ಹಿರಿಯ ಸಾಹಿತಿ ದೇ. ಜವರೇಗೌಡ ಬಾರದ ಲೋಕಕ್ಕೆ

ಹಿರಿಯ ಸಾಹಿತಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ನಾಡೋಜ ದೇ. ಜವರೇಗೌಡ ರವರು ವಿಧಿವಶರಾದರು. ಶ್ರೀಯುತರು ದೇಜಗೌ ಎಂದೇ ಜನಮಾನಸದಲ್ಲಿ ಪ್ರಸಿದ್ಧಿಯಾಗಿದ್ದರು. ಜುಲೈ 6, 1918 ರಂದು ಬೆಂಗಳೂರು ಜಿಲ್ಲೆ, ಚನ್ನಪಟ್ಟಣದ ಚಕ್ಕೆರೆಗ್ರಾಮದಲ್ಲಿ ದೇವೇಗೌಡ-ಚೆನ್ನಮ್ಮ ಪುಣ್ಯದಂಪತಿಗಳ ಸುಪುತ್ರರಾಗಿ ದೇಜಗೌ ಕಡುಬಡತನದ ರೈತಕುಟುಂಬದಲ್ಲಿ ಜನಿಸಿದವರು. ದೇಜಗೌ ರವರು ಶ್ರೀಕಂಠಯ್ಯ ಮತ್ತು ಕುವೆಂಪು ರವರ ಶಿಷ್ಯರಾಗಿದ್ದವರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿ,ಮೈಸೂರಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದರು. 1946ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ, ಕನ್ನಡ ಅಧ್ಯಾಪಕರಾದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಸೇರಿದಂತೆ ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ದೇಜಗೌ ನಿರ್ವಹಿಸಿದ್ದಾರೆ.

ಸಾಹಿತ್ಯಕ್ಕೆ ದೇಜಗೌ ಕೊಡುಗೆ:

ನಯಸೇನನ ‘ಧರ್ಮಾಮೃತ ಸಂಗ್ರಹ’,(1957), ಲಕ್ಷ್ಮೀಶನ ‘ಜೈಮಿನೀ ಭಾರತ’(1959), ಕನಕದಾಸರ ‘ನಳಚರಿತ್ರೆ’ (1965), ಆಂಡಯ್ಯನ ‘ಕಬ್ಬಿಗರ ಕಾವ’,(1964), ಚಿಕ್ಕುಪಾಧ್ಯಾಯನ ‘ರುಕ್ಮಾಂಗದ ಚರಿತ್ರೆ’,(1982), ನೇಮಿಚಂದ್ರನ ‘ಲೀಲಾವತೀ ಪ್ರಬಂಧ’, (ಜಾನಪದ ಅಧ್ಯಯನ’,(1976), ‘ಜಾನಪದ ಸೌಂದರ್ಯ’,(1977), ‘ಜಾನಪದ ವಾಹಿನಿ’,(1983), ‘ಜನಪದ ಗೀತಾಂಜಲಿ’ (1978), (ಸಂಪಾದಿತ ಕೃತಿ) ಭಾಷಾಂತರಗಳು ‘ಹಮ್ಮು ಮತ್ತು ಬಿಮ್ಮು,’ (ಜೇನ್ ಆಸ್ಟಿನ್ ಅವರ ಪ್ರೈಡ್ ಅಂಡ್ ಪ್ರಿಜುಡೀಸ್) ‘ನೆನಪು ಕಹಿಯಲ್ಲ’, (ಕೃಷ್ಣಾ ಹಥೀಸಿಂಗ್ ಅವರ ವಿತ್ ನೋ ರಿಗ್ರೆಟ್ಸ್)‘ಆನಾ ಕೆರಿನಿನಾ’ (ಲಿಯೋ ಟಾಲ್ ಸ್ಟಾಯ್ ಅವರ ಕಾದಂಬರಿ)‘ಯುದ್ಧ ಮತ್ತು ಶಾಂತಿ’, (ಲಿಯೋ ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್) ‘ಪುನರುತ್ಥಾನ’ (ಲಿಯೋ ಟಾಲ್ ಸ್ಟಾಯ್ ಅವರ ರಿಸರೆಕ್ಷನ್)ಸಾಹಿತಿಗಳ ಸಂಗದಲ್ಲಿ ಹೋರಾಟದ ಬದುಕು (ಆತ್ಮಕಥೆ)

ಪ್ರಶಸ್ತಿಗಳು:

ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ತಿರುವನಂತಪುರದ ‘ದ್ರವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಷಿಯೇಶನ್’ನ ಸೀನಿಯರ್ ಫೆಲೋ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ, ೨೦೦೮ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ೨೦೧೦ರಲ್ಲಿ ಘೋಷಿಸಿದೆ. ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.‘ಅಂತಃಕರಣ’, ‘ರಸಷಷ್ಠಿ’, ‘ದೇಜಗೌ-ವ್ಯಕ್ತಿ ಮತ್ತು ಸಾಹಿತ್ಯ’, ‘ಅಪೂರ್ವ’ ಮತ್ತು ‘ನಮ್ಮ ನಾಡೋಜ’ಗಳು ಅವರಿಗೆ ಸಂದಿರುವ ಅಭಿನಂದನ ಗ್ರಂಥಗಳು.ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೫ ರಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿತು. ಕರ್ನಾಟಕ ಸರ್ಕಾರ ೨೦೧೦ ರಲ್ಲಿ ೨೦೦೮ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.