ಭಾರತ ಮೂಲದ ನಾಲ್ಕು ವಿಜ್ಞಾನಿಗಳಿಗೆ ಅಮೆರಿಕ ಅಧ್ಯಕ್ಷೀಯ ಪ್ರಶಸ್ತಿ

ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಿರುವ ಬರಾಕ್ ಒಬಾಮ ರವರು ಭಾರತ ಮೂಲದ ನಾಲ್ಕು ವಿಜ್ಞಾನಿಗಳು ಸೇರಿದಂತೆ 102 ಸಂಶೋಧಕರನ್ನು ಪ್ರೆಸಿಡೆನ್ಷಿಯಲ್ ಅರ್ಲಿ ಕೆರಿಯರ್ ಆವಾರ್ಡ್ಸ್ ಫಾರ್ ಸೈನ್ಟಿಸ್ಟ್ ಅಂಡ್ ಇಂಜನಿಯರ್ಸ್ (Presidential Early Career Awards for Scientist and Engineers(PECASE)) ಪ್ರಶಸ್ತಿಗೆ ಆಯ್ಕೆಮಾಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಭಾರತೀಯ ಮೂಲದ ವಿಜ್ಞಾನಿಗಳೆಂದರೆ ಪಂಕಜ್ ಲಾಲ್, ಕೌಶಿಕ್ ಚೌಧರಿ, ಮನೀಶ್ ಅರೊರ ಮತ್ತು ಅರಾದ್ನ ತ್ರಿಪಾಠಿ.

ಪ್ರಶಸ್ತಿ ಗೆದ್ದವರ ಬಗ್ಗೆ:

  • ಪಂಕಜ್ ಲಾಲ್: ಪಂಕಜ್ ಲಾಲ್ ರವರು ಮಾಂಟ್ಕ್ಲೆರ್ ಸ್ಟೇಟ್ ವಿಶ್ವವಿದ್ಯಾಲಯದ ಭೂಮಿ ಮತ್ತು ಪರಿಸರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಪಕರಾಗಿದ್ದಾರೆ. ಲಾಲ್ ಅವರು ಪರಿಸರ ಅರ್ಥಶಾಸ್ತ್ರ ಮತ್ತು ಆರ್ಥಿಕ ಭೂಗೋಳ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಮತ್ತು ನೀತಿ ಮತ್ತು ಹವಾಮಾನ ಬದಲಾವಣೆ, ಮಾನವ ಆಯಾಮಗಳ ಪರಿಸರ ನಿರ್ವಹಣೆಯಲ್ಲಿ ಕೆಲಸ ಮಾಡಿದ್ದಾರೆ.
  • ಕೌಶಿಕ್ ಚೌಧರಿ: ನೆಕ್ಸ್ಟ್ ಜನರೇಶನ್ ನೆಟ್ವರ್ಕ್ಸ್ ಅಂಡ್ ಸಿಸ್ಟ್ಸ್ಂ ಲ್ಯಾಬ್ ನ ನಿರ್ದೇಶಕರಾಗಿರುವ ಚೌಧರಿರವರು NSF ಕೆರಿಯರ್ ಪ್ರಶಸ್ತಿ ಹಾಗೂ ಆಫೀಸ್ ಆಫ್ ನಾವಲ್ ರಿಸರ್ಚ್ ಡೈರೆಕ್ಟರ್ ಆಫ್ ರಿಸರ್ಚರ್ ಅರ್ಲಿ ಕೆರಿಯರ್ ಅವಾರ್ಡ್ ಪಡೆದುಕೊಂಡಿದ್ದಾರೆ.
  • ಮನೀಶ್ ಅರೊರ: ಮನೀಶ್ ಅರೊರರವರು ಎನ್ವಿರಾನ್ಮೆಂಟ್ ಎಪಿಡೆಮಿಯೊಲಾಜಿಸ್ಟ್ ಹಾಗೂ ಜೀವಶಾಸ್ತ್ರಜ್ಞ. ಪ್ರವಸಪೂರ್ವ ಹಾಗೂ ಬಾಲ್ಯವಸ್ಥೆಯಲ್ಲಿ ರಾಸಾಯನಿಕಗಳಿಂದ ಜೀವನಾವಸ್ಥೆ ಮೇಲೆ ಆಗುವ ಪರಿಣಾಮಗಳ ಮೇಲೆ ಇವರ ಸಂಶೋಧನೆ ಕೇಂದ್ರಿಕೃತವಾಗಿದೆ.
  • ಅರಾದ್ನ ತ್ರಿಪಾಠಿ: ಭೂಮಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ತ್ರಿಪಾಠಿ ಅವರು ಸಂಶೋಧನೆ ನಡೆಸುತ್ತಿದ್ದಾರೆ. ಹವಾಮಾನ ಬದಲಾವಣೆ, ಇವರ ಸಂಶೋಧನಾ ಮಾದರಿಗಳು ಹವಾಮಾನ ಬದಲಾವಣೆ, ಸಾಗರಗಳು, ಮತ್ತು ಜೈವಿಕ, ವಾತಾವರಣ ನಡುವೆ ಇಂಗಾಲ ಹೇಗೆ ಪ್ರಸರಿಸುತ್ತದೆ ಎಂಬುದನ್ನ ಅರ್ಥಮಾಡಿಕೊಳ್ಳಲು ಅನುಕೂಲವಾಗಿದೆ.

PECASE ಪ್ರಶಸ್ತಿಯ ಬಗ್ಗೆ:

  • PECASE ಪ್ರಶಸ್ತಿ ಅಮೆರಿಕ ಸರ್ಕಾರ ವಿಜ್ಞಾನ ಮತ್ತು ಎಂಜನಿಯರ್ ವೃತ್ತಿಪರರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಪ್ರಶಸ್ತಿಯನ್ನು 1996ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ರವರು ಸ್ಥಾಪಿಸಿದರು.
  • ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನವೀನ ಸಂಶೋಧನೆ ಹಾಗೂ ತಮ್ಮ ವೈಜ್ಞಾನಿಕ ಸಂಶೋಧನೆ ಮೂಲಕ ಸಮುದಾಯ ಸೇವೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗುತ್ತದೆ.

ನವೆಂಬರ್ 2016 ರಲ್ಲಿ ಕೈಗಾರಿಕಾ ಉತ್ಪಾದನೆ ಶೇ 5.7

ಭಾರತದ ಕೈಗಾರಿಕಾ ಉತ್ಪಾದನೆ ಶೇ.5.7 ಕ್ಕೆ ಏರಿಕೆಯಾಗಿರುವುದಾಗಿ ಇಂಡೆಕ್ಸ್ ಆಫ್ ಇಂಡಸ್ಟ್ರೀಯಲ್ ಪ್ರೊಡಕ್ಷನ್ (Index of Industrial Production) ವರದಿ ತಿಳಿಸಿದೆ.   ನೋಟು ನಿಷೇಧದ ಬಳಿಕವೂ ಕೈಗಾರಿಕಾ ಉತ್ಪಾದನೆ ಕಳೆದ 13 ತಿಂಗಳುಗಳಲ್ಲೇ ಅತಿ ಹೆಚ್ಚು ಏರಿಕೆ ಕಂಡಿದ್ದು ಶೇ.5.7 ರಷ್ಟಾಗಿದೆ. ನವೆಂಬರ್ ತಿಂಗಳಿಗೂ ಮುನ್ನ ಕೈಗಾರಿಕಾ ಉತ್ಪಾದನೆ ದರ ಶೇ.3.4 ರಷ್ಟಿತ್ತು. ಅಕ್ಟೋಬರ್ ತಿಂಗಳಲ್ಲಿ ಶೇ.1.8 ರಷ್ಟು ಕುಸಿದಿದ್ದ ಕೈಗಾರಿಕಾ ಉತ್ಪಾದನೆ ನವೆಂಬರ್ ತಿಂಗಳಲ್ಲಿ ಶೇ.5.7 ಕ್ಕೆ ಏರಿಕೆಯಾಗಿದೆ.

ಪ್ರಮುಖಾಂಶಗಳು:

  • ಉತ್ಪಾದನ ವಲಯ: ನವೆಂಬರ್ ನಲ್ಲಿ ಶೇ 5.5% ಬೆಳವಣಿಗೆ ಕಂಡಿದೆ
  • ಗಣಿಗಾರಿಕೆ ವಲಯ: ಶೇ 3.5% ಬೆಳವಣಿಗೆ ಕಂಡಿದೆ
  • ವಿದ್ಯುತ್ ಉತ್ಪಾದನೆ: ಶೇ 8.9% ಏರಿಕೆಯಾಗಿದೆ
  • ಬಂಡವಾಳ ಸರಕು: ಬಂಡವಾಳ ಸರಕು ಉತ್ಪಾದನೆ ಶೇ 15% ರಷ್ಟು ಏರಿಕೆಯಾಗಿದೆ

ಐಐಪಿ ಸೂಚ್ಯಂಕ:

ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (ಐಐಪಿ)ಯನ್ನು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಕೇಂದ್ರ ಅಂಕಿಅಂಶ ಸಂಸ್ಥೆ ಪ್ರತಿ ತಿಂಗಳು ಹೊರತರುತ್ತಿದೆ. ಸೂಚ್ಯಂಕವು ಉತ್ಪಾದನ ವಲಯ (620), ಗಣಿಗಾರಿಕೆ (61) ಹಾಗೂ ವಿದ್ಯುತ್ (1) ವಲಯದ ಒಟ್ಟು 682 ಸರಕುಗಳನ್ನು ಒಳಗೊಂಡಿದೆ.

ಹಜ್ ಸಬ್ಸಿಡಿ ಕುರಿತು ಅಧ್ಯಯನಕ್ಕೆ ಸಮಿತಿ ರಚಿಸಲು ಕೇಂದ್ರ ಸರ್ಕಾರ ನಿರ್ಧಾರ

ಹಜ್ ಸಬ್ಸಿಡಿ ಕುರಿತು ಅಧ್ಯುಯನ ನಡೆಸಲು ಆರು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ ನಿರ್ಧರಿಸಿದೆ. 2012ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಹಜ್ ಯಾತ್ರಿಗರಿಗೆ ನೀಡುತ್ತಿರುವ ಸಬ್ಸಿಡಿಯನ್ನು ಕಾಲಕ್ರಮೇಣ 2022ರೊಳಗೆ ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್ 2012ರಲ್ಲಿ ತೀರ್ಪು ನೀಡಿತ್ತು.

ಪ್ರಮುಖಾಂಶಗಳು:

  • ಸಬ್ಸಿಡಿ ಅನುಪಸ್ಥಿತಿಯಲ್ಲಿ ಹಜ್ ಯಾತ್ರಿಕರು ಸೌದಿ ಅರೇಬಿಯಾಗೆ ಕಡಿಮೆ ಪಾವತಿ ಮಾಡಿ ಹೇಗೆ ಪ್ರಯಾಣ ಬೆಳಸಬಹುದೆಂಬುದರ ಬಗ್ಗೆ ಅಧ್ಯಯನ ನಡೆಸಲಿದೆ.
  • ಸಬ್ಸಿಡಿ ನೀಡುವುದರಿಂದ ಏನಾದರು ಪ್ರಯೋಜನವಿದೆಯ ಎಂಬುದರ ಬಗ್ಗೆ ಸಹ ಸಮಿತಿ ಅಧ್ಯಯನ ನಡೆಸಲಿದೆ. ಸಮಿತಿಯು ವರದಿಯನ್ನ ಸಲ್ಲಿಸುವ ಮುಂಚೆ ಸಂಬಂಧಿಸಿದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಿದೆ.

ಏನಿದು ಸಬ್ಸಿಡಿ ವಿವಾದ:

  • ಹಜ್ ಯಾತ್ರೆ ಕೈಗೊಳ್ಳುವ ಭಾರತೀಯ ಮುಸ್ಲಿಂರಿಗೆ ಕೇಂದ್ರ ಸರ್ಕಾರ ಹಜ್ ಸಬ್ಸಿಡಿಯನ್ನು ನೀಡುತ್ತಿದೆ. ಈ ಸಬ್ಸಿಡಿಯನ್ನು ವಿಮಾನಯಾನ ದರ ಹಾಗೂ ದೇಶದ ವಿವಿಧೆಡೆಯಿಂದ ಹಜ್ ಯಾತ್ರಿಕರು ನಿಗದಿತ ವಿಮಾನಯಾನ ತಲುಪಲು ಸಹಾಯಧನ ನೀಡುವ ಮೂಲಕ ನೀಡಲಾಗುತ್ತಿದೆ. 2012ರಲ್ಲಿ ಸುಪ್ರೀಂಕೋರ್ಟ್ ಹಜ್ ಸಬ್ಸಿಡಿಯನ್ನು ಕಾಲಕ್ರಮೇಣ ಕಡಿಮೆಗೊಳಿಸಲು ಹಾಗೂ 2022ರೊಳಗೆ ಸಂಪೂರ್ಣವಾಗಿ ನಿಲ್ಲಿಸುವಂತೆ ತೀರ್ಪು ನೀಡಿದೆ. ಅಲ್ಲದೇ ಈ ಸಬ್ಸಿಡಿ ಮೊತ್ತವನ್ನು ಮುಸ್ಲಿಂ ಸಮುದಾಯದವರ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ದಿಗೆ ಬಳಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು.

ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲು ಭಾರತ ಮತ್ತು ಶ್ರೀಲಂಕಾ ಒಪ್ಪಂದ

ಶ್ರೀಲಂಕಾದ ರಿನ್ ಜಫ್ನಾ ಜಿಲ್ಲೆಯಲ್ಲಿ ಮೂರು ಸಾವಿರ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ಶ್ರೀಲಂಕಾ ಸರ್ಕಾರದೊಂದಿಗೆ ಭಾರತ ಒಡಂಬಡಿಕೆ ಒಪ್ಪಂದಕ್ಕೆ ಸಹಿಹಾಕಿದೆ. ಈ ಯೋಜನೆಯ ಮೊತ್ತ 300 ಮಿಲಿಯನ್ ರೂಪಾಯಿ (ಶ್ರೀಲಂಕಾ). ಇದರಡಿ ರಿನ್ ಜಾಫ್ನಾ ಜಿಲ್ಲೆಯ ಆಯ್ದಾ ವಿಭಾಗದಲ್ಲಿ 3000 ಕುಟುಂಬಗಳಿಗೆ 3000 ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಾಗುವುದು.

ಪ್ರಮುಖಾಂಶಗಳು:

  • ಯೋಜನೆಯಡಿ ರಿನ್ ಜಾಫ್ನಾ ಜಿಲ್ಲೆಯಲ್ಲಿ ಸುಧಾರಿತ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಒದಗಿಸಿ ಆಂತರಿಕವಾಗಿ ಸ್ಥಳಾಂತರಿಸಲ್ಪಟ್ಟ ಕುಟುಂಬಗಳ ಪುನರ್ ವಸತಿ ಪ್ರಯತ್ನಕ್ಕೆ ಶ್ರಮಿಸಲಾಗುವುದು.
  • ಒಪ್ಪಂದದಡಿ ಮಳೆ ನೀರು ಕೊಯ್ಲು ವ್ಯವಸ್ಥೆಗಳ ಕಾರ್ಯಾಚರಣೆ ಹಾಗೂ ನಿರ್ವಹಣೆ ಬಗ್ಗೆ ಕುಟುಂಬಗಳಿಗೆ ತರಭೇತಿ ನೀಡಲಾಗುವುದು. ಇದರಿಂದ ಶ್ರೀಲಂಕಾದಲ್ಲಿ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.
  • ಯೋಜನೆಯ ಫಲಾನುಭವಿಗಳನ್ನು ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ ಶ್ರೀಲಂಕಾ ಸರ್ಕಾರ ಗುರುತಿಸಲಿದೆ. ಮಹಿಳಾ ನೇತೃತ್ವದ ಕುಟುಂಬಗಳು ಹಾಗೂ ಇತ್ತೀಚೆಗೆ ಪುನರ್ ವಸತಿ ಕಲ್ಪಿಸಲಾದ ಕುಟುಂಬಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು.
  • ಶ್ರೀಲಂಕಾ ಸರ್ಕಾರದ ಕೋರಿಕೆ ಮೇರೆಗೆ ಭಾರತ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

2017-18ನೇ ಸಾಲಿನಲ್ಲಿ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಓ) ಹೊರತಂದಿರುವ 2017 ವಿಶ್ವ ಉದ್ಯೋಗ ಮತ್ತು ಸಾಮಾಜಿಕ ಮುನ್ನೋಟ ವರದಿ ಪ್ರಕಾರ ಭಾರತದಲ್ಲಿ 2017ರ ವೇಳೆಗೆ 1 ಲಕ್ಷ ಹಾಗೂ 2018ರಲ್ಲಿ 2 ಲಕ್ಷ ಹೆಚ್ಚಳವಾಗಲಿದೆ.

ವರದಿಯ ಪ್ರಮುಖಾಂಶಗಳು:

  • ಭಾರತದ ನಿರುದ್ಯೋಗ ಪ್ರಮಾಣ 2016ರಲ್ಲಿ 17.7 ದಶಲಕ್ಷವಿದ್ದು, 2017ರಲ್ಲಿ 17.8 ದಶಲಕ್ಷಕ್ಕೆ ಏರಿಕೆಯಾಗಲಿದೆ. 2018ರಲ್ಲಿ ಈ ಪ್ರಮಾಣ 18ದಶಲಕ್ಷ ತಲುಪಲಿದೆ.
  • 2016ರಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿ ಉತ್ತಮವಾಗಿದೆ. ಕಳೆದ ವರ್ಷ ಸುಮಾರು 13.4 ಮಿಲಿಯನ್ ಉದ್ಯೋಗ ಸೃಷ್ಟಿಯಾಗಿದೆ.
  • ಜಾಗತಿಕ ಮಟ್ಟದಲ್ಲಿ ನಿರುದ್ಯೋಗಿಗಳ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಜಾಗತಿಕ ನಿರುದ್ಯೋಗ ಪ್ರಮಾಣ ಕಳೆದ ವರ್ಷದ ಶೇಕಡ 5.7% ರಿಂದ 5.8%ಕ್ಕೆ ತಲುಪಲಿದೆ.
  • ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿನಿಂದ ಉದ್ಬವವಾದ ತೊಂದರೆಗಳಿಂದ ನಿರುದ್ಯೋಗ ಪ್ರಮಾಣ ಹೆಚ್ಚಾಗಲಿದೆ.

Leave a Comment

This site uses Akismet to reduce spam. Learn how your comment data is processed.