ವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶ “ಮಜುಲಿ” ಅಧಿಕೃತವಾಗಿ ಘೋಷಣೆ

ಅಸ್ಸಾಂನ ಮಜುಲಿ ದ್ವೀಪ ಪ್ರದೇಶವನ್ನು ವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶವೆಂದು ಗಿನ್ನಿಸ್ ವಿಶ್ವದಾಖಲೆ ಅಧಿಕೃತವಾಗಿ ಘೋಷಿಸಿದೆ. ಮಜುಲಿ ದ್ವೀಪ ಪ್ರದೇಶ ಬ್ರಹ್ಮಪುತ್ರ ನದಿಯಲ್ಲಿದೆ. ಇದು 880 ಚದರ ಕಿ.ಮೀ ವಿಸ್ತೀರ್ಣ ಹೊಂದಿದೆ. ಬ್ರೆಜಿಲ್ ನ ಅಮೆಜಾನ್ ನದಿಯಲ್ಲಿರುವ ಮರಜೊ (Marajo) ದ್ವೀಪ ಪ್ರದೇಶ ಇದುವರೆಗೂ ವಿಶ್ವದ ಅತಿದೊಡ್ಡ ದ್ವೀಪ ಪ್ರದೇಶ ಎನಿಸಿತ್ತು.

ಮಜುಲಿ ದ್ವೀಪ ಪ್ರದೇಶದ ಬಗ್ಗೆ:

  • ಮಜುಲಿ ದ್ವೀಪ ಪ್ರದೇಶ ಬ್ರಹ್ಮಪುತ್ರ ನದಿಯಿಂದ ಉಂಟಾಗಿರುವ ದ್ವೀಪ ಪ್ರದೇಶವಾಗಿದೆ. ಈ ದ್ವೀಪ ಪ್ರದೇಶವು ಉತ್ತರಕ್ಕೆ ಸುಬನಿಶ್ರಿ ನದಿ, ದಕ್ಷಿಣಕ್ಕೆ ಮೂಲ ಬ್ರಹ್ಮಪುತ್ರ ನದಿ ಮತ್ತು ಈಶಾನ್ಯಕ್ಕೆ ಬ್ರಹ್ಮಪುತ್ರ ನದಿಯ ಕವಲು ಭಾಗದ ಮೂಲಕ ಸುತ್ತುವರೆದಿದೆ.
  • ಈ ದ್ವೀಪ ಪ್ರದೇಶದಲ್ಲಿ 144 ಹಳ್ಳಿಗಳಿದ್ದು, 1,60,000 ಜನಸಂಖ್ಯೆಯನ್ನು ಹೊಂದಿದೆ. ಪ್ರತಿ ಚದರ ಕಿ.ಮೀ ಗೆ 300 ಜನಸಾಂದ್ರತೆಯನ್ನು ಹೊಂದಿದೆ.
  • ಮಜುಲಿಯಲ್ಲಿ ಹೆಚ್ಚಾಗಿ ಮಿಶಿಂಗ್ (Mishing) ಬುಡಕಟ್ಟು ಜನರು ವಾಸವಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ದಿಯೊರಿ (Deori) ಮತ್ತು ಸೊನೊವಾಲ್ ಕಚರಿಸ್ (Sonowal Kacharis) ಬುಡಕಟ್ಟು ಜನರು ಕಂಡುಬರುತ್ತಾರೆ. ಮಿಸಿಂಗ್, ಅಸ್ಸಾಮೀಸ್ ಮತ್ತು ದಿಯೊರಿ ಇಲ್ಲಿನ ಜನರ ಪ್ರಮುಖ ಭಾಷೆ.
  • ಮಜುಲಿ ದ್ವೀಪ ಸಮೃದ್ದವಾದ ಮತ್ತು ಭಿನ್ನವಾದ ಕೃಷಿ ಸಂಪ್ರದಾಯವನ್ನು ಹೊಂದಿದೆ. ಸುಮಾರು 100ಕ್ಕೂ ಹೆಚ್ಚು ಭತ್ತ ತಳಿಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ರಸಗೊಬ್ಬರ ಮತ್ತು ಕೀಟನಾಶಕವನ್ನು ಬಳಸದೇ ಬೆಳೆಯುವುದು ವಿಶೇಷವೆನಿಸಿದೆ.
  • 15ನೇ ಶತಮಾನದಲ್ಲಿ ಸಂತ-ಸುಧಾರಕ ಶ್ರೀಮಂತ ಶಂಕರ್ ಆರಂಭಿಸಿದ ನವ ವೈಷ್ಣವ ಸಂಸ್ಕೃತಿ ಆರಂಭದ ಕೇಂದ್ರ ಬಿಂದು ಮಜುಲಿ ಆಗಿದೆ.
  • ಮಜುಲಿ ದ್ವೀಪ ಶ್ರೀಮಂತ ಪರಿಸರ ಸಂಪತ್ತನ್ನು ಹೊಂದಿದೆ. ಹಲವಾರು ವಿಶೇಷ, ಅಳಿವಿನಂಚಿನಲ್ಲಿರುವ ಪ್ರಬೇಧಗಳು ಸೇರಿದಂತೆ ವಲಸೆಹಕ್ಕಿಗಳಿಗೆ ಆಶ್ರಯವಾಗಿದೆ.
  • ಕಳೆದ 30-40 ವರ್ಷಗಳಿಂದ ಬ್ರಹ್ಮಪುತ್ರ ನದಿಯಲ್ಲಿನ ಪ್ರವಾಹದಿಂದಾಗಿ ಶೇ1/3 ರಷ್ಟು ದ್ವೀಪ ಪ್ರದೇಶದ ಸವಕಳಿಗೆ ಮಜುಲಿ ತುತ್ತಾಗಿದೆ.
  • ಇತ್ತೀಚೆಗಷ್ಟೆ ಅಸ್ಸಾಂ ಸರ್ಕಾರ ಮಜುಲಿಗೆ ಜಿಲ್ಲೆಯ ಸ್ಥಾನಮಾನವನ್ನು ನೀಡಲಾಗಿದೆ. ಆ ಮೂಲಕ ದೇಶದ ಮೊದಲ ನದಿ ದ್ವೀಪ ಜಿಲ್ಲೆ ಇದಾಗಿದೆ.
  • ಮಜುಲಿಯನ್ನು ಯುನೆಸ್ಕೋ ವಿಶ್ವ ಪರಂಪರಿಕ ಪ್ರದೇಶ ಪಟ್ಟಿಗೆ ಸೇರ್ಪಡೆಗೊಳಿಸಲು ಶಿಫಾರಸ್ಸು ಮಾಡಲಾಗಿದ್ದು, ಸದ್ಯ ಯುನೆಸ್ಕೋ ತಾತ್ಕಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.

ವಿಶ್ವ ಬ್ಯಾಂಕ್ ಲಾಜಿಸ್ಟಿಕ್ ಸಾಧನೆ ಸೂಚ್ಯಂಕ: 35ನೇ ಸ್ಥಾನದಲ್ಲಿ ಭಾರತ

ವಿಶ್ವಬ್ಯಾಂಕ್ ಇತ್ತೀಚೆಗೆ ಬಿಡುಗಡೆಗೊಳಿಸಿದ 2016-ಲಾಜಿಸ್ಟಿಕ್ ಸಾಧನೆ ಸೂಚ್ಯಂಕ (Logistic Performance Index)ದಲ್ಲಿ ಭಾರತ 160 ರಾಷ್ಟ್ರಗಳ ಪೈಕಿ 35ನೇ ಸ್ಥಾನವನ್ನು ಪಡೆದುಕೊಂಡಿದೆ. “ಕನೆಕ್ಟಿಂಗ್ ಟು ಕಂಪ್ಲೀಟ್-2016” ಶೀರ್ಷಿಕೆಯಡಿ ವರದಿಯನ್ನು ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ್ದು, ಭಾರತ 2014ರ ಸೂಚ್ಯಂಕಕ್ಕಿಂತ 19 ಸ್ಥಾನ ಮೇಲೆರಿದೆ. 2014 ಲಾಜಿಸ್ಟಿಕ್ ಸಾಧನೆ ಸೂಚ್ಯಂಕದಲ್ಲಿ ಭಾರತ 54ನೇ ಸ್ಥಾನದಲ್ಲಿತ್ತು.

ಲಾಜಿಸ್ಟಿಕ್ ಸಾಧನೆ ಸೂಚ್ಯಂಕದ ಬಗ್ಗೆ:

  • ಲಾಜಿಸ್ಟಿಕ್ ಸಾಧನೆ ಸೂಚ್ಯಂಕವನ್ನ ವಿಶ್ವಬ್ಯಾಂಕ್ ಪ್ರತಿ ಎರಡು ವರ್ಷಗಳಿಗೊಮ್ಮೆ ಸಮೀಕ್ಷೆ ನಡೆಸುವ ಮೂಲಕ ಬಿಡುಗಡೆ ಮಾಡುತ್ತಿದೆ.
  • ಪ್ರಮುಖವಾಗಿ ಆರು ಮಾನದಂಡಗಳನ್ನು ಪರಿಗಣಿಸಿ ಸೂಚ್ಯಂಕವನ್ನು ತಯಾರಿಸಲಾಗುತ್ತದೆ. ಅವುಗಳೆಂದರೆ ಕಸ್ಟಮ್ಸ್, ಮೂಲಭೂತ ಸೌಕರ್ಯ, ಅಂತಾರಾಷ್ಟ್ರೀಯ ಸಾಗಣೆಗಳು, ಲಾಜಿಸ್ಟಿಕ್ ಗುಣಮಟ್ಟ ಮತ್ತು ಸಾಮರ್ಥ್ಯ, ಟ್ರಾಕಿಂಗ್, ಟ್ರೇಸಿಂಗ್ ಮತ್ತು ಸಮಯ ಬದ್ದತೆ.
  • ಲಾಜಿಸ್ಟಿಕ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯಾ ದೇಶಗಳಲ್ಲಿರುವ ಸವಾಲು ಮತ್ತು ಅವಕಾಶಗಳನ್ನು ಗುರುತಿಸಲು ಈ ಸೂಚ್ಯಂಕ ಒಂದು ಅಂತಾರಾಷ್ಟ್ರೀಯ ಮಾನದಂಡವಾಗಿದೆ.
  • 2016 ಲಾಜಿಸ್ಟಿಕ್ ಸಾಧನೆ ಸೂಚ್ಯಂಕದಲ್ಲಿ ಭಾರತ ಕಸ್ಟಮ್ ವಿಭಾಗದಲ್ಲಿ 38ನೇ ಸ್ಥಾನ, ಮೂಲಭೂತಸೌಕರ್ಯದಲ್ಲಿ 36ನೇ ಸ್ಥಾನ, ಅಂತಾರಾಷ್ಟ್ರೀಯ ಸಾಗಣೆಯಲ್ಲಿ 39ನೇ ಸ್ಥಾನ, ಲಾಜಿಸ್ಟಿಕ್ ಗುಣಮಟ್ಟ ಮತ್ತು ಸಾಮರ್ಥ್ಯದಲ್ಲಿ 32ನೇ ಸ್ಥಾನ, ಟ್ರಾಕಿಂಗ್, ಟ್ರೇಸಿಂಗ್ನಲ್ಲಿ 33ನೇ ಸ್ಥಾನ ಮತ್ತು ಸಮಯ ಬದ್ದತೆಯಲ್ಲಿ 42ನೇ ಸ್ಥಾನವನ್ನು ಪಡೆದುಕೊಂಡಿದೆ.

ನವದೆಹಲಿಯಲ್ಲಿ ಪ್ರಥಮ ಬ್ರಿಕ್ಸ್ (BRICS) ಸಿನಿಮಾ ಉತ್ಸವ ಆರಂಭ

ಪ್ರಥಮ ಬ್ರಿಕ್ಸ್ ಸಿನಿಮಾ ಉತ್ಸವ ನವದೆಹಲಿಯ ಸಿರಿಫೋರ್ಟ್ ಆಡಿಟೋರಿಯಂ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿತು. ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವ ರಾಜ್ಯವರ್ಧನ್ ರಾಥೋರ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಈ ಸಿನಿ ಉತ್ಸವಕ್ಕೆ ಚಾಲನೆ ನೀಡಿದರು.

  • ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಸಾಮರಸ್ಯ ಮತ್ತು ಸ್ನೇಹ ಸೇತುವೆಯನ್ನು ನಿರ್ಮಿಸುವ ಸಂಬಂಧ ಆರಂಭಿಸಲಾಗಿದೆ.
  • ಐದು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಿನಿಮಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಮತ್ತು ತಂತ್ರಜ್ಞಾನ ಹಂಚಿಕೆಗೆ ವೇದಿಕೆಯಾಗಲಿದೆ.
  • ಸಿನಿಮಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ನಟರು, ನಿರ್ದೇಶಕರು, ನಿರ್ಮಾಪಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಗುವುದು.

ಅರುಣಾಚಲ ಪ್ರದೇಶದಲ್ಲಿ ಪ್ರಸಿದ್ದ ಸೊಲುಂಗ್ ಹಬ್ಬ (Solung Festival) ಆರಂಭ

ಸಾಮಾಜಿಕ-ಧಾರ್ಮಿಕ ಹಬ್ಬವಾದ ಸೊಲುಂಗ್ ಹಬ್ಬ ಅರುಣಾಚಲ ಪ್ರದೇಶದಲ್ಲಿ ಆರಂಭಗೊಂಡಿತು. ಐದು ದಿನಗಳ ಕಾಲ ನಡೆಯಲಿರುವ ಕೃಷಿ ಆಧಾರಿತ ಈ ಹಬ್ಬವನ್ನು ಆದಿ ಬುಡಕಟ್ಟು ಜನರು ಆಚರಿಸುತ್ತಾರೆ. ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಹಬ್ಬವನ್ನು ಆಚರಿಸಲಾಗುವುದು.

ಸೊಲುಂಗ್ ಹಬ್ಬದ ಬಗ್ಗೆ:

  • ಆದಿ ಬುಡಕಟ್ಟು ಜನರ ಸಾಮಾಜಿಕ-ಧಾರ್ಮಿಕ ವೈಶಿಷ್ಠತ್ಯೆಯನ್ನು ಬಿಂಬಿಸುವ ಪ್ರಮುಖ ಹಬ್ಬವಾಗಿದೆ.
  • ಈ ಹಬ್ಬದ ಆಚರಣೆ ಪ್ರಯುಕ್ತ ವಿವಿಧ ದೇವರುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉತ್ತಮ ಇಳುವರಿಗಾಗಿ ಪ್ರಾರ್ಥಿಸಲಾಗುವುದು.
  • ಆದಿ ಬುಡಕಟ್ಟು ಜನಾಂಗದಲ್ಲಿ ಪವಿತ್ರ ಪ್ರಾಣಿ ಎನ್ನಲಾಗಿರುವ ಕಾಡೆಮ್ಮೆಯನ್ನು ಬಲಿಕೊಡುವ ಮೂಲಕ ದೇವರ ಆರಾಧನೆ ಮಾಡಲಾಗುವುದು. ಈ ದಿನದಂದು ಮಾಂಸ ಮತ್ತು ಭತ್ತದಿಂದ ಮಾಡಲಾದ ಬಿಯರ್ ಅನ್ನು ನೆರೆಹೊರೆಯವರು ಮತ್ತು ಸಂಬಂಧಿಕರಿಗೆ ಹಂಚಿ ಸಂಭ್ರಮಿಸಲಾಗುವುದು.

ಇ-ಟಿಕೆಟ್ ಪ್ರಯಾಣಿಕರಿಗೆ ವಿಮಾ ಯೋಜನೆ ಜಾರಿಗೊಳಿಸಿದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ಇ-ಟಿಕೆಟ್ ಪ್ರಯಾಣಿಕರಿಗೆ ವಿಮೆ ಯೋಜನೆ ಆರಂಭಿಸಿದೆ. ಯೋಜನೆಯಡಿ ರೈಲು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ ಸಂಬಂಧಪಟ್ಟವರಿಗೆ 10 ಲಕ್ಷದವರೆಗೆ ವಿಮೆ ಸಿಗುತ್ತದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ದೆಹಲಿಯಲ್ಲಿ ಯೋಜನೆಗೆ ಚಾಲನೆ ನೀಡಿದರು. ಯೋಜನೆ ಅನುಷ್ಟಾನಕ್ಕಾಗಿ ರೈಲ್ವೆ ಇಲಾಖೆ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಸಂಸ್ಥೆ, ಐಸಿಐಸಿಐ ಲೊಂಬಾರ್ಡ್ ಮತ್ತು ರಾಯಲ್ ಸುದರಂ ಜನರಲ್ ಇನ್ಯೂರೆನ್ಸ್ ಜೊತೆ ಒಪ್ಪಂದಕ್ಕೆ ಸಹಿಹಾಕಿದೆ.

ಯೋಜನೆಯ ಪ್ರಮುಖಾಂಶಗಳು:

  • ಯೋಜನೆಯಡಿ IRCTC ವೆಬ್ಸೈಟ್ ಮೂಲಕ ಇ-ಟಿಕೆಟ್ ಬುಕ್ ಮಾಡುವ ಪ್ರತಿ ಪ್ರಯಾಣಿಕರಿಗೂ ವಿಮೆ ಸೌಲಭ್ಯವನ್ನು ಒದಗಿಸಲಾಗುವುದು. ವಿಮಾ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರಯಾಣಿಕರು ಕೇವಲ ರೂ 92ಪೈಸೆಯನ್ನು ಪ್ರೀಮಿಯಂ ಆಗಿ ನೀಡಬೇಕಾಗುತ್ತದೆ.
  • ಐದು ವರ್ಷದೊಳಗಿನ ಮಕ್ಕಳಿಗೆ ಮತ್ತು ವಿದೇಶಿ ಪ್ರಯಾಣಿಕರಿಗೆ ಈ ಯೋಜನೆ ಅನ್ವಯುಸುವುದಿಲ್ಲ.
  • ಪ್ರಾಯೋಗಿಕ ಮಾದರಿಯಲ್ಲಿ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಕೌಂಟರ್ ಗಳಲ್ಲಿ ಟಿಕೆಟ್ ಖರೀದಿಸುವವರಿಗೆ ಮತ್ತು ತಿಂಗಳ ಋತುವಿನ ಟಿಕೆಟ್ ಖರೀದಿಸುವವರಿಗೂ ನೀಡಲು ಇಲಾಖೆ ಚಿಂತಿಸಿದೆ.
  • ಯೋಜನೆಯಡಿ ವಿಮೆ ಮಾಡಿಸಿಕೊಂಡವರಿಗೆ 10 ಲಕ್ಷ ರೂಪಾಯಿ ವಿಮಾ ಹಣ ದೊರಕಲಿದೆ. ಭಾಗಶಃ ಅಂಗವೈಕಲ್ಯ ಅಥವಾ ಗಾಯಗಳಾದಲ್ಲಿ 7.5 ಲಕ್ಷ ರೂಪಾಯಿ, ಆಸ್ಪತ್ರೆಗೆ ದಾಖಲಾದಲ್ಲಿ 5 ಲಕ್ಷ ರೂಪಾಯಿ ಮತ್ತು ಶವಗಳನ್ನು ಹೊತ್ತೊಯ್ಯಲು 10 ಸಾವಿರ ರೂಪಾಯಿ ವಿಮೆ ಸಿಗಲಿದೆ.

Leave a Comment

This site uses Akismet to reduce spam. Learn how your comment data is processed.