ಗುಜರಾತ್ ನ ಒಖ-ಕನಲುಸ್, ಪೋರ್ಬಂದರ್-ವಾನ್ಸ್ ಜಲಿಯ ರೈಲ್ವೆ ವಿಭಾಗಗಳು ಹಸಿರು ರೈಲು ಕಾರಿಡಾರ್

ಗುಜರಾತ್ನ ಒಖ-ಕನಲುಸ್, ಪೋರ್ಬಂದರ್-ವಾನ್ಸ್ ಜಲಿಯ ರೈಲ್ವೆ ವಿಭಾಗಗಳನ್ನು ಹಸಿರು ರೈಲು ಕಾರಿಡಾರ್ ಎಂದು ಕೇಂದ್ರ ರೈಲ್ವೆ ಸಚಿವಾಲಯ ಘೋಷಿಸಿದೆ. ಈ ಮಾರ್ಗ 175 ಕಿ.ಮೀ ಉದ್ದವಿದ್ದು, ಇದರ ಮೂಲಕ ಹಾದು ಹೋಗುವ ಎಲ್ಲಾ ರೈಲುಗಳಿಗೆ ಜೈವಿಕ ಶೌಚಾಲಯ (ಬಯೋ ಟಾಯ್ಲೆಟ್) ಅನ್ನು ಅಳವಡಿಸಲಾಗಿದೆ. ಈ ಮಾರ್ಗದ ಮೂಲಕ ಸಂಚರಿಸುವ 29 ರೈಲುಗಳ 700 ಬೋಗಿಗಳಿಗೆ ಜೈವಿಕ ಶೌಚಾಲಯ ಅಳವಡಿಸಿದ್ದು, ರೈಲು ಪಥಗಳ ಮೇಲೆ ಮಲ-ಮೂತ್ರ ನೇರವಾಗಿ ವಿಸರ್ಜನೆಯಾಗದೇ ತಡೆಯಲಾಗಿದೆ.

ಹಸಿರು ರೈಲು ಕಾರಿಡಾರ್:

  • ಹಸಿರು ರೈಲು ಕಾರಿಡಾರ್ ಗಳು ರೈಲು ಮಾರ್ಗದ ಭಾಗವಾಗಿದ್ದು, ಈ ಪಥಗಳಲ್ಲಿ ರೈಲಿನಿಂದ ನೇರವಾಗಿ ಮಾನವ ತ್ಯಾಜ್ಯ ಬಿಡುಗಡೆಗೊಳಿಸಲಾಗುವುದಿಲ್ಲ. ಬದಲಿಗೆ ಈ ಮಾರ್ಗದಲ್ಲಿ ಚಲಿಸುವ ರೈಲುಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿರುತ್ತದೆ.
  • ಆದ್ದರಿಂದ ಮಾನವ ತ್ಯಾಜ್ಯ ನೇರವಾಗಿ ರೈಲು ಪಥಗಳ ಮೇಲೆ ಬೀಳದೆ ಸ್ವಚ್ಚತೆ ಮತ್ತು ನೈರ್ಮಲ್ಯತೆ ಕಾಪಾಡಬಹುದಾಗಿದೆ.
  • ತಮಿಳುನಾಡಿನ 114 ಕಿ.ಮೀ ಉದ್ದದ ರಾಮೇಶ್ವರಂ-ಮನಮಧುರೈ ರೈಲು ಮಾರ್ಗ ದೇಶದ ಮೊದಲ ಹಸಿರು ರೈಲು ಕಾರಿಡಾರ್.

ಹಿನ್ನಲೆ:

  • ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ ರೈಲು ನಿಲ್ದಾಣ ಮತ್ತು ರೈಲು ಹಾದಿಗಳಲ್ಲಿ ಸ್ವಚ್ಚತೆ ಹಾಗೂ ನೈಮರ್ಲ್ಯತೆ ತೋರುವ ಸಲುವಾಗಿ ರೈಲು ಸಚಿವಾಲಯವು 2020-21ರ ವೇಳೆಗೆ ಎಲ್ಲಾ ರೈಲುಗಳಲ್ಲಿ ಜೈವಿಕ ಶೌಚಾಲಯವನ್ನು ಅಳವಡಿಸಲು ಚಿಂತಿಸಿದೆ.

ಜೈವಿಕ ಶೌಚಾಲಯ:

  • ಜೈವಿಕ ಶೌಚಾಲಯ ಪರಿಸರ ಸ್ನೇಹಿ ಶೌಚಾಲಯವಾಗಿದ್ದು, ಪ್ರಯಾಣಿಕ ರೈಲುಗಳ ಶೌಚಾಲಯದ ಕೆಳಭಾಗದಲ್ಲಿ ಇದನ್ನು ಅಳವಡಿಸಲಾಗುವುದು.
  • ಈ ಶೌಚಾಲಯಗಳನ್ನು ಮಾನವ ತ್ಯಾಜ್ಯವು ಬಯೋಡೈಜಸ್ಟರ್ ನಲ್ಲಿ ಸಂಗ್ರಹಣೆಗೊಂಡು, ಜೈವಿಕ ವಿಘಟನೆ ಮಾಡಬಲ್ಲ ಬ್ಯಾಕ್ಟೀರಿಯಾಗಳಿಂದ ಘನ ತ್ಯಾಜ್ಯವನ್ನು ಅನಿಲ ಮತ್ತು ಜಲರೂಪಕ್ಕೆ ಪರಿವರ್ತಿಸಲಾಗುವುದು. ಇದರಿಂದ ರೈಲು ನಿಲ್ದಾಣಗಳಲ್ಲಿ ದುರ್ಗಂಧ ತಡೆಯುವುದಲ್ಲದೇ, ಸ್ವಚ್ಚತೆ ಮತ್ತು ಸುರಕ್ಷತೆ ಕಾಪಾಡಬಹುದಾಗಿದೆ.
  • ಜೈವಿಕ ಶೌಚಾಲಯವನ್ನು ಭಾರತೀಯ ರೈಲ್ವೆ ಮತ್ತು DRDO ಜಂಟಿಯಾಗಿ ವಿನ್ಯಾಸಗೊಳಿಸಿವೆ.

ತ್ರಿವಳಿ ತಲಾಖ್: ಅತಿ ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿರುವ ಪದ್ದತಿ

ಇಸ್ಮಾಂ ಧರ್ಮದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್ ಹೆಚ್ಚಾಗಿ ದುರ್ಬಳಕೆ ಮಾಡಿಕೊಂಡಿರುವ ಸಂಪ್ರದಾಯವಾಗಿದ್ದು, ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ಸರ್ಕಾರ ಈ ಪದ್ದತಿಯನ್ನು ನಿಷೇಧಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ತ್ರಿವಳಿ ತಲಾಖ್ ನಿಂದ ರಕ್ಷಿಸಲು ಸರ್ಕಾರ ಮುಂದಾಗಬೇಕಿದ್ದು, ತ್ರಿವಳಿ ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಒಂದಾಗಿ ನೋಡುವ ಅಗತ್ಯವಿಲ್ಲವೆಂದು ಆಯೋಗ ಸ್ಪಷ್ಟಪಡಿಸಿದೆ.

ತ್ರಿವಳಿ ತಲಾಖ್ ಎಂದರೇನು?

  • ತಲಾಖ್ ಎಂದರೆ ಮುಸ್ಲಿಂ ದಂಪತಿಗಳು ವಿಚ್ಛೇದನ ನೀಡಲು ಅನುಸರಿಸುವ ವಿಧಾನ. ಈ ವಿಧಾನದಡಿ ಮುಸ್ಲಿಂ ಪತಿಯು ಮೂರು ಬಾರಿ ತಲಾಖ್ ಎಂದು ಹೇಳುವ ಮೂಲಕ ತನ್ನ ಸತಿಗೆ ವಿಚ್ಛೇದನ ನೀಡಬಹುದು.

ತ್ರಿವಳಿ ತಲಾಖ್ ನಿಷೇಧವೇಕೆ?

  • ‘ತ್ರಿವಳಿ ತಲಾಖ್’ ಅಭ್ಯಾಸ ಸುಲಭವಾಗಿ ಮತ್ತು ನಿರಂಕುಶವಾಗಿ ಅವರ ಹೆಂಡತಿಯರಿಗೆ ವಿಚ್ಛೇದನವನ್ನು ನೀಡಲು ಗಂಡಂದಿರುಗೆ ನೆರವಾಗಿದೆ ಎನ್ನಲಾಗಿದೆ. ಇದು ಮಹಿಳೆಯರ ಘನತೆ ಮತ್ತು ಜೀವನ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ‘ತ್ರಿವಳಿ ತಲಾಖ್’ ಪಾಕಿಸ್ತಾನ ಸೇರಿದಂತೆ 21 ಇಸ್ಲಾಮಿಕ್ ದೇವಪ್ರಭುತ್ವಾತ್ಮಕ ದೇಶಗಳಲ್ಲಿ ರದ್ದುಪಡಿಸಲಾಗಿದೆ. ಇದು ಲಿಂಗ ಸಮಾನತೆ, ಜಾತ್ಯತೀತತೆ, ಅಂತರರಾಷ್ಟ್ರೀಯ ಕಾನೂನುಗಳನ್ನು ಇತ್ಯಾದಿ ಸಂವಿಧಾನಾತ್ಮಕ ತತ್ವಗಳಿಗೂ ವಿರುದ್ಧವಾಗಿದೆ ಎನ್ನಲಾದ ಕಾರಣ ನಿಷೇಧಿಸಲು ಒತ್ತಡ ಹೆಚ್ಚಿದೆ.

ಸರ್ಕಾರದ ನಿಲುವೇನು?

ಇತ್ತೀಚೆಗೆ ಕೇಂದ್ರಸರ್ಕಾರ ತ್ರಿವಳಿ ತಲಾಖ್ ಪದ್ದತಿಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಿದ್ದು ತ್ರಿವಳಿ ತಲಾಖ್ ಪದ್ದತಿಯನ್ನು ಖಂಡಿಸಿದೆ. ತ್ರಿವಳಿ ತಲಾಖ್ ಮುಸ್ಲಿಂ ಧರ್ಮದ ಭಾಗವಲ್ಲ ಮತ್ತು ಈ ಪದ್ದತಿ ಸಂವಿಧಾನ ಅಂಶಗಳಿಗೆ ವಿರುದ್ದವಾಗಿದೆ ಎಂದು ಅಫಿಡೇವಿಟ್ ಸಲ್ಲಿಸಿದೆ.

ಸ್ಮಾರ್ಟ್ ರೈಲು ನಿಲ್ದಾಣ ಅಭಿವೃದ್ದಿ ರೈಲ್ವೆ ಸಚಿವಾಲಯ ಒಪ್ಪಂದ

ದೇಶದಲ್ಲಿ ಸ್ಮಾರ್ಟ್ ರೈಲು ನಿಲ್ದಾಣಗಳನ್ನು ಅಭಿವೃದ್ದಿಪಡಿಸುವ ಸಲುವಾಗಿ ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಒಪ್ಪಂದಕ್ಕೆ ಸಹಿಹಾಕಿವೆ. ಈ ಒಪ್ಪಂದ ಐದು ವರ್ಷಗಳ ವರೆಗೆ ಇರಲಿದ್ದು, ಎರಡು ಸಚಿವಾಲಯಗಳ ಸಮ್ಮತಿ ಮೇರೆಗೆ ವಿಸ್ತರಿಸಬಹುದಾಗಿದೆ.

ಒಪ್ಪಂದದ ಪ್ರಮುಖಂಶಗಳು:

  • ಒಪ್ಪಂದದಡಿ ರೈಲು ನಿಲ್ದಾಣ ಮತ್ತು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ಮಾರ್ಟ್ ನಗರ ಯೋಜನೆಯಡಿ ಅಭಿವೃದ್ದಿಪಡಿಸಲಾಗುವುದು.
  • ದೇಶದ 500 ರೈಲು ನಿಲ್ದಾಣಗಳನ್ನು ಉತ್ತಮ ಪ್ರಯಾಣಿಕರ ಸೌಕರ್ಯ, ಸಮಗ್ರ ಸಾರಿಗೆ ಕೇಂದ್ರ ಮತ್ತು ಸುಲಭ ಬಳಕೆ ನಿಲ್ದಾಣಗಳಾಗಿ ಪರಿವರ್ತಿಸಲಾಗುವುದು.
  • ಪ್ರಾರಂಭಿಕವಾಗಿ 100 ರೈಲು ನಿಲ್ದಾಣಗಳು ಮತ್ತು ಅವುಗಳ ಸುತ್ತಲಿನ 300-800 ಎಕರೆ ಪ್ರದೇಶಗಳನ್ನು ಸ್ಮಾರ್ಟ್ ನಗರ ಹಾಗೂ ಅಮೃತ್ ಯೋಜನೆಯಡಿ ಪುನರ್ ಅಭಿವೃದ್ದಿಪಡಿಸಲಾಗುವುದು. ಆನಂತರ ಒಪ್ಪಂದವನ್ನು 500 ನಿಲ್ದಾಣಗಳಿಗೆ ವಿಸ್ತರಿಸಲಾಗುವುದು.
  • ಜರ್ಮನಿ, ಫ್ರಾನ್ಸ್, ದಕ್ಷಿಣ ಕೊರಿಯಾ, ಯುಕೆ ಮತ್ತು ಬೆಲ್ಜಿಯಂ ರಾಷ್ಟ್ರಗಳ ಸ್ಮಾರ್ಟ್ ರೈಲು ನಿಲ್ದಾಣ ಅಭಿವೃದ್ದಿಗೆ ಆಸಕ್ತಿ ತೋರಿವೆ.

ಕೌಶಲ್ಯ ಸೇತು (KAUSHALYA SETU) ಕೌಶಲ್ಯ ಅಭಿವೃದ್ದಿ ಯೋಜನೆ ಜಾರಿಗೊಳಿಸಿದ ಮಹಾರಾಷ್ಟ್ರ

ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಕೌಶಲ್ಯ ಸೇತು ಯೋಜನೆಯನ್ನು ಜಾರಿಗೆ ತಂದಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಮತ್ತು ಕೌಶಲ್ಯ ಅಭಿವೃದ್ದಿ ಹಾಗೂ ಉದ್ಯಮ ಖಾತೆ ರಾಜ್ಯ ಸಚಿವ ರಾಜೀವ್ ಪ್ರತಾಪ್ ರುಡಿ ಅವರು ಈ ಯೋಜನೆಗೆ ಚಾಲನೆ ನೀಡಿದರು.

  • 10ನೇ ತರಗತಿ ಅಥವಾ ಎಸ್ಎಸ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ದಿ ಕೋರ್ಸುಗಳ ಮೂಲಕ ತರಭೇತಿ ನೀಡಲಾಗುವುದು.
  • ಕೇಂದ್ರ ಸರ್ಕಾರ ಸ್ಕಿಲ್ ಇಂಡಿಯಾ 2020 ಅಭಿಯಾನಕ್ಕೆ ಈ ಯೋಜನೆ ಪೂರಕವಾಗಲಿದೆ.

ಪ್ರೊಟೀನ್ ಭರಿತ ಭತ್ತದ ತಳಿ ಅಭಿವೃದ್ದಿಪಡಿಸಿದ ಐಜಿಕೆವಿ, ಚತ್ತೀಸಗರ್

ಚತ್ತೀಸಗರ್ ಮೂಲದ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರು ಪ್ರೊಟೀನ್ ಭರಿತ ಭತ್ತದ ತಳಿಯನ್ನು ಅಭಿವೃದ್ದಿಪಡಿಸಿದ್ದಾರೆ. ಹೊಸದಾಗಿ ಸಂಶೋಧಿಸಿರುವ ಭತ್ತದ ತಳಿಯಲ್ಲಿ ಪ್ರಸಿದ್ದ ಭತ್ತ ತಳಿಗಿಂತ ಶೇ 10% ಹೆಚ್ಚು ಪ್ರೊಟೀನ್ ಮತ್ತು 30 ಪಿಪಿಎಂ ಅಧಿಕ್ ಜಿಂಕ್ ಇರುವುದಾಗಿ ಸಂಶೋಧಕರು ಹೇಳಿದ್ದಾರೆ.

  • ಐಜಿಕೆವಿಯ ಪ್ಲಾಂಟ್ ಮಾಲಿಕ್ಯುಲರ್ ಬಯಾಲಜಿ ಮತ್ತು ಬಯೋಟೆಕ್ನಾಲಜಿ ವಿಭಾಗದ ಸಂಶೋಧಕರು ಈ ಭತ್ತದ ತಳಿಯನ್ನು ಅಭಿವೃದ್ದಿಪಡಿಸಿದ್ದಾರೆ.
  • ಸುಮಾರು ಏಳು ವರ್ಷಗಳ ಸುದೀರ್ಘ ಸಂಶೋಧನೆ ನಂತರ ಅಧಿಕ ಪ್ರೊಟೀನ್ ಮತ್ತು ಜಿಂಕ್ ಇರುವ ಭತ್ತದ ತಳಿಯನ್ನು ಅಭಿವೃದ್ದಿಪಡಿಸಲಾಗಿದೆ.
  • ಈ ಸಂಶೋಧನೆಯು ಚತ್ತೀಸಗರದ ಬುಡಕಟ್ಟು ಜನಾಂಗದಲ್ಲಿ ಪ್ರೊಟೀನ್ ಕೊರತೆಯಿಂದ ಬಳಲುತ್ತಿರುವ ಅಪೌಷ್ಠಿಕ ಮಕ್ಕಳಿಗೆ ವರದಾನವಾಗಲಿದೆ.
  • ಈ ಮುಂಚೆ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯ, ರಾಯ್ಪುರ ಸಂಶೋಧಕರು ಜಿಂಕ್ (ಸತು) ವರ್ಧಿತ ಭತ್ತದ ತಳಿಯಾದ “ಚತ್ತೀಸ್ ಗರ್ ಜಿಂಕ್ ರೈಸ್-1” ಅನ್ನು ಅಭಿವೃದ್ದಿಪಡಿಸಿದ್ದರು. ಇದು ದೇಶದ ಮೊದಲ ಸತು ವರ್ಧಿತ ತಳಿ.

ಸತುವಿನ ಮಹತ್ವ:

  • ಜಿಂಕ್ ಅಥವಾ ಸತು ಮಾನವ ದೇಹಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾಗಿದ್ದು, ಸುಮಾರು 300 ಕ್ಕೂ ಹೆಚ್ಚು ಕಿಣ್ವಗಳು ತಮ್ಮ ಕ್ರಿಯೆಯನ್ನು ಸರಾಗವಾಗಿ ನಿರ್ವಹಿಸಲು ಸತುವಿನ ಮೇಲೆ ಅವಲಂಭಿತವಾಗಿವೆ.
  • ದೇಹದ ಪ್ರತಿರಕ್ಷಕ ವ್ಯವಸ್ಥೆಗೆ ಜಿಂಕ್ ಅತ್ಯಗತ್ಯ. ಸಣ್ಣ ಮಟ್ಟದಲ್ಲಿ ಸತುವಿನ ಅವಶ್ಯಕತೆ ದೇಹಕ್ಕಿದೆ ಆದರೆ ಸಾಮಾನ್ಯ ಮಟ್ಟಕ್ಕಿಂತ ಕೆಳಗೆ ಕುಸಿದರೆ ಕುಂಠಿತ ಬೆಳವಣಿಗೆ, ಅತಿಸಾರ, ಕಣ್ಣು ಮತ್ತು ಚರ್ಮದ ಗಾಯಗಳು ಹಾಗೂ ಹಸಿವಾಗದಿರುವ ತೊಂದರೆಗೆ ಕಾರಣವಾಗುತ್ತದೆ.

Leave a Comment

This site uses Akismet to reduce spam. Learn how your comment data is processed.