ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಗೆ ನೊಬೆಲ್ ಶಾಂತಿ

2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್ ಅವರಿಗೆ ನೀಡಲಾಗಿದೆ. ಕೊಲಂಬಿಯಾದಲ್ಲಿ ಸುಮಾರು 50 ವರ್ಷಗಳ ಸುದೀರ್ಘ ದಂಗೆಯನ್ನು ಕೊನೆಗಾಣಿಸಿ ಶಾಂತಿ ನೆಲೆಸಲು ಶ್ರಮಿಸಿದಕ್ಕಾಗಿ ಈ ನೊಬೆಲ್ ಶಾಂತಿ ಪಾರಿತೋಷಕಕ್ಕೆ ಆಯ್ಕೆ ಮಾಡಲಾಗಿದೆ. ಗ್ಯಾಬ್ರಿಯಲ್ ಗ್ರಸಿಯಾ ಮಾರ್ಕ್ವೆಜ್ ನಂತರ ನೊಬೆಲ್ ಪ್ರಶಸ್ತಿಗೆ ಭಾಜನರಾದ ಕೊಲಂಬಿಯಾದ ಎರಡನೇಯವರು. ಗ್ಯಾಬ್ರಿಯಲ್ ಗ್ರಸಿಯಾ ಮಾರ್ಕ್ವೆಜ್ ಅವರಿಗೆ 1982 ರಲ್ಲಿ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಅಲ್ಲದೇ, ಸ್ಯಾಂಟೋಸ್ ಅವರು ನೊಬೆಲ್ ಪ್ರಶಸ್ತಿಯನ್ನ ಪಡೆದುಕೊಂಡ ಲ್ಯಾಟಿನ್ ಅಮೆರಿಕಾದ ಎರಡನೇಯವರು. 1992ರಲ್ಲಿ ಗ್ವಾಟೆಮಾಲದ ರಿಗೊಬೆರ್ಟ ಮೆಂಚು ನೊಬೆಲ್ ಪ್ರಶಸ್ತಿ ಪಡೆದ ಲ್ಯಾಟಿನ್ ಅಮೆರಿಕಾದ ಮೊದಲನೇಯವರು.

ಶಾಂತಿ ಒಪ್ಪಂದ

ಸ್ಯಾಂಟೋಸ್ ಅವರು ಸೇನೆ ಹಾಗೂ ಎಫ್ ಎಆರ್ ಸಿ (FARC) ಬಂಡುಕೋರರ ನಡುವೆ ಕೊಲಂಬಿಯಾದಲ್ಲಿ ನಡೆಯುತ್ತಿದ್ದ ಸಂಘರ್ಷಕ್ಕೆ ಕೊನೆಗೊಳಿಸಿ ಶಾಂತಿಗಾಗಿ ಪ್ರಯತ್ನ ಪಟ್ಟಿದ್ದರು. ಇವರ ಪ್ರಯತ್ನದಿಂದಾಗಿ FARC ಮತ್ತು ಸರ್ಕಾರದ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತ್ತು. ಆದರೆ ಅಕ್ಟೋಬರ್ 2016ರಲ್ಲಿ ಕೊಲಂಬಿಯನ್ನರು ಈ ಒಪ್ಪಂದವನ್ನು ತಿರಸ್ಕರಿಸಿದ್ದಾರೆ.

ಜುವಾನ್ ಮ್ಯಾನ್ಯುಯಲ್ ಸ್ಯಾಂಟೋಸ್:

  • ಸ್ಯಾಂಟೋಸ್ ಅವರು 10ನೇ ಆಗಸ್ಟ್ 1951 ರಲ್ಲಿ ಕೊಲಂಬಿಯಾದ ರಾಜಧಾನಿ ಬೊಗೊಟದಲ್ಲಿ ಜನಿಸಿದರು.
  • 2010 ರಲ್ಲಿ ಮೊದಲ ಬಾರಿಗೆ ಕೊಲಂಬಿಯಾದ ಅಧ್ಯಕ್ಷರಾಗಿ ನೇಮಕಗೊಂಡರು. ಆ ನಂತರ 2014ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು.
  • ಅಧ್ಯಕ್ಷರಾಗುವ ಮುಂಚೆ ರಕ್ಷಣ ಸಚಿವರಾಗಿ 2006 ರಿಂದ 2009 ರವರೆಗೆ ಸೇವೆ ಸಲ್ಲಿಸಿದ್ದರು.

ಹೃದಯ್ (HRIDAY) ಯೋಜನೆಯಡಿ ರೂ 114 ಕೋಟಿ ಮೊತ್ತದ ಯೋಜನೆಗಳ ಅನುಷ್ಟಾನಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ

ಕೇಂದ್ರ ನಗರಾಭಿವೃದ್ದಿ ಸಚಿವಾಲಯವು ಹೃದಯ್ ಯೋಜನೆಯಡಿ ಐದು ರಾಜ್ಯಗಳ ಪಾರಂಪರಿಕ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ರೂ 114 ಕೋಟಿ ಮೊತ್ತದ ಯೋಜನೆಗಳಿಗೆ ಒಪ್ಪಿಗೆ ನೀಡಿದೆ.

ಯಾವ ಐದು ರಾಜ್ಯಗಳು:

  • ಉತ್ತರಪ್ರದೇಶ (ವಾರಣಾಸಿ), ಪಂಜಾಬ್ (ಅಮೃತ್ ಸರ್), ಗುಜರಾತ್ (ದ್ವಾರಕ), ಒಡಿಶಾ (ಪುರಿ) ಮತ್ತು ತೆಲಂಗಣ (ವಾರಂಗಲ್).

ಹೃದಯ್ ಯೋಜನೆ:

  • ಹೃದಯ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ದೇಶದ ಶ್ರೀಮಂತ ಪಾರಂಪರಿಕ ತಾಣಗಳನ್ನು ಸಂರಕ್ಷಿಸುವುದು ಮತ್ತು ಪುನರ್ಜೀವನಗೊಳಿಸಲು ಜಾರಿಗೆ ತರಲಾಗಿದೆ.
  • ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಪ್ರವಾಸಿಗರನ್ನು ಆರ್ಕಷಿಸಲು ಪಾರಂಪರಿಕ ತಾಣಗಳಲ್ಲಿ ಮೂಲಭೂತಸೌಕರ್ಯವನ್ನು ಅಭಿವೃದ್ದಿಪಡಿಸಿಲಾಗುವುದು.
  • ಒಟ್ಟಾರೆಯಾಗಿ ಪಾರಂಪರಿಕ ತಾಣಗಳಲ್ಲಿ ನಗರ ಯೋಜನೆ, ಆರ್ಥಿಕ ಬೆಳವಣಿಗೆ ಮತ್ತು ಅವುಗಳನ್ನು ಸಂರಕ್ಷಿಸುವುದು ಯೋಜನೆಯ ಮುಖ್ಯ ಆಶಯ.
  • ಇದರಡಿ ಜೀವನೋಪಾಯ, ಕೌಶಲ್ಯ, ಸ್ವಚ್ಚತೆ, ಸುರಕ್ಷತೆ, ಭದ್ರತೆ ಸೇರಿದಂತೆ ಸಂಯೋಜಿತ ರೀತಿಯಲ್ಲಿ ಪಾರಂಪರಿಕ ತಾಣಗಳನ್ನು ಸುಂದರಗೊಳಿಸಲಾಗುವುದು. ಇದರ ಜೊತೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸುಧಾರಿತ ಸಂಪರ್ಕ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.

ಪೇಮೆಂಟ್ ಬ್ಯಾಂಕ್ ಸೇವೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ನ ಪೂರ್ವಾನುಮತಿ ಕಡ್ಡಾಯ

ಪೇಮೆಂಟ್ ಬ್ಯಾಂಕ್ ಗಳು ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಮುಂಚೆ ಭಾರತೀಯ ರಿಸರ್ವ್ ಬ್ಯಾಂಕ್ ಪೂರ್ವಾನುಮತಿ ಪಡೆಯುವುದು ಕಡ್ಡಾಯವೆಂದು ಆರ್ ಬಿಐ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ಆರ್ಥಿಕ ಸೇರ್ಪಡೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಪ್ರಮುಖಾಂಶಗಳು:

  • ಪೇಮೆಂಟ್ ಬ್ಯಾಂಕ್ ನೌಕರರು ನಿಶ್ಚಿತ ಸ್ಥಳದಲ್ಲಿ ಸಾಕಷ್ಟು ಅವಧಿಯವರೆಗೆ ಗ್ರಾಹಕರಿಗೆ ಲಭ್ಯವಿರಬೇಕು. ಅಲ್ಲದೇ ಬ್ಯಾಂಕ್ ಸೌಲಭ್ಯ ಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಪಕ್ಷ ಶೇ 25% ಸೇವಾ ಕೇಂದ್ರಗಳನ್ನು ಹೊಂದಿರಬೇಕು.
  • ಪೇಮೆಂಟ್ ಬ್ಯಾಂಕ್ ಗಳು ಠೇವಣೆ ಇಡುವುದು, ಹಣ ವರ್ಗಾವಣೆ ಮಾಡುವ ಸೇವೆಯನ್ನು ನೀಡಬಹುದು. ಆದರೆ ಸಾಲ ನೀಡುವ ಆಗಿಲ್ಲ.
  • ವಿಮೆ ಮತ್ತು ಮ್ಯೂಚಯಲ್ ಫಂಡ್ ನಂತಹ ಸಣ್ಣ ಸೇವೆಗಳನ್ನು ಪೇಮೆಂಟ್ ಬ್ಯಾಂಕ್ ನೀಡಲಿವೆ.
  • ಪೇಮೆಂಟ್ ಬ್ಯಾಂಕ್ ಗಳು ಕಾರ್ಯವಿಧಾನ ಮತ್ತು ನೀಡುವ ಸೇವೆಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಬಹುದು.
  • ಪೇಮೆಂಟ್ ಬ್ಯಾಂಕ್ ಉತ್ಪನ್ನಗಳು ಗ್ರಾಹಕರಿಗೆ ಸೂಕ್ತವಲ್ಲವೆಂದು ಆರ್ ಬಿಐ ಭಾವಿಸಿದರೆ, ಅಂತಹ ಉತ್ಪನ್ನಗಳನ್ನು ಆರ್ ಬಿಐ ನಿಲ್ಲಿಸಬಹುದು.
  • ವಾಣಿಜ್ಯ ಬ್ಯಾಂಕ್ ಅಥವಾ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೊತೆ ಪೇಮೆಂಟ್ ಬ್ಯಾಂಕ್ ಗಳು ಒಪ್ಪಂದ ಮಾಡಿಕೊಂಡರೆ ಅದಕ್ಕೆ ಆರ್ ಬಿಐನಿಂದ ಯಾವುದೇ ಅಡ್ಡಿಯಿಲ್ಲ.

ಹಿನ್ನಲೆ:

  • ಏಪ್ರಿಲ್ 2015 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 11 ಸಂಸ್ಥೆಗಳಿಗೆ ಪೇಮೆಂಟ್ ಬ್ಯಾಂಕಿಂಗ್ ನಡೆಸಲು ಅನುಮತಿ ನೀಡಿತ್ತು. ಆದರೆ ಇವುಗಳಲ್ಲಿ ಮೂರು ಸಂಸ್ಥೆಗಳು ಹಿಂದೆ ಸರಿದವು. ಉಳಿದ ಸಂಸ್ಥೆಗಳು ಅನುಮತಿ ನೀಡಿದ 18 ತಿಂಗಳೊಳಗೆ ಕಾರ್ಯಾರಂಭ ಮಾಡಬೇಕಿದೆ.

ಖ್ಯಾತ ಮಣಿಪುರಿ ರಂಗಭೂಮಿ ಕಲಾವಿದ ಹಿಸ್ನಮ್ ಕನ್ಹೈಲಾಲ್ (Heisnam Kanhailal) ನಿಧನ

ಮಣಿಪುರಿ ರಂಗಭೂಮಿ ಕಲಾವಿದ ಹಿಸ್ನಮ್ ಕನ್ಹೈಲಾಲ್ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ನಾಟಕ ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ನಟನಾಗಿ ಸುಮಾರು 40 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಹಿಸ್ನಮ್ ಕನ್ಹೈಲಾಲ್ ಬಗ್ಗೆ:

  • ಮಣಿಪುರದ ಇಂಪಾಲ್ ಸಮೀಪದ ಹಳ್ಳಿಯಲ್ಲಿ 17ನೇ ಜನವರಿ 1947ರಲ್ಲಿ ಜನಿಸಿದರು.
  • ಕನ್ಹೈಲಾಲ್ ಮಣಿಪುರದ ರಂಗಭೂಮಿ ಪ್ರಯೋಗಾಲಯ “ಕಲಾಕ್ಷೇತ್ರ”ದ ಸಂಸ್ಥಾಪಕ ನಿರ್ದೇಶಕರು.
  • ಮಣಿಪುರಿ ಜಾನಪದ ಶೈಲಿಯಲ್ಲಿನ ಅವರ ರಾಜಕೀಯ ನಾಟಕ “ಪೆಬೆಟ್” ಅವರಿಗೆ ಸಾಕಷ್ಟು ಮನ್ನಣೆ ತಂದುಕೊಟ್ಟಿತ್ತು.

ಪ್ರಶಸ್ತಿ:

  • 1985 ರಲ್ಲಿ ರಂಗಭೂಮಿಗೆ ನೀಡುವ ಮಣಿಪುರಿ ರಾಜ್ಯ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
  • ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ (2011).
  • META ಜೀವಮಾನ ಸಾಧನೆ ಪ್ರಶಸ್ತಿ (2015)
  • ಪದ್ಮಶ್ರೀ ಪ್ರಶಸ್ತಿ (2004) ಮತ್ತು ಪದ್ಮಭೂಷಣ (2016). 

ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆಗೆ (World Sustainable Development Summit) ಪ್ರಣಭ್ ಮುಖರ್ಜಿ ಚಾಲನೆ

ಮೊದಲನೆ ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆಗೆ ರಾಷ್ಟ್ರಪತಿ ಪ್ರಣಭ್ ಮುಖರ್ಜಿರವರು ನವದೆಹಲಿಯ ವಿಜ್ಞಾನ ಭವನದಲ್ಲಿ ಚಾಲನೆ ನೀಡಿದರು. ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (TERI) ಈ ಶೃಂಗಸಭೆಯನ್ನು ಆಯೋಜಿಸುತ್ತಿದೆ. Beyond 2015: People, Planet and Progress ಇದು ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆಯ ಥೀಮ್.

ಪ್ರಮುಖಾಂಶಗಳು:

  • ದೆಹಲಿ ಸುಸ್ಥಿರ ಅಭಿವೃದ್ದಿ ಶೃಂಗಸಭೆಯ ಬದಲಿಗೆ ಈ ಬಾರಿ ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ದೆಹಲಿ ಸುಸ್ಥಿರ ಅಭಿವೃದ್ದಿ ಶೃಂಗಸಭೆಯನ್ನು 2005ರಲ್ಲಿ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿತ್ತು.
  • ಜಗತ್ತಿನ ಪ್ರಮುಖ ರಾಜಕೀಯ ನಾಯಕರು, ನೊಬೆಲ್ ಪ್ರಶಸ್ತಿ ಪುರಸ್ಕೃತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಸುಸ್ಥಿರ ಅಭಿವೃದ್ದಿ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
  • ಜಾಗತಿಕ ಸಮುದಾಯಕ್ಕೆ ಅನುಕೂಲವಾಗುವಂತೆ ಪರಿಹಾರ ಒದಗಿಸಲು ಈ ಶೃಂಗಸಭೆ ವೇದಿಕೆಯಾಗಲಿದೆ.

Leave a Comment

This site uses Akismet to reduce spam. Learn how your comment data is processed.