ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನ ಗುಣಮಟ್ಟ ಪರಿಶೀಲನೆಗೆ “ಅನ್ನದರ್ಪಣ” ತಂತ್ರಾಂಶ

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗಲ್ಲಿ ರೈತರ ಕೃಷಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಿ, ವರ್ಗೀಕರಿಸುವ ಸಲುವಾಗಿ ಆತ್ಯಾಧುನಿಕ “ಅನ್ನದರ್ಪಣ’ ಹೆಸರಿನ ತಂತ್ರಾಂಶವನ್ನು ಅಭಿವೃದ್ದಿಪಡಿಸಲಾಗಿದೆ. ಈ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಗದಗಿನ ಎಪಿಎಂಸಿಯಲ್ಲಿ ಆರಂಭಮಾಡಲಾಗಿದೆ. ರಾಜ್ಯದಲ್ಲಿ ಮೂರು ವರ್ಷಗಳಿಂದ ಜಾರಿಯಲ್ಲಿರುವ ‘ಇ-ಮಾರಾಟ’ ವ್ಯವಸ್ಥೆಗೆ ಇದು ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ಸಾಧ್ಯತೆಗಳಿದೆ ಎನ್ನಲಾಗಿದೆ.

ತಂತ್ರಾಂಶದ ಬಗ್ಗೆ:

  • ಕೋಲ್ಕತ್ತದ ಆಧುನಿಕ ಕಂಪ್ಯೂಟರ್ ಅಭಿವೃದ್ಧಿ ಕೇಂದ್ರದ (ಸಿ-ಡಾಕ್) ತಂತ್ರಜ್ಞರು ಅನ್ನದರ್ಪಣ’ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ. ಈ ತಂತ್ರಾಂಶದ ಮೂಲಕ ವಿಶೇಷವಾಗಿ ದ್ವಿದಳ ಧಾನ್ಯಗಳ ತೇವಾಂಶ, ಗಾತ್ರ, ಬಣ್ಣ, ಕಸ-ಕಡ್ಡಿ ಪ್ರಮಾಣವನ್ನು ನಿಖರವಾಗಿ ವಿಶ್ಲೇಷಣೆ ಮಾಡಬಹುದು. ಆ ಮೂಲಕ ಕೃಷಿ ಉತ್ಪನ್ನಗಳ ಗುಣಮಟ್ಟದ ಮೇಲೆ ಬೆಲೆಯನ್ನು ನಿಗದಿ ಮಾಡಬಹುದಾಗಿದೆ. ಇದುವರೆಗೂ ಮಧ್ಯವರ್ತಿಗಳು ಗುಣಮಟ್ಟವನ್ನು ಸಾಂಪ್ರದಾಯಿಕ ವಿಧಾನದಲ್ಲಿ ಅಂದರೆ ರೈತರು ತರುತ್ತಿದ್ದ ಮೂಟೆಗಳಿಂದ ಒಂದಿಷ್ಟು ಕಾಳುಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ, ಕಸ ಬೇರ್ಪಡಿಸಿ, ಶ್ರೇಣಿ ಮಾಡುತ್ತಿದ್ದರು.
  • ಈ ತಂತ್ರಾಂಶದ ಬಳಕೆಯಿಂದ ಕ್ಷಿಪ್ರಗತಿಯಲ್ಲಿ ಈ ದತ್ತಾಂಶವನ್ನು ಆನ್ಲೈನ್ಗೆ ಅಪ್ಲೋಡ್ ಮಾಡಬಹುದು. ಹೊರ ರಾಜ್ಯದ ಖರೀದಿದಾರರು ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ (ಆರ್.ಇ.ಎಂ.ಎಸ್) ಜಾಲತಾಣಕ್ಕೆ ಲಾಗಿನ್ ಆದರೆ, ಪ್ರತಿ ಎ.ಪಿ.ಎಂ.ಸಿ.ಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಉತ್ಪನ್ನಗಳ ಮಾಹಿತಿಗೆ ಜತೆಗೆ, ಗುಣಮಟ್ಟದ ವಿವರಗಳನ್ನೂ ಪಡೆಯಬಹುದು. ಇದನ್ನು ನೋಡಿಕೊಂಡು ಇ-ಹರಾಜಿನಲ್ಲಿ ಬೆಲೆ ನಮೂದಿಸಬಹುದು. ಇ-ಹರಾಜಿನಲ್ಲಿ ಬೆಲೆ ನಮೂದಿಸುವ ಕಾರಣ ವಿವಿಧ ರಾಜ್ಯದ ವ್ಯಾಪಾರಿಗಳಿಗೆ ಬೆಲೆ ಮಾಹಿತಿ ಲಭ್ಯವಾಗುವುದರಿಂದ ಹರಾಜಿನಲ್ಲಿ ಭಾಗವಹಿಸಲು ಸುಲಭವಾಗಲಿದೆ.
  • ಮಧ್ಯವರ್ತಿಗಳ ಕಾಟ ತಪ್ಪಲಿದ್ದು, ಇದರಿಂದ ರೈತರಿಗೆ ಗರಿಷ್ಠ ಲಾಭ ದೊರೆಯಲಿದೆ.

2016 ಯುಎಸ್ ಓಪನ್ ಟೆನ್ನಿಸ್ ಟೂರ್ನಿ ಅಂಜಲಿಕ್ ಕೆರ್ಬರ್, ಸ್ಟಾನ್ ವಾವ್ರಿಂಕ್ ಗೆ ಚಾಂಪಿಯನ್ ಪಟ್ಟ

ಸ್ಟಾನ್ ವಾವ್ರಿಂಕಾಗೆ ಪುರುಷರ ಸಿಂಗಲ್ಸ್: ಸ್ವಿಸ್ ಆಟಗಾರ ಸ್ಟಾನ್ ವಾವ್ರಿಂಕಾ ಅವರು ಯುಎಸ್ ಓಪನ್ ಟೆನಿಸ್ ಪುರುಷರ ಫೈನಲ್‍ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್‍ರನ್ನು ಮಣಿಸಿ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮೂರನೇ ಶ್ರೇಯಾಂಕದ ವಾವ್ರಿಂಕಾ ನೊವಾಕ್‍ರನ್ನು 6-7(1/7), 6-4, 7-5, 6-3 ಸೆಟ್‍ಗಳಿಂದ ಪರಾಭವಗೊಳಿಸಿ ತಮ್ಮ ಮೂರನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದರು. ವಾವ್ರಿಂಕಾಗೆ ಇದು ಮೊದಲ ಯುಎಸ್ ಓಪನ್ ಪ್ರಶಸ್ತಿಯಾಗಿದೆ. 31ರ ಹರೆಯದ ವಾವ್ರಿಂಕಾ ಈ ಪ್ರಶಸ್ತಿಯನ್ನು ಪಡೆದ ಎರಡನೇ ಹಿರಿಯ ಆಟಗಾರ ಎನಿಸಿದರು. 1970ರಲ್ಲಿ 35 ವರ್ಷದ ಕೆನ್ ರೋಸ್‍ವಾಲ್ ಈ ಪ್ರಶಸ್ತಿಯನ್ನು ಪಡೆದ ಹಿರಿಯ ಆಟಗಾರ ಎನಿಸಿದ್ದಾರೆ. 2014ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು 2015ರಲ್ಲಿ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿ ಪಡೆದಿದ್ದರು. ಇದರೊಂದಿಗೆ ಒಟ್ಟು ಮೂರು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ವಾವ್ರಿಂಕಾ ಪಡೆದಿದ್ದಾರೆ.

ಅಂಜಲಿಕ್ ಕೆರ್ಬರ್ ಗೆ ಮಹಿಳೆಯರ ಸಿಂಗಲ್ಸ್: ಜರ್ಮನಿಯ ಆಂಜಲಿಕ್ ಕೆರ್ಬರ್ ಯುಎಸ್ ಓಪನ್ನಲ್ಲಿ ಮಹಿಳೆಯರ ಸಿಂಗಲ್ಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇವರು ಝೆಕ್ ಆಟಗಾರ್ತಿ ಕ್ಯಾರೊಲಿನಾ ಪಿಸ್ಕೋವಾರನ್ನು -3, 4-6, 6-4 ಸೆಟ್ಗಳಿಂದ ಮಣಿಸಿ ಪ್ರಶಸ್ತಿ ಎತ್ತಿ ಹಿಡಿದರು. ಮಾತ್ರವಲ್ಲ ವಿಶ್ವದ ನಂ.1 ಪಟ್ಟವನ್ನು ಏರಿದರು. ಕೆರ್ಬರ್ ಅವರು ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದರು. ಕೆರ್ಬರ್ ಅವರು ಸ್ಟೆಫಿ ಗ್ರಾಫ್ ನಂತರ ಯುಎಸ್ ಓಪನ್ ಗೆದ್ದ ಜರ್ಮನಿಯ ಎರಡನೇಯವರು ಎನಿಸಿದ್ದಾರೆ.

ಬ್ರಿಟನ್ನ ಜೆಮಿ ಮರ್ರೆ ಮತ್ತು ಬ್ರೆಝಿಲ್ನ ಬ್ರುನೊ ಸೊರೆಸ್ ಗೆ ಪುರುಷರ ಡಬ್ಬಲ್ಸ್: ಬ್ರಿಟನ್ನ ಜೆಮಿ ಮರ್ರೆ ಮತ್ತು ಬ್ರೆಝಿಲ್ನ ಬ್ರುನೊ ಸೊರೆಸ್ ಜೋಡಿ ಅಮೆರಿಕನ್ ಓಪನ್ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪುರುಷರ ಡಬಲ್ಸ್ ಫೈನಲ್ನಲ್ಲಿ ನಾಲ್ಕನೆ ಶ್ರೇಯಾಂಕಿತ ಜೋಡಿ ಮರ್ರೆ-ಸೊರೆಸ್ ಸ್ಪೇನ್ನ ಶ್ರೇಯಾಂಕರಹಿತ ಪಾಬ್ಲೊ ಕಾರ್ರೆನೊ ಬುಸ್ಟೊ ಹಾಗೂ ಗುಲೆರ್ಮೊ ಗಾರ್ಸಿಯಾ-ಲೊಪೆಝ್ ವಿರುದ್ಧ 6-2, 6-3 ಸೆಟ್ಗಳ ಅಂತರದಿಂದ ಮಣಿಸಿ ಗೆಲುವು ಸಾಧಿಸಿದ್ದಾರೆ.

ಬೆಥಾನಿ-ಸಫರೊವ ಜೋಡಿಗೆ ಮಹಿಳೆಯರ ಡಬ್ಬಲ್ಸ್ ಪ್ರಶಸ್ತಿ: ಅಮೆರಿಕಾದ ಬೆಥಾನಿ ಮಟ್ಟೆಕ್-ಸ್ಯಾಂಡ್ಸ್ ಮತ್ತು ಝೆಜ್ ರಿಪಬ್ಲಿಕ್ ನ ಲೂಸಿ ಸಫರೊವ ಅವರು ಯುಎಸ್ ಓಪನ್ ಮಹಿಳೆಯರ ಡಬ್ಬಲ್ಸ್ ನಲ್ಲಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಜೋಡಿ ಅಗ್ರಶ್ರೇಯಾಂಕಿತ ಫ್ರೆಂಚ್ ಕ್ಯಾರೋಲಿನ ಗರ್ಸಿಯಾ ಮತ್ತು ಕ್ರಿಸ್ಟಿನ ಲಡೆನೊವಿಕ್ ಜೋಡಿಯನ್ನು 2-6, 7-6, 6-4 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕರಾವಳಿ ಗಸ್ತು ನೌಕೆ (Offshore Patrol Vessel) “ಸಾರಥಿ” ಗೋವಾದಲ್ಲಿ ಸೇರ್ಪಡೆ

ಭಾರತೀಯ ಕರಾವಳಿ ಭದ್ರತಾಪಡೆಯ ಸುಧಾರಿತ ಕರಾವಳಿ ಗಸ್ತು ನೌಕೆ “ಸಾರಥಿ”ಯನ್ನು ಸೇರ್ಪಡೆಗೊಳಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು “ಸಾರಥಿ” ಗಸ್ತು ನೌಕೆಗೆ ದಕ್ಷಿಣ ಗೋವಾದ  ವಾಸ್ಕೋದಲ್ಲಿರುವ ಗೋವಾ ಶಿಪ್ ಯಾರ್ಡ್ ಲಿಮೆಟೆಡ್ ನಲ್ಲಿ ಚಾಲನೆ ನೀಡಿದರು.

  • ಸಾರಥಿ ಗಸ್ತು ನೌಕೆಯು ಗೋವಾ ಶಿಪ್ ಯಾರ್ಡ್ ಲಿಮೆಟೆಡ್ ನಿರ್ಮಿಸುತ್ತಿರುವ ಗಸ್ತು ನೌಕೆ ಸರಣಿಯಲ್ಲಿ ಮೂರನೇಯದಾಗಿದೆ. ಗೋವಾ ಶಿಪ್ ಯಾರ್ಡ್ ಇದನ್ನು ವಿನ್ಯಾಸಗೊಳಿಸಿ, ನಿರ್ಮಿಸಿದೆ.
  • ಇದು ಅತಿ ಉದ್ದನೆಯ (105 ಮೀ) ಮತ್ತು ಹೊಸ ಪೀಳಿಗೆಯ ಸುಧಾರಿತ ಗಸ್ತು ನೌಕೆಯಾಗಿದೆ. ಆತ್ಯಾಧುನಿಕ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಮತ್ತು ಗನ್ ಗಳನ್ನು ಒಳಗೊಂಡಿದೆ.
  • ಆತ್ಯಾಧುನಿಕ ಸಂಪರ್ಕ ಸಾಧನ, ಏಕೀಕೃತ ಮೆಷಿನ್ ನಿರ್ವಹಣ ವ್ಯವಸ್ಥೆ ಹಾಗೂ ಅಧಿಕ ಬಲದ ಬಾಹ್ಯ ಫೈರಿಂಗ್ ವ್ಯವಸ್ಥೆಯನ್ನು ಹೊಂದಿರುವ ಮೂಲಕ ಕರಾವಳಿ ಪಡೆಗೆ ಬಲ ತುಂಬಲಿದೆ.
  • ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ನೌಕೆ 25 ನಾಟ್ ವೇಗದಲ್ಲಿ ಚಲಿಸಲಿದೆ. ಕರಾವಳಿ ತೀರದಲ್ಲಿ ಗಸ್ತು ಸೇರಿದಂತೆ ಇತರೆ ರಕ್ಷಣ ಕಾರ್ಯಗಳಿಗೆ ಇದನ್ನು ಬಳಸಲಾಗುವುದು.
  • 2350ಟನ್ನು ಭಾರದ ಈ ನೌಕೆ ಎರಡು ಇಂಜಿನ್ ಹೊಂದಿರುವ ಒಂದು ಲಘು ಹೆಲಿಕಾಪ್ಟರ್ ಮತ್ತು 5ಅತಿವೇಗದ ಬೋಟುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

CBDTಯಿಂದ ತೆರಿಗೆ ಪಾವತಿದಾರರ ಕುಂದು ಕೊರತೆ ನಿವಾರಣೆಗೆ “ಇ-ನಿವಾರಣ್”

ಕೇಂದ್ರ ನೇರ ತೆರಿಗೆ ಮಂಡಳಿ (CBDT) ತೆರಿಗೆ ಪಾವತಿದಾರರ ಕುಂದುಕೊರತೆಯನ್ನು ಆನ್ ಲೈನ್ ಮೂಲಕ ನಿವಾರಿಸಲು “ಇ-ನಿವಾರಣ್” ಸೌಲಭ್ಯವನ್ನು ಜಾರಿಗೆ ತಂದಿದೆ. ಕೇಂದ್ರ ನೇರ ತೆರಿಗೆ ಮಂಡಳಿಯ ಆನ್ ಲೈನ್ ತೆರಿಗೆ ಪಾವತಿ ವಿಭಾಗದಲ್ಲಿ https://incometaxindiaefiling.gov.in. ಈ ಸೇವೆಯನ್ನು ಸಕ್ರಿಯಗೊಳಿಸಲಾಗಿದೆ.

ಪ್ರಮುಖಾಂಶಗಳು:

  • ಆನ್ ಲೈನ್ ಮೂಲಕ ತೆರಿಗೆ ಪಾವತಿ ಮಾಡುವವಾಗ ಎದುರಾಗಬಹುದಾದ ತೆರಿಗೆ ಕಡಿತ, ಟಿಡಿಎಸ್, ಇ-ಆದಾಯ ದಾಖಲಿಸುವುದು, ಪ್ಯಾನ್ ಸಮಸ್ಯೆ ಮುಂತಾದವುಗಳನ್ನು ಇದರಡಿ ಬಗೆಹರಿಸಿಕೊಳ್ಳಬಹುದು.
  • ತೆರಿಗೆ ಪಾವತಿ ವೇಳೆ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಸಂಕಷ್ಟಗಳನ್ನು ಸುಲಭವಾಗಿ ಪರಿಹರಿಸುವ ಸಲುವಾಗಿ ಕೇಂದ್ರ ನೇರ ತೆರಿಗೆ ಮಂಡಳಿ ಈ ವಿಶೇಷ ವ್ಯವಸ್ಥೆಗೆ ಮುಂದಾಗಿದೆ.
  • ಈ ಸೌಲಭ್ಯದಡಿ ತೆರಿಗೆದಾರರು ತಮ್ಮ ಕಂಪ್ಯೂಟರ್ ಬಳಸಿ ದೂರನ್ನು ದಾಖಲು ಮಾಡಬಹುದು.
  • ದೂರು ದಾಖಲಾದ ನಂತರ ದೂರುದಾರರ ಮೊಬೈಲ್ ಮತ್ತು ಇ-ಮೇಲ್ ವಿಳಾಸಕ್ಕೆ ಪಿಸ್ ಸಂಖ್ಯೆಯನ್ನು ರವಾನಿಸಲಾಗುದು. ಈ ಸಂಖ್ಯೆಯ ಮೂಲಕ ತಮ್ಮ ದೂರಿನ ಸ್ಥಿತಿಯನ್ನು ತಿಳಿಯಬಹುದು.
  • “ಇ- ನಿವಾರಣ್” ನಮೂನೆಗಳನ್ನು ಭೌತಿಕವಾಗಿ ತೆರಿಗೆ ಸೌಲಭ್ಯ ಕೇಂದ್ರಗಳಲ್ಲಿಯೂ ಪಡೆದು ದೂರನ್ನು ದಾಖಲಿಸಬಹುದಾಗಿದೆ.

Leave a Comment

This site uses Akismet to reduce spam. Learn how your comment data is processed.