ಅಪರಾಧಿಗಳ ಡಿಎನ್ಎ ಪ್ರೋಫೈಲಿಂಗ್ ಜಾರಿಗೆ ತಂದ ಮೊದಲ ರಾಜ್ಯ ಆಂಧ್ರಪ್ರದೇಶ

ಅಪರಾಧಿಗಳ ಡಿಎನ್ಎ (Deoxyribonucleac acid) ಮಾಹಿತಿಯನ್ನು ಕಲೆಹಾಕುವ ಡಿಎನ್ಎ ಇಂಡೆಕ್ಸ್ ಸಿಸ್ಟಮ್ ಅನ್ನು ಆಂಧ್ರಪ್ರದೇಶ ಜಾರಿಗೆ ತಂದಿಗೆ. ಆ ಮೂಲಕ ಈ ವಿನೂತನ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊದಲ ರಾಷ್ಟ್ರವೆನಿಸಿದೆ. ಇದಕ್ಕಾಗಿ ಅಮೆರಿಕಾದ ಇಂಟೆಜೆನ್ ಎಕ್ಸ್ (InetegenX) ಅಭಿವೃದ್ದಿಪಡಿಸಿರುವ RapidHit ಡಿಎನ್ಎ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ.

  • ಡಿಎನ್ಎ ಸೂಚ್ಯಂಕ ವ್ಯವಸ್ಥೆಯು ಜೊಲ್ಲು ರಸ, ರಕ್ತದ ಕಲೆ ಮತ್ತು ಕೆನ್ನೆಯ ಸ್ವೇದ ಗ್ರಂಥಿಗಳ ಮಾದರಿ ಮೂಲಕ ಡಿಎನ್ಎ ಮಾಹಿತಿಯನ್ನು ಕಲೆಹಾಕಲಿದೆ.
  • ಪ್ರಸ್ತುತ ಬಳಕೆಯಲ್ಲಿರುವ ತಂತ್ರಜ್ಞಾನದಲ್ಲಿ ಡಿಎನ್ಎ ಮಾಹಿತಿ ತಿಳಿಯಲು ಎರಡರಿಂದ ಮೂರು ದಿನಗಳ ಕಾಲಾವಕಾಶ ಬೇಕಿದೆ. ಆದರೆ RapidHit ಡಿಎನ್ಎ ವ್ಯವಸ್ಥೆಯಡಿ ಕೇವಲ 90 ರಿಂದ 120 ನಿಮಿಷಗಳೊಳಗೆ ಮಾಹಿತಿ ಕಲೆಹಾಕಬಹುದಾಗಿದೆ.
  • ಅಪರಾಧಿಗಳ ಡಿಎನ್ಎಯ ಬೃಹತ್ ಡಾಟಾಬೇಸ್ ರಚಿಸಬಹುದಾದ ಕಾರಣ ಅಪರಾಧ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಲಿವೆ ಮತ್ತು ಶಂಕಿತ ಅಪರಾಧಿಗಳು ನಿಜವಾಗಿಯು ಅಪರಾಧಿಗಳೇ ಅಥವಾ ನಿರಪರಾಧಿಗಳೇ ಎಂಬುದನ್ನು ತಿಳಿಯಬಹುದಾಗಿದೆ.
  • ಮತ್ತೆ ಮತ್ತೆ ಅಪರಾಧ ಎಸಗುವ ಅಪರಾಧಿಗಳನ್ನು ಈ ಡಿಎನ್ಎ ಡಾಟಾಬೇಸ್ ನಿಂದ ಸುಲಭವಾಗಿ ಮತ್ತು ವೇಗವಾಗಿ ಪತ್ತೆಹಚ್ಚಬಹುದಾಗಿದೆ. ಆ ಮೂಲಕ ಅಪರಾಧಕ್ಕೆ ಕಡಿವಾಣ ಹಾಕಲು ಇದು ಮಹತ್ವದ ಪಾತ್ರವಹಿಸಲಿದೆ.
  • ಅಷ್ಟೇ ಅಲ್ಲದೇ ಅಪರಾಧ ಪ್ರಕರಣಗಳಲ್ಲಿ ತಲೆಮರಿಸಿಕೊಂಡಿರುವವರನ್ನು ಸ್ಥಳದಲ್ಲೇ ಪತ್ತೆಹಚ್ಚಬಹುದಾಗಿದ್ದು, ಬೇದಿಸಲಾಗದೆ ಉಳಿದಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿದೆ.

ಡಿಎನ್ಎ ಎಂದರೇನು:

  • ಡಿಎನ್‌ಎ ಒಂದು ಸುರುಳಿಯಾಕಾರದ ಒಂದು ತುಂಡಾಗಿದ್ದು ಅದರಲ್ಲಿ ಬಹಳ ವಂಶವಾಹಿಗಳ‌ನ್ನು, ನಿಯಂತ್ರಕ ಅಂಶಗಳು ಮತ್ತು ನ್ಯುಕ್ಲಿಯೊಸೈಡ್‌ನ ಸರಣಿಗಳನ್ನು ಹೊಂದಿದೆ. ಡಿಎನ್ಎ ಅಂಶವು ಪೋಷಕರಿಂದ ನೇರವಾಗಿ ಮಕ್ಕಳಿಗೆ ಬಂದಿರುವ ಕಾರಣ ಪ್ರತಿ ವ್ಯಕ್ತಿಯಲ್ಲಿ ನಿರ್ದಿಷ್ಟವಾದ ಅಂಶಗಳನ್ನು ಒಳಗೊಂಡಿರುತ್ತದೆ.

ಡಿಎನ್ಎ ಪ್ರೋಫೈಲಿಂಗ್ ತಂತ್ರಜ್ಞಾನ:

  • ಡಿಎನ್ಎ ಫಿಂಗರ್ ಪ್ರಿಟಿಂಗ್ ಅಥವಾ ಡಿಎನ್ಎ ಪ್ರೋಫೈಲಿಂಗ್ ವಿಧಾನದಲ್ಲಿ ವ್ಯಕ್ತಿಯ ಡಿಎನ್ಎ ಜೋಡಿಯಲ್ಲಿ ನಿರ್ಧಿಷ್ಟ ಅಂಶಗಳನ್ನು ಪ್ರತ್ಯೇಕಿಸಲಾಗುವುದು. ಪ್ರಸ್ತುತ ಈ ವಿಧಾನವನ್ನು ವಿಶ್ವದಾದ್ಯಂತ ಪೊಲೀಸರು ಅಪರಾಧಿಗಳನ್ನು ಪತ್ತೆಹಚ್ಚಲು ಬಳಸುತಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಸಣ್ಣ ಸುಳಿವು ಅಂದರೆ ರಕ್ತದ ಕಲೆ, ಚರ್ಮ, ಕೂದಲು ಸಿಕ್ಕರು ಸಾಕು ಅಪರಾಧಿಗಳನ್ನು ಪತ್ತೆಹಚ್ಚಬಹುದಾಗಿದೆ. ಆದ್ದರಿಂದ ಇದು ಅತ್ಯಂತ ಪರಿಣಾಮಕಾರಿ ಪರೀಕ್ಷೆ ಆಗಿದೆ.

ಗುಜರಾತ್ ನ ಅಹಮದಬಾದ್ ನಲ್ಲಿ 2016 ಕಬಡ್ಡಿ ವಿಶ್ವ ಕಪ್

ಗುಜರಾತ್ನ ಅಹಮದಬಾದ್ ನಲ್ಲಿ 2016 ಕಬಡ್ಡಿ ವಿಶ್ವ ಕಪ್ ನಡೆಯಲಿರುವುದಾಗಿ ಅಂತಾರಾಷ್ಟ್ರೀಯ ಕಬಡ್ಡಿ ಫೇಡರೇಷನ್ ಘೋಷಿಸಿದೆ. ಅಕ್ಟೋಬರ್ 7 ರಿಂದ 22 ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಶ್ವದ 12 ರಾಷ್ಟ್ರಗಳು ಭಾಗವಹಿಸಲಿವೆ. ಭಾರತ, ಕೆನಡಾ, ಅಮೆರಿಕಾ, ಯು.ಕೆ, ಇರಾನ್, ಆಸ್ಟ್ರೇಲಿಯಾ, ಪೋಲ್ಯಾಂಡ್, ಪಾಕಿಸ್ತಾನ, ಬಾಂಗ್ಲದೇಶ, ದಕ್ಷಿಣ ಕೊರಿಯ ಜಪಾನ್ ಮತ್ತು ಕೀನ್ಯಾ ಭಾಗವಹಿಸಲಿರುವ 12 ರಾಷ್ಟ್ರಗಳಾಗಿವೆ. 2016 ಕಬಡ್ಡಿ ವಿಶ್ವ ಕಪ್ ಅಧಿಕೃತ ಪ್ರಸಾರದ ಹಕ್ಕನ್ನು ಸ್ಟಾರ್ ಸ್ಪೋರ್ಟ್ಸ್ ಪಡೆದುಕೊಂಡಿದೆ.

ಕಬಡ್ಡಿ ಬಗ್ಗೆ:

  • ಕಬಡ್ಡಿ ಭಾರತದ ಗ್ರಾಮೀಣ ಕ್ರೀಡೆ. ಭಾರತದ ದೇಸೀ ಕ್ರೀಡೆ ಕಬಡ್ಡಿ ಸುಮಾರು ೪೦೦೦ ವರ್ಷ ಪುರಾತನವಾದದ್ದು. ಕಬಡ್ಡಿ ಬಾಂಗ್ಲದೇಶದ ರಾಷ್ಟ್ರೀಯ ಕ್ರೀಡೆಯಾಗಿದ್ದು, ಇದನ್ನು ಹುತುತು ಎನ್ನಲಾಗುತ್ತದೆ.
  • ಭಾರತದಲ್ಲಿ ಕಬಡ್ಡಿ ಮಹಾರಾಷ್ಟ್ರ, ತಮಿಳು ನಾಡು, ಬಿಹಾರ, ತೆಲಂಗಣ, ಆಂಧ್ರಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ರಾಜ್ಯ ಕ್ರೀಡೆ.

ಕಬಡ್ಡಿ ವಿಶ್ವಕಪ್ ಬಗ್ಗೆ:

  • 2004ರಲ್ಲಿ ಆರಂಭವಾದ ವಿಶ್ವಕಪ್ ಕಬಡ್ಡಿ ಟೂರ್ನಿ 2005 ಮತ್ತು 2006ರನ್ನು ಹೊರತುಪಡಿಸಿ ಈವರೆಗೂ ಆರು ಬಾರಿ ನಡೆದಿದೆ. ವಾರ್ಷಿಕ ಟೂರ್ನಿ ಇದಾಗಿದ್ದು, ಭಾರತ ಸತತ ಆರು ಬಾರಿಯು ಚಾಂಪಿ ಯನ್ ಪಟ್ಟ ಅಲಂಕರಿಸಿದೆ.ಅದರಲ್ಲೂ 2010, 2012,2013ರಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಭಾರತ ಹೊರತುಪಡಿಸಿದರೆ, ಪಾಕಿಸ್ತಾನ ಮತ್ತು ಇರಾನ್ ಕ್ರಮುವಾಗಿ ಮೂರು ಹಾಗೂ ಎರಡು ಬಾರಿ ರನ್ನರ್‌ಅಪ್ ಸ್ಥಾನಗಳಿಸಿದ್ದು, ಭಾರತಕ್ಕೆ ಸವಾಲೊಡ್ಡಬಲ್ಲ ತಂಡಗಳಾಗಿವೆ.
  • 2012ರಲ್ಲಿ ಆರಂಭವಾದ ಮಹಿಳಾ ಟೂರ್ನಿ 2013ರಲ್ಲಿ ಎರಡನೇ ಬಾರಿಗೆ ನಡೆದಿದ್ದು, ಭಾರತವೇ ಇಲ್ಲಿಯೂ ಪ್ರಭುತ್ವ ಸಾಧಿಸಿದೆ.

ಆಂತರಿಕ ಭದ್ರತಾ ಕಾನೂನು ಮಸೂದೆ ರಚಿಸಿದ ದೇಶದ ಮೊದಲ ರಾಜ್ಯ ಮಹಾರಾಷ್ಟ್ರ

ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರ ಆಂತರಿಕ ಭದ್ರತಾ ರಕ್ಷಣೆ ಕಾಯಿದೆ (The Maharashtra Protection of Internal Security Act (MPISA), 2016)ಯ ಕರಡುಪ್ರತಿಯನ್ನು ಸಿದ್ದಪಡಿಸಿದ್ದು, ಸ್ವಂತ ಆಂತರಿಕ ಭದ್ರತೆ ಕಾಯಿದೆ ಜಾರಿಗೆತರಲಿರುವ ದೇಶದ ಮೊದಲ ರಾಜ್ಯವೆನಿಸಿದೆ. ಸದ್ಯ ಇದನ್ನು ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗೆ ಇಡಲಾಗಿದ್ದು, ಆನಂತರ ವಿಧಾನ ಸಭೆ ಅಧಿವೇಶನದಲ್ಲಿ ಮಂಡಿಸಿ ಜಾರಿಗೆ ತರಲಿದೆ.

ಮಸೂದೆಯಲ್ಲಿನ ಪ್ರಮುಖಾಂಶ

  • ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಭಯೋತ್ಪಾದನೆ ಹತ್ತಿಕ್ಕುವುದು, ಜಾತಿ ಸಂಬಂಧಿತ ಗಲಭೆ ಮತ್ತು ಬಂಡಾಯ ನಿವಾರಣೆಗೆ ಮಸೂದೆಯಲ್ಲಿ ವಿಶೇಷ ಒತ್ತನ್ನು ನೀಡಲಾಗಿದೆ.
  • ಆಂತರಿಕ ಭದ್ರತೆ ವ್ಯಾಖ್ಯಾನ: ಆಂತರಿಕ ಭದ್ರತೆ ಎಂದರೇನು ಎಂಬ ವ್ಯಾಖ್ಯಾನವನ್ನು ಮಸೂದೆಯಲ್ಲಿ ನೀಡಲಾಗಿದೆ. ಅದರಂತೆ ರಾಜ್ಯದ ಗಡಿ ಪ್ರದೇಶದೊಳಗೆ ಶಾಂತಿ ಸುವ್ಯವಸ್ಥೆಗೆ ಕುತ್ತು ತರಬಹುದಾದ ಯಾವುದೇ ಪ್ರಕರಣಗಳನ್ನು ಇದರಡಿ ವಿವರಸಿಲಾಗಿದೆ.
  • ವಿಶೇಷ ಭದ್ರತಾ ವಲಯ: ಶಸ್ತಾಸ್ತ್ರ ಮತ್ತು ಸ್ಪೋಟಕಗಳ ಸಾಗಾಣಿಕೆ ಮತ್ತು ಅಕ್ರಮ ಹಣ ಸಾಗಾಣಿಕೆ ತಡೆಯುವ ಸಲುವಾಗಿ ವಿಶೇಷ ಭದ್ರತಾ ವಲಯವನ್ನು ಸ್ಥಾಪಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ವಲಯಗಳು ವಿಶೇಷ ಪೊಲೀಸ್ ಪಡೆಯನ್ನು ಹೊಂದಿರಲಿವೆ.
  • ವಿಶೇಷ ಮೂಲಭೂತಸೌಕರ್ಯ ವಲಯ: ಅಣು ವಿದ್ಯುತ್ ಘಟಕ, ಅಣೆಕಟ್ಟು, ಪ್ರಮುಖ ಯೋಜನೆಗಳು, ಕರಾವಳಿ ಪ್ರದೇಶಗಳನ್ನು ವಿಶೇಷ ಮೂಲಭೂತಸೌಕರ್ಯ ವಲಯದಡಿ ತರಲಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಲಾಗುವುದು.
  • ಪೊಲೀಸ್ ಮುಖ್ಯಸ್ಥರಿಗೆ ವಿಶೇಷ ಅಧಿಕಾರ: ಮಸೂದೆಯಲ್ಲಿ ಪೊಲೀಸ್ ಅಧಿಕಾರಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದ್ದು, ಯಾವುದೇ ಶಂಕಸ್ಪಾದ ಉಪಕರಣ, ವಿಷಕಾರಿ ರಾಸಾಯನಿಕ, ಜೈವಿಕ ಅಥವಾ ವಿಕಿರಣ ಪದಾರ್ಥಗಳ ಉತ್ಪಾದನೆ ಮತ್ತು ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರುವ ಅಧಿಕಾರವನ್ನು ನೀಡಲಾಗಿದೆ.
  • ಶಿಕ್ಷೆ: ಆಂತರಿಕ ಭದ್ರತೆಗೆ ದಕ್ಕೆ ತರುವಂತಹ ಕೃತ್ಯಗಳಲ್ಲಿ ಭಾಗಿಯಾದವರಿಗೆ ಕಾಯಿದೆಯಡಿ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.

ಆಫ್ಘಾನಿಸ್ತಾನದ ಸ್ತೋರ್ ಪ್ಯಾಲೆಸ್ (Stor Palace) ಲೋಕಾರ್ಪಣೆ ಮಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತು ಆಪ್ಘಾನ್ ಅಧ್ಯಕ್ಷ ಆಶ್ರಫ್ ಘಾನಿ ಅವರು ಆಪ್ಘಾನಿಸ್ತಾನದ ಕಾಬೂಲ್ ನಲ್ಲಿ ನವೀಕರಿಸಲಾಗಿರುವ ಸ್ತೋರ್ ಪ್ಯಾಲೆಸ್ ಅನ್ನು ಜಂಟಿಯಾಗಿ ವಿಡಿಯೋ ಸಂವಾದ ಮೂಲಕ ಲೋಕಾರ್ಪಣೆ ಮಾಡಿದರು. ಸ್ತೋರ್ ಪ್ಯಾಲೆಸ್ ಆಪ್ಘಾನಿಸ್ತಾನದ ವಿದೇಶಾಂಗ ವ್ಯವಹಾರ ಸಚಿವಲಾಯದ ಆವರಣದಲ್ಲಿದ್ದು, ಹೊಸದಾಗಿ ನವೀಕರಿಸಲಾಗಿರುವ ಈ ಭವನದಲ್ಲಿ ಇನ್ನು ಮುಂದೆ ಆಪ್ಘಾನಿಸ್ತಾನದ ವಿದೇಶಾಂಗ ವ್ಯವಹಾರ ಸಚಿವಲಾಯ ಕಾರ್ಯನಿರ್ವಹಿಸಲಿದೆ. ಜೊತೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಭೆ ಸಮಾರಂಭಗಳು ಇಲ್ಲಿ ನಡೆಯಲಿವೆ.

ಹಿನ್ನಲೆ:

  • ಸ್ತೋರ್ ಪ್ಯಾಲೆಸ್ ನವೀಕರಿಸುವ ತ್ರಿಪಕ್ಷೀಯ ಒಪ್ಪಂದಕ್ಕೆ ಸಂಬಂಧ ಅಂದಿನ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಪ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ವೇಳೆ ಸಹಿ ಹಾಕಿದ್ದರು. ಅಗಾ ಖಾನ್ ಡೆವಲಪ್ಮೆಂಟ್ ನೆಟವರ್ಕ್, ಆಪ್ಘಾನಿಸ್ತಾನ ಸರ್ಕಾರ ಮತ್ತು ಭಾರತ ಸರ್ಕಾರ ಈ ಒಪ್ಪಂದಕ್ಕೆ ಸಹಿಹಾಕಿದ್ದವು.

ಆಪ್ಘಾನಿಸ್ತಾನ ಅಭಿವೃದ್ದಿಗೆ ಭಾರತ ಕೊಡುಗೆ:

  • ಭಾರತ ಕಳೆದ ಕೆಲವು ವರ್ಷಗಳಿಂದ ಆಪ್ಘಾನಿಸ್ತಾನದಲ್ಲಿ ಪುನರ್ನಿಮಾಣ ಮತ್ತು ಪುನರ್ವಸತಿ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದೆ.
  • ಕಳೆದ ಜೂನ್ 2016 ರಲ್ಲಿ ಆಪ್ಘಾನ್ ಹೆರಾತ್ ಪ್ರಾಂತ್ಯದಲ್ಲಿ ಭಾರತ ನೆರವಿನಿಂದ ನಿರ್ಮಿಸಲಾದ $300 ಮಿಲಿಯನ್ ಭಾರತ ಮತ್ತು ಆಪ್ಘಾನಿಸ್ತಾನ ಫ್ರೆಂಡ್ ಶಿಪ್ ಡ್ಯಾಂ ಅನ್ನು ಲೋಕಾರ್ಪಣೆಗೊಳಿಸಿದ್ದವು. 2015 ಡಿಸೆಂಬರ್ ನಲ್ಲಿ ಭಾರತ ಆಪ್ಘಾನಿಸ್ತಾನದಲ್ಲಿ ಹೊಸ ಸಂಸತ್ ಭವನವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿತ್ತು.
  • ಇಲ್ಲಿಯವರೆಗೆ ಭಾರತ ಸರಿಸುಮಾರು $2 ಬಿಲಿಯನ್ ಡಾಲರ್ ನೆರವನ್ನು ಆಪ್ಘಾನಿಸ್ತಾನದ ಪುನರ್ನಿಮಾಣ ಮತ್ತು ಪುನರ್ವಸತಿ ಕಲ್ಪಿಸುವ ವಿವಿಧ ಯೋಜನೆಗಳಿಗೆ ನೆರವು ನೀಡಿದೆ.

Leave a Comment

This site uses Akismet to reduce spam. Learn how your comment data is processed.