ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಮಹತ್ವದ ಗುರಿ ಹೊಂದಿರುವ ಮೋಟಾರ್ ವಾಹನ (ತಿದ್ದುಪಡಿ) ಮಸೂದೆ-2016ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಸೂದೆಯು ಮೋಟಾರು ವಾಹನ ಕಾಯಿದೆ, 1998 ಕ್ಕೆ ತಿದ್ದುಪಡಿ ತರುವ ಮೂಲಕ ರಸ್ತೆ ಸುರಕ್ಷತೆ ನಿಯಮಗಳ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಿದೆ.

ಮಸೂದೆಯಲ್ಲಿರುವ ಪ್ರಮುಖ ಅಂಶಗಳು:

  • ಮೋಟಾರು ವಾಹನ ಕಾಯಿದೆ-1988 ಒಳಗೊಂಡಿರುವ 223 ಸೆಕ್ಷನ್ಗಳ ಪೈಕಿ 68 ಸೆಕ್ಷನ್ ಗಳಿಗೆ ತಿದ್ದುಪಡಿ ತರುವುದು ಹಾಗೂ ಹೊಸದಾಗಿ 28 ಸೆಕ್ಷನ್ ಗಳನ್ನು ಸೇರಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ.
  • ಮೋಟಾರು ವಾಹನ ಕಾಯಿದೆ-1988ರ ಅಧ್ಯಾಯ 10 ಅನ್ನು ತೆಗೆದು ಹಾಕುವುದು ಮತ್ತು ಅಧ್ಯಾಯ 11 ರಲ್ಲಿರುವ ಅವಕಾಶಗಳನ್ನು ಬದಲಿಸುವ ಮೂಲಕ ವಿಮೆ ಕ್ಲೇಮ ಮತ್ತು ಪರಿಹಾರವನ್ನು ಮತ್ತಷ್ಟು ಸರಳೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ.
  • ಗುದ್ದೋಡು ಪ್ರಕರಣದ ಸಂತ್ರಸ್ತರಿಗೆ 2 ಲಕ್ಷ ರೂ ಪರಿಹಾರ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ ಪರಿಹಾರ ನೀಡಬೇಕು ಎಂಬ ಅಂಶಗಳು ಹೊಸ ಕಾಯಿದೆಯಲ್ಲಿವೆ.
  • ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತ ಮಾಡಿದರೆ ಅದಕ್ಕೆ ಅವರ ಪಾಲಕರೇ ನೇರ ಹೊಣೆ, ವಾಹನದ ನೋಂದಣಿ ರದ್ದು.
  • ವಾಹನ ಚಲಾವಣೆಗೆ ಶೈಕ್ಷಣಿಕ ಹಿನ್ನೆಲೆ ಕಡ್ಡಾಯ ಎಂಬ ನಿಯಮ ರದ್ದು.
  • ವಾಹನ ಚಲಾವಣೆಗೆ ನೀಡಿದ ಲೈಸನ್ಸ್ ಅವಧಿ ಹೆಚ್ಚಳ.
  • ವಾಹನ ತಾತ್ಕಾಲಿಕ ನೋಂದಣಿ ವ್ಯವಸ್ಥೆ ಸಂಪೂರ್ಣ ರದ್ದು.
  • ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಮತ್ತು ಅನಧಿಕೃತವಾಗಿ ವಾಹನ ಚಲಾಯಿಸಿದರೆ 5,000 ರೂ ದಂಡ ಮತ್ತು ವಾಹನ ಚಾಲನೆ ಮಾಡದಂತೆ ಶಿಕ್ಷೆ ವಿಧಿಸಿದ್ದರೂ ವಾಹನ ಚಲಾಯಿಸಿದರೆ ಅಂಥ ಸಂದರ್ಭ ಕನಿಷ್ಠ 10,000 ರೂ ದಂಡ.
  • ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ 10,000 ರು. ದಂಡ, ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 2,000 ರು. ದಂಡ, 3 ತಿಂಗಳ ಜೈಲು ಅಥವಾ ಎರಡೂ ಶಿಕ್ಷೆ, ಹೆಲ್ಮೆಟ್ ಇಲ್ಲದೆ ಬೈಕ್ ಸಂಚಾರಕ್ಕೆ 1,000 ರು. ದಂಡ, 3 ತಿಂಗಳು ಲೈಸನ್ಸ್ ಅಮಾನತು ಮುಂತಾದ ಕಠಿಣ ನಿಯಮಗಳನ್ನು ಮಸೂದೆ ಒಳಗೊಂಡಿದೆ.

ಹಿನ್ನಲೆ:

  • ಭಾರತದಲ್ಲಿ ಪ್ರತಿ ವರ್ಷ ಸುಮಾರು 5 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ಮೂಲಕ 1.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳ ತೀವ್ರತೆಯನ್ನು ಮನಗೊಂಡ ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಮಸೂದೆಯ ಕರಡು ಪ್ರತಿಯನ್ನು ಸಿದ್ದಪಡಿಸಿತ್ತು, ಆದರೆ ಇದಕ್ಕೆ ಅನೇಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು.
  • ರಾಜ್ಯಗಳಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯ ಸಾರಿಗೆ ಸಚಿವರುಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುವ ಮೂಲಕ ಸಲಹೆ ನೀಡುವಂತೆ ಸೂಚಿಸಿತ್ತು.
  • ಈ ಸಮಿತಿಯ ಅಧ್ಯಕ್ಷತೆಯನ್ನು ರಾಜಸ್ಥಾನ ಸಾರಿಗೆ ಸಚಿವರಾದ ಯೂನಸ್ ಖಾನ್ ವಹಿಸಿದ್ದರು. ಸಮಿತಿಯು ವಿವಿಧ ಅವಧಿಯಲ್ಲಿ ಮೂರು ಬಾರಿ ಸಭೆ ಕೈಗೊಂಡು, ಇದರಲ್ಲಿ ಸುಮಾರು 18 ರಾಜ್ಯಗಳ ಸಾರಿಗೆ ಸಚಿವರು ಭಾಗವಹಿಸಿದ್ದರು.
  • ರಸ್ತೆ ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕಾದರೆ ಪ್ರಸ್ತುತ ಇರುವ ಮೋಟಾರು ವಾಹನ ಕಾಯಿದೆ-1988 ಕ್ಕೆ ಶೀಘ್ರವೇ ತಿದ್ದುಪಡಿ ತರಬೇಕೆಂದು ಸಾರಿಗೆ ಸಚಿವರುಗಳನ್ನು ಒಳಗೊಂಡ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

ಸಂವಿಧಾನ (122ನೇ ತಿದ್ದುಪಡಿ) (ಸರಕು ಮತ್ತು ಸೇವಾ), 2014 ಮಸೂದೆಗೆ ರಾಜ್ಯ ಸಭೆ ಅಂಗೀಕಾರ

ದೇಶದಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸುವ ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಮಸೂದೆಗೆ ರಾಜ್ಯಸಭೆ ಸರ್ವಾನುಮತದ ಒಪ್ಪಿಗೆ ನೀಡಿದೆ. ಈ ಮಸೂದೆಗೆ ಒಪ್ಪಿಗೆ ನೀಡುವ ಮೂಲಕ ದೇಶದಲ್ಲಿ ಜಾರಿಯಲ್ಲಿರುವ ಪರೋಕ್ಷ ತೆರಿಗೆಗಳನ್ನು ಸುಧಾರಿಸುವ ಮೂಲಕ ಒಂದು ದೇಶ ಒಂದು ತೆರಿಗೆ ವ್ಯವಸ್ಥೆಗೆ ನಾಂದಿ ಹಾಡಲಿದೆ. ಮೇ 2015 ರಂದು ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ನೀಡಲಾಗಿತ್ತು. ಲೋಕಸಭೆಯು ಸಂವಿಧಾನ ತಿದ್ದುಪಡಿ ಮಸೂದೆಗೆ ಈಗಾಗಲೇ ಒಪ್ಪಿಗೆ ನೀಡಿದೆ. ಆದರೆ ಲೋಕಸಭೆಯಲ್ಲಿ ಅಂಗೀಕಾರವಾದ ಮಸೂದೆಯನ್ನು ಪರಿಷ್ಕರಿಸಿ ರಾಜ್ಯಸಭೆಯಲ್ಲಿ ಅಂಗೀಕಾರ ನೀಡಿರುವುದರಿಂದ ಅದು ಮತ್ತೊಮ್ಮೆ ಲೋಕಸಭೆಯ ಒಪ್ಪಿಗೆ ಪಡೆಯುವುದು ಅಗತ್ಯ

ಸರಕು ಮತ್ತು ಸೇವಾ ತೆರಿಗೆ ಎಂದರೇನು?

ದೇಶವ್ಯಾಪ್ತಿ ಪ್ರಸ್ತುತ ಇರುವ ವಿವಿಧ ಪರೋಕ್ಷ ತೆರಿಗೆಯನ್ನು ರದ್ದುಗೊಳಿಸಿ ಒಂದೇ ತೆರಿಗೆಯನ್ನು ವಿಧಿಸುವ ವ್ಯವಸ್ಥೆಯೇ ಸರಕು ಮತ್ತು ಸೇವಾ ತೆರಿಗೆ. ಉದಾಹರಣೆಯೊಂದಿಗೆ ನೋಡುವದಾದರೆ ಯಾವುದಾದರೂ ಒಂದು ವಸ್ತು ದೇಶದ ಒಳಗಡೆ ತಯಾರಾಗಿ ಅದು ಗ್ರಾಹಕನ ಕೈ ಸೇರುವ ವೇಳೆಗೆ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗೆ ಒಳಪಡಬೇಕಾಗುತ್ತದೆ. ರಾಜ್ಯದಿಂದ ರಾಜ್ಯಕ್ಕೂ ಅದು ಭಿನ್ನವಾಗಿರುತ್ತದೆ. ಮೌಲ್ಯವರ್ಧಿತ ತೆರಿಗೆ(ವ್ಯಾಟ್), ಸೇವಾ ತೆರಿಗೆ, ಸೆಸ್ ಈ ಬಗೆಯ ತೆರಿಗೆಯ ಹೆಸರುಗಳನ್ನು ಇದಕ್ಕೆ ಸೇರಿಸಿಕೊಳ್ಳಬಹುದು. ಉತ್ಪಾದಕನ ಕೈಯಿಂದ ಗ್ರಾಹಕನ ಕೈ ಸೇರುವವರೆಗೆ ತೆರಿಗೆಗಳನ್ನು ಹೇರಿಸಿಕೊಳ್ಳುತ್ತಲೇ ಸಾಗುತ್ತದೆ. ಆದರೆ ಜಿಎಸ್ ಟಿ ಜಾರಿಯಾದರೆ ಈ ಎಲ್ಲ ಪರೋಕ್ಷ ತೆರಿಗೆಗಳನ್ನು ತೆಗೆದು ಹಾಕಿ ನೇರ ತೆರಿಗೆ ಮಾತ್ರ ಉಳಿದುಕೊಳ್ಳುತ್ತದೆ. ಅಂದರೆ ರಾಜ್ಯದಿಂದ ರಾಜ್ಯಕ್ಕೆ ಒಂದೇ ವಸ್ತುವಿನ ಬೆಲೆಯಲ್ಲಿ ಭಾರೀ ದರ ವ್ಯತ್ಯಾಸ ಕಾಣ ಸಿಗುವುದಿಲ್ಲ. ಅಲ್ಲದೇ ಉತ್ಪಾದನ ಘಟಕಗಳು ಪಾವತಿ ಮಾಡುವ ತೆರಿಗೆಯಲ್ಲಿ ಬದಲಾವಣೆ ಆಗುವುದಿಲ್ಲ.

ಜಿಎಸ್ ಟಿಯಿಂದ ರದ್ದಾಗಲಿರುವ ತೆರಿಗೆಗಳು ಯಾವುವು?

  • ಕೇಂದ್ರ ಅಬಕಾರಿ ಸುಂಕ, ಸೇವಾ ತೆರಿಗೆ, ಹೆಚ್ಚುವರಿ ಕಸ್ಟಮ್ ಸುಂಕ ರದ್ದಾಗಲಿವೆ.
  • ರಾಜ್ಯ ಮಟ್ಟದಲ್ಲಿ ರಾಜ್ಯ ಮೌಲ್ಯ ವರ್ಧಿತ ತೆರಿಗೆ, ಮಾರಾಟ ತೆರಿಗೆ, ಐಷರಾಮಿ ತೆರಿಗೆ, ಮನೋರಂಜನಾ ತೆರಿಗೆ, ಲಾಟರಿ ಮತ್ತು ಜೂಜು ಮೇಲಿನ ತೆರಿಗೆ ಸೇರಿದಂತೆ ಎಲ್ಲಾ ಪರೋಕ್ಷ ತೆರಿಗೆಗಳು ರದ್ದಾಗಲಿವೆ.

ಮದ್ಯ ಪ್ರತ್ಯೇಕ: ಮದ್ಯದ ಮೇಲೆ ರಾಜ್ಯ ಸರ್ಕಾರಗಳು ಅಬಕಾರಿ ತೆರಿಗೆ ವಿಧಿಸುತ್ತವೆ. ಮದ್ಯ ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ. ಮದ್ಯಕ್ಕೆ ತೆರಿಗೆ ವಿಧಿಸುವ ಅವಕಾಶ ರಾಜ್ಯ ಸರ್ಕಾರಗಳ ಬಳಿಯೇ ಇರಲಿದೆ.

ಮಸೂದೆಯಲ್ಲಿರುವ ಪ್ರಮುಖ ಪರಿಷ್ಕೃತ ಅಂಶಗಳು:

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆಯಾಗಿ ನೀತಾ ಅಂಬಾನಿ ಆಯ್ಕೆ

ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕ ಮುಖ್ಯಸ್ಥೆ ನೀತಾ ಅಂಬಾನಿರವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಈ ಸಮಿತಿಗೆ ಭಾರತದಿಂದ ಆಯ್ಕೆಯಾದ ಮೊದಲ ಮಹಿಳಾ ಸದಸ್ಯೆ ಎಂಬ ಕೀರ್ತಿಗೆ ಅಂಬಾನಿ ಭಾಜನರಾಗಿದ್ದಾರೆ. ಬ್ರೆಜಿಲ್ ನ ರಿಯೋದಲ್ಲಿ ನಡೆದ ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ 129ನೇ ಸಭೆಯಲ್ಲಿ ನೀತಾ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.

  • ನೀತಾ ಅಂಬಾನಿ ಜೂನ್ 2016ರಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದರು.
  • ನೀತಾ ತಮ್ಮ 70 ನೇ ವರ್ಷದವರೆಗೂ ಐಓಸಿ ಸದಸ್ಯೆಯಾಗಿ ನೀತಾ ಮುಂದುವರೆಯಲಿದ್ದಾರೆ.
  • ನೀತಾ ಅವರು ಈಗ ಐಒಸಿಯಲ್ಲಿರುವ ಭಾರತದ ಏಕೈಕ ಪ್ರತಿನಿಧಿಯಾಗಿದ್ದಾರೆ.
  • ಸರ್ ದೊರಬ್ಜಿ ಟಾಟಾ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಪ್ರತಿನಿಧಿಸಿದ್ದ ಪ್ರಥಮ ಭಾರತೀಯನಾಗಿದ್ದರು, ನಂತರ ರಾಜಾ ರಣಧೀರ್ ಸಿಂಗ್ 2000-14 ರವರೆಗೆ ಸದಸ್ಯರಾಗಿ ಇದೀಗ ಗೌರವ ಸದಸ್ಯರಾಗಿ ಸಮಿತಿಯಲ್ಲಿದ್ದಾರೆ.
  • ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಕೇಂದ್ರ ಕಚೇರಿಯು ಲುಸನ್ನೆ, ಸ್ವಿಟ್ಜರ್ಲ್ಯಾಂಡ್ ನಲ್ಲಿದೆ.

Leave a Comment

This site uses Akismet to reduce spam. Learn how your comment data is processed.