ಜಂಕ್ ಆಹಾರ ಮೇಲೆ ಶೇ 14.5% ತೆರಿಗೆ ವಿಧಿಸಲು ಕೇರಳ ಸರ್ಕಾರ ನಿರ್ಧಾರ

ಪಿಜ್ಜಾ, ಬರ್ಗರ್ ನಂತಹ ಜಂಕ್ ಆಹಾರಗಳ ಮೇಲೆ ಶೇ 14.5% ತೆರಿಗೆ ವಿಧಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಣಯದಿಂದ ಕೇರಳದಲ್ಲಿ ಮುಂದಿನ ದಿನಗಳಲ್ಲಿ ಜಂಕ್ ಪುಡ್ ಗಳ ಬೆಲೆ ದುಬಾರಿ ಎನಿಸಲಿದೆ. ಇತ್ತೀಚೆಗೆ ಅಧಿಕಾರಕ್ಕೇರಿದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ತನ್ನ ಮೊದಲನೇ ಬಜೆಟ್ ಮಂಡಿಸಿದ್ದು, ಅದರಲ್ಲಿ ಈ ಪ್ರಸ್ತಾವವನ್ನು ಮುಂದಿಟ್ಟಿದೆ.

  • ಪ್ರಸ್ತಾವನೆಯಂತೆ ಬರ್ಗರ್, ಪಿಜ್ಜಾ, ಪಾಸ್ತಾಗಳಂತಹ ಆಹಾರ ಸರಬರಾಜು ಮಾಡುವ ಬ್ರಾಂಡೆಡ್ ಹೋಟೆಲುಗಳಿಗೆ ಈ ತೆರಿಗೆ ಅನ್ವಯ ಆಗಲಿದೆ.
  • ಜನರ ಆರೋಗ್ಯ ರಕ್ಷಿಸುವ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹಣಕಾಸು ಸಚಿವ ಟಿ.ಎಂ. ಥಾಮಸ್ ಐಸಾಕ್ ಹೇಳಿದ್ದಾರೆ.
  • ಬೊಜ್ಜು ತೆರಿಗೆಯಿಂದ ಸರ್ಕಾರಕ್ಕೆ ವರ್ಷಕ್ಕೆ ರೂ 10 ಕೋಟಿ ವರಮಾನ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.
  • ಜನವರಿ 2016 ರಲ್ಲಿ ಬಿಹಾರ ಸರ್ಕಾರ ಕೂಡ ಇಂತಹದೇ ನಿರ್ಣಯವನ್ನು ಕೈಗೊಂಡಿತ್ತು. ಈ ನಿರ್ಣಯದಂತೆ ಖಾದ್ಯ ಆಹಾರಗಳಾದ ಪಿ ನಟ್, ಸಮೋಸ್, ಕೆಲವು ಲಘು ತಿಂಡಿಗಳ ಮೇಲೆ ಶೇ 13.5 VAT ವಿಧಿಸಲಾಗಿದೆ.

ಕೇಂದ್ರ ಸರ್ಕಾರದಿಂದ ಆರ್ಥಿಕ ಹಣಕಾಸು ವರ್ಷ ಪರಿಶೀಲನೆಗೆ ಸಮಿತಿ

ಪ್ರಸ್ತುತ ಭಾರತ ಅನುಸರಿಸುತ್ತಿರುವ ಆರ್ಥಿಕ ಹಣಕಾಸು ವರ್ಷದ ಬದಲಿಗೆ ಪರ್ಯಾಯ ವರ್ಷವನ್ನು ಅಳವಡಿಸಿಕೊಳ್ಳುವ ಸಲುವಾಗಿ ಕೇಂದ್ರ ಆರ್ಥಿಕ ಸಚಿವಾಲಯ ಸಮಿತಿಯೊಂದನ್ನು ರಚನೆ ಮಾಡಿದೆ. ಹೊಸ ಆರ್ಥಿಕ ವರ್ಷ ಅಳವಡಿಸಿಕೊಳ್ಳಲು ಇರುವ ಸಾಧಕ ಬಾಧಕಗಳನ್ನು ಸಮಿತಿಯು ಪರಶೀಲಿಸಿ ತನ್ನ ಶಿಫಾರಸ್ಸನ್ನು ಮಾಡಲಿದೆ. ಸದ್ಯ ದೇಶದಲ್ಲಿ ಏಪ್ರಿಲ್ 1ರಿಂದ ಆರಂಭವಾಗಿ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷವನ್ನು ಅನುಸರಿಸಲಾಗುತ್ತಿದೆ.

ಸಮಿತಿ ಯಾರನ್ನು ಒಳಗೊಂಡಿದೆ?

ಮಾಜಿ ಮುಖ್ಯ ಹಣಕಾಸು ಸಲಹೆಗಾರ ಡಾ.ಶಂಕರ್ ಆಚಾರ್ಯ ಅವರು ಸಮಿತಿಯ ಮುಖ್ಯಸ್ಥರಾಗಿದ್ದು, ಸದಸ್ಯರಾಗಿ ಪಿ.ವಿ ರಾಜರಾಮನ್ (ಮಾಜಿ ಹಣಕಾಸು ಕಾರ್ಯದರ್ಶಿ, ತಮಿಳುನಾಡು), ಕೆ.ಎಂ.ಚಂದ್ರಶೇಖರ್ (ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ) ಮತ್ತು ಡಾ.ರಾಜೀವ್ ಕುಮಾರ್ (ಸೀನಿಯರ್ ಫೆಲೊ, ಸೆಂಟರ್ ಫಾರ್ ಪಾಲಿಸಿ ರಿಸರ್ಚ್) ನೇಮಕಗೊಂಡಿದ್ದಾರೆ. ಸಮಿತಿಗೆ 2016ರ ಡಿ.31ರೊಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸಮಿತಿಯೂ ಪ್ರಸ್ತುತ ಇರುವ ಆರ್ಥಿಕ ವರ್ಷದ ಮೂಲ ಮತ್ತು ಈ ಹಿಂದೆ ಆರ್ಥಿಕ ವರ್ಷವನ್ನು ಬದಲಿಸಲು ನಡೆಸಲಾದ ಅಧ್ಯಯನವನ್ನು ಗಣನೆಗೆ ತೆಗೆದುಕೊಂಡು ವಿವಿಧ ಆಯಾಮಗಳನ್ನು ಮಾನದಂಡವಾಗಿಟ್ಟುಕೊಂಡು ಅಧ್ಯಯನ ನಡೆಸಿ ತನ್ನ ಶಿಫಾರಸ್ಸನ್ನು ಮಾಡಲಿದೆ.

ಕ್ಯಾಲೆಂಡರ್ ವರ್ಷಗಳು ಜನವರಿ 1ರಿಂದ ಆರಂಭವಾಗುತ್ತವೆಯಾದರೂ, ಹಣಕಾಸು ವರ್ಷಗಳು ಏ.1ರಿಂದ ಪ್ರಾರಂಭವಾಗುತ್ತವೆ. ಆದರೆ ಬಹುತೇಕ ದೇಶಗಳು ಕ್ಯಾಲೆಂಡರ್ ವರ್ಷವನ್ನೇ ಹಣಕಾಸು ವರ್ಷವನ್ನಾಗಿ ಪರಿಗಣಿಸಿವೆ. ಏ.1ರಿಂದ ಹಣಕಾಸು ವರ್ಷ ಆರಂಭಿಸುವ ಬೃಹತ್ ಆರ್ಥಿಕ ಶಕ್ತಿ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಕ್ಯಾಲೆಂಡರ್ ವರ್ಷವನ್ನೇ ಹಣಕಾಸು ವರ್ಷ ಪರಿಗಣಿಸಬೇಕು ಎಂದು 1984ರಲ್ಲೇ ಎಲ್.ಕೆ. ಜಾ ಸಮಿತಿ ಶಿಫಾರಸು ಮಾಡಿತ್ತು. ಆದರೆ ಅದನ್ನು ಅಂದಿನ ಸರ್ಕಾರ ಒಪ್ಪಿರಲಿಲ್ಲ.