ದೇಶದ ಮೊದಲ ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆಗೆ ಚಾಲನೆ

ಭಾರತದ ಮೊದಲ ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆ (Integrated Defence Communication Networks)ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ರವರು ದೆಹಲಿಯಲ್ಲಿ ಚಾಲನೆ ನೀಡಿದ್ದಾರೆ. ಈ ನೂತನ ವ್ಯವಸ್ಥೆಯು ಭಾರತೀಯ ಸೇನಾ ಪಡೆ, ವಾಯು ಪಡೆ, ನೌಕ ಪಡೆ ಸೇರಿದಂತೆ ವಿಶೇಷ ಪಡೆಗಳ ನಡುವೆ ತ್ವರಿತವಾಗಿ ಮಾಹಿತಿ ಸಂವಹನೆಗೆ ಸಹಕಾರಿಯಾಗಲಿದೆ.

ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆ ಬಗ್ಗೆ

  • ಸಮಗ್ರ ರಕ್ಷಣಾ ಸಂಪರ್ಕ ವ್ಯವಸ್ಥೆಯು ದೇಶದ ಸೇನಾಪಡೆ, ವಾಯು ಪಡೆ ಮತ್ತು ನೌಕಪಡೆಗೆ ಸೇರಿದ ಏಕೈಕ ಉಪಗ್ರಹ ಜಾಲವಾಗಿದೆ. ಇದು ಒಂದು ಸುರಕ್ಷಿತ ವ್ಯವಸ್ಥೆಯಾಗಿದ್ದು, ಭಾರತದ ಉದ್ದಗಲಕ್ಕೂ ಲಭ್ಯವಿರಲಿದೆ.
  • ಈ ಸಮಗ್ರ ಸಂಪರ್ಕ ವ್ಯವಸ್ಥೆಯ ಮೂಲಕ ಮೂರು ಸೇನಾ ಪಡೆಗಳ ನಡುವೆ ವಾಯ್ಸ್ ಡಾಟಾ, ವಿಡಿಯೋ ಡಾಟಾ ಮೂಲಕ ಮಾಹಿತಿ ಹಂಚಿಕೊಳ್ಳಬಹುದಾಗಿದೆ.
  • ಈ ವ್ಯವಸ್ಥೆ ಮೂಲಕ ಅವಘಡಗಳು, ಭಯೋತ್ಪಾದಕ ದಾಳಿಗಳು ನಡೆದಾಗ ಕ್ಷಿಪ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಹೆಚ್ ಸಿ ಎಲ್ ಸಂಸ್ಥೆ 600 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

“HD131399ಎಬಿ” ಮೂರು ಸೂರ್ಯರ ಹೊಂದಿರುವ ಗ್ರಹ ಅನ್ವೇಷಣೆ

hd_upಮೂರು ಸೂರ್ಯರ (ನಕ್ಷತ್ರಗಳ) ಸುತ್ತ ತಿರುಗುತ್ತಿರುವ ವಿಶೇಷ ಗ್ರಹವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ವಿಶೇಷ ಗ್ರಹಕ್ಕೆ “HD131399ಎಬಿ” ಎಂದು ಹೆಸರಿಡಲಾಗಿದೆ. ಸಾಮಾನ್ಯ  ಗ್ರಹಕ್ಕೆ ಹೋಲಿಸಿದರೆ ಈ ಗ್ರಹದಲ್ಲಿ ಪ್ರತಿ ದಿನ ತಲಾ ಮೂರು ಸಲ ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಣಬಹುದಾಗಿದೆ. ಈ ಗ್ರಹವನ್ನು ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್ ಅಪೈ ಅವರ ಅಧ್ಯಯನ ತಂಡದಲ್ಲಿರುವ ಪಿಎಚ್.ಡಿ ವಿದ್ಯಾರ್ಥಿ ಕೆವಿನ್ ವಾಗ್ನರ್ ಈ ಗ್ರಹವನ್ನು ಪತ್ತೆ ಹಚ್ಚಿದ್ದಾರೆ.

HD131399ಎಬಿ ಬಗ್ಗೆ:

  • ಈ ಗ್ರಹವೂ ಭೂಮಿಯಿಂದ 340 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿದ್ದು, ಸೆಂಟಾರಸ್ ನಕ್ಷತ್ರ ಪುಂಜದಲ್ಲಿದೆ.
  • ಗುರು ಗ್ರಹಕ್ಕಿಂತಲೂ ನಾಲ್ಕು ಪಟ್ಟು ದೊಡ್ಡದು ಮತ್ತು ನಾಲ್ಕು ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿದೆ.
  • ಸುಮಾರು 16 ಮಿಲಿಯನ್ ವರ್ಷಗಳ ಹಿಂದೆ ಈ ಗ್ರಹ ಉದಯಿಸಿರಬಹುದೆಂದು ಊಹಿಸಿದ್ದು, ಇದು ಸೌರ ಮಂಡಲದ ಹೊರಗೆ ಪತ್ತೆಯಾದ ಯುವ ಗ್ರಹ ಆಗಿದೆ.
  • ಇದರ ವಾತಾವರಣದ ಉಷ್ಣತೆ 580 ಡಿಗ್ರಿ ಸೆಲ್ಸಿಯಸ್ನಷ್ಟಿದೆ ಎಂದು ಅಂದಾಜಿಸಲಾಗಿದೆ.

ಹೇಗೆ ಪತ್ತೆ?:

  • HD131399ಎಬಿ ಗ್ರಹವನ್ನು ಸ್ಪೀಯರ್ ಸಾಧನ ಬಳಸಿ ಪತ್ತೆಮಾಡಲಾಗಿದೆ. ಸ್ಪೀಯರ್ ಎಂದರೆ (ಸ್ಪೆಕ್ಟ್ರೊ ಪೊಲಾರಿಮೆಟ್ರಿಕ್ ಹೈ ಕಾಂಟ್ರಾಸ್ಟ್ ರಿಸರ್ಚ್ ಇನ್ಸ್ಟ್ರ್ಯುಮೆಂಟ್) ಇದನ್ನು ಸೌರವ್ಯೂಹದಾಚೆಗಿನ ಗ್ರಹಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ನಿರ್ಮಿಸಲಾಗಿದೆ. ಈ ಸಾಧನವು ಯೂರೋಪಿಯನ್ ಸದರ್ನ್ ಅಬ್ಸರ್ವೇಟರಿ (ಇಎಸ್‌ಒ) ನಿರ್ವಹಿಸುತ್ತಿರುವ, ಚಿಲಿಯಲ್ಲಿರುವ ದೊಡ್ಡ ದೂರದರ್ಶಕದ ಭಾಗವಾಗಿದೆ.

ಗುರು ಕಕ್ಷೆಯನ್ನು ಯಶಸ್ವಿಯಾಗಿ ಸೇರ್ಪಡೆಗೊಂಡ “ಜುನೊ”

juno_upಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ (ನಾಸಾ) ನಿರ್ಮಿತ ‘ಜುನೊ’ ಗಗನನೌಕೆ ಯಶಸ್ವಿಯಾಗಿ ಗುರುಗ್ರಹದ ಕಕ್ಷೆಯನ್ನು ಸೇರಿದೆ. ಗುರು ಗ್ರಹ ಸೌರವ್ಯೂಹದಲ್ಲೇ ಅತ್ಯಂತ ದೊಡ್ಡ ಗ್ರಹ ಗುರು.  ಗುರು ಗ್ರಹದ ಕಕ್ಷೆಯನ್ನ ತಲುಪಿದ ಮೊದಲ ನೌಕೆ ಎಂಬ ಹಿರಿಮೆಗೆ ಜುನೊ ಪಾತ್ರವಾಗಿದೆ. ಗುರು ಗ್ರಹದ ಉಗಮ ಸೇರಿದಂತೆ ವಾತಾವರಣವನ್ನು ಅಳೆಯಲು ಜುನೊ ಮಹತ್ವದ ಪಾತ್ರವನ್ನು ವಹಿಸಿಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಭಾರತೀಯ ಕಾಲಮಾನ ಮಂಗಳವಾರ ಬೆಳಿಗ್ಗೆ 8.48ಕ್ಕೆ ನೌಕೆಯ ಪ್ರಧಾನ ಎಂಜಿನ್ ಉರಿಯಲು ಆರಂಭಿಸಿತು. 35 ನಿಮಿಷಗಳ ನಂತರ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು. ನೌಕೆಯ ವೇಗವನ್ನು ಪ್ರತಿ ಸೆಕೆಂಡ್ಗೆ 542 ಮೀಟರ್ಗೆ ಕುಗ್ಗಿಸುವುದಕ್ಕಾಗಿ ಎಂಜಿನ್ ಉರಿಸಲಾಯಿತು.

ಜುನೊದ ವಿನ್ಯಾಸ:

  • ಜುನೊ 5 ಅಡಿ ಎತ್ತರ 11.5ಅಡಿ ವ್ಯಾಸ ಮೂರು ಸೌರ ಫಲಕಗಳು 66 ಅಡಿ ವ್ಯಾಪ್ತಿಯಲ್ಲಿ ಹರಡಿಕೊಳ್ಳುತ್ತವೆ
  • 18,698 ಸೌರ ವಿದ್ಯುತ್ನಿಂದ ಕಾರ್ಯನಿರ್ವಹಿಸುವ ಜುನೊದಲ್ಲಿ ಅಳವಡಿಸಲಾಗಿರುವ ಸೌರ ಕೋಶಗಳು
  • ಜುನೊ ತನ್ನ ನೌಕೆಯಲ್ಲಿ 9 ವೈಜ್ಞಾನಿಕ ಉಪಕರಣಗಳನ್ನ ಒಳಗೊಂಡಿದೆ

ಜುನೊದ ಬಗ್ಗೆ:

  • ಜುನೊ ಗ್ರಹವನ್ನು 2011 ಆಗಸ್ಟ್ 5 ಫ್ಲಾರಿಡಾದ ಕೇಪ್ ಕ್ಯಾನ್ವೆರಾಲ್ ನೆಲೆಯಿಂದ ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಸುಮಾರು 4 ವರ್ಷ 11 ತಿಂಗಳು ಭೂಮಿಯಿಂದ ಗುರು ಗ್ರಹಕ್ಕೆ ಜುನೊ ನೌಕೆ ಪ್ರಯಾಣಿಸಿದ್ದು, 280 ಕೋಟಿ ಕಿ.ಮೀ ದೂರವನ್ನು ಕ್ರಮಿಸಿದೆ. ಈ ನೌಕೆ 2018, ಫೆಬ್ರುವರಿ 20 ತನ್ನ ಕಾರ್ಯ ಸ್ಥಗಿತಗೊಳಿಸಿ ಗುರುಗ್ರಹಕ್ಕೆ ಅಪ್ಪಳಿಸಿ ನೌಕೆ ಧ್ವಂಸವಾಗಲಿದೆ. ಈ ಯೋಜನೆಗೆ ನಾಸಾ ಸುಮಾರು ರೂ 7480 ಕೋಟಿಯನ್ನು ವ್ಯಯಿಸಲಿದೆ.

ಜುನೊದ ಉದ್ದೇಶವೇನು?

ಜುನೊ ನೌಕೆಯು 20 ತಿಂಗಳು ಕಾಲ ಬಾಹ್ಯಕಾಶದಲ್ಲಿ ಕಾರ್ಯ ನಿರ್ವಹಿಸಲಿದೆ. ಗುರುಗ್ರಹದಿಂದ 4,100 ಕಿ.ಮೀ ಎತ್ತರದಲ್ಲಿ ಬುಗುರಿಯಂತೆ ತಿರುಗುತ್ತ 37 ಸಲ ಪ್ರದಕ್ಷಿಣೆ ಬರಲಿದೆ. ಗುರುಗ್ರಹದ ಗರ್ಭವನ್ನು ಆಳವಾಗಿ ಅಧ್ಯಯನ ಮಾಡುವುದು, ಗ್ರಹದ ವಾತಾವರಣದಲ್ಲಿ ನೀರು ಮತ್ತು ಅಮೋನಿಯಾ ಪ್ರಮಾಣ ಅಳೆಯುವುದು, ಗುರು ಗ್ರಹದ ಕಾಂತೀಯ ವಿಶ್ಲೇಷಣೆ ಮಾಡುವುದು ಈ ನೌಕೆಯ ಉದ್ದೇಶ.

ವಿಶ್ವದ ಬೃಹತ್ ರೇಡಿಯೋ ಟೆಲಿಸ್ಕೋಪ್ ನಿರ್ಮಿಸಿದ ಚೀನಾ

fast_upಅನ್ಯಗ್ರಹ ಜೀವಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಚೀನಾ ದೇಶ ವಿಶ್ವದ ಬೃಹತ್ ರೆಡಿಯೋ ಟೆಲಿಸ್ಕೋಪ್ಅನ್ನು ನಿರ್ಮಾಣ ಮಾಡಿದೆ. ಈ ರೇಡಿಯೋ ಟೆಲಿಸ್ಕೋಪ್ ಗೆ ಫಾಸ್ಟ್ (FAST) ಎಂದು ಹೆಸರಿಡಲಾಗಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ಟೆಲಿಸ್ಕೋಪ್ ತನ್ನ ಕಾರ್ಯವನ್ನು ಆರಂಭಿಸಲಿದೆ ಎಂದು ವರದಿಯಾಗಿದೆ.

  • ಚೀನಾದ ನೈಋತ್ಯ ಭಾಗದಲ್ಲಿರುವ ಗುಹಿಜುಹೊ ಪ್ರಾಂತ್ಯದಲ್ಲಿ ಈ ಟೆಲಿಸ್ಕೋಪ್ ನಿರ್ಮಾಣ ಮಾಡಲಾಗಿದೆ. ಈ ಟೆಲಿಸ್ಕೋಪ್ ನಿರ್ಮಾಣಕ್ಕೆ ಒಟ್ಟು 185 ಬಿಲಿಯನ್ ಡಾಲರ್ ಹಣವನ್ನು ಖರ್ಚು ಮಾಡಲಾಗಿದೆ.
  • ಡಿಶ್ ಆಕೃತಿ ಹೋಲುವ ಈ ಬೃಹತ್ ಟೆಲಿಸ್ಕೋಪ್ 4500 ಟೆಲಿಸ್ಕೋಪ್ ಫಲಕಗಳನ್ನು ಹೊಂದಿದೆ. ಒಂದೊಂದು ಟೆಲಿಸ್ಕೋಪ್ 11 ಮೀಟರ್ ಎತ್ತರವಿದೆ. ಅರ್ಧ ಚಂದ್ರಾಕೃತಿಯಲ್ಲಿ ವಿನ್ಯಾಸ ಮಾಡಿರುವುದರಿಂದ ರೇಡಿಯೋ ಸಂಕೇತಗಳು ಸುಲಭವಾಗಿ ಲಭ್ಯವಾಗಲಿವೆ ಎಂದು ಚೀನಾ ವಿಜ್ಞಾನಿಗಳು ತಿಳಿಸಿದ್ದಾರೆ.
  • ಅನ್ಯ ಗ್ರಹಗಳಲ್ಲಿ ಉಂಟಾಗುವ ರೆಡಿಯೋ ಸಂಕೇತಗಳನ್ನು ಆಕರ್ಷಿಸಿ ಅವುಗಳನ್ನು ಎರಡು ಅಥವಾ ಮೂರು ಬಾರಿ ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಈ ಟೆಲಿಸ್ಕೋಪ್ ಹೊಂದಿದೆ. ಅನ್ಯ ಗ್ರಹ ಜೀವಿಗಳನ್ನು ಮಾತ್ರವಲ್ಲದೆ ಕೋಟ್ಯಂತರ ಜ್ಯೋತಿರ್ ವರ್ಷಗಳ ದೂರದಲ್ಲಿರುವ ಗ್ಯಾಲಕ್ಸಿಗಳು, ಗ್ರಹಗಳು, ನಕ್ಷತ್ರಗಳು, ಧೂಮಕೇತುಗಳನ್ನು ಪತ್ತೆ ಮಾಡಲು ಈ ಟೆಲಿಸ್ಕೋಪ್ ವಿಜ್ಞಾನಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.