ದೆಹಲಿ-ಅಗರ್ತಲಾ ನಡುವೆ ಸಂಪರ್ಕ ಕಲ್ಪಿಸುವ ತ್ರಿಪುರ ಸುಂದರಿ ಎಕ್ಸಪ್ರೆಸ್ ರೈಲಿಗೆ ಚಾಲನೆ

ದೆಹಲಿ ಮತ್ತು ಅಗರ್ತಲಾ ನಡುವೆ ಸಂಪರ್ಕ ಕಲ್ಪಿಸುವ ಮೊದಲ ಬ್ರಾಡ್ಗೇಜ್ ರೈಲು ಯೋಜನೆಗೆ ಕೇಂದ್ರ ರೈಲ್ವೇ ಖಾತೆ ಸಚಿವ ಸುರೇಶ್ ಪ್ರಭುರವರು ಚಾಲನೆ ನೀಡಿದರು. ತ್ರಿಪುರ ಸುಂದರಿ ಎಕ್ಸಪ್ರೆಸ್ ಎಂತಲೂ ಕರೆಯುವ ಈ ರೈಲು ಚಾಲನೆ ಮೂಲಕ ಈಶಾನ್ಯ ರಾಜ್ಯವಾದ ತ್ರಿಪುರ ದೇಶದ ಇತರೆ ಭಾಗಗಳೊಂದಿಗೆ ರೈಲ್ವೇ ಸಂಪರ್ಕಕ್ಕೆ ಮುಕ್ತವಾಗಲಿದೆ.

  • ತ್ರಿಪುರ ಸುಂದರಿ ಎಕ್ಸಪ್ರೆಸ್ ವಾರಕ್ಕೊಮ್ಮೆ ದೆಹಲಿಯ ಆನಂದ ವಿಹಾರ ಮತ್ತು ತ್ರಿಪುರಾದ ಅಗರ್ತಲಾ ನಡುವೆ ಸಂಚರಿಸಲಿದೆ.
  • ಈ ರೈಲು 46 ಗಂಟೆ 56 ನಿಮಿಷಗಳ ಕಾಲ ಸಂಚರಿಸಲಿದ್ದು, ಒಟ್ಟು 2461 ಕಿ.ಮೀ ಕ್ರಮಿಸಲಿದೆ. ಒಟ್ಟು 16 ರೈಲ್ವೇ ನಿಲ್ದಾಣಗಳನ್ನು ಹಾದುಹೋಗಲಿದೆ.
  • ಪ್ರತಿ ಗುರುವಾರ ಅಗರ್ತಲಾದಿಂದ ನವದೆಹಲಿಗೆ ಸಂಚರಿಸಲಿದ್ದು, ಪ್ರತಿ ಸೋಮವಾರ ದೆಹಲಿಯಿಂದ ಅಗರ್ತಲಾಗೆ ಹಿಂದಿರುಗಲಿದೆ.
  • ಈ ಯೋಜನೆಯ ಒಟ್ಟು ಮೊತ್ತ ರೂ 968 ಕೋಟಿ.

ಭಾರತ- ಬಾಂಗ್ಲ ರೈಲೈ ಯೋಜನೆಗೆ ಶಂಕುಸ್ಥಾಪನೆ:

  • ಭಾರತ ಮತ್ತು ಬಾಂಗ್ಲ ನಡುವೆ ರೈಲ್ವೇ ಸಂಪರ್ಕ ಕಲ್ಪಿಸುವ ಅಗರ್ತಲಾ-ಅಖೌರ (ಬಾಂಗ್ಲ) ಯೋಜನೆಗೆ ಸುರೇಶ್ ಪ್ರಭು ರವರು ಶಂಕುಸ್ಥಾಪನೆ ನೆರವೇರಿಸಿದರು.
  • ಈ ರೈಲು ಯೋಜನೆ ಒಪ್ಪಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್- ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಭೇಟಿಯ ವೇಳೆ ಅಂತಿಮವಾಗಿತ್ತು. ಅಗರ್ತಲಾ-ಅಖೌರ ನಡುವಿನ ರೈಲು ಯೋಜನೆಯಿಂದ ಉಭಯ ದೇಶಗಳ ಸಂಬಂಧ ಸುಧಾರಿಸುವುದು ಮಾತ್ರವಲ್ಲದೆ, ಕೋಲ್ಕತ್ತದಿಂದ ತ್ರಿಪುರಕ್ಕೆ ಬಾಂಗ್ಲಾದೇಶ ಮಾರ್ಗವಾಗಿ ಸಂಪರ್ಕ ಕಲ್ಪಿಸಿದರೆ ಈಶಾನ್ಯ ರಾಜ್ಯಗಳ ಪ್ರದೇಶಗಳಿಗೆ ದೂರ ಮತ್ತು ಪ್ರಯಾಣದ ಅವಧಿ ಕಡಿಮೆ ಆಗುತ್ತದೆ.
  • 2012-13 ನೇ ಸಾಲಿನ ರೈಲ್ವೆ ಬಜೆಟ್ ನಲ್ಲಿ ಭಾರತ- ಬಾಂಗ್ಲಾದೇಶದ ನಡುವಿನ ರೈಲ್ವೆ ಯೋಜನೆಯನ್ನು ಘೋಷಿಸಲಾಗಿತ್ತು.

ದಕ್ಷಿಣ ಚೀನಾಕ್ಕೆ ಅಪ್ಪಳಿಸಿದ ಚಂಡಮಾರುತ ನಿಡಾ

ದಕ್ಷಿಣ ಚೀನಾದ ಗಾಂಗ್ ಡಾಂಗ್ ಪ್ರಾಂತಕ್ಕೆ ನಿಡಾ ಚಂಡಮಾರುತ ಅಪ್ಪಳಿಸಿದ್ದು, ಸಾವಿರಾರು ಜನ ತೊಂದರೆಗೆ ಸಿಲುಕಿದ್ದಾರೆ. ಫಿಲಿಪೈನ್ಸ್ ನ ಮನಿಲಾದಿಂದ ಸುಮಾರು 1,020 ಕಿಮೀ ಪೂರ್ವ-ಆಗ್ನೇಯದಲ್ಲಿ ದಿಕ್ಕಿನಲ್ಲಿ ವಾಯು ಕುಸಿತದಿಂದ ಚಂಡಮಾರುತ ಉಂಟಾಗಿದ್ದು, ಫಿಲಿಪೈನ್ಸ್ ಗೆ ಅಪ್ಪಳಿಸಿದ ನಂತರ ಚೀನಾದಲ್ಲಿ ಅವಾಂತರ ಸೃಷ್ಟಿಸಿದೆ.

  • ನಿಡಾ ಚಂಡಮಾರುತ ಕಳೆದ 33 ವರ್ಷಗಳಲ್ಲಿ ಚೀನಾಕ್ಕೆ ಅಪ್ಪಳಿಸಿದ ಅತ್ಯಂತ ಬಲಿಷ್ಠ ಚಂಡಮಾರುತ ಎನ್ನಲಾಗಿದೆ.
  • ದಕ್ಷಿಣ ಚೀನಾದ ಗಾಂಗ್‌ಡಾಂಗ್‌ನಲ್ಲಿ ಚಂಡಮಾರುತದ ಕೇಂದ್ರಬಿಂದುವಿದ್ದು, ಚಂಡಮಾರುತದಿಂದಾಗಿ ಗಂಟೆಗೆ 151 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.
  • ಚಂಡಮಾರುತದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ.
  • ನಿಡಾ ಚಂಡಮಾರುತದಿಂದ ಚೀನಾದ ಈಶಾನ್ಯ ಭಾಗದಲ್ಲಿ ಮಳೆಯಾಗುತ್ತಿದ್ದು, 180 ಬುಲೆಟ್ ರೈಲು ಸೇರಿದಂತೆ 200 ರೈಲುಗಳ ಸಂಚಾರ ಸ್ತಬ್ಧವಾಗಿದೆ.
  • ಚೀನಾದಲ್ಲಿ 1983ರಲ್ಲಿ ಇಂಥ ಚಂಡಮಾರುತ ಬೀಸಿತ್ತು.

ಹೊಸ ಇತಿಹಾಸ ಬರೆದ ಅಮೆರಿಕಾದ ಸ್ಕೈಡ್ರೈವರ್ ಲೂಕ್ ಐಕಿನ್ಸ್

ಅಮೆರಿಕಾದ ಖ್ಯಾತ ಸ್ಕೈಡ್ರೈವರ್ ಲೂಕ್ ಐಕಿನ್ಸ್ ರವರು ಪ್ಯಾರಾಚೂಟ್ ಬಳಸದೇ 25 ಸಾವಿರ ಅಡಿಗಳಿಂದ ಕೆಳಕ್ಕೆ ಧುಮುಕುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಆ ಮೂಲಕ ಇಷ್ಟು ಎತ್ತರದಿಂದ ಸುರಕ್ಷಿತವಾಗಿ ಧುಮುಕಿದ ವಿಶ್ವದ ಮೊದಲ ವ್ಯಕ್ತಿ ಲೂಕ್ ಆಗಿದ್ದಾರೆ.

  • 25000 ಅಡಿ ಎತ್ತರದಿಂದ ವಿಮಾನದಿಂದ ಜಿಗಿದ ಲೂಕ್ ರವರು ಎರಡು ನಿಮಿಷಗಳಲ್ಲಿ 100 ಅಡಿ ಉದ್ದ 100 ಅಡಿ ಅಗಲದ ನೆಟ್ ಮೇಲೆ ಸುರಕ್ಷಿತವಾಗಿ ಇಳಿಯುವ ಮೂಲಕ ನೋಡುಗರನ್ನು ಬೆರಗಾಗಿಸಿದರು. ಪ್ಯಾರಾಚೂಟ್ ಅನ್ನು ಬಳಸದೇ ಇಂತಹ ಸಾಹಸ ಮಾಡಿದ ಹಿರಿಮೆ ಅವರದು. ದಕ್ಷಿಣ ಕ್ಯಾಲಿಪೋರ್ನಿಯಾದ ಸಿಮಿ ಕಣಿವೆಯಲ್ಲಿ ಈ ಸಾಹಸವನ್ನು ಏರ್ಪಡಿಸಲಾಗಿತ್ತು.
  • ತಮ್ಮ 26 ವರ್ಷ ಸ್ಕೈಡ್ರೈವಿಂಗ್ ವೃತ್ತಿಯಲ್ಲಿ ಲೂಕ್ ರವರು 18,000ಕ್ಕೂ ಹೆಚ್ಚು ಜಿಗಿತಗಳನ್ನು ಮಾಡಿದ್ದಾರೆ.

ಲೂಕ್ ಐಕಿನ್ ಬಗ್ಗೆ:

  • ಲೂಕ್ ಐಕಿನ್ ರವರು ಅಮೆರಿಕಾದ ಪ್ರಸಿದ್ದ ವೃತ್ತಿಪರ ಸ್ಕೈಡ್ರೈವರ್, ಪೈಲಟ್ ಹಾಗೂ ಬೇಸ್ ಸ್ಕೈಡ್ರೈವ್ ತಂಡದ ಸದಸ್ಯ. ತಮ್ಮ 12ನೇ ವಯಸ್ಸಿನಲ್ಲಿಯೇ ಇವರು ಸ್ಕೈಡ್ರೈವ್ ಅನ್ನು ಕರಗತ ಮಾಡಿಕೊಂಡಿದ್ದರು. ಲೂಕ್ ಕೇವಲ ಸ್ಕೈಡ್ರೈವಿಂಗ್ ಅಲ್ಲದೇ ವೈಜ್ಞಾನಿಕ ಛಾಯಾಗ್ರಾಹಕರೂ ಆಗಿದ್ದಾರೆ, ಇವರು ತೆಗೆದಿರುವ ಅನೇಕ ಪೋಟೋಗಳನ್ನು ನಿಯತಕಾಲಿಕೆ ಮತ್ತು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಲಾಗಿದೆ.

ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆ -2016 ಗೆ ಅಂಗೀಕಾರ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಮುಂದಿನ ವರ್ಷದಿಂದ ದೇಶದಾದ್ಯಂತ ಏಕರೂಪದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ನಡೆಸುವ ಸಂಬಂಧ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆ-2016 ಮತ್ತು ದಂತ ತಜ್ಞರ ಮಸೂದೆ-2016 ಗಳಿಗೆ ಸಂಸತ್ತು ಅನುಮೋದನೆ ನೀಡಿದೆ. ಅಂಗೀಕಾರದ ಅನ್ವಯ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಸುಗ್ರೀವಾಜ್ಞೆ-2016 ರದ್ದುಗೊಳ್ಳಲಿದ್ದು, ತಿದ್ದುಪಡಿ ಮಸೂದೆಯ ನಿಬಂಧನೆಗಳು ಮೇ 24, 2016 ರಿಂದಲೇ ಅನ್ವಯಯಾಗಲಿವೆ.

ಮಸೂದೆಯ ಪ್ರಮುಖ ಅಂಶಗಳು:

  • ಎಲ್ಲಾ ವೈದ್ಯಕೀಯ ಸಂಸ್ಥೆಗಳ ಪ್ರವೇಶಕ್ಕೆ ಏಕರೂಪದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಖಡ್ಡಾಯ. ಪದವಿಪೂರ್ವ ಮತ್ತು ಸ್ನಾತ್ತಕೋತ್ತರ ಪ್ರವೇಶಕ್ಕೂ ಇದು ಅನ್ವಯವಾಗಲಿದೆ.
  • ಹೊಸ ವ್ಯವಸ್ಥೆಯಡಿ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ಎರಡಕ್ಕೂ ಇದು ಅನ್ವಯವಾಗಲಿದೆ.
  • ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಹಿಂದಿ, ಇಂಗ್ಲೀಷ್ ಮತ್ತು ಸ್ಥಳೀಯ ಭಾಷೆಯಲ್ಲೂ ಪ್ರವೇಶ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
  • ಒಂದು ವೇಳೆ ಯಾವುದಾದರೂ ರಾಜ್ಯ NEET ಅಳವಡಿಸಿಕೊಳ್ಳದಿದ್ದಾರೆ, ಪರೀಕ್ಷೆಯು 2016-17ನೇ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಮಟ್ಟದಲ್ಲಿ ಅನ್ವಯವಾಗುವುದಿಲ್ಲ.
  • ಹೊಸ ಮಸೂದೆಯ ಅನ್ವಯ ಪರೀಕ್ಷೆ ನಡೆಸುವ ರೀತಿ, ಪರೀಕ್ಷೆ ನಡೆಸುವ ಪ್ರಾಧಿಕಾರ ಮತ್ತು ಹಿಂದಿ, ಇಂಗ್ಲೀಷ್ ಭಾಷೆಯನ್ನು ಹೊರತುಪಡಿಸಿ ಬೇರೆ ಯಾವ ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸಬೇಕು ಎಂಬ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಮಂಡಳಿಗೆ ಬಿಡಲಾಗಿದೆ.

ದಂತ ತಜ್ಞರ (ತಿದ್ದುಪಡೆ) ಮಸೂದೆ-2016:

  • ದಂತ ತಜ್ಞರ (ತಿದ್ದುಪಡೆ) ಮಸೂದೆ-2016 ಸಂಸತ್ತು ಅನುಮೋದನೆ ನೀಡಿದೆ. ದಂತ ವೈದ್ಯಕೀಯ ಕಾಲೇಜುಗಳ ಪ್ರವೇಶ ಏಕರೂಪದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ ಈ ಮಸೂದೆ ಅವಕಾಶ ಕಲ್ಪಿಸಿದೆ.
  • ಮಸೂದೆಯ ಅನ್ವಯ ದಂತ ತಜ್ಞರ ಕಾಯಿದೆ-1948 ಕ್ಕೆ ತಿದ್ದುಪಡಿ ತರಲಾಗುವುದು.

ಈ ಎರಡು ಮಸೂದೆಗಳ ಮೂಲಕ ದೇಶದಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಏಕರೂಪದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜಾರಿಗೆ ತಂದು, ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದು ಭ್ರಷ್ಟಚಾರವನ್ನು ತಡೆಯುವುದಾಗಿದೆ. ಅಲ್ಲದೇ ಬಹು ವಿಧದ ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೂ ಮುಕ್ತಿಸಿಗಲಿದೆ.

Leave a Comment

This site uses Akismet to reduce spam. Learn how your comment data is processed.