ಅಸ್ಸಾಂನ ಖ್ಯಾತ ಸಾಹಿತಿ ಮಹೀಮ್ ಬೋರ ನಿಧನ

ಅಸ್ಸಾಮಿ ಭಾಷೆಯ ಪ್ರಸಿದ್ದ ಲೇಖಕ ಹಾಗೂ ಶಿಕ್ಷಣ ತಜ್ಞ ಮಹೀಮ್ ಬೋರಾ ನಿಧನರಾದರು. 92 ವರ್ಷ ವಯಸ್ಸಿನ ಬೋರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

  • ಜುಲೈ 6, 1924 ರಲ್ಲಿ ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ಬೋರ ಜನಿಸಿದರು. ಅಸ್ಸಾಮಿ ಸಾಹಿತ್ಯದಲ್ಲಿ ಎಂ.ಎ ಪಧವೀದರರಾದ ಇವರು ನೌಗಾಂಗ್ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸಿದ್ದರು.
  • ಸಣ್ಣ ಕಥೆಗಳು ಮತ್ತು ಕವಿತೆಗಳ ಮೂಲಕ ಅಸ್ಸಾಮಿ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ಬೋರ ನೀಡಿದ್ದರು.
  • ಇವರ “ಇದಾನಿ ಮಹೀರ್ ಹನ್ನಿ” ಕೃತಿಗೆ 2001ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗಿತ್ತು.
  • “ರತಿ ಪುಲ ಪುಲ್”, “ಚಕ್ರವತ್”, “ತಿನಿರ್ ತಿನಿ ಗೊಲ್”, “ಚಿಂತ ಬಿಚಿತ್ರ” “ಬರಯತ್ರಿ” ಇವರ ಪ್ರಮುಖ ಕೃತಿಗಳು

ಪ್ರಶಸ್ತಿಗಳು:

  • 2011 ರಲ್ಲಿ ಪದ್ಮ ಪ್ರಶಸ್ತಿ
  • 2001 ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1998 ಅಸ್ಸಾಂ ವ್ಯಾಲಿ ಸಾಹಿತ್ಯ ಪ್ರಶಸ್ತಿ

ಸರಕು ಮತ್ತು ಸೇವಾ ತೆರಿಗೆ (GST) ಏಪ್ರಿಲ್ 1 ರಿಂದ ಜಾರಿಗೊಳಿಸುವ ಗುರಿ: ಕೇಂದ್ರ ಸರ್ಕಾರ

ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆಯನ್ನು ಏಪ್ರಿಲ್ 1 ರಿಂದ ಜಾರಿಗೊಳಿಸುವ ಮಹತ್ವಕಾಂಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರವರು ಜಿಎಸ್‌ಟಿ ಜಾರಿಗೆ ನೀಲನಕ್ಷೆಯನ್ನು ಬಿಡುಗಡೆಗೊಳಿಸುವ ವೇಳೆ ಈ ವಿಷಯವನ್ನು ಖಾತ್ರಿಪಡಿಸಿದ್ದಾರೆ.

ಹೇಗಿರಲಿದೆ ಜಿಎಸ್‌ಟಿ?

  • ಭಾರತದ ಒಕ್ಕೂಟ ವ್ಯವಸ್ಥೆಗೆ ಸರಿಹೊಂದುಕೊಳ್ಳುವಂತೆ ಕೇಂದ್ರ ಜಿಎಸ್‌ಟಿ (CGST) ಮತ್ತು ರಾಜ್ಯ ಜಿಎಸ್‌ಟಿ (SGST) ಎಂಬ ಎರಡು ಘಟಕಗಳನ್ನು ಜಿಎಸ್‌ಟಿ ಹೊಂದಿರಲಿದೆ. ಆಗಾಗಿ ಕೇಂದ್ರ ಮತ್ತು ರಾಜ್ಯಗಳು ಎರಡೂ ಏಕಕಾಲದಲ್ಲಿ ಮೌಲ್ಯ ಸರಪಳಿ ಮೇಲೆ ಜಿಎಸ್‌ಟಿ ವಿಧಿಸುವ ಅಧಿಕಾರವನ್ನು ಹೊಂದಿರಲಿವೆ. ಜಿಎಸ್‌ಟಿಯನ್ನು ಪ್ರತಿ ಸರಕು ಮತ್ತು ಸೇವೆಗಳ ಪೂರೈಕೆ ಮೇಲೆ ವಿಧಿಸಲಾಗುತ್ತದೆ.
  • ರಾಜ್ಯಗಳು ರಾಜ್ಯದೊಳಗೆ ನಡೆಯುವ ಎಲ್ಲಾ ಅಂತರಿಕ ವ್ಯವಹಾರಗಳ ಮೇಲೆ ರಾಜ್ಯ ಜಿಎಸ್‌ಟಿಯನ್ನು ವಿಧಿಸುವ ಮತ್ತು ಸಂಗ್ರಹಿಸುವ ಹಕ್ಕನ್ನು ಹೊಂದಿರಲಿವೆ. ಅದೇ ರೀತಿ ಕೇಂದ್ರ ಸರ್ಕಾರ ಕೇಂದ್ರ ಜಿಎಸ್‌ಟಿಯನ್ನು ವಿಧಿಸಿ, ಸಂಗ್ರಹಿಸಲಿದೆ.

ಜಿಎಸ್‌ಟಿಯ ಅನುಕೂಲಗಳೇನು?

  • ಏಕರೂಪದ ತೆರಿಗೆ ದರ ಮತ್ತು ವ್ಯವಸ್ಥೆ: ತೆರಿಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಎಲ್ಲಾ ರೀತಿಯ ಪ್ರತ್ಯಕ್ಷ ಪರೋಕ್ಷ ತೆರಿಗೆಗಳನ್ನು, ಉಪಕರಗಳು ರದ್ದಾಗಿ ಏಕೈಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬರುತ್ತದೆ. ಜತೆಗೆ ತೆರಿಗೆ ಪ್ರಮಾಣವೂ ಗಣನೀಯವಾಗಿ ತಗ್ಗುತ್ತದೆ.
  • ಸುಲಭ ಅನುಸರಣೆ: ಜಿಎಸ್‌ಟಿ ಒಂದು ದೃಢವಾದ ಮತ್ತು ಸಮಗ್ರ ಐಟಿ ವ್ಯವಸ್ಥೆಯನ್ನು ಹೊಂದಿರಲಿದೆ. ಆದ್ದರಿಂದ ತೆರಿಗೆ ಪಾವತಿದಾರರ ಸೇವೆಗಳಾದ ನೋಂದಣಿ, ಪಾವತಿ, ಇತ್ಯಾದಿ ಸೇವೆಗಳು ಆನ್ಲೈನ್ ನಲ್ಲಿ ಲಭ್ಯವಾಗುತ್ತದೆ. ಆ ಮೂಲಕ ಸರಳ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಿದೆ.
  • ಸುಧಾರಿತ ಸ್ಪರ್ಧಾತ್ಮಕತೆ: ವ್ಯಾಪಾರ ವಹಿವಾಟಿಗೆ ತಗುಲುವ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ.
  • ಉತ್ಪಾದಕರೂ ಮತ್ತು ರಫ್ತುದಾರರಿಗೆ ಅನುಕೂಲ: ಉತ್ಪಾದಕ ಸರಕುಗಳ ದರ ಕಡಮೆಯಾಗಲಿದ್ದು, ಗ್ರಾಹಕರಿಗೆ ಅನುಕೂಲ. ಉತ್ಪಾದನಾವೆಚ್ಚ, ಸಾಗಣಾ ವೆಚ್ಚ ತಗ್ಗುವುದರ ಜತೆಗೆ ತೆರಿಗೆ ಪ್ರಮಾಣವೂ ತಗ್ಗುವುದರಿಂದ ಉತ್ಪಾದಕ ವಸ್ತುಗಳು ಕಡಮೆ ಬೆಲೆಗೆ ದಕ್ಕುತ್ತವೆ. ಹೀಗಾಗಿ ಬೇಡಿಕೆಯೂ ಹೆಚ್ಚುತ್ತದೆ.

ಗ್ರಾಹಕರಿಗೆ ಹೇಗೆ ಅನುಕೂಲ?

  • ಒಂದೇ ತೆರಿಗೆ ವ್ಯವಸ್ಥೆ: ಜಿಎಸ್ ಟಿ ಜಾರಿಯಾದರೆ ಈ ಎಲ್ಲ ಪರೋಕ್ಷ ತೆರಿಗೆಗಳನ್ನು ತೆಗೆದು ಹಾಕಿ ನೇರ ತೆರಿಗೆ ಮಾತ್ರ ಉಳಿದುಕೊಳ್ಳುತ್ತದೆ. ಅಂದರೆ ರಾಜ್ಯದಿಂದ ರಾಜ್ಯಕ್ಕೆ ಒಂದೇ ವಸ್ತುವಿನ ಬೆಲೆಯಲ್ಲಿ ಭಾರೀ ದರ ವ್ಯತ್ಯಾಸ ಕಾಣ ಸಿಗುವುದಿಲ್ಲ. ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಸ್ತುಗಳು ಕೈಗೆಟುಕಲಿವೆ

ಕೇಂದ್ರ ಮತ್ತು ರಾಜ್ಯಗಳಿಗಾಗುವ ಅನುಕೂಲಗಳು:

  • ಸರಳ ಮತ್ತು ಸುಲಭ ಆಡಳಿತ: ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಅನೇಕ ಪರೋಕ್ಷ ತೆರಿಗೆಗಳನ್ನು ತೆಗೆದುಹಾಕಿ ಏಕರೂಪದ ತೆರಿಗೆ ಜಾರಿಗೆ ಬರುವ ಮೂಲಕ ಆಡಳಿತ ಸುಲಭವಾಗಲಿದೆ.
  • ತೆರಿಗೆ ಕಳ್ಳತನದ ಮೇಲೆ ನಿಗಾ: ಜಿಎಸ್ಟಿ ಜಾರಿಯಿಂದ ತೆರಿಗೆಗಳ್ಳತನ ತಗ್ಗಲಿದ್ದು ತೆರಿಗೆ ಆದಾಯ ಹಿಗ್ಗಲಿದೆ. ಕಡಿಮೆ ತೆರಿಗೆಯೂ ಎಲ್ಲರನ್ನು ತೆರಿಗೆ ಪಾವತಿಸಲು ಉತ್ತೇಜಿಸಲಿದೆ. ಕೇಂದ್ರ ಮತ್ತು ರಾಜ್ಯಗಳು ತೆರಿಗೆ ಮೇಲೆ ಪ್ರತ್ಯೇಕ ನಿಗಾ ಇಡಲಿವೆ. ತೆರಿಗೆ ವಿನಾಯ್ತಿ ಸರಕುಗಳ ಪ್ರಮಾಣ ಬೆರಳೆಣಿಕೆಗೆ ಇಳಿಯಲಿದೆ.

ರಾಷ್ಟ್ರವ್ಯಾಪ್ತಿ ಸ್ತನಪಾನ ಕಾರ್ಯಕ್ರಮ “ಮಾ” ಗೆ ಕೇಂದ್ರ ಸರ್ಕಾರದಿಂದ ಚಾಲನೆ

ಮಾ (MAA Mothers Absolute Affection) ಹೆಸರಿನಡಿ ರಾಷ್ಟ್ರವ್ಯಾಪ್ತಿ ಸ್ತನಪಾನ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಜೆ.ಪಿ.ನಡ್ಡ ಹಾಗೂ ಈ ಕಾರ್ಯಕ್ರಮದ ರಾಯಭಾರಿಯಾಗಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾ” ಉದ್ದೇಶ:

  • ಮಾ ಕೇಂದ್ರ ಆರೋಗ್ಯ ಸಚಿವಾಲಯದ ಮಹತ್ವದ ಕಾರ್ಯಕ್ರಮವಾಗಿದ್ದು, ದೇಶದಲ್ಲಿ ಸ್ತನಪಾನದ ಬಗ್ಗೆ ಸೂಕ್ತ ಅರಿವು ಮೂಡಿಸುವುದಕ್ಕೆ ಆರಂಭಿಸಲಾಗಿದೆ.
  • ಆರೋಗ್ಯ ವ್ಯವಸ್ಥೆಯ ಮೂಲಕ ಸ್ತನಪಾನ ಬೆಂಬಲಿಸುವ ಮತ್ತು ಸಮಾಲೋಚನೆ ಸೇವೆ ನೀಡಿಕೆಯನ್ನು ಉತ್ತೇಜಿಸುವ ಸಲುವಾಗಿ ಆರಂಭಿಸಲಾಗಿದೆ.
  • ತಾಯಂದಿರು, ಗಂಡ ಮತ್ತು ಕುಟುಂಬ ಸದಸ್ಯರಲ್ಲಿ ಸ್ತನಪಾನದ ಮಹತ್ವದ ಬಗ್ಗೆ ಅರಿವು ಮೂಡಿಸಿ, ಸ್ತನಪಾನವನ್ನು ಪ್ರೋತ್ಸಾಹಿಸುವುದು.

ಕಾರ್ಯಕ್ರಮದ ಪ್ರಮುಖ ಅಂಶಗಳು:

  • ಸಮುದಾಯದಲ್ಲಿ ಅರಿವು ಮೂಡಿಸುವುದು, ಆಶಾ ಕಾರ್ಯಕರ್ತೆಯರ ಮೂಲಕ ಸಾಮಾಜಿಕ ಸಂಪರ್ಕ ಬಲಪಡಿಸುವುದು, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಸ್ತನಪಾನದ ಬಗ್ಗೆ ಕೌಶಲ್ಯ ಮೂಢಿಸುವುದು, ಮೇಲ್ವಿಚಾರಣೆ ಮತ್ತು ಪ್ರಶಸ್ತಿ ನೀಡುವಿಕೆ
  • ಕೇಂದ್ರ ಸರ್ಕಾರ ಈ ಕಾರ್ಯಕ್ರಮಕ್ಕಾಗಿ 30 ರೂ ಕೋಟಿಯನ್ನು ಮೀಸಲಿಟ್ಟಿದೆ.

ಸ್ತನಪಾನದ ಮಹತ್ವ:

  • ಜನ್ಮ ನೀಡಿದ ಕೂಡಲೇ, ಅದರಲ್ಲೂ ಮೊದಲ ಒಂದು ಗಂಟೆಯೊಳಗೆ ಹಾಲುಣಿಸುವುದು ಬಹಳ ಅವಶ್ಯಕತೆಯನ್ನು ಹೊಂದಿದೆ. ಮೊದಲ ಕೆಲವು ಗಂಟೆಗಳಲ್ಲೇ ಹಾಲುಣಿಸುವುದರಿಂದ ತಾಯಂದಿರಗೂ ಬಹಳ ಅನುಕೂಲಗಳಿವೆ.
    ಮಗು ಎದೆಹಾಲನ್ನು ಹೀರುವುದರಿಂದ ಎದೆಹಾಲಿನ ಉತ್ಪತ್ತಿಯನ್ನು ಉತ್ತೇಜಿಸುವುದರ ಜೊತೆ ದೇಹದಲ್ಲಿ ಆಕ್ಸಿಟೋಸಿನ್ ಬಿಡುಗಡೆಗೆ ಸಹಕಾರಿಯಾಗುತ್ತದೆ. ಆಕ್ಸಿಟೋಸಿನ್ ಗರ್ಭಕೋಶವನ್ನು ಕುಗ್ಗಿಸುವುದರ ಜೊತೆಗೆ ಪ್ರಸವದ ನಂತರದ ರಕ್ತಸ್ರಾವವನ್ನು ಕಡಿಮೆಮಾಡುತ್ತದೆ.
  • ಕೊಲೊಸ್ಟ್ರಮ್ ಎಂದು ಕರೆಯಲ್ಪಡುವ ಮೊದಲ ಎದೆಹಾಲಿನಲ್ಲಿ ನವಜಾತ ಶಿಶುವನ್ನು ರೋಗಗಳಿಂದ ಕಾಪಾಡಲು ಅಗತ್ಯ ಪೌಷ್ಟಿಕಾಂಶ ಮತ್ತು ರೋಗನಿರೋಧಕ ಶಕ್ತಿ ಇರುತ್ತದೆ.
  • ಮೊದಲ ಆರು ತಿಂಗಳು ಕಡ್ಡಾಯವಾಗಿ ಹಾಲುಣಿಸುವುದನ್ನು ಪ್ರೋತ್ಸಾಹಿಸುವುದು ಏಕೆಂದರೆ ತಾಯಿಹಾಲು ಅತ್ಯಂತ ಶುದ್ಧವಾಗಿರುತ್ತದೆ ಮತ್ತು ಮಗುವಿನ ಬದುಕಿನ ಮೊದಲ ಕೆಲವು ತಿಂಗಳವರಗೆ ಅತ್ಯಗತ್ಯವಾಗಿ ಬೇಕಾಗಿರುವ ಪೌಷ್ಟಿಕಾಂಶ ಇದರಲ್ಲಿರುತ್ತದೆ. ಇದರ ಜೊತೆಗೆ ತಾಯಿಯಲ್ಲಿರುವ ಪ್ರತಿಕಾಯಗಳು ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. ಸ್ತನಪಾನದಿಂದ ಡಯೋರಿಯಾ ಮತ್ತು ನ್ಯೂಮೋನಿಯಾ ಕಾಯಿಲೆಯನ್ನು ತಡೆಯಬಹುದಾಗಿದೆ. ಈ ಎರಡು ಕಾಯಿಲೆಗಳು ಭಾರತದಲ್ಲಿ ಮಕ್ಕಳು ಹೆಚ್ಚು ಮರಣ ಹೊಂದಲು ಕಾರಣವಾಗಿವೆ.
  • 2015ರ ವರ್ಲ್ಡ್ ಬ್ರೆಸ್ಟ್ ಫೀಡಿಂಗ್ ಟ್ರೆಂಡ್ಸ್ ಇನಿಶಿಯೇಟಿವ್(WBTI) ನಡೆಸಿದ ಮೌಲ್ಯಮಾಪನದಲ್ಲಿ ಭಾರತ ಸ್ತನಪಾನ ವಿಚಾರದಲ್ಲಿ 150ಕ್ಕೆ 78 ಅಂಕ ಗಳಿಸಿದೆ.
  • ಆಗಸ್ಟ್ 1 ರಿಂದ 7 ರವರೆಗೆ ಪ್ರತಿ ವರ್ಷ ವಿಶ್ವ ಸ್ತನಪಾನ ಸಪ್ತಾಹ ಎಂದು ಆಚರಿಸಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10% ಮೀಸಲಾತಿ ವಜಾ ಮಾಡಿದ ಗುಜರಾತ್ ಹೈಕೋರ್ಟ್

ಗುಜರಾತಿನ ಪಟೇಲ್ ಸಮುದಾಯ ಸೇರಿದಂತೆ ಇತರೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10% ರಷ್ಟು ಮೀಸಲಾತಿ ಕಲ್ಪಿಸಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಗುಜರಾತ್ ಹೈಕೋರ್ಟ್ ವಜಾಮಾಡಿದೆ. ಆ ಮೂಲಕ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಡಿ ಶೇ. 10 ರಷ್ಟು ಕೋಟಾ ಕಲ್ಪಿಸಿ ಗುಜರಾತ್ ರಾಜ್ಯ ಸರಕಾರ ಮೇ 1ರಂದು ಹೊರಡಿಸಿದ್ದ ಸುಗ್ರೀವಾಜ್ಞೆ ಅಸಿಂಧೂ ಎಂದು ಕೋರ್ಟ್ ತೀರ್ಪು ನೀಡಿದೆ.

  • ರಾಜ್ಯದ ಓಟ್ಟು ಮೀಸಲಾತಿ ಸುಪ್ರೀಂಕೋರ್ಟ್ ನಿಗದಿಪಡಿಸಿರುವ ಶೇ 50% ಮೀಸಲಾತಿ ಮಿತಿ ಮೀರಿರುವುದರಿಂದ ಅಸಾಂವಿಧಾನಿಕವಾಗಿದೆ.
  • ವೈಜ್ಞಾನಿಕ ಅಂಕಿ ಅಂಶಗಳ ಕುರಿತು ಸೂಕ್ತ ಅಧ್ಯಯನ ನಡೆಸದೆ ಸರಕಾರ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ

ಹಿನ್ನಲೆ:

  • ಮೇ 2016 ರಲ್ಲಿ ಗುಜರಾತ್ ಸರ್ಕಾರ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯಡಿ ಶೇ. 10 ರಷ್ಟು ಕೋಟಾ ಕಲ್ಪಿಸಿ, 2016-17 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರುವುದಾಗಿ ಹೇಳಿತ್ತು. ಆದರೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Leave a Comment

This site uses Akismet to reduce spam. Learn how your comment data is processed.