ಕರ್ನಾಟಕದ ಇತಿಹಾಸ

ಕರ್ನಾಟಕದ ಇತಿಹಾಸದ ದಾಖಲೆ ಸುಮಾರು ಎರಡು ಸಾವಿರ ವರ್ಷಕ್ಕೂ ಹೆಚ್ಚಿನದ್ದಾಗಿದೆ. ಹಲವಾರು ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕದಲ್ಲಿ ಆಳಿ ಇದರ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಇತರೆ ಭಾಗಗಳಲ್ಲೂ ಕಂಡುಬರುತ್ತದೆ, ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒರಿಸ್ಸಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿಯ ಚಾಲುಕ್ಯರು, ದೇವಗಿರಿಯ ಯಾದವ ವಂಶದವರು ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದವರು ಎಂದು ಕಂಡುಬರುತ್ತದೆ.

ಕರ್ನಾಟಕ ರಾಜ್ಯವು ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳ ಪೈಕಿ ಒಂದಾಗಿದೆ. 1973 ಕ್ಕೂ ಮೊದಲು ಕರ್ನಾಟಕವನ್ನು  “ಮೈಸೂರು ರಾಜ್ಯ” ಎಂದು ಕರೆಯುತ್ತಿದ್ದರು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದಾಗಿದೆ (1950 ರಲ್ಲಿ). 1956 ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಏಕೀಕರಣಗೊಳಿಸಲಾಯಿಯತು. ಕರ್ನಾಟಕ ಎಂಬುದು “ಕರು+ನಾಡು” ಎಂಬುದರಿಂದ ರೂಪುಗೊಂಡಿದೆ. ಕರುನಾಡು ಎಂದರೆ “ಎತ್ತರದ ಪ್ರದೇಶ” ಎಂದು ಅರ್ಥ. ಕರ್ನಾಟಕ ರಾಜ್ಯವು ಸಮುದ್ರ ಮಟ್ಟದಿಂದ ಸರಾಸರಿ ಎತ್ತರ 1500 ಅಡಿ ಇದ್ದು,  ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದಾಗಿದೆ.

ಕರ್ನಾಟಕ ರಾಜ್ಯಕ್ಕೆ ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ವಾಯವ್ಯದಲ್ಲಿ ಗೋವ, ಉತ್ತರದಲ್ಲಿ ಮಹಾರಾಷ್ಟ್ರ, ಪೂರ್ವದಲ್ಲಿ ಆಂಧ್ರ ಪ್ರದೇಶ, ಆಗ್ನೇಯದಲ್ಲಿ ತಮಿಳುನಾಡು, ನೈಋತ್ಯದಲ್ಲಿ ಕೇರಳ ರಾಜ್ಯವು ಸುತ್ತುವರಿಯಲ್ಪಟ್ಟಿದೆ. 2011 ರ ಜನಗಣತಿಯಂತೆ, 6 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಹತ್ತು ಭಾರತೀಯ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಮಾತ್ರ 60 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರವಾಗಿದೆ. ಇತರ ಪ್ರಮುಖ ನಗರಗಳೆಂದರೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ. ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಲ್ಲಿ ಆಶ್ರಯ ಪಡೆದ ಅನೇಕ ತತ್ವಜ್ಞಾನಿಗಳಿಂದ ಮತ್ತು ಕವಿಗಳಿಂದ ಆರಂಭಿಸಲ್ಪಟ್ಟ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯ ಚಳವಳಿಗಳು ಇಂದಿಗೂ ಪ್ರಸ್ತುತವಾಗಿವೆ. ಕನ್ನಡ ಭಾಷೆ ಭಾರತದಲ್ಲೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ . ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.

ಚರಿತ್ರೆ

ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕೃತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವುದಾಗಿ ತಿಳಿದು ಬಂದಿದೆ ಆದ್ದರಿಂದ ವಿದ್ವಾಂಸರು ಕ್ರಿ.ಪೂ 3000 ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ. ಕ್ರಿ.ಪೂ.300 ಕ್ಕಿಂತ ಮೊದಲು ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು, ನಂದ ಸಾಮ್ರಾಜ್ಯದ ಭಾಗವಾಗಿದ್ದಿತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು. ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮದ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಕದಂಬ ಸಾಮ್ರಾಜ್ಯವು ಮಯೂರ ವರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗೂ ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು  ಗಂಗರ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು.  ಹಲ್ಮಿಡಿ ಶಾಸನ ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯಗಳು ಇದಕ್ಕೆ ಸಾಕ್ಷಿಯಾಗಿವೆ. ಈ ಸಾಮ್ರಾಜ್ಯಗಳ ನಂತರ ದಕ್ಷಿಣವನ್ನು ಬಹುಪಾಲು ಆಳಿದ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪಕ್ಕೆ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಇದು 12 ನೇ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು

ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಕರ್ನಾಟಕದಲ್ಲಿ ಹೊಯ್ಸಳರು ಪ್ರಬಲರಾಗಿದ್ದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯ ಸ್ಥಿತಿಯನ್ನು ತಲುಪಿದವು. ಇದು ಕನ್ನಡದ ವಿಶಿಷ್ಟ ಕಾವ್ಯ ಶೈಲಿಗಳ ಉಗಮಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇವಸ್ಥಾನಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯವು ಆಂಧ್ರ ಪ್ರದೇಶ ಮತ್ತು ತಮಿಳು ನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿಕೊಂಡಿತ್ತು. 14 ನೇ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.

1565 ರಲ್ಲಿ ತಾಳಿಕೋಟೆ ಯುದ್ಧದಲ್ಲಿ ದಖ್ಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರವರ್ಧಮಾನಕ್ಕೆ ಬಂದು, ದಖ್ಖನ್ ಪ್ರದೇಶವನ್ನು ಆಳುತ್ತಿದ್ದರು. 17ನೇ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗು ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರ್ಸನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು. ತದನಂತರದ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಮೈಸೂರಿನ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ “ರಾಜಪ್ರಮುಖ”ರಾದರು. 1975 ರವರೆಗೆ ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ಸಂದಾಯವಾಗುತ್ತಿತ್ತು ಹಾಗೂ ಇಂದಿಗೂ  ಈ ಮನೆತನದ ಸದಸ್ಯರು ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.

ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ 1, 1956 ರಂದು ರಾಜ್ಯ ಪುನರ್ವಿಂಗಡನೆ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲಿನ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ “ವಿಶಾಲ ಮೈಸೂರು” ರಾಜ್ಯ ಅಸ್ತಿತ್ವಕ್ಕೆ ಬಂದಿತು . ನವೆಂಬರ್ 1, 1973 ರಲ್ಲಿ ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಭೌಗೋಳಿಕ ಮಾಹಿತಿ

ಕರ್ನಾಟಕ ರಾಜ್ಯವು 11’ 35’ ಉತ್ತರ ಮತ್ತು 18’ 30’ ಉತ್ತರ ಅಕ್ಷಾಂಶಕ್ಕೂ, 74’5’ ಪೂರ್ವ ಮತ್ತು 78’ 35’ ಪೂರ್ವ ರೇಖಾಂಶದ ಪರಿಧಿಯೊಳಗೆ ಇದೆ. ರಾಜ್ಯ ಮರುವಿಂಗಡನಾ ಕಾಯ್ದೆಯನ್ವಯ ನವೆಂಬರ್ 1 , 1956 ರಂದು ಮೈಸೂರು ರಾಜ್ಯ ಉದಯವಾಯಿತು, ನಂತರ 1973 ರಲ್ಲಿ “ಕರ್ನಾಟಕ” ಎಂದು ಮರು ನಾಮಕರಣ ಮಾಡಲಾಯಿತು. ಕರ್ನಾಟಕ ರಾಜ್ಯವು ಪೂರ್ವಕ್ಕೆ ಆಂಧ್ರಪ್ರದೇಶ, ಪಶ್ಚಿಮಕ್ಕೆ ಅರೆಬಿಯನ್ ಸಮುದ್ರ, ಉತ್ತರದಲ್ಲಿ ಮಹಾರಾಷ್ಟ್ರ, ವಾಯುವ್ಯದಲ್ಲಿ ಗೋವಾ, ಆಗ್ನೇಯದಲ್ಲಿ ತಮಿಳುನಾಡು ಮತ್ತು ನೈರುತ್ಯದಲ್ಲಿ ಕೇರಳ ರಾಜ್ಯಗಳು ಸುತ್ತುವರಿದಿವೆ. ರಾಜ್ಯದ ಒಟ್ಟು ವಿಸ್ತಾರ ಪೂರ್ವದಿಂದ ಪಶ್ಚಿಮಕ್ಕೆ 400 ಕಿ.ಮೀ., ಮತ್ತು ಉತ್ತರದಿಂದ ದಕ್ಷಿಣಕ್ಕೆ 750 ಕಿ.ಮೀ., ಗಳಿದೆ.

ಕರ್ನಾಟಕ ರಾಜ್ಯವು ಒಟ್ಟಾರೆ 74,122 ಚ.ಮೈಲಿಗಳಷ್ಟು ವಿಸ್ತೀರ್ಣ ಹೊಂದಿದೆ ಅಂದರೆ ಭಾರತ ದೇಶದ 5.83% ರಷ್ಟು    ಭೌಗೋಳಿಕ ವ್ಯಾಪ್ತಿ ಹೊಂದಿದೆ. ಭೌಗೋಳಿಕ ವಿಸ್ತಾರದಲ್ಲಿ ಭಾರತದಲ್ಲಿ ಎಂಟನೇ ಅತಿ ದೊಡ್ಡ ಮತ್ತು ಜನಸಂಖ್ಯೆಯಲ್ಲಿ ಒಂಬತ್ತನೇ ಅತಿ ದೊಡ್ಡ ರಾಜ್ಯವಾಗಿದೆ. ಸದ್ಯ ರಾಜ್ಯದಲ್ಲಿ 30 ಜಿಲ್ಲೆಗಳಿವೆ:-

ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾಂ, ಬಳ್ಳಾರಿ, ಬೀದರ, ಬಿಜಾಪುರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಧಾರವಾಡ, ದಾವಣಗೆರೆ, ಗದಗ, ಗುಲ್ಬರ್ಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ ಮತ್ತು ಯಾದಗಿರ.

ಜನಸಂಖ್ಯೆಯನ್ವಯ ರಾಜ್ಯದ ಆರು ಪ್ರಮುಖ ನಗರಗಳೆಂದರೆ:- ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಬೆಳಗಾಂ ಮತ್ತು ಮಂಗಳೂರು.  ಹಾಗೆಯೇ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆಗಳೆಂದರೆ-ಗದಗ, ಚಾಮರಾಜನಗರ ಮತ್ತು ಕೊಡಗು.