Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಪ್ರಚಲಿತ ವಿದ್ಯಮಾನಗಳು -ಜನವರಿ,11,12,2018

ಮೆಡಾರಂ/ಸರಳಮ್ಮ ಜಾತ್ರೆ

ಮೆಡಾರಂನ ಸಮ್ಮಕ್ಕ, ಸರಕ್ಕ/ಸರಳಮ್ಮ ಜಾತ್ರೆಯನ್ನು ರಾಷ್ಟ್ರೀಯ ಉತ್ಸವವೆಂದು ಕೇಂದ್ರ ಸರ್ಕಾರ ಈ ವರ್ಷ ಘೋಷಿಸುವ ಸಂಭವವಿದೆ. ಈ ಜಾತ್ರೆಯನ್ನು ರಾಷ್ಟ್ರೀಯ ಉತ್ಸವವೆಂದು ಘೋಷಿಸಿದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಯ ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ (‘intangible cultural heritage of humanity)” ಗೆ ಇದನ್ನು ಪರಿಗಣಿಸಬಹುದಾಗಿದೆ.

ಜಾತ್ರೆಯ ಬಗ್ಗೆ:

ಮೆಡಾರಂ ಅಥವಾ ಸರಳಮ್ಮ ಜಾತ್ರೆಯು ತೆಲಂಗಾಣ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಅರಣ್ಯದಲ್ಲಿ ನೆಲಸುವ ಕೋಯಾ ಬುಡಕಟ್ಟು ಜನಾಂಗ ನಡೆಸುವ ಜಾತ್ರೆ. ಇದು ಏಷ್ಯಾದಲ್ಲೇ ಅತಿ ದೊಡ್ಡ ಬುಡಕಟ್ಟು ಉತ್ಸವವಾಗಿದ್ದು, ಸರಾಸರಿ ಒಂದು ಕೋಟಿ ಜನರು ಭಾಗವಹಿಸುತ್ತಾರೆ.

 • ಎರಡು ವರ್ಷಕ್ಕೊಮ್ಮೆ ನಡುವೆಯು ಈ ಜಾತ್ರೆಯಲ್ಲಿ ಅವಳಿ ದೇವತೆಗಳಾದ ಸಮ್ಮಕ್ಕ ಮತ್ತು ಅವಳ ಮಗಳಾದ ಸರಕ್ಕ ರನ್ನು ಪೂಜಿಸಲಾಗುತ್ತದೆ. ತೆಲಂಗಾಣದ ಹಲವಾರು ಸಮುದಾಯಗಳು ಈ ಜಾತ್ರೆಯನ್ನು ಬೆಂಬಲಿಸುತ್ತಿವೆ. ಕಾಕತೀಯ ರಾಜರು ಬುಡಕಟ್ಟು ಜನರ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಳ್ಳುವ ವಿರುದ್ದ ಸಮ್ಮಕ್ಕ ಮತ್ತು ಸರಕ್ಕ ರವರು ಹೋರಾಡಿದರು ಎಂಬುದು ನಂಬಿಕೆ. ಪುರಾಣದ ಪ್ರಕಾರ ಸಮಕ್ಕಳ ಶಾಪದಿಂದ ಕಾಕತೀಯ ಸಂತತಿ ನಿಧಾನವಾಗಿ ಕುಸಿದು ಪತನಕ್ಕೆ ಕಾರಣವಾಯಿತು ಎನ್ನಲಾಗಿದೆ.

ಮೆಡಾರಂ ಎಲ್ಲಿದೆ?

ದಂಡಕಾರಣ್ಯದ ಭಾಗವಾದ ಎತುರ್ನಗರಮ್ ವನ್ಯಜೀವಿ ಅಭಯಾರಣ್ಯದಲ್ಲಿ ಮೇಡರಮ್ ಇದೆ. ದಂಡಕಾರಣ್ಯ ದಖ್ಖನ್ ನಲ್ಲಿರುವ ಅತಿ ದೊಡ್ಡ ಅರಣ್ಯ ಪ್ರದೇಶವಾಗಿದೆ.

ಫ್ಲೆಮಿಂಗೊ ಉತ್ಸವ (Flemingo Festival)

ಪುಲಿಕಾಟ್ ಸರೋವರದಲ್ಲಿ ವಾರ್ಷಿಕ ಫ್ಲೆಮಿಂಗೊ ಉತ್ಸವ ಆರಂಭಗೊಂಡಿದೆ. ಪುಲಿಕಾಟ್ ಮತ್ತು ನೆಲ್ಲಪಟ್ಟು ಸರೋವರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಫ್ಲೆಮಿಂಗೋ ಉತ್ಸವವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಕಳೆದ 12 ವರ್ಷಗಳಿಂದ ಫ್ಲೆಮಿಂಗೋ ಉತ್ಸವ ನಡೆಯುತ್ತಿದೆ. ಸೈಬೀರಿಯಾದ ವಲಸಿಗ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಈ ಸ್ಥಳಕ್ಕೆ ಭೇಟಿ ಮಾಡುತ್ತವೆ. ವರ್ಣರಂಜಿತ ಹಕ್ಕಿಗಳನ್ನು ನೋಡುವುದು ಹಕ್ಕಿ ವೀಕ್ಷಕರ ಕಣ್ಣಿಗೆ ಬಣ್ಣದ ಲೋಕವನ್ನು ಸೃಷ್ಟಿಸುತ್ತದೆ.

            ಸುಮಾರು 80 ವಿವಿಧ ಹಕ್ಕಿ ಪ್ರಭೇದಗಳು ಸಂತಾನೋತ್ಪತ್ತಿಗಾಗಿ ಪುಲಿಕಾಟ್ಗೆ ವಲಸೆ ಬರುತ್ತವೆ. ಸರೋವರದ ಆಳವಿಲ್ಲದ ನೀರಿನಲ್ಲಿ ಸಂತಾನೋತ್ಪತಿ ನಡೆಸಿ, ನಂತರ ತಮ್ಮ ಸ್ವಂತ ಜಾಗಕ್ಕೆ ಹಿಂತಿರುಗುತ್ತವೆ.

ನಲ್ಲಪಟ್ಟು ಪಕ್ಷಿಧಾಮ: ನೂರಾರು ಪೆಲಿಕನ್ ಮತ್ತು ಇತರ ಪಕ್ಷಿಗಳಿಗೆ ಇದು ದೊಡ್ಡ ಆವಾಸಸ್ಥಾನ ಆಗಿದೆ. ಆಂಧ್ರಪ್ರದೇಶ-ತಮಿಳುನಾಡಿನ ಗಡಿಯಲ್ಲಿರುವ ಪುಲಿಕಾಟ್ ಸರೋವರದ 20 ಕಿ.ಮೀ ಉತ್ತರಕ್ಕೆ ಈ ಪಕ್ಷಿಧಾಮ 459 ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ.

ಪುಲಿಕಾಟ್ ಸರೋವರ:

ಪುಲಿಕಾಟ್ ಸರೋವರ ಭಾರತದ ಎರಡನೇ ಅತ್ಯಂತ ದೊಡ್ಡ ಚೌಳಾದ – ನೀರಿನ ಸರೋವರ ಅಥವಾ ಆವೃತ ಜಲಭಾಗವಾಗಿದೆ. ಇದು ದಕ್ಷಿಣ ಭಾರತದ ಕೊರಮಂಡಲ ಕರಾವಳಿಯ ಆಂಧ್ರಪ್ರದೇಶ ಹಾಗು ತಮಿಳುನಾಡುರಾಜ್ಯಗಳ ಗಡಿಯಲ್ಲಿ ವ್ಯಾಪಿಸಿದೆ. ಸರೋವರವು ಪುಲಿಕಾಟ್ ಸರೋವರ ಪಕ್ಷಿಧಾಮವನ್ನು ಒಳಗೊಂಡಿದೆ. ಶ್ರೀಹರಿಕೋಟದ ಪ್ರತಿಬಂಧಕ ದ್ವೀಪವು ಸರೋವರವನ್ನು ಬಂಗಾಳ ಕೊಲ್ಲಿಯಿಂದ ಪ್ರತ್ಯೇಕಿಸುತ್ತದೆ. ದ್ವೀಪವು ಸತೀಶ್ ಧವನ್ ಬಾಹ್ಯಕಾಶ ಕೇಂದ್ರಕ್ಕೆ ನೆಲೆಯಾಗಿದೆ.

ಭೀಮಾ-ಕೋರೆಗಾಂವ್ ವಿಜಯೋತ್ಸವ ಗಲಭೆ: ಮಹಾರಾಷ್ಟ್ರ ಬಂದ್

ಪ್ರತಿ ವರ್ಷ ಜನವರಿ 1ರಂದು ಪುಣೆಯ ಸಮೀಪದಲ್ಲಿರುವ ‘ಭೀಮಾ-ಕೋರೆಗಾಂವ್”ನಲ್ಲಿ ಕೋರೆಗಾಂವ್ ವಿಜಯೋತ್ಸವ ಆಚರಿಸಲು ತೆರಳುತ್ತಿದ್ದ ದಲಿತ ಗುಂಪಿನ ಮೇಲೆ ಹಿಂದೂತ್ವ ಸಂಘಟನೆಗಳು ದಾಳಿ ಮಾಡಿದ್ದು, ಮಹಾರಾಷ್ಟ್ರದಾದ್ಯಂತ ಭಾರಿ ಸಂಚಲನ ಮಾಡಿದೆ. ಅಲ್ಲದೆ ದಾಳಿಯನ್ನು ಖಂಡಿಸಿ ಮಹಾರಾಷ್ಟ್ರ ಬಂದ್ ಗೆ ಕರೆ ನೀಡಲಾಗಿತ್ತು.

ಏನಿದು ಭೀಮಾ-ಕೋರೆಗಾಂವ್ ವಿಜಯೋತ್ಸವ:

1818 ಜನವರಿ 1ರಂದು ನಡೆದ ಸಂಘರ್ಷದಲ್ಲಿ ಹೋರಾಡಿ ಮಡಿದ 22 ಮಹರ್ ಸೈನಿಕರ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ 65 ಅಡಿ ಎತ್ತರದ ವಿಜಯಸ್ತಂಭ ನಿರ್ಮಿಸಿದ್ದಾರೆ. 1740ರಲ್ಲಿ ಒಂದನೇ ಬಾಜಿ ರಾವ್ ನಿಧನದ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪೇಶ್ವೆಗಳು ಹಾಗೂ ದಲಿತರಾದ ಮಹರ್‌ ಜನರ ನಡುವಿನ ಸಂಬಂಧ ಹದಗೆಟ್ಟಿತು. ಎರಡನೇ ಬಾಜಿ ರಾವ್‌ ಆಡಳಿತದಲ್ಲಿ ಮಹರ್‌ ಸಮುದಾಯವನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತದೆ. ಪೇಶ್ವೆಗಳ ಸೇನೆಗೆ ತಮ್ಮನ್ನೂ ಸೇರಿಸಿಕೊಳ್ಳುವಂತೆ ಮಹರ್‌ ಜನರು ಮಾಡುವ ಬಿನ್ನಹವನ್ನು ತಿರಸ್ಕರಿಸುವ ಎರಡನೇ ಬಾಜಿ ರಾವ್‌, ಕೀಳು ಜಾತಿಯವರಾದ ನಿಮ್ಮನ್ನು ಸೇನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಆತ್ಮಗೌರವದ ಪ್ರಶ್ನೆಯಿಂದ ಬ್ರಿಟಿಷ್‌ ಸೇನೆಯೊಂದಿಗೆ ಸೇರುವ ಮಹರ್‌ ಜನರು 1818ರಲ್ಲಿ ಪೇಶ್ವೆ ಸೇನೆಯ ವಿರುದ್ಧ ಕಾದಾಡುತ್ತಾರೆ. ಬ್ರಿಟಿಷ್ ಕ್ಯಾಫ್ಟನ್ ಎಫ್.ಎಫ್. ಸ್ಟಾಂಟನ್ ನೇತೃತ್ವದಲ್ಲಿ ಬಾಂಬೆ ರೆಜಿಮೆಂಟ್‌ನ 500 ಮಹರ್‌ ಸೈನಿಕರು, ಪೂನಾದ 250 ಅಶ್ವದಳ ಹಾಗೂ ಮದ್ರಾಸ್‌ನ 24 ಗನ್‌ಮೆನ್‌ಗಳು 1818ರ ಜನವರಿ 1ರಂದು 28 ಸಾವಿರ ಯೋಧ ಬಲದ ಬೃಹತ್‌ ಪೇಶ್ವೆ ಪಡೆಯ ವಿರುದ್ಧ ಹೋರಾಟ ನಡೆಸಿದರು. 20 ಸಾವಿರ ಅಶ್ವದಳ ಮತ್ತು 8,000 ಕಾಲಾಳುಗಳಿದ್ದ ಮಹಾರಾಷ್ಟ್ರ ಆಡಳಿತದ ಸೇನೆಯ 2000 ಯೋಧರು ಪ್ರಾರಂಭದಲ್ಲಿ ಕಣಕ್ಕಿಳಿದರು. ಪೇಶ್ವೆ ಯೋಧರ ಸಂಖ್ಯೆ ಹೆಚ್ಚಿಸಿ ಸೇನೆ ಬಲಪಡಿಸಿದರೂ 500 ಮಹರ್‌ ಸೈನಿಕರು ದಿಟ್ಟ ಹೋರಾಟದಿಂದ ಅವರನ್ನು ಧೂಳೀಪಟ ಮಾಡಿದರು. 600ಕ್ಕೂ ಹೆಚ್ಚು ಪೇಶ್ವೆ ಯೋಧರು ಬಲಿಯಾಗುತ್ತಿದ್ದಂತೆ ಆ ಸೇನೆ ರಣರಂಗದಿಂದ ಪಲಾಯನ ಮಾಡಿತು. ಈ ಯುದ್ಧದಲ್ಲಿ ನೂರಾರು ಬ್ರಿಟಿಷ್‌, ಮರಾಠ, ರಜಪೂತ ಸೇರಿ ಹಲವು ಸಮುದಾಯದ ಯೋಧರು ಮೃತಪಟ್ಟರು. ಇಲ್ಲಿ 22 ಮಹರ್ ಯೋಧರ ಹುತಾತ್ಮರಾದರು.

 • 1927ರ ಜನವರಿ 1ರಂದು ಕೋರೆಗಾಂವ್‌ ಭೇಟಿ ನೀಡಿದ್ದ ಅಂಬೇಡ್ಕರ್, ಮಹರ್ ಯೋಧರ ಹೋರಾಟವನ್ನು ಜನರಿಗೆ ತಿಳಿಯುವಂತೆ ಮಾಡಿದ್ದರು. ಅಂಬೇಡ್ಕರ್‌ ತಾವು ಬದುಕಿರುವವರೆಗೂ ಪ್ರತಿ ವರ್ಷ ಜನವರಿಯಲ್ಲಿ ಕೋರೆಗಾಂವ್ ಸ್ಮಾರಕಕ್ಕೆ ಭೇಟಿ ನೀಡುತ್ತಿದ್ದರು.
 • ಅಸ್ಪೃಶ್ಯತೆಯ ವಿರುದ್ಧ ಬಂಡೆದ್ದ ಮಹರ್ ದಲಿತ ಯೋಧರು ಮಹಾರಾಷ್ಟ್ರದ ಪೇಶ್ವೆಗಳ ವಿರುದ್ಧ ಜಯ ಸಾಧಿಸಿದ ದಿನವು, ಶೋಷಿತರ ಆತ್ಮಗೌರವ ತಲೆಯೆತ್ತಿದ ದಿನವೆಂದೇ ಪ್ರಸಿದ್ಧ. ಭಾರತದ ಇತಿಹಾಸದಲ್ಲಿ ಈ ಅಧ್ಯಾಯ ನೆನಪಿನಲ್ಲಿ ಉಳಿಸಲು ಹಾಗೂ ಆತ್ಮಗೌರವಕ್ಕಾಗಿ ಹೋರಾಡಿದ ದಲಿತರ ಗೌರವಾರ್ಥ 2005ರಲ್ಲಿ ಭೀಮಾ–ಕೋರೆಗಾಂವ್‌ ರಣಸ್ತಂಭ ಸೇವಾ ಸಂಘ(ಬಿಕೆಆರ್‌ಎಸ್‌ಎಸ್‌) ಸ್ಥಾಪಿಸಲಾಗಿದೆ.

ಕೃಪೆ: ಪ್ರಜಾವಾಣಿ

ತಗ್ಗಿದ ಓಝೋನ್ ರಂಧ್ರ: ನಾಸಾ ವರದಿ

ಓಝೋನ್ ಪದರದಲ್ಲಿನ ರಂಧ್ರವು ಗಣನೀಯವಾಗಿ ತಗ್ಗಿದೆ ಎಂದು ನಾಸಾ ವರದಿ ಮಾಡಿದೆ. ಕ್ಲೊರೋಪ್ಲೊರೋಕಾರ್ಬನ್ ಬಳಕೆ ನಿಷೇಧ ಓಝೋನ್ ರಂಧ್ರ ತಗ್ಗಲು ಕಾರಣವಾಗಿದೆ ಎಂದು ನಾಸಾದ ದೃಢೀಕರಿಸಿದೆ. ಭೂಮಿಯ ವಾಯುಮಂಡಲದಲ್ಲಿ ಕ್ಲೋರಿನ್ ಮಟ್ಟವು ವೇಗವಾಗಿ ಕುಸಿಯುತ್ತಿದೆ ಎನ್ನಲಾಗಿದೆ.

ಕಳೆದ ವರ್ಷ ತೆಗೆಯಲಾದ ಉಪಗ್ರಹದ ಚಿತ್ರಗಳನ್ನು ಓಝೋನ್ ರಂಧ್ರವು ಮುಚ್ಚಿರುವುದನ್ನು ಧೃಡಪಡಿಸಿದೆ ಮತ್ತು 2060 ರೊಳಗೆ ಸಂಪೂರ್ಣವಾಗಿ ಮುಚ್ಚಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಫಲಿತಾಂಶ 1985ರಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳಿಂದ ಸಹಿ ಹಾಕಲ್ಪಟ್ಟ “ಮಾಂಟ್ರಿಯಲ್ ಶಿಷ್ಟಚಾರ”ದ ಪರಿಣಾಮವೇ ಎಂಬುದು ದೃಡಪಟ್ಟಿಲ್ಲ.

2005ರಿಂದಾಚೆಗೆ ನಾಸಾದ ದೀರ್ಘಕಾಲೀನ ಉಪಗ್ರಹ ಅವಲೋಕನವು ಭೂಮಿಯ ವಾತಾವರಣದಲ್ಲಿ ಕ್ಲೋರಿನ್ ಮಟ್ಟ ಶೇ.20% ರಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ, ಆ ಮೂಲಕ ವಿಶ್ವದಾದ್ಯಂತ ಕ್ಲೋರಿನ್ ಬಳಕೆಯನ್ನು ನಿಷೇಧಿಸುವ ಕ್ರಮವು ಭೂಮಿಯ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರಿದೆ ಎಂದು ಮೊದಲ ಬಾರಿಗೆ ಸಾಬೀತುಪಡಿಸಿದೆ.

ಓಝೋನ್ ಪದರ:

ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿದೆ. ಇದು ವಾಯುಮಂಡಲದಲ್ಲಿ ಓಝೋನ್ O3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು 10 ಕಿ.ಮೀ ನಿಂದ 40ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶವು ಸೂರ್ಯನಿಂದ ಬಿಡುಗಡೆಯಾಗುವ ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲಪುವುದನ್ನು ತಡೆಗಟ್ಟುತ್ತವೆ.

ಓಝೋನ್ ಪದರ ರಂಧ್ರಕ್ಕೆ ಕಾರಣವಾದ ಅಂಶಗಳು:

ಓಝೋನ್ ಪದರದ ರಂಧ್ರಕ್ಕೆ ಅನೇಕ ಅಂಶಗಳ ಕಾರಣವಾಗಿವೆ. CFCಗಳಿಂದ (ಕ್ಲೋರೊಫ್ಲೋರೊಕಾರ್ಬನ್ಗಳು) ಬಿಡುಗಡೆಯಾಗುವ ಕ್ಲೋರಿನ್ ಅತ್ಯಂತ ಪ್ರಬಲವಾದ ಓಝೋನ್ ಹಾನಿಕಾರಕ ಅಂಶ. ಹೇರ್ ಸ್ಪ್ರೇ, ಹಳೆಯ ರೆಫ್ರಿಜರೇಟರ್ ಸಿಎಫ್ಸಿಗಳನ್ನು ಬಿಡುಗಡೆ ಮಾಡುತ್ತವೆ.

ಸಿಮಿಲಿಪಾಲ್ ನಲ್ಲಿ “ಮಂಕಿಡಿಯಾ” ಬುಡಕಟ್ಟಿಗೆ ಆವಾಸಸ್ಥಾನ ನಿರಾಕರಣೆ

ಒಡಿಶಾದ 13 ವಿಶೇಷ ದುರ್ಬಲ ಅನುಸೂಚಿತ ಪಂಗಡಗಳಲ್ಲಿ ಒಂದಾದ “ಮಂಕಿಡಿಯಾ” ಬುಡಕಟ್ಟು ಪಂಗಡಕ್ಕೆ ಸಿಮಿಲಿಪಾಲ್ ಹುಲಿ ಸಂರಕ್ಷಣಾ ವಲಯದ ಒಳಗೆ ವಾಸಿಸುವ ಹಕ್ಕುಗಳನ್ನು ನಿರಾಕರಿಸಲಾಗಿದೆ. ಐತಿಹಾಸಿಕ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಂಪ್ರದಾಯವಾದಿ ಅರಣ್ಯ ನಿವಾಸಿಗಳು (ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯಿದೆ, 2006 ರ ಅಡಿಯಲ್ಲಿ ಅರಣ್ಯ ಇಲಾಖೆಯು ಈ ನಿರ್ಧಾರವನ್ನು ಕೈಗೊಂಡಿದೆ. ಕಾಡು ಪ್ರಾಣಿಗಳು, ಅದರಲ್ಲೂ ಹುಲಿಗಳು ಆಕ್ರಮಣ ಮಾಡಬಹುದೆಂಬ ಕಾರಣಕ್ಕೆ ಆವಾಸಸ್ಥಾನವನ್ನು ನಿರಾಕರಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಮಂಕಿಡಿಯಾ ಜನಾಂಗ:

ಮಂಕಿಡಿಯಾ ಒಂದು ಅಂಚಿನಲ್ಲಿರುವ ಅನುಸೂಚಿತ ಪಂಗಡ. ಸಿಮಿಲಿಪಾಲಿನಲ್ಲಿ ಸಮೃದ್ಧವಾಗಿ ಲಭ್ಯವಿರುವ ಸಿಯಾಲಿ ನಾರಿನಿಂದ ಹಗ್ಗವನ್ನು ತಯಾರಿಸುವ ಉದ್ಯೋಗದ ಮೇಲೆ ಈ ಜನಾಂಗ ಅವಲಂಭಿತವಾಗಿದೆ.

ವಿಶೇಷ ದುರ್ಬಲ ಅನುಸೂಚಿತ ಪಂಗಡಗಳು:

ವಿಶೇಷ ದುರ್ಬಲ ಅನುಸೂಚಿತ ಪಂಗಡಗಳು (Particularly Vulnerable Tribal Groups) ಅನುಸೂಚಿತ ಪಂಗಡಗಳಲ್ಲಿ ಹೆಚ್ಚು ದುರ್ಬಲವಾಗಿವೆ. 1975 ರಲ್ಲಿ ಭಾರತ ಸರ್ಕಾರವು ಹೆಚ್ಚು ದುರ್ಬಲ ಅನುಸೂಚಿತ ಪಂಗಡಗಳನ್ನು ಗುರುತಿಸಲು ಪ್ರಾರಂಭಿಸಿತು, ಅದರಂತೆ PVTG ಗಳೆಂದು ಕರೆಯುವ ಒಂದು ಪ್ರತ್ಯೇಕ ಅನುಸೂಚಿತ ಪಂಗಡಗಳನ್ನು ಗುರುತಿಸಲಾಯಿತು. ಪ್ರಾರಂಭದಲ್ಲಿ  52 ಅಂತಹ ಪಂಗಡಗಳನ್ನು ಘೋಷಿಸಿತು ಮತ್ತು 1993ರಲ್ಲಿ ಹೆಚ್ಚುವರಿ 23 ಗುಂಪುಗಳನ್ನು ಸೇರಿಸಲಾಯಿತು., 2011ರ ಜನಗಣತಿ ಪ್ರಕಾರ 17 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ (ಯುಟಿ)ದಲ್ಲಿ 705 ಅನುಸೂಚಿತ ಪಂಗಡಗಳು ಹರಡಿಕೊಂಡಿದ್ದು, ಇವುಗಳಲ್ಲಿ 75 ಪಂಗಡಗಳನ್ನು ವಿಶೇಷ ದುರ್ಬಲ ಅನುಸೂಚಿತ ಪಂಗಡವೆಂದು ಗುರುತಿಸಲಾಗಿದೆ. 75 PVTGಗಳಲ್ಲಿ ಒಡಿಶಾದಲ್ಲಿ (13), ಆಂಧ್ರಪ್ರದೇಶ (12) ಪಂಗಡಗಳಿವೆ.

ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನ:

ಇದು ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿದೆ. ಇದು ಸಿಮಿಲಿಪಾಲ್-ಕುಲ್ದಿಹಾ-ಹಡ್ಗಡ್ ಆನೆ ಸಂರಕ್ಷಣಾ ವಲಯದ ಭಾಗವಾಗಿದ್ದು ಮಯೂರ್ಭಂಜ್ ಆನೆ ಸಂರಕ್ಷಣಾ ವಲಯ ಎಂದು ಕರೆಯಲ್ಪಡುತ್ತದೆ, ಇದು ಮೂರು ಸಂರಕ್ಷಿತ ಪ್ರದೇಶಗಳು – ಸಿಮಿಲಿಪಾಲ್ ಹುಲಿ ಸಂರಕ್ಷಣಾ ವಲಯ, ಹಡ್ಗಡ್ ವನ್ಯಜೀವಿ ಅಭಯಾರಣ್ಯ ಮತ್ತು ಕುಲ್ದಿಹಾ ವನ್ಯಜೀವಿ ಅಭಯಾರಣ್ಯವನ್ನು ಒಳಗೊಂಡಿದೆ.

ಭಾರತ್ ನೆಟ್ ಯೋಜನೆ: ಒಂದು ಲಕ್ಷ ಗ್ರಾಮ ಪಂಚಾಯತಿಗಳಿಗೆ ಇಂಟರ್ನೆಟ್ ಸೌಲಭ್ಯ

ಡಿಜಿಟಲ್ ಭಾರತದ ಬೆನ್ನೆಲುಬಾದ ಭಾರತ್ ನೆಟ್ ಯೋಜನೆಯ ಮೊದಲ ಹಂತದಲ್ಲಿ ಒಂದು ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಅತಿ ವೇಗದ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಕಲ್ಪಿಸುವ ಮೂಲಕ ಗಮನಾರ್ಹ ಸಾಧನೆಯನ್ನು ಮಾಡಲಾಗಿದೆ. ಡಿಸೆಂಬರ್ 31, 2017ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು.  ಯೋಜನೆಯ ಮೊದಲ ಹಂತದಲ್ಲಿ ಅತಿ ವೇಗದ ಇಂಟರ್ನೆಟ್ ಸೇವೆಯನ್ನು 2.5 ಲಕ್ಷ ಹಳ್ಳಿಗಳಿಗೆ ಕಲ್ಪಿಸಲಾಗಿದ್ದು, ಇದರಿಂದ 200 ಮಿಲಿಯನ್ಗಿಂತ ಹೆಚ್ಚು ಗ್ರಾಮೀಣ ಭಾರತೀಯರು ಅನುಕೂಲ ಪಡೆಯಲಿದ್ದಾರೆ.

ಭಾರತ್ ನೆಟ್ ಯೋಜನೆ:

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾದಡಿ ಬ್ರಾಡ್ಬ್ಯಾಂಡ್ ಮೂಲಕ ಭಾರತದ ಎಲ್ಲಾ ಮನೆಗಳನ್ನು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸುವ ಸಲುವಾಗಿ ಭಾರತ್ ನೆಟ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಗ್ರಾಮ ಪಂಚಾಯತಿಗಳ ಮೂಲಕ ಮನೆಗಳಿಗೆ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಮತ್ತು ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲಾಗುವುದು. ಯುನಿವರ್ಸಲ್ ಸರ್ವೀಸ್ ಆಬ್ಲಿಕೇಷನ್ ಫಂಡ್ (ಯುಎಸ್ಒಎಫ್) ಮೂಲಕ ಈ ಯೋಜನೆಗೆ ಹಣವನ್ನು ನೀಡಲಾಗುತ್ತಿದೆ.

ಯುನಿವರ್ಸಲ್ ಸರ್ವೀಸ್ ಆಬ್ಲಿಕೇಷನ್ ಫಂಡ್:

ಯುನಿವರ್ಸಲ್ ಸರ್ವೀಸ್ ಆಬ್ಲಿಕೇಷನ್ ಫಂಡ್ ಅನ್ನು 2002 ರಲ್ಲಿ ಸ್ಥಾಪಿಸಲಾಗಿದೆ. ಯುಎಸ್ಒಎಫ್, ಭಾರತದಾದ್ಯಂತ ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಟೆಲಿಗ್ರಾಫ್ ಸೇವೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಸಬ್ಸಿಡಿಗಳನ್ನು ಒದಗಿಸುತ್ತದೆ. ಯುಎಸ್ಒಎಫ್ ಒಬ್ಬ ಆಡಳಿತಗಾರರನ್ನು ಹೊಂದಿದ್ದು, ಇವರು ಕಾರ್ಯದರ್ಶಿ, ದೂರಸಂಪರ್ಕ ಇಲಾಖೆಗೆ (DoT) ವರದಿ ಮಾಡಿಕೊಳ್ಳಬೇಕಾಗಿರುತ್ತದೆ.

 • ದೂರವಾಣಿ ಕಂಪನಿಗಳ ಎಲ್ಲಾ ಹೊಂದಾಣಿಕೆಯ ಒಟ್ಟು ಆದಾಯದ (ಎಜಿಆರ್) ಮೇಲೆ ವಿಧಿಸಲಾಗುವ 5%ರಷ್ಟು ಯೂನಿವರ್ಸಲ್ ಸರ್ವಿಸ್ ಲೆವಿ (ಯುಎಸ್ಎಲ್)ಯನ್ನು ಭಾರತ ಸರ್ಕಾರದ ಸಂಕುಚಿತ ನಿಧಿಯಲ್ಲಿ ಇಡಲಾಗುತ್ತದೆ. ಸಂಕುಚಿತ ನಿಧಿಯಿಂದ ಹಣವನ್ನು ಬಳಸುವ ಮೊದಲು ಸಂಸತ್ತಿನ ಅನುಮೋದನೆಯನ್ನು ಪಡೆಯುವುದು ಕಡ್ಡಾಯ.

8 Responses to “ಪ್ರಚಲಿತ ವಿದ್ಯಮಾನಗಳು -ಜನವರಿ,11,12,2018”

 1. ಉದಯ says:

  ಅಷ್ಟೇನು ಉಪಯುಕ್ತ ವಿಷಯವಿಲ್ಲ

 2. vasudev bagali says:

  sir objective type quations kalisi sir

 3. murthy says:

  Sir Nov dec current affairs send me plz bcz fda exam

 4. sir plz send current affairs as

  soon as possible….

 5. Salaman says:

  Sir current affairs khalsi sir pllllzz

 6. Vinayak says:

  Send Current affairs plz sir

 7. Channu says:

  Give more currently events sir

 8. ramshi says:

  we need more current affaires
  and also sports news
  pls upload it

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.