ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಒಲಿದ 2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ಕಿರೀಟ

ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು 2016 ವಿಶ್ವ ಚೆಸ್‌ ಚಾಂಪಿಯನ್‌ ಷಿಪ್‌ ಕಿರೀಟವನ್ನು ತಮ್ಮದಾಗಿಸಿಕೊಳ್ಳುವ ಮೂಲಕ  ಕಾರ್ಲ್‌ಸನ್‌ ಸತತ ಮೂರನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.
ರೋಚಕ ಹಣಾಹಣಿಯಲ್ಲಿ ನಾರ್ವೆಯ ಆಟಗಾರ, ರಷ್ಯಾದ ಸರ್ಜಿ ಕರ್ಜಾಕಿನ್‌ ಅವರನ್ನು ಪರಾಭವಗೊಳಿಸಿದರು. ನಾಲ್ಕು ಸುತ್ತುಗಳ ರ್‍ಯಾಪಿಡ್‌  ಪ್ಲೇ ಆಫ್‌ನ ಮೊದಲ ಎರಡು ಸುತ್ತುಗಳು ಡ್ರಾದಲ್ಲಿ ಅಂತ್ಯ ಕಂಡಿದ್ದವು. ಹೀಗಾಗಿ ಮೂರನೇ ಹಾಗೂ ನಾಲ್ಕನೇ ಸುತ್ತಿನ ಹೋರಾಟ ಕುತೂಹಲ ಕೆರಳಿಸಿತ್ತು. ಈ ಸುತ್ತುಗಳಲ್ಲಿ ಜಾಣ್ಮೆಯಿಂದ ಕಾಯಿಗಳನ್ನು ಪ್ರಶಸ್ತಿಗೆ ಮುತ್ತಿಟ್ಟರು.

ಮ್ಯಾಗ್ನಸ್ ಕಾರ್ಲ್‌ಸನ್‌ ಬಗ್ಗೆ:

  • ಮ್ಯಾಗ್ನಸ್ ಕಾರ್ಲ್‌ಸನ್‌ ನಾರ್ವೆಯ ಚೆಸ್ ಗ್ರಾಂಡ್ ಮಾಸ್ಟರ್. ಪ್ರಸ್ತುತ ಇವರು ವಿಶ್ವದ ನಂ.1 ಶ್ರೇಯಾಂಕಿತ ಚೆಸ್ ಆಟಗಾರ.
  • 2004 ರಲ್ಲಿ ತಮ್ಮ 13ವರ್ಷ ವರ್ಷದಲ್ಲಿಯೇ ಗ್ರಾಂಡ್ ಮಾಸ್ಟರ್ ಪಟ್ಟವನ್ನು ಕಾರ್ಲ್‌ಸನ್‌ ಪಡೆದುಕೊಂಡರು.
  • ಜನವರಿ 1, 2010 ರಲ್ಲಿ ಕಾರ್ಲ್‌ಸನ್‌ ಅವರು ವಿಶ್ವ ನಂ.1 ಚೆಸ್ ಆಟಗಾರನಾಗಿ ಹೊರಹೊಮ್ಮಿದರು. ಆಗ ಅವರ ವಯಸ್ಸು 19 ವರ್ಷ 32 ದಿನ. ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿಶ್ವದ ನಂ.1 ಪಟ್ಟವನ್ನು ಪಡೆದುಕೊಂಡ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
  • ನವೆಂಬರ್ 2013 ರಲ್ಲಿ, ಭಾರತದ ವಿಶ್ವನಾಥನ್ ಆನಂದ್ ಅವರನ್ನು ಮಣಿಸಿ ಮತ್ತೊಮ್ಮೆ ವಿಶ್ವ ಚೆಸ್ ಚಾಂಪಿಯನ್ ಷಿಪ್ ಅನ್ನು ಗೆದ್ದುಕೊಂಡರು.
  • 2013 ರ ಟೈಮ್ಸ್ ನಿಯತಕಾಲಿಕೆಯ ಜಗತ್ತಿನ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾರ್ಲ್‌ಸನ್‌ ಸ್ಥಾನಪಡೆದುಕೊಂಡು ಸುದ್ದಿಯಲ್ಲಿದ್ದರು.

ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಗೆ 15 ಹೊಸ ಜಾತಿಗಳು ಸೇರ್ಪಡೆ

ಕೇಂದ್ರ ಸರ್ಕಾರದ ಇತರ ಹಿಂದುಳಿದ ವರ್ಗಗಳ ಪಟ್ಟಿಗೆ 15 ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಲು ಮತ್ತು ಇತರೆ 13 ಜಾತಿಗಳನ್ನು ಮಾರ್ಪಾಡು ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಎಂಟು ರಾಜ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಿಂದುಳಿದ ಆಯೋಗವು ಒಟ್ಟು 28 ಬದಲಾವಣೆಗಳನ್ನು ಶಿಫಾರಸ್ಸು ಮಾಡಿತ್ತು. ಅಸ್ಸಾಂ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರಖಂಡ್ ಈ ಎಂಟು ರಾಜ್ಯಗಳು.

ಪ್ರಮುಖಾಂಶಗಳು:

  • ರಾಷ್ಟ್ರೀಯ ಹಿಂದುಳಿದ ಆಯೋಗವು ಒಟ್ಟು ಎಂಟು ರಾಜ್ಯಗಳಿಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 28 ಬದಲಾವಣೆಗಳನ್ನು ಶಿಫಾರಸ್ಸು ಮಾಡಿತ್ತು.
  • ಈ 28 ಶಿಫಾರಸ್ಸಿನಲ್ಲಿ 15 ಹೊಸ ಜಾತಿಗಳ ಸೇರ್ಪಡೆ, 9 ಜಾತಿಗಳು ಈಗಾಗಲೇ ಪಟ್ಟಿಯಲ್ಲಿರುವ ಜಾತಿಗಳ ಉಪಜಾತಿಗಳು ಹಾಗೂ ನಾಲ್ಕು ತಿದ್ದುಪಡ್ಡಿಗೊಂಡವುಗಳಾಗಿವೆ.
  • ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಸವಲತ್ತು ಪಡೆಯಲು ಸಹಾಯವಾಗಲಿದೆ.
  • ಅಲ್ಲದೇ, ವಿವಿಧ ಯೋಜನೆಗಳ ಉಪಯೋಗ ಮತ್ತು ವಿದ್ಯಾರ್ಥಿ ವೇತನಗಳನ್ನು ಪಡೆಯಲು ಅನುಕೂಲವಾಗಲಿದೆ.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ:

ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯಿದೆ-1993ರಡಿಯಲ್ಲಿ ಇಂದ್ರ ಸಾಹನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನುಗುಣವಾಗಿ ಹಿಂದುಳಿದ ವರ್ಗಗಳ ಆಯೋಗವನ್ನು ಸ್ಥಾಪಿಸಲಾಗಿದೆ.

  • ಆಯೋಗವು ಒಬ್ಬ ಅಧ್ಯಕ್ಷ ಒಳಗೊಂಡಿದೆ. ಸಮಾಜ ವಿಜ್ಞಾನಿ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ವಿಶೇಷ ಜ್ಞಾನವನ್ನು ಹೊಂದಿರುವ ಇಬ್ಬರು ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ಸೇರಿ ಐದು ಸದಸ್ಯರನ್ನು ಹೊಂದಿದೆ. ಅಧ್ಯಕ್ಷನು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟಿನ ನ್ಯಾಯಾಧೀಶನಾಗಿರಬೇಕು.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಸುಪ್ರೀಂ ಕೋರ್ಟ್

ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮೊದಲು ರಾಷ್ಟ್ರಗೀತೆ ಹಾಡಬೇಕು ಮತ್ತು ಈ ಸಂದರ್ಭದಲ್ಲಿ ಜನರು ಗೌರವಪೂರ್ವಕವಾಗಿ ಎದ್ದು ನಿಲ್ಲಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಸಿನಿಮಾ ಪರದೆಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು ಎಂದೂ ಕೋರ್ಟ್‌ ಹೇಳಿದೆ.  ಜನರಲ್ಲಿ ದೇಶಪ್ರೇಮ ಮತ್ತು ರಾಷ್ಟ್ರಭಿಮಾನ ಮೂಡಿಸಲು ಕಾರಣವಾಗಲಿದೆ ಎಂದು ಕೋರ್ಟ್ ಹೇಳಿದೆ. ‘ಜನರಲ್ಲಿ ಇದು ತಮ್ಮ ದೇಶ ಮತ್ತು ತಮ್ಮ ತಾಯ್ನಾಡು ಎಂಬ ಭಾವನೆ ಇರಬೇಕು’ ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಅಮಿತಾವ ರಾಯ್‌ ಅವರ ಪೀಠ ಹೇಳಿದೆ. ರಾಷ್ಟ್ರಗೀತೆ ಮತ್ತು ಧ್ವಜ ಗೌರವಿಸುವುದು ಪ್ರತಿ ಪ್ರಜೆಯ ಕರ್ತವ್ಯ ಎಂದು ಪೀಠ ತಿಳಿಸಿದೆ. ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡಲು ನಿರ್ದೇಶನ ನೀಡಬೇಕು. ಅದಕ್ಕೆ ಅಗತ್ಯವಾದ ನಿಯಮಗಳು ಮತ್ತು ಶಿಷ್ಟಾಚಾರ ರೂಪಿಸಬೇಕು ಎಂದು ಕೋರಿ ಶ್ಯಾಮ್‌ ನಾರಾಯಣ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

ಅರ್ಜಿಯಲ್ಲಿ ಏನಿತ್ತು?

ರಾಷ್ಟ್ರಗೀತೆಯನ್ನು ವಾಣಿಜ್ಯ ಶೋಷಣೆಗೆ ಒಳಪಡಿಸುತ್ತಿರುವ ಬಗ್ಗೆ ಅರ್ಜಿಯಲ್ಲಿ ತಿಳಿಸಲಾಗಿತ್ತು. ಅನೇಕ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಅಗತ್ಯ ನಿಯಮ ಪಾಲಿಸಿದೆ ಹಾಡುತ್ತಿರುವುದು ಕಾನೂನು ಬಾಹಿರ ಎಂದು ಅರ್ಜಿದಾರರು ತಿಳಿಸಿದ್ದರು. ರಾಷ್ಟ್ರ ಗೌರವಕ್ಕೆ ಅವಮಾನ ತಡೆಯುವ ಕಾಯಿದೆ-1971 ಮತ್ತು ಸಂವಿಧಾನದ 51ಎ ಪ್ರಕರಣದ ಅನ್ವಯ ರಾಷ್ಟ್ರಗೀತೆ ಹಾಡುವಾಗ ಎದ್ದು ಗೌರವ ತೋರುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಆದರೆ ಹಲವು ಸಂದರ್ಭಗಳಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ. ಆದ್ದರಿಂದ ಸುಪ್ರೀಂಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಷ್ಟಾಚಾರ ರೂಪಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.

ಕೋರ್ಟ್ ಆದೇಶ:

  • ರಾಷ್ಟ್ರಗೀತೆ ಹಾಡುವ ಸಂದರ್ಭ ದಲ್ಲಿ ಸಿನಿಮಾ ಮಂದಿರದ ಎಲ್ಲ ಬಾಗಿಲುಗಳನ್ನು ಮುಚ್ಚಬೇಕು.
  • ರಾಷ್ಟ್ರಗೀತೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ
  • ಯಾವುದೇ ರೀತಿಯಲ್ಲಿ ಮಾರ್ಪಡಿಸುವಂತಿಲ್ಲ
  • ಅಗೌರವ ತೋರುವ ರೀತಿಯಲ್ಲಿ ವಸ್ತುಗಳ ಮೇಲೆ ಮುದ್ರಿಸುವಂತಿಲ್ಲ (ಉದಾಹರಣೆಗೆ ಟಿ ಶರ್ಟ್‌)
  • ವೆರೈಟಿ ಕಾರ್ಯಕ್ರಮದ ಭಾಗ ವಾಗಿ ಹಾಡುವಂತಿಲ್ಲ ಮತ್ತು ಸಂಕ್ಷಿಪ್ತ ರೂಪದಲ್ಲಿ ಹಾಡಬಾರದು
  • ನ್ಯಾಯಾಲಯದ ಆದೇಶವನ್ನು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಕು
  • ಆದೇಶವನ್ನು ಅಕ್ಷರಶಃ ಪಾಲಿಸಬೇಕು
  • ಇದು ಒಂದು ವಾರದಲ್ಲಿ ಅನುಷ್ಠಾನಗೊಳ್ಳಬೇಕು

Leave a Comment

This site uses Akismet to reduce spam. Learn how your comment data is processed.