ಅಕ್ಟೋಬರ್ 16: ವಿಶ್ವ ಆಹಾರ ದಿನ

ಪ್ರತೀ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಲಾಗುತ್ತದೆ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಈ ದಿನವನ್ನು ಜಗತ್ತಿನ ಜನರು ಹಸಿವಿನ ವಿರುದ್ಧ ಕೆಲಸ ಮಾಡಲು ಮತ್ತು ಅದರ ನಿರ್ಮೂಲನೆಗಾಗಿ ಕೆಲಸ ಮಾಡಲು ಒಗ್ಗೂಡುವ ಸಲುವಾಗಿ ಈ ದಿನವನ್ನು ಆಚರಣೆಗೆ ತಂದಿತು.

  • 2016 ಥೀಮ್: “Climate is changing. Food and agriculture must too”

ಹಿನ್ನಲೆ:

  • ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಸದಸ್ಯ ರಾಷ್ಟ್ರಗಳು 20ನೇ ಸಾರ್ವಜನಿಕ ಸಮ್ಮೇಳನದಲ್ಲಿ ವಿಶ್ವ ಆಹಾರ ದಿನವನ್ನು ನವೆಂಬರ್ 1979 ರಲ್ಲಿ ಆರಂಭಿಸಿದವು. ಬಡತನ ಮತ್ತು ಹಸಿವಿನ ಹಿಂದಿರುವ ಕಾರಣಗಳ ಬಗ್ಗೆ ಅರಿವು ಮೂಡಿಸುವುದು ಈ ದಿನದ ಗುರಿ.

ಎಫ್ಎಒ:

  • ಆಹಾರ ಮತ್ತು ಕೃಷಿ ಸಂಸ್ಥೆಯು ವಿಶ್ವಸಂಸ್ಥೆಯ ಒಂದು ಅಂಗ ಸಂಸ್ಥೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಹಸಿವನ್ನು ನೀಗಿಸಲು ಪ್ರಯತ್ನ ಪಡುತ್ತಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಇದರ ಮಾತೃಸಂಸ್ಥೆ ಆಗಿದೆ.
  • ಅಭಿವೃದ್ದಿ ಹೊಂದಿದ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳೊಂದಿಗೆ ಒಪ್ಪಂದ ಮತ್ತು ಕಾರ್ಯನೀತಿಯನ್ನು ಚರ್ಚಿಸಲು ಸಮಾನವಾಗಿ ತಟಸ್ಥ ವೇದಿಕೆಯಾಗಿದೆ.
  • ಸ್ಥಾಪನೆ: ಅಕ್ಟೋಬರ್ 16, 1945
  • ಕೇಂದ್ರ ಕಚೇರಿ: ರೋಮ್, ಇಟಲಿ

ಐತಿಹಾಸಿಕ ಜಾಗತಿಕ ಹಸಿರು ಮನೆ ಅನಿಲ ಹೊರಸೂಸುವಿಕೆ ಒಪ್ಪಂದಕ್ಕೆ “ಕಿಗಾಲಿ”ಯಲ್ಲಿ ಸಹಿ

ಐತಿಹಾಸಿಕ ಹವಾಮಾನ ಕುರಿತಾದ ಒಪ್ಪಂದಕ್ಕೆ ರುವಾಂಡದ ಕಿಗಾಲಿಯಲ್ಲಿ ವಿಶ್ವದ 197 ರಾಷ್ಟ್ರಗಳು ಸಹಿ ಮಾಡಿವೆ. ಓಝೋನ್ ಪದರದ ಮೇಲೆ ಹಾನಿಕಾರಕ ಪರಿಣಾಮ ಬೀರುವ ಪದಾರ್ಥಗಳ ಕುರಿತಾದ ಮಾಂಟ್ರಿಯಲ್ ನಿಯಮಾವಳಿ ಸದಸ್ಯ ರಾಷ್ಟ್ರಗಳ 28ನೇ ಸಭೆಯಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿಹಾಕಲಾಯಿತು. “ಕಿಗಾಲಿ ಒಪ್ಪಂದ (Kigali Agreement)” ಎನ್ನಲಾಗಿರುವ ಈ ಒಪ್ಪಂದವು 1987ರ ಮಾಂಟ್ರಿಯಲ್ ನಿಯಮಾವಳಿಗೆ ತಿದ್ದುಪಡಿ ತಂದು ಪ್ರಬಲ ಹಸಿರು ಮನೆ ಅನಿಲವಾದ “ಹೈಡ್ರೊಫ್ಲೂರೊ ಇಂಗಾಲದ (ಎಚ್‌ಎಫ್ಸಿ)” ಬಳಕೆಯನ್ನು 2040ರ ವೇಳೆಗೆ ನಿಯಂತ್ರಿಸುವುದಾಗಿದೆ. ಒಪ್ಪಂದದಡಿ ಭಾರತ ಸೇರಿದಂತೆ 197 ದೇಶಗಳು “ಹೈಡ್ರೊಫ್ಲೂರೊ ಇಂಗಾಲದ (ಎಚ್‌ಎಫ್ಸಿ)” ಬಳಕೆಯನ್ನು 2045ರ ಆಧಾರ ವರ್ಷವಾಗಿಟ್ಟುಕೊಂಡು ಶೇ 85% ತಗ್ಗಿಸುವುದು ಆಗಿದೆ.

“ಹೈಡ್ರೊಫ್ಲೂರೊ ಇಂಗಾಲದ ( Hydrofluorocarbons (HFCs)?

  • ಹಸಿರು ಮನೆ ಅನಿಲ ಗುಂಪಿಗೆ ಸೇರಿರುವ ಪ್ರಬಲ ಹಸಿರು ಮನೆ ಅನಿಲವಾಗಿರುವ ಹೈಡ್ರೊಫ್ಲೂರೊ ಇಂಗಾಲದ (ಎಚ್‌ಎಫ್ಸಿ) ಯನ್ನು ರೆಫ್ರಿಜರೇಟರ್, ಹವಾ ನಿಯಂತ್ರಕ ಮತ್ತು ಏರ್ ಸ್ಪ್ರೇಗಳಲ್ಲಿ ಬಳಸಲಾಗುತ್ತದೆ.
  • ಓಝೋನ್ ಪದರವನ್ನು ಸರಂಕ್ಷಿಸುವ ಸಲುವಾಗಿ ಹೈಡ್ರೊಫ್ಲೂರೊ ಇಂಗಾಲವನ್ನು 1987 ಮಾಂಟ್ರಿಲ್ ನಿಯಮಾವಳಿ ಪ್ರಕಾರ CFC ಬದಲಿಗೆ ಬಳಸಲು ತೀರ್ಮಾನಿಸಲಾಗಿತ್ತು.

ಹೈಡ್ರೊಫ್ಲೂರೊ ಇಂಗಾಲ ಹಾನಿಕಾರಕವೇ?

  • ಇತ್ತೀಚಿನ ದಿನಗಳಲ್ಲಿ “ಹೈಡ್ರೊಫ್ಲೂರೊ ಇಂಗಾಲ” ಅನಿಲವು ಇತರೆ ಹಸಿರು ಮನೆ ಅನಿಲಗಳಿಗೆ ಹೋಲಿಸಿದರೆ ಸಾವಿರಾರು ಪಟ್ಟು ಹೆಚ್ಚು ತಾಪವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಾಗಿ ಸಾಬೀತಾಗಿದೆ. ಓಝೋನ್ ಪದರವನ್ನು ಸಂರಕ್ಷಿಸಲಿದೆ ಎಂದು ನಂಬಲಾಗಿದ್ದ, ಈ ಅನಿಲದಿಂದ ಜಾಗತಿಕ ತಾಪಮಾನ ಮತ್ತಷ್ಟು ಹೆಚ್ಚಳವಾಗಿದೆ.
  • ಪ್ರಸ್ತುತ ಹೈಡ್ರೊಫ್ಲೂರೊ ಇಂಗಾಲ ಜಗತ್ತಿನಲ್ಲಿ ಅತಿ ವೇಗದಿಂದ ಬಳಕೆಯಾಗುತ್ತಿರುವ ಅನಿಲವಾಗಿದ್ದು, ಪ್ರತಿ ಈ ಅನಿಲ ಬಿಡುಗಡೆಯಲ್ಲಿ ಶೇ 10% ಏರಿಕೆಯಾಗುತ್ತಿದೆ.

ಕಿಗಾಲಿ ಒಪ್ಪಂದದ ಮಹತ್ವ:

  • ಓಝೋನ್ ರಂಧ್ರವನ್ನು ಕುಗ್ಗಿಸುವ ಮೂಲಕ ಓಝೋನ್ ಪದರವನ್ನು ಸಂರಕ್ಷಿಸುವ ಸಲುವಾಗಿ 1987ರಲ್ಲಿ ಜಾರಿಗೆ ತರಲಾಗಿದ್ದ ಮಾಂಟ್ರಿಯಲ್ ನಿಯಮಾವಳಿಗೆ ಕಿಗಾಲಿ ಒಪ್ಪಂದ (Kigali Agreement)”ದ ಮೂಲಕ ತಿದ್ದುಪಡಿ ತರಲಾಗಿದೆ.
  • ಮಾಂಟ್ರಿಯಲ್ ನಿಯಮಾವಳಿ ಪ್ರಕಾರ ಕೇವಲ ಓಝೋನ್ ಪದರಕ್ಕೆ ಹಾನಿಕಾರ ಪದಾರ್ಥಗಳ ಬಳಕೆ ಮಾತ್ರ ತಗ್ಗಿಸುವುದಾಗಿತ್ತು, ಆದರೆ ತಿದ್ದುಪಡಿ ತರುವ ಮೂಲಕ ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡುವ ಅನಿಲಗಳ ಬಳಕೆಯ ಮೇಲು ನಿರ್ಬಂಧ ಹೇರಲಾಗಿದೆ.
  • ಶತಮಾನದ ಅಂತ್ಯಕ್ಕೆ 0.5 ಸೆಲ್ಸಿಯಸ್ ಉಷ್ಣಾಂಶ ಏರಿಕೆಯನ್ನು ನಿಯಂತ್ರಿಸಲು ಈ ಒಪ್ಪಂದ ಸಹಕಾರಿಯಾಗಲಿದೆ.
  • ಕಿಗಾಲಿ ಒಪ್ಪಂದ ಪ್ರಕಾರ ಸದಸ್ಯ ರಾಷ್ಟ್ರಗಳು 2019 ರಿಂದ ಹೆಚ್ಎಫ್ಸಿ ಬಳಕೆಯನ್ನು ಕಡ್ಡಾಯವಾಗಿ ತಗ್ಗಿಸಬೇಕಿದೆ. ಈ ಒಪ್ಪಂದಕ್ಕೆ ವಿರುದ್ದವಾಗಿ ನಡೆದರೆ ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ವಿವಿಧ ಕಾಲಾವಧಿ:

ಹೈಡ್ರೊಫ್ಲೂರೊ ಇಂಗಾಲ ಬಳಕೆಯನ್ನು ತಗ್ಗಿಸುವ ಸಲುವಾಗಿ ಸದಸ್ಯ ರಾಷ್ಟ್ರಗಳಿಗೆ ವಿವಿಧ ರೀತಿಯ ಕಾಲಾವಕಾಶಗಳನ್ನು ನೀಡಲಾಗಿದೆ.

  • ಮೊದಲ ತಂಡ: ಈ ತಂಡದಲ್ಲಿ ಅಭಿವೃದ್ದಿ ಹೊಂದಿರುವ ದೇಶಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ರಾಷ್ಟ್ರಗಳಿದ್ದು, 2018ರ ವೇಳೆಗೆ ಈ ಅನಿಲದ ಉತ್ಪಾದನೆ ಮತ್ತು ಬಳಕೆಯನ್ನು ನಿರ್ಬಂಧಿಸಲಿವೆ. 2012ರ ವೇಳೆಯಲ್ಲಿ ಬಳಸಲಾಗುತ್ತಿದ್ದ HFC ಪ್ರಮಾಣದಲ್ಲಿ 2036ರ ವೇಳೆಗೆ ಶೇ 12% ತಗ್ಗಿಸಲಿವೆ.
  • ಎರಡನೇ ತಂಡ: ಚೀನಾ, ಬ್ರೆಜಿಲ್ ಮತ್ತು ಆಫ್ರಿಕಾ ದೇಶಗಳನ್ನು ಈ ಗುಂಪು ಒಳಗೊಂಡಿದೆ. ಈ ರಾಷ್ಟ್ರಗಳು ಹೆಚ್ಎಫ್ಸಿ ಬಳಕೆಯನ್ನು 2024ರ ವೇಳೆಗೆ ಸ್ಥಗಿತಗೊಳಿಸಲಿವೆ.
  • ಮೂರನೇ ತಂಡ: ಭಾರತ, ಇರಾನ್, ಪಾಕಿಸ್ತಾನ ಇತ್ಯಾದಿ ರಾಷ್ಟ್ರಗಳನ್ನು ಈ ಗುಂಪಿಗೆ ಸೇರ್ಪಡೆಗೊಳಿಸಲಾಗಿದೆ. ಈ ರಾಷ್ಟ್ರಗಳು ಹೆಚ್ಎಫ್ಸಿ ಬಳಕೆಯನ್ನು 2028 ವೇಳೆಗೆ ಸ್ಥಗಿತಗೊಳಿಸಲಿವೆ.

ಪ್ಯಾರಿಸ್ ಒಪ್ಪಂದಕ್ಕಿಂತ ಹೇಗೆ ಭಿನ್ನವಾಗಿದೆ?

  • ಪ್ಯಾರಿಸ್ ಒಪ್ಪಂದ 2020 ರಿಂದ ಜಾರಿಗೆ ಬರಲಿದ್ದು, ಇದರಡಿ ಜಾಗತಿಕ ಹಸಿರು ಮನೆ ಹೊರಸೂಸುವಿಕೆಯನ್ನು ತಗ್ಗಿಸಲು ಸದಸ್ಯ ರಾಷ್ಟ್ರಗಳ ಮೇಲೆ ಕಡ್ಡಾಯ ನಿರ್ಬಂಧವನ್ನು ಹೇರಲಾಗಿಲ್ಲ.

ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿ ಪುರುಷರ ಸಿಂಗಲ್ಸ್: ಆಯಂಡಿ ಮರ್ರೆ ಚಾಂಪಿಯನ್

ಇಂಗ್ಲೆಂಡ್ನ ಆಯಂಡಿ ಮರ್ರೆ ಅವರು ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಮರ್ರೆ 7-6(7-1), 6-1 ನೇರ ಸೆಟ್ಗಳಿಂದ ಸ್ಪೇನ್ನ ರಾಬರ್ಟೊ ಬಾಟಿಸ್ಟ ವಿರುದ್ಧ ಜಯ ಸಾಧಿಸಿದರು. ಸೆಮಿಫೈನಲ್ನಲ್ಲಿ ಅದ್ಭುತ ಆಟವಾಡಿ ಜೊಕೋವಿಕ್ ಅವರನ್ನು ಉರುಳಿಸಿದ್ದ ಬಾಟಿಸ್ಟ ಫೈನಲ್ನಲ್ಲಿ ಮರ್ರೆಯೆದುರು ಅದೇ ಆಟ ಪ್ರದರ್ಶಿಸಲು ವಿಫಲರಾದರು.

  • ಮರ್ರೆಗೆ ಇದು 3ನೇ ಶಾಂಘೈ ಪ್ರಶಸ್ತಿಯಾಗಿದೆ.
  • ಈ ಹಿಂದೆ 2010 ಮತ್ತು 2011 ರಲ್ಲಿ ಸತತವಾಗಿ ಚಾಂಪಿಯನ್ ಆಗಿದ್ದರು.
  • ಮರ್ರೆ ಚೀನಾದಲ್ಲಿ ಒಂದರ ಹಿಂದೆ ಒಂದರಂತೆ ಎರಡು ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಅವರು ಕಳೆದ ವಾರ ಬೀಜಿಂಗ್ನಲ್ಲಿ ನಡೆದ ಚೀನ ಓಪನ್ನ ಪ್ರಶಸ್ತಿ ಜಯಿಸಿದ್ದರು. ಸತತ 10 ಪಂದ್ಯ ಗೆಲ್ಲುವ ವೇಳೆ ಮರ್ರೆ ಸತತ 20 ಸೆಟ್ ಜಯಿಸಿದ್ದಾರೆ.

ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್: ಸೌರಭ್ ವರ್ಮಾಗೆ ಪ್ರಶಸ್ತಿ

ಭಾರತದ ಉದಯೋನ್ಮುಖ ಆಟಗಾರ ಸೌರಭ್ ವರ್ಮಾ, ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಸೌರಭ್ 12-10, 12-10, 3-3 ಗೇಮ್ಗಳಿಂದ ಮಲೇಷ್ಯಾದ ಡರೇನ್ ಲೀವ್ ಎದುರು ಗೆಲುವು ಸಾಸಿದರು.

  • ಈ ಹಿಂದೆ ನಡೆದಿದ್ದ ಬೆಲ್ಜಿಯಂ ಮತ್ತು ಪೋಲೆಂಡ್ ಅಂತಾರಾಷ್ಟ್ರೀಯ ಚಾಲೆಂಜರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೌರಭ್ ರನ್ನರ್ ಅಪ್ ಆಗಿದ್ದರು.
  • ಸೌರಭ್ ಕಳೆದ ವರ್ಷದ ಬಹುತೇಕ ಸಮಯ ಮೊಣಕೈ ಮತ್ತು ಮಂಡಿರಜ್ಜು ಗಾಯದ ಸಮಸ್ಯೆಗೆ ತುತ್ತಾಗಿ ವಿಶ್ರಾಂತಿಯಲ್ಲಿಯೇ ಕಾಲ ಕಳೆದಿದ್ದರು. ಇದೀಗ ಪ್ರಸಕ್ತ ವರ್ಷ ಗಣನೀಯ ಯಶಸ್ಸಿನೊಂದಿಗೆ ಟ್ರೋಫಿಗಳನ್ನು ಜಯಿಸಿದ್ದಾರೆ.

Leave a Comment

This site uses Akismet to reduce spam. Learn how your comment data is processed.