ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ನಾಲ್ಕು ಹಂತದ ತೆರಿಗೆ ದರ ನಿಗದಿ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಂಡಳಿ ನಾಲ್ಕು ಹಂತದ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, ಕನಿಷ್ಠ ಶೇ.5ರಿಂದ ಗರಿಷ್ಠ ಶೇ.28ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಒಟ್ಟು ನಾಲ್ಕು ಹಂತದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುತ್ತಿದ್ದು, ವಿವಿಧ ವಸ್ತುಗಳ ಮೇಲೆ ಶೇ,5, ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸಲಾಗುವುದು.

ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳು:

  • ಒಟ್ಟು ನಾಲ್ಕು ಹಂತದ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುತ್ತಿದ್ದು, ವಿವಿಧ ವಸ್ತುಗಳ ಮೇಲೆ ಶೇ, 5, ಶೇ.12, ಶೇ.18 ಮತ್ತು ಶೇ.28ರಷ್ಟು ತೆರಿಗೆ ವಿಧಿಸಲಾಗುವುದು. ಇದಲ್ಲದೇ ವಿಲಾಸಿ ಪದಾರ್ಥಗಳಾದ ಪಾನ್ ಮಸಾಲ, ತಂಬಾಕು ಉತ್ಪನ್ನ, ವಿಲಾಸಿ ಕಾರು ಮತ್ತು ಸಂಸ್ಕರಿತ ಪಾನೀಯಗಳ ಮೇಲೆ ಶೇ 40 ರಿಂದ ಶೇ 65% ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ.
  • ಆಹಾರ ಧಾನ್ಯಗಳಿಗೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಇದರಿಂದ ಜನ ಸಾಮಾನ್ಯರಿಗೆ ಹಣದುಬ್ಬರ ತೊಂದರೆ ನಿವಾರಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
  • ಶೇ 5ರ ದರವನ್ನು ಸಾಮಾನ್ಯ ಜನರು ಸಾಮೂಹಿಕವಾಗಿ ಬಳಸುವ ವಸ್ತುಗಳ ಮೇಲೆ ಹಾಕಲಾಗಿದೆ.
  • ಐಷಾರಾಮಿ ಕಾರು, ತಂಬಾಕು ಇತರ ವಸ್ತುಗಳಿಗೆ ಕ್ಲೀನ್ ಎನರ್ಜಿ ಸೆಸ್ ಜತೆಗೆ ಸೆಸ್ ಹಾಕಲಾಗಿದ್ದು, ಆದಾಯದಲ್ಲಿ ನಷ್ಟವಾಗುವ ರಾಜ್ಯಗಳಿಗೆ ಪರಿಹಾರವಾಗಿ ನೀಡಲಾಗುವುದು. ಈ ರೀತಿಯ ಪರಿಹಾರ ರೂಪದ ಸೆಸ್ ಮುಂದಿನ ಐದು ವರ್ಷಗಳ ಕಾಲ ಇರುತ್ತದೆ.
  • ಜಿಎಸ್ ಟಿ ಜಾರಿಯಾದ ಮೊದಲ ವರ್ಷ ರಾಜ್ಯಗಳ ಆದಾಯದಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು 50 ಸಾವಿರ ಕೋಟಿ ಪಾವತಿಸಬೇಕಾಗುತ್ತದೆ ಎಂದು ಜೇಟ್ಲಿ ಹೇಳಿದರು. ಏಪ್ರಿಲ್ 1, 2017ರಿಂದ ಈ ಜಿಎಸ್ ಟಿಯ ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದೆ.

ಚೀನಾದ “ಒನ್ ಬೆಲ್ಟ್ ಅಂಡ್ ಒನ್ ರೋಡ್” ಒಪ್ಪಂದಕ್ಕೆ ಸಹಿ ಹಾಕಿದ ಲಾಟ್ವಿಯಾ

ಚೀನಾದ ಒನ್ ಬೆಲ್ಟ್ ಅಂಡ್ ಒನ್ ರೋಡ್ ನೊಂದಿಗೆ ಸಂಪರ್ಕ ಹೊಂದಲು ಲಾಟ್ವಿಯಾ ದೇಶ ಚೀನಾದೊಂದಿಗೆ ಒಡಂಬಡಿಕೆಗೆ ಸಹಿಹಾಕಿದೆ. ಚೀನಾದ ಈ ಮಹತ್ವದ ಯೋಜನೆಯ ಉಪಯೋಗ ಪಡೆಯಲು ಸಹಿ ಹಾಕಿದ ಬಾಲ್ಟಿಕ್ ರಾಷ್ಟ್ರಗಳ ಮೊದಲ ರಾಷ್ಟ್ರ ಲಾಟ್ವಿಯಾ. ಲೀ ಕೆಕೆಯಾಂಗ್ ಮತ್ತು ಲಾಟ್ವಿಯಾದ ಮರೀಸ್ ಕುಸ್ಸಿನ್ಸ್ಕಿ ನಡುವೆ ಲಾಟ್ವಿಯಾದ ರಾಜದಾನಿ ರಿಗಾದಲ್ಲಿ ಸಹಿ ಹಾಕಲಾಯಿತು. ಇದೇ ಮೊದಲ ಬಾರಿಗೆ ಚೀನಾದ ಪ್ರಧಾನಿಯೊಬ್ಬರು ಐರೋಪ್ಯ ಒಕ್ಕೂಟ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಇದಲ್ಲದೇ ಸಣ್ಣ ಮತ್ತು ಮಧ್ಯಮ ಉದ್ದಿಮೆ, ಸಾರಿಗೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸೇರಿದಂತೆ ಐದು ಪ್ರಮುಖ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಈ ಸಂದರ್ಭದಲ್ಲಿ ಸಹಿಹಾಕಿದವು.

ಚೀನಾ ಒನ್ ಬೆಲ್ಟ್ ಒನ್ ರೋಡ್ ಯೋಜನೆ:

  • ಒನ್ ಬೆಲ್ಟ್‌ ಆಂಡ್‌ ಒನ್ ರೋಡ್‌’ ಯೋಜನೆಯಡಿ ರಸ್ತೆ, ರೈಲು ಮತ್ತು ಬಂದರು ಮೂಲಸೌಕರ್ಯಗಳನ್ನು ವಿಸ್ತರಿಸುವ ಗುರಿಯನ್ನು ಚೀನಾ ಹೊಂದಿದೆ. ಏಷ್ಯಾ, ಎಂಎಸ್‌ಆರ್‌,ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್‌ (ಬಿಸಿಐಎಂ) ಮೂಲಕ ಯುರೋಪ್‌ಗೆ ಸಂಪರ್ಕ ಕಲ್ಪಿಸುವ ಯುರೇಷಿಯನ್‌ ಹೆದ್ದಾರಿ ಮತ್ತು ಚೀನಾ–ಪಾಕ್ ಆರ್ಥಿಕ ಕಾರಿಡಾರ್‌ಗಳಿಂದ (ಸಿಪಿಇಸಿ) ತನ್ನ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುವುದು ಚೀನಾದ ಗುರಿ.

ವಿಶ್ವಬ್ಯಾಂಕ್ ಇಂಧನ ಉಳಿತಾಯ ಶ್ರೇಣಿಯಲ್ಲಿ ಆಂಧ್ರ ಪ್ರದೇಶಕ್ಕೆ ಮೊದಲ ಸ್ಥಾನ

ಇಂಧನ ದಕ್ಷತೆ ಅನುಷ್ಟಾನದಲ್ಲಿ ಆಂಧ್ರಪ್ರದೇಶ ದೇಶದಲ್ಲಿ ಮುಂಚೂಣಿಯಲ್ಲಿದೆ ಎಂದು  ವಿಶ್ವಬ್ಯಾಂಕ್ ತಿಳಿಸಿದೆ. “ಇಂಡಿಯಸ್ ಸ್ಟೇಟ್ ಲೆವೆಲ್ ಎನರ್ಜಿ ಎಫಿಶಿಯೆನ್ಸಿ ಇಂಪ್ಲಿಮೆಂಟೇಶನ್ ರೆಡಿನೆಸ್” ವರದಿಯನ್ನು ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ್ದು, ಇಂಧನ ಉಳಿತಾಯದಲ್ಲಿ ದೇಶದ ವಿವಿಧ ರಾಜ್ಯಗಳ ಶ್ರೇಯಾಂಕವನ್ನು ನೀಡಲಾಗಿದೆ.

ಪ್ರಮುಖಾಂಶಗಳು:

  • ಇಂಧನ ಉಳಿತಾಯದಲ್ಲಿ 42.01 ಅಂಕ ಪಡೆಯುವ ಮೂಲಕ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. ರಾಜಸ್ತಾನ (41.89) ಮತ್ತು ಕರ್ನಾಟಕ (39.34) ಹಾಗೂ ಮಹಾರಾಷ್ಟ್ರ (39.29) ಮೊದಲ ನಾಲ್ಕು ಸ್ಥಾನದಲ್ಲಿವೆ.
  • ಟಾಪ್ ಟೆನ್ ನಲ್ಲಿರುವ ರಾಜ್ಯಗಳೆಂದರೆ ಕೇರಳ, ಗುಜರಾತ್, ದೆಹಲಿ, ಪಂಜಾಬ್, ಒಡಿಶಾ ಮತ್ತು ಉತ್ತರ ಪ್ರದೇಶ.
  • ಆಂಧ್ರಪ್ರದೇಶ ಕಳೆದ ಎರಡು ವರ್ಷದಲ್ಲಿ 1,500 ಮಿಲಿಯನ್ ಯೂನಿಟ್ಸ್ ಇಂಧನ ಉಳಿತಾಯ ಮಾಡಲಾಗಿದೆ. ಅಂದರೆ 650 ಮೆ,ವ್ಯಾಟ್. ಎಲ್ಇಡಿ ಬಲ್ಬ್ ಬಳಕೆ ಮಾಡುವ ಮೂಲಕ ಈ ಸಾಧನೆ ಮಾಡಲಾಗಿದೆ.

Leave a Comment

This site uses Akismet to reduce spam. Learn how your comment data is processed.