ್ಕೆ ಅಂತ್ಯ ಹೇಳಿದ ಇರೋಮ್ ಶರ್ಮಿಳ

ಮಣಿಪುರದ ಐರನ್ ಲೇಡಿ ಎಂದೇ ಪ್ರಸಿದ್ದರಾಗಿರುವ ಇರೋಮ್ ಶರ್ಮಿಳ 16 ವರ್ಷ ದೀರ್ಘಕಾಲದ ಉಪವಾಸ ಸತ್ಯಾಗ್ರವನ್ನು ಕೊನೆಮಾಡಿದರು. ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ 16 ವರ್ಷಗಳಿಂದ ಇರೋಮ್‌ ಶರ್ಮಿಳಾ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಮುಂದಿನ ದಿನಗಳಲ್ಲಿ ತಾವು ಸಕ್ರಿಯವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಶರ್ಮಿಳ ವ್ಯಕ್ತಪಡಿಸಿದ್ದಾರೆ.

ಇರೋಮ್ ಶರ್ಮಿಳ ಬಗ್ಗೆ:

  • 14 ಮಾರ್ಚ್, 1972ರಲ್ಲಿ ಮಣಿಪುರದ ಇಪಾಂಲ್ ನಲ್ಲಿ ಜನಿಸಿದ ಶರ್ಮಿಳಾ ಅವರು ಸಾಮಾಜಿಕ ಕಾರ್ಯಕರ್ತೆ, ಸಕ್ರಿಯ ರಾಜಕಾರಣಿ ಹಾಗೂ ಕವಯತ್ರಿ ಕೂಡ ಆಗಿದ್ದಾರೆ.
  • ಮಣಿಪುರದ ಉಕ್ಕಿನ ಮಹಿಳೆ ಎಂತಲೇ ಇವರು ಪ್ರಸಿದ್ದರಾಗಿದ್ದಾರೆ. ನವೆಂಬರ್ 1, 2000 ರಂದು ಇಂಪಾಲ್ ನ ಮಲೊಮ್ ನಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನ ಸಾರ್ವಜನಿಕರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು ಇದನ್ನು ಖಂಡಿಸಿ ಇರೋಮ್ ಶರ್ಮಿಳ ತಮ್ಮ 28ನೇ ವಯಸ್ಸಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಅಂದಿನಿಂದ ದ್ರವರೂಪದ ಆಹಾರವನ್ನು ಮೂಗಿನ ಮೂಲಕ ಅಳವಡಿಸಲಾಗಿರುವ ನಳಿಕೆಯಿಂದ ನೀಡಲಾಗುತ್ತಿತ್ತು.
  • ಮಣಿಪುರದಲ್ಲಿ ಜಾರಿಯಲ್ಲಿದ್ದ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)ಯನ್ನು ರದ್ದುಮಾಡಬೇಕೆಂಬುದು ಅವರ ಪ್ರಮುಖ ಬೇಡಿಕೆ ಆಗಿತ್ತು.

ಶರ್ಮಿಳಾ ಅವರಿಗೆ ಸಂದಿರುವ ಪ್ರಶಸ್ತಿಗಳು:

  • 2007 ರಲ್ಲಿ ಮಾನವ ಹಕ್ಕು ಹೋರಾಟಕ್ಕೆ ನೀಡುವ ಗ್ವಾಂಗ್ಜು ಪ್ರಶಸ್ತಿ, 2009 ರಲ್ಲಿ ಮಹಿಲಮ್ಮ ಪ್ರಶಸ್ತಿ, 2010 ರಲ್ಲಿ ಏಷ್ಯಾ ಮಾನವ ಹಕ್ಕು ಆಯೋಗ ನೀಡುವ ಜೀವಮಾನ ಸಾಧನೆ ಪ್ರಶಸ್ತಿ, 2010 ರಲ್ಲಿ ರಬಿಂದ್ರನಾಥ್ ಟಾಗೋರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ ಎಂದರೆ ಏನು?

  • ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಅಥವಾ Armed Forces Special Powers Act) ಭಾರತ ಸಂವಿಧಾನ ಸೇನಾ ಪಡೆಗಳಿಗೆ ನೀಡಿರುವ ವಿಶೇಷ ಅಧಿಕಾರ. ಈ ಕಾಯ್ದೆ ಸೆಪ್ಟೆಂಬರ್ 11, 1958ರಲ್ಲಿ ಅಸ್ಸಾಂನ ನಾಗ ಹಿಲ್ಸ್ ಪ್ರದೇಶದಲ್ಲಿ ಮಾತ್ರ ಜಾರಿಗೆ ತರಲಾಗಿತ್ತು. ತದನಂತರ ಒಂದರ ನಂತರ ಒಂದರಂತೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಅಸ್ಸಾಂ, ಮೇಘಾಲಯ, ಮಣಿಪುರ, ಮೀಝೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಕಾಯ್ದೆಯನ್ನು ಜಾರಿಗೆ ತರಲಾಯಿತು.
  • ಆದರೆ 1983 ರಲ್ಲಿ ಕಾಯಿದೆ ತಿದ್ದುಪಡಿ ತರುವ ಮೂಲಕ ಪಂಜಾಬ್ ಮತ್ತು ಛತ್ತೀಸ್ ಘಡಕ್ಕೆ ವಿಸ್ತರಿಸಲಾಯಿತು. ಆದರೆ 1997 ರಲ್ಲಿ ಇದನ್ನು ಹಿಂಪಡೆಯಲಾಯಿತು.
  • ತದನಂತರ 1990 ರಲ್ಲಿ ಅಂಗೀಕಾರವಾದ ನಿಯಾಮವಳಿಯಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಕಾಯಿದೆ ಜಾರಿಗೆ ಬಂದಿತು, ಸದ್ಯ ಕಾಶ್ಮೀರದಲ್ಲಿ ಇಂದಿಗೂ ಜಾರಿಯಲ್ಲಿದೆ.

ವಿಶೇಷ ಅಧಿಕಾರವೇನು?

  • ವಾರಂಟ್ ಇಲ್ಲದೇ ಯಾರನ್ನು ಬೇಕಾದರೂ ದಸ್ತಗಿರಿ ಮಾಡುವ, ಬಂಧನ ಮಾಡುವ, ಅಗತ್ಯ ಬಿದ್ದರೆ ಗೋಲಿಬಾರ್ ನಡೆಸುವ ಅಧಿಕಾರವನ್ನು ಸೇನೆಗೆ ಕಾನೂನು ನೀಡುತ್ತದೆ.

ಕಾರ್ಮಿಕ ಪರಿಹಾರ (ತಿದ್ದುಪಡಿ) ಮಸೂದೆ-2016ಗೆ ಲೋಕಸಭೆ ಅನುಮೋದನೆ

ಕಾರ್ಮಿಕರಿಗೆ ಪರಿಹಾರ ಒದಗಿಸುವ ವೇಳೆ ಉದ್ಭವಿಸುವ ಕಾನೂನು ವಿವಾದಗಳನ್ನು ಕಡಿಮೆಗೊಳಿಸುವ ‘ಕಾರ್ಮಿಕರ ಪರಿಹಾರ (ತಿದ್ದುಪಡಿ) ಮಸೂದೆ-2016ಗೆ ಲೋಕಸಭೆಯಲ್ಲಿ ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ನೀಡಲಾಗಿದೆ. ಈ ಮಸೂದೆಯು ಕಾರ್ಮಿಕ ಪರಿಹಾರ ಕಾಯಿದೆ-1923ಗೆ ತಿದ್ದುಪಡಿ ತರುವ ಸಲುವಾಗಿ ಮಂಡಿಸಲಾಗಿದೆ.  ಈ ಕಾನೂನು ಔದ್ಯೋಗಿಕ ರೋಗಗಳು ಸೇರಿದಂತೆ ಕೈಗಾರಿಕಾ ಅಪಘಾತಗಳ ಮೂಲಕ ಗಾಯವಾದಾಗ ನೌಕರರು ಮತ್ತು ಅವರ ಅವಲಂಬಿತರಿಗೆ ಪರಿಹಾರದ ಪಾವತಿಯ ಒದಗಿಸುತ್ತದೆ.

  • ಕಾಯಿದೆಯಡಿ ಸಂಸ್ಥೆಯೂ ತನ್ನ ಕಾರ್ಮಿಕರಿಗೆ ಕಾರ್ಮಿಕ ಪರಿಹಾರದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ. ಮಾಹಿತಿಯನ್ನು ಹಿಂದಿ, ಇಂಗ್ಲೀಷ್ ಅಥವಾ ಸ್ಥಳೀಯ ಭಾಷೆಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವ ವೇಳೆ ನೀಡಬೇಕು.
  • ಕಾರ್ಮಿಕ ಪರಿಹಾರದ ಬಗ್ಗೆ ಮಾಹಿತಿ ನೀಡದೆ ನಿರ್ಲಕ್ಷ್ಯವಹಿಸಿದರೆ ರೂ 50000 ದಿಂದ ರೂ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.
  • ಕಾರ್ಮಿಕ ಪರಿಹಾರ ಸಂಬಂಧಿಸಿದ ವಿವಾದವು ಈ ಮಸೂದೆಯಿಂದ ಕಾರ್ಮಿಕರ ಪರಿಹಾರಕ್ಕಾಗಿ ಕಾನೂನು ವ್ಯಾಜ್ಯಗಳಿಗೆ ಸಂಬಂಧಪಟ್ಟಂತೆ (ಹತ್ತು ಸಾವಿರ ರೂಪಾಯಿಗಳ) ಒಳಗಿದ್ದರೆ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಆಯುಕ್ತರ ಮಟ್ಟದಲ್ಲಿ ಕಾನೂನು ಆಯೋಗಗಳನ್ನು ರಚಿಸಬಹುದಾಗಿದೆ. ಕೇಂದ್ರ ಸರ್ಕಾರ ತನಗೆ ಬೇಕೆನಿಸಿದಾಗ ಈ ಮೊತ್ತವನ್ನು ಹೆಚ್ಚಿಸಬಹುದು.
  • ಮೂಲ ಕಾಯಿದೆಯಲ್ಲಿ, ಸಂಸ್ಥೆಯು ಆಯುಕ್ತರ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದರೆ ನೌಕರನಿಗೆ ನೀಡಬೇಕಾದ ಪಾವತಿಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದಾಗಿತ್ತು. ಆದರೆ ಈ ಅವಕಾಶವನ್ನು ಈಗ ಕೈಬಿಡಲಾಗಿದೆ.

ಸಾಮಾಜಿಕ ಪಿಡುಗಿನ ವಿರುದ್ದ “ಕ್ವಿಟ್ ಇಂಡಿಯಾ 2 ಸ್ವರಾಜ್ಯ ನಿಂದ ಸುರಾಜ್ಯ” ಚಳುವಳಿಗೆ ಮಹಾರಾಷ್ಟ್ರದಲ್ಲಿ ಚಾಲನೆ

ಸಾಮಾಜಿಕ ಪಿಡುಗಗಳನ್ನು ತೊಲಗಿಸುವ ಸಲುವಾಗಿ “ಕ್ವಿಟ್ ಇಂಡಿಯಾ 2 ಸ್ವರಾಜ್ಯ ನಿಂದ ಸುರಾಜ್ಯ” ಚಳುವಳಿಗೆ ಮಹಾರಾಷ್ಟ್ರದಲ್ಲಿ ಚಾಲನೆ ನೀಡಲಾಯಿತು. ಮುಂಬೈನ ಐತಿಹಾಸಿಕ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕ್ವಿಟ್ ಇಂಡಿಯಾ ಚಳುವಳಿಯ ಅಮೃತ ಮಹೋತ್ಸವ ಆಚರಣೆ ವೇಳೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಮತ್ತು ಕೇಂದ್ರ ಸಚಿವ ವೆಂಕಯ್ಯನಾಡ್ಡು ಚಾಲನೆ ನೀಡಿದರು.

  • ಸ್ವತಂತ್ರ ಪೂರ್ವ ರಾಜಕೀಯ ವ್ಯವಸ್ಥೆಯನ್ನು ಸಮಕಾಲೀನ ರಾಜಕೀಯ ವ್ಯವಸ್ಥೆಗೆ ಹೋಲಿಕೆ ಮಾಡಿ, ಸಮಾಜದಲ್ಲಿರುವ ವಿವಿಧ ಸಾಮಾಜಿಕ ಪಿಡುಗುಗಳನ್ನು ತೊಳೆದು ಹಾಕುವುದು ಮತ್ತು ಸ್ವರಾಜ್ಯ ಅನ್ನು ಸುರಾಜ್ಯ ಆಗಿ ಪರಿವರ್ತಿಸುವ ಸಲುವಾಗಿ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ.
  • ಸಾಮಾಜಿಕ ಅನಿಷ್ಟಗಳಾದ ರೈತರ ಆತ್ಮಹತ್ಯೆ, ಅನಕ್ಷರತೆ, ನೀರು ಪೋಲು, ಅಪೌಷ್ಟಿಕತೆ, ಯುವ ಜನತೆಗೆ ಅಂಟಿಕೊಂಡಿರುವ ಮಾದಕ ವಸ್ತುಗಳ ಚಟ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಎಲ್ಲಾ ರಂಗದಲ್ಲೂ ಸಮಗ್ರ ಅಭಿವೃದ್ದಿ ಹೊಂದುವ ಒತ್ತಾಸೆಯನ್ನು ಚಳುವಳಿ ಹೊಂದಿದೆ.
  • ಇದೇ ವೇಳೆ ದೇಶದ ಸ್ವತಂತ್ರಕ್ಕಾಗಿ ಮಡಿದ ಮತ್ತು ಅಭಿವೃದ್ದಿಗಾಗಿ ದುಡಿದ ನಾಯಕರುಗಳನ್ನು ಸಮಾರಂಭದಲ್ಲಿ ಸ್ಮರಿಸಲಾಯಿತು.

5 Thoughts to “ಪ್ರಚಲಿತ ವಿದ್ಯಮಾನಗಳು-ಆಗಸ್ಟ್ 9, 2016”

  1. Anonymous

    it will help for kannada medium students

  2. Mallesh Rathod

    Super sir

  3. I am very happy to see this website. Thanks to create…

  4. It realy helps to kannada medium sdt.Thanks to create…

  5. ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗೆ ಶುಭವಾಗಲಿ

Leave a Comment

This site uses Akismet to reduce spam. Learn how your comment data is processed.