ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ ನಿಂದ ಹೊರ ನಡೆದ ಅಮೆರಿಕ

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಮಹತ್ವಕಾಂಕ್ಷಿ “ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ (Trans-Pacific Partnership)” ಮಾತುಕತೆಯಿಂದ ಅಮೆರಿಕ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಸಹ ಹೊರಡಿಸಲಾಗಿದೆ. ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ 12 ಫೆಸಿಫಿಕ್ ರಿಮ್ ರಾಷ್ಟ್ರಗಳ ನಡುವಿನ ಮಹತ್ವಕಾಂಕ್ಷಿ ವ್ಯಾಪಾರ ಒಪ್ಪಂದವಾಗಿದೆ. ಟಿಪಿಪಿ ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬರಾಕ್ ಒಬಾಮ ರವರ  ಆಡಳಿತದಲ್ಲಿ ಕೈಗೊಳ್ಳಲಾದ ಪ್ರಮುಖ ನಿರ್ಧಾರವಾಗಿದ್ದು, ವೇಗವಾಗಿ ಬೆಳೆಯುತ್ತಿರುವ ಚೀನಾ ಆರ್ಥಿಕತೆಯನ್ನು ಹತ್ತಿಕ್ಕಲು ಅಮೆರಿಕಾ ವಿಶ್ವದ ಇತರೆ ರಾಷ್ಟ್ರಗಳೊಂದಿಗೆ ಕೈಜೋಡಿಸುವ ನಿರ್ಣಯವಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣ ಪ್ರಚಾರ ವೇಳೆ ಡೋನಾಲ್ಡ್ ಟ್ರಂಪ್ ಅವರು ಟಿಪಿಪಿಗೆ ಅಮೆರಿಕ ನೀಡಿರುವ ಬೆಂಬಲವನ್ನು ಹಿಂಪಡೆಯುವುದಾಗಿ ಹೇಳಿದ್ದರು. ಈ ಒಪ್ಪಂದಿಂದ ದೇಶದ ಉದ್ಯೋಗ ಮತ್ತು ಉತ್ಪಾದನ ವಲಯದ ಮೇಲೆ ವ್ಯತಿರಿಕ್ತಿ ಪರಿಣಾಮ ಬೀರಲಿದೆ ಎಂದು ಟ್ರಂಪ್ ಹೇಳಿದ್ದರು.

ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ ಬಗ್ಗೆ:

  • ಟ್ರಾನ್ಸ್-ಫೆಸಿಫಿಕ್ ಪಾರ್ಟನರ್ ಶಿಪ್ ಒಪ್ಪಂದ ಫೆಸಿಫಿಕ್ ರಿಮ್ ನ 12 ರಾಷ್ಟ್ರಗಳ ನಡುವಿನ ಮಹತ್ವಕಾಂಕ್ಷಿ ವ್ಯಾಪಾರ ಒಪ್ಪಂದವಾಗಿದ್ದು, ಮಾತುಕತೆ ಹಂತದಲ್ಲಿದೆ. ಈ 12 ರಾಷ್ಟ್ರಗಳು ವಿಶ್ವದ ಶೇ 40% ಆರ್ಥಿಕತೆಯನ್ನು ಒಳಗೊಂಡಿವೆ. 2015 ರಲ್ಲಿ ಅಮೆರಿಕ ಈ ಒಪ್ಪಂದವನ್ನು ಪ್ರೋತ್ಸಾಹಿಸುವ ಮೂಲಕ 12 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿದವು.
  • ಆಸ್ಟ್ರೇಲಿಯಾ, ಬ್ರೂನಿ, ಚಿಲೆ, ಕೆನಡಾ, ಜಪಾನ್, ಮಲೇಷಿಯಾ, ಮೆಕ್ಸಿಕೊ, ನ್ಯೂಜಿಲ್ಯಾಂಡ್, ಪೆರು, ಸಿಂಗಾಪುರ, ಅಮೆರಿಕ ಮತ್ತು ವಿಯೆಟ್ನಾಂ ಈ 12 ರಾಷ್ಟ್ರಗಳಾಗಿವೆ. ಭಾರತ ಈ ಒಪ್ಪಂದದ ಸದಸ್ಯ ರಾಷ್ಟ್ರವಲ್ಲ.
  • ಸದಸ್ಯ ರಾಷ್ಟ್ರಗಳಲ್ಲಿ ಸುಗುಮವಾಗಿ ವಸ್ತುಗಳ ಸಾಗಾಟ, ಸೇವೆ ಹಾಗೂ ಬಂಡವಾಳ ಹೂಡಿಕೆ ಉತ್ತೇಜನ ನೀಡುವುದು ಅಲ್ಲದೇ 21ನೇ ಶತಮಾನದಲ್ಲಿ ವ್ಯಾಪಾರ ನಿಯಮವನ್ನು ರೂಪಿಸುವುದು ಇದರ ಮುಖ್ಯ ಉದ್ದೇಶ.
  • ಫೆಸಿಫಿಕ್ ರಿಮ್ ವಲಯದಲ್ಲಿ ಅತಿ ದೊಡ್ಡ ಆರ್ಥಿಕ ದೇಶವಾಗಿ ಬೆಳೆಯುತ್ತಿರುವ ಚೀನಾ ದೇಶದ ಪ್ರಭಾವವನ್ನು ಹತ್ತಿಕ್ಕುವುದು ಸಹ ಒಪ್ಪಂದದ ಉದ್ದೇಶವಾಗಿದೆ.

ಟಿಪಿಪಿ ಭಾರತದ ಮೇಲೆ ಬೀರಲಿರುವ ಪರಿಣಾಮ:

  • ಟಿಪಿಪಿ ಯಿಂದ ಭಾರತಕ್ಕೆ ಉಪಯೋಗಕ್ಕಿಂತ ಅನಾನುಕೂಲಗಳು ಜಾಸ್ತಿ. ಭಾರತದ ರಫ್ತು ಮಾರುಕಟ್ಟೆಯ ಮೇಲೆ ಈ ಒಪ್ಪಂದ ಋಣಾತ್ಮಕ ಪರಿಣಾಮ ಬೀರಲಿದೆ. ಭಾರತದ ಪ್ರಮುಖ ರಫ್ತು ಸರಕುಗಳಾದ ಚರ್ಮ, ಜವಳಿ, ಪ್ಲಾಸ್ಟಿಕ್, ಹತ್ತಿ ಮತ್ತು ಉಣ್ಣೆ ಬೇಡಿಕೆ ಕಡಿಮೆಯಾಗಲಿದೆ. ಅಲ್ಲದೇ ಭಾರತದ ಔಷಧಿ ವಲಯದ ಮೇಲೂ ಪರಿಣಾಮ ಬೀರಲಿದೆ.

ಡೆಂಗ್ಯೂ, ಚಿಕನ್ ಗೂನ್ಯಾ, ಮತ್ತು ಜಿಕಾ ರೋಗಗಳನ್ನು ನಿಯಂತ್ರಿಸಲು ಕುಲಾಂತರಿ ಸೊಳ್ಳೆ

ಡೆಂಗ್ಯೂ, ಚಿಕನ್ ಗೂನ್ಯಾ ಹಾಗೂ ಜಿಕಾ ದಂತಹ ಮಾರಕ ರೋಗಗಳನ್ನು ನಿಯಂತ್ರಿಸಲು ಕುಲಾಂತರಿ ಸೊಳ್ಳೆಗಳನ್ನು ಅಭಿವೃದ್ದಿಪಡಿಸಲಾಗಿದ್ದು, ಈ ತಂತ್ರಜ್ಞಾನದ ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ಮಹಾರಾಷ್ಟ್ರದ ದವಲ್ವಾಡಿ, ಬದ್ನಪುರ ಹಾಗೂ ಜಲ್ನ ಜಿಲ್ಲೆಗಳಲ್ಲಿ ಈ ಸೊಳ್ಳೆಗಳನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ. ಆಕ್ಸಿಟೆಕ್ ಸಂಸ್ಥೆ ಈ ಪ್ರಯೋಗವನ್ನು ಕೈಗೊಳ್ಳಲಿದ್ದು, ಪ್ರಬಲ ಮಾರಕ ವಂಶವಾಹಿನಿಗಳನ್ನು (Release of insects carrying dominant lethal genes (RIDL)) ಒಳಗೊಂಡಿರುವ ಸೊಳ್ಳೆಗಳನ್ನು ಬಿಡುಗಡೆ ಮಾಡಲಿದೆ.

ಪ್ರಮುಖಾಂಶಗಳು:

  • ಪ್ರಬಲ ಮಾರಕ ವಂಶವಾಹಿನಿಗಳನ್ನು ಒಳಗೊಂಡಿರುವ ಕುಲಾಂತರಿ ಗಂಡು ಸೊಳ್ಳೆಗಳನ್ನು ಈ ತಂತ್ರಜ್ಞಾನದಲ್ಲಿ ಬಳಸಲಾಗುವುದು. ಈ ಗಂಡು ಸೊಳ್ಳೆಗಳು ಹೆಣ್ಣು ಸೊಳ್ಳೆಗಳೊಂದಿಗೆ ಕೂಡಿದ ಮಾರಕ ವಂಶವಾಹಿನಿಗಳು ಮರಿ ಸೊಳ್ಳೆಗಳಿಗೆ ವರ್ಗಾವಣೆಗೊಳ್ಳಲಿವೆ.
  • ಈ ವಂಶವಾಹಿನಿಗಳನ್ನು ಒಳಗೊಂಡಿರುವ ಸೊಳ್ಳೆಗಳು ದೊಡ್ಡದಾಗುವ ಹೊತ್ತಿಗೆ ಸಾಯುತ್ತವೆ. ಗಂಡು ಸೊಳ್ಳೆಗಳು ಮನುಷ್ಯರಿಗೆ ಕಚ್ಚದೆ ಇರುವ ಕಾರಣ ಡೆಂಗ್ಯೂ, ಚಿಕನ್ ಗುನ್ಯಾ ಹಾಗೂ ಜಿಕಾ ಕಾಯಿಲೆಗಳು ಹರಡುವ ಪ್ರಮಾಣ ತೀರಾ ಕಡಿಮೆ.
  • ಆಕ್ಸಿಟೆಕ್ ಸೊಳ್ಳೆಗಳನ್ನು ಮೊದಲು ಬ್ರೆಜಿಲ್ ನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಸ್ಥಳೀಯ ಸೊಳ್ಳೆಗಳ ಪ್ರಮಾಣವನ್ನು ಶೇ 90 ರಷ್ಟು ನಾಶಗೊಳಿಸಲು ಯಶಸ್ವಿಯಾಗಿದ್ದವು. ಕ್ರಿಮಿನಾಶಕದಿಂದ ಶೇ 30% ರಷ್ಟು ಸೊಳ್ಳೆಗಳನ್ನು ನಾಶಗೊಳಿಸಲು ಮಾತ್ರ ಸಾಧ್ಯವಾಗಿತ್ತು.
  • ಉಪಯೋಗ: ಈ ತಂತ್ರಜ್ಞಾನ ಪರಿಸರ ಸ್ನೇಹಿಯಾಗಿದ್ದು, ಮಾರಕ ರೋಗ ತರುವ ಸೊಳ್ಳೆಗಳಂತಹ ಕ್ರಿಮಿಗಳನ್ನು ನಾಶಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಅಲ್ಲದೇ ಈ ತಂತ್ರಜ್ಞಾನದಿಂದ ಯಾವುದೇ ವಿಷಕಾರಿ ವಸ್ತುಗಳು ಉಳಿಯುವುದಿಲ್ಲ. ಶೇ 99% ಮರಿಗಳನ್ನು ಇದರಿಂದ ನಾಶಪಡಿಸಬಹುದಾಗಿದೆ.

ವಿಶ್ವದ ಅತ್ಯಂತ ಪ್ರಭಾವೀ ಪಾಸ್ ಪೋರ್ಟ್ ಪಟ್ಟಿಯಲ್ಲಿ ಭಾರತಕ್ಕೆ 78ನೇ ಸ್ಥಾನ

ವಿಶ್ವದ ಅತ್ಯಂತ ಪ್ರಭಾವೀ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಭಾರತಕ್ಕೆ 78ನೇ ಸ್ಥಾನ ಲಭಿಸಿದೆ. ಪಟ್ಟಿಯಲ್ಲಿ ಜರ್ಮನಿ 157 ಮುಕ್ತ ವಿಸಾ ಅಂಕದೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಏಷ್ಯಾ ರಾಷ್ಟ್ರಗಳ ಪೈಕಿ ಸಿಂಗಾಪುರ ಅಗ್ರಸ್ಥಾನವನ್ನು ಪಡೆದುಕೊಂಡಿದೆ.

ಪ್ರಮುಖಾಂಶಗಳು:

  • ಭಾರತವು 46 ಮುಕ್ತ ವಿಸಾ ಅಂಕದೊಂದಿಗೆ 78ನೇ ಸ್ಥಾನದಲ್ಲಿದೆ. ಆ ಮೂಲಕ ಚೀನಾ ಮತ್ತು ಪಾಕಿಸ್ತಾನವನ್ನು ಹಿಂದಿಕ್ಕಿದೆ.
  • ಅಪಘಾನಿಸ್ತಾನವು ಕೇವಲ 23 ಅಂಕದೊಂದಿಗೆ ಈ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

ಸೂಚ್ಯಂಕದ ಬಗ್ಗೆ:

ಪ್ರಭಾವಿ ಪಾಸ್ ಪೋರ್ಟ್ ಸೂಚ್ಯಂಕವನ್ನು ಜನಪ್ರಿಯ ಅಂತರ್ಜಾಲ ಸಂಸ್ಥೆ “ಆರ್ಟನ್  ಕ್ಯಾಪಿಟಲ್”’ ಹೊರತರುತ್ತಿದೆ. ರಾಷ್ಟ್ರೀಯ ಪಾಸ್ಪೋರ್ಟ್ ಬಳಸಿ ಇನ್ನೊಂದು ದೇಶಕ್ಕೆ ನಡೆಸುವ ಪ್ರಯಾಣದ ಪ್ರಮಾಣದ ಆಧಾರದಲ್ಲಿ ಈ ಸೂಚ್ಯಾಂಕವನ್ನು ತಯಾರಿಸಿದೆ. ಒಬ್ಬ ವ್ಯಕ್ತಿ ತನ್ನ ದೇಶದ ಪಾಸ್ಪೋರ್ಟ್ ಬಳಸಿಕೊಂಡು ಮುಕ್ತ ವಿಸಾ ಅಥವಾ ಆಗಮನ ಸಂದರ್ಭದ ವಿಸಾದ ಮೂಲಕ ಒಂದು ವರ್ಷದಲ್ಲಿ ಭೇಟಿ ನೀಡಿದ ರಾಷ್ಟ್ರಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಈ ಸೂಚ್ಯಾಂಕವನ್ನು ಸಿದ್ದಪಡಿಸಲಾಗುತ್ತದೆ.

Leave a Comment

This site uses Akismet to reduce spam. Learn how your comment data is processed.