ಇಸ್ರೋದ ಮಂಗಳ ಯಾನಕ್ಕೆ  1000 ದಿನದ ಸಂಭ್ರಮ

ಇಸ್ರೋದ “ಮಾರ್ಸ್ ಆರ್ಬಿಟರ್ ಮಿಷನ್ (MOM)” 1000 ಭೂಮಿಯ ದಿನಗಳನ್ನು ಕಕ್ಷೆಯಲ್ಲಿ ಪೂರ್ಣಗೊಳಿಸಿದೆ. ತನ್ನ ನಿಗದಿತ ಜೀವಿತಾವಧಿಗಿಂತ 5 ಪಟ್ಟು ಹೆಚ್ಚು ಕಾಲ ಕಕ್ಷೆಯಲ್ಲಿ ಇರುವ ಮೂಲಕ ಮಂಗಳಯಾನ ಇತಿಹಾಸ ಸೃಷ್ಟಿಸಿದೆ. MOM ಪ್ರಸ್ತುತ 388 ಭಾರಿ ಮಂಗಳದ  ಕಕ್ಷೆಯನ್ನು ಪರಿಭ್ರಮಿಸಿದೆ ಮತ್ತು 715 ಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ವಿಜ್ಞಾನಿಗಳ ಪ್ರಕಾರ, MOM ಉತ್ತಮ ಕಾರ್ಯನಿರ್ವಹಣೆ ಸ್ಥಿತಿಯಲ್ಲಿದ್ದು ನಿಧಾನವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಭಾರತವು ಮಂಗಳಯಾನ 2.0 ಮತ್ತು 2020ರ ನಂತರ ಶುಕ್ರ ಗ್ರಹಕ್ಕೆ ಹೊಸ ಮಿಶನ್ ಕಳುಹಿಸಲು ಯೋಜಿಸಿದೆ.

MOM:

 2013ರ ನವೆಂಬರ್ ತಿಂಗಳಲ್ಲಿ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಉಡಾವಣೆಗೊಂಡಿದ್ದ ನೌಕೆ, 2014ರ ಸೆಪ್ಟೆಂಬರ್ 24ರಂದು ಮಂಗಳ ಗ್ರಹದ ಕಕ್ಷೆಯನ್ನು ಸೇರಿತ್ತು. ಅಂದಿನಿಂದ ಇಲ್ಲಿಯವರೆಗೂ ಮಂಗಳ ಗ್ರಹದ ವಿವಿಧ ಸುಮಾರು 715 ಚಿತ್ರಗಳನ್ನು ಮಂಗಳಯಾನ ನೌಕೆ ಭೂಮಿಗೆ ಕಳುಹಿಸಿದೆ. ಭೂಮಿಯಿಂದ 21 ಕೋಟಿ ಕಿ.ಮೀ. ದೂರದಲ್ಲಿರುವ ಮಂಗಳ ಗ್ರಹದ ಮೇಲ್ಮೈ ವಾತಾವರಣ, ಮಿಥೇನ್ ಅನಿಲದ ಕುರುಹು, ಜೀವಿಗಳ ವಾಸದ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿದೆ.

ಇತರ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂದರೆ 450 ಕೋಟಿ ರುಪಾಯಿಯಲ್ಲಿ ಮಂಗಳಯಾನ ನೌಕೆಯನ್ನು ನಿರ್ಮಿಸಿತ್ತು. ಮಂಗಳಯಾನ ನೌಕೆ ಮಂಗಳನ ಕಕ್ಷೆ ಸೇರಿ ಸಾವಿರ ದಿನ ಪೂರ್ಣಗೊಂಡಿರುವುದು ಇಸ್ರೋ ವಿಜ್ಞಾನಿಗಳಲ್ಲಿ ಹರ್ಷ ಮೂಡಿಸಿದೆ.

F-16 ಯುದ್ದ ವಿಮಾನ ನಿರ್ಮಾಣಕ್ಕೆ ಲಾಕ್ಹೀಡ್ ಮತ್ತು ಟಾಟಾ ನಡುವೆ ಒಪ್ಪಂದ

ಲಾಕ್ಹೀಡ್ ಮಾರ್ಟಿನ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಭಾರತದಲ್ಲಿ ಎಫ್ -16 ಫೈಟರ್ ವಿಮಾನಗಳನ್ನು ಉತ್ಪಾದಿಸಲು ಒಪ್ಪಂದಕ್ಕೆ ಸಹಿ ಮಾಡಿವೆ. ಪ್ಯಾರಿಸ್ ಏರ್ ಶೋನಲ್ಲಿ ಎರಡು ಕಂಪನಿಗಳು ತಮ್ಮ ಒಪ್ಪಂದವನ್ನು ಘೋಷಿಸಿವೆ. ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ಟಾಟಾದೊಂದಿಗೆ ಜಂಟಿಯಾಗಿ ತೊಡಗಿಸಿಕೊಳ್ಳುವ ಮೂಲಕ ಭಾರತೀಯ ಸೇನೆಯಿಂದ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನು ಎದುರು ನೋಡುತ್ತಿದೆ. ಲಾಕ್ಹೀಡ್ ಮಾರ್ಟಿನ್ ಅತಿದೊಡ್ಡ ಅಂತರಿಕ್ಷಯಾನ, ರಕ್ಷಣಾ, ಭದ್ರತೆ, ಮತ್ತು ಸುಧಾರಿತ ತಂತ್ರಜ್ಞಾನದ ಸಂಸ್ಥೆ. ಇದರ ಪ್ರಧಾನ ಕಚೇರಿ ಮೇರಿಲ್ಯಾಂಡ್ ನಲ್ಲಿದೆ. 1995 ರಲ್ಲಿ ಲಾಕ್ಹೀಡ್ ಕಾರ್ಪೊರೇಶನ್ ಮತ್ತು ಮಾರ್ಟಿನ್ ಮೇರಿಯೆಟ ವಿಲೀನಗೊಂಡ ನಂತರ ಕಂಪೆನಿಯು ರೂಪುಗೊಂಡಿತು.

ಹಿನ್ನಲೆ:

ಭಾರತದ ವಾಯುಪಡೆಯು ಸೋವಿಯತ್-ಯುಗದ ಯುದ್ದ ವಿಮಾನಗಳನ್ನು ಬದಲಿಸುವ ಅವಶ್ಯಕತೆ ಇರುವ ಕಾರಣ ನೂರಾರು ಯುದ್ದ ವಿಮಾನಗಳನ್ನು ಖರೀದಿದೆ ಎದುರು ನೋಡುತ್ತಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್-ಇನ್-ಇಂಡಿಯಾ ಉಪಕ್ರಮದಡಿ ವಿದೇಶಿ ಸರಬರಾಜುದಾರರು ಸ್ಥಳೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಏರ್ಪಡಿಸುವುದು ಮತ್ತು ಭಾರತದಲ್ಲಿ ದೇಶೀಯ ಕೈಗಾರಿಕಾ ಮೂಲವನ್ನು ನಿರ್ಮಿಸುವ ಅಗತ್ಯವಿದೆ. ಇದು ಸಂಪೂರ್ಣ ಆಮದುಗಳನ್ನು ಕಡಿತಗೊಳಿಸುವ ಉದ್ದೇಶವನ್ನು ಹೊಂದಿದೆ.

ಎಫ್ -16 ತಯಾರಿಕೆ ಘಟಕ ಸ್ಥಾಪನೆಯಿಂದ ಭಾರತದಲ್ಲಿ ಹೊಸ ಉತ್ಪಾದನಾ ಉದ್ಯೋಗಗಳನ್ನು ಸೃಷ್ಟಿಯಾಗಲಿವೆ ಮತ್ತು ವಿಶ್ವದಲ್ಲೇ ವ್ಯಾಪಕ ಯುದ್ದ ವಿಮಾನ ಪೂರೈಕೆ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ.

Environmental Impact Survey: ಒಂದು ನೋಟ

ಪ್ರತಿ ವ್ಯಕ್ತಿಯಿಂದ ಪರಿಸರದ ಮೇಲಾಗುವ ಪ್ರಭಾವ ಸಮೀಕ್ಷೆಯಲ್ಲಿ ಭಾರತವು 102 ರಾಷ್ಟ್ರಗಳಲ್ಲಿ 75 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಶ್ರೇಯಾಂಕವನ್ನು ಯುಕೆ ಮೂಲದ ಹಣಕಾಸು ಸೇವೆಗಳ ವೆಬ್ಸೈಟ್ “ಮನಿಸೂಪರ್ ಮಾರ್ಕೆಟ್” ಬಿಡುಗಡೆ ಮಾಡಿದೆ. ಇಂಧನ ಬಳಕೆ, ವಾಯುಮಾಲಿನ್ಯ, ತ್ಯಾಜ್ಯ ಉತ್ಪಾದನೆ, ನವೀಕರಿಸಲಾಗದ ಶಕ್ತಿಯ ಮೇಲೆ ಅವಲಂಬನೆ, ತಲಾವಾರು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ, ತ್ಯಾಜ್ಯನೀರಿನ ಸಂಸ್ಕರಣ ಸಾಮರ್ಥ್ಯ, ಪುರಸಭೆಯ ಘನ ತ್ಯಾಜ್ಯವನ್ನು ಉತ್ಪಾದಿಸುವ ಮೂಲಕ ನಾಗರಿಕರು ಪರಿಸರದ ಮೇಲೆ ಬೀರುವ ಪ್ರಭಾವ ಈ ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಶ್ರೇಯಾಂಕವನ್ನು ಸಿದ್ದಪಡಿಸಲಾಗಿದೆ. ಈ ಮೇಲಿನ ಮಾನದಂಡಗಳಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ, ಪುರಸಭೆ ಘನ ತ್ಯಾಜ್ಯ ಹಾಗೂ ಇಂಧನ ಬಳಕೆಗೆ ಪ್ರಮುಖವಾಗಿ ಓತ್ತು ನೀಡಲಾಗಿದೆ.

ಪ್ರಮುಖಾಂಶಗಳು:

ಟಾಪ್ 10 ರಾಷ್ಟ್ರಗಳು: ಮೊಜಾಂಬಿಕ್ (1), ಇಥಿಯೋಪಿಯಾ (2 ನೇ ಸ್ಥಾನ), ಜಾಂಬಿಯಾ (3 ನೇ ಸ್ಥಾನ), ಲಾಟ್ವಿಯಾ (4), ಕೀನ್ಯಾ (5), ಅಲ್ಬೇನಿಯಾ (6 ನೇ ಸ್ಥಾನ), ಘಾನಾ (7 ನೇ ಸ್ಥಾನ), ತಜಾಕಿಸ್ಥಾನ್ (8 ನೇ ಸ್ಥಾನ), ನೇಪಾಳ (9 ನೇ ಸ್ಥಾನ), ಕೊಲಂಬಿಯಾ (10 ನೇ ಸ್ಥಾನ).

ಕಳಪೆ ಸಾಧನೆ 10 ರಾಷ್ಟ್ರಗಳು: ಟ್ರಿನಿಡಾಡ್ ಮತ್ತು ಟೊಬಾಗೊ (102), ಯುನೈಟೆಡ್ ಸ್ಟೇಟ್ಸ್ (101), ಶ್ರೀಲಂಕಾ (100 ನೇ), ಐರ್ಲೆಂಡ್ (99 ನೇ), ಕೆನಡಾ (98 ನೇ), ಚೀನಾ (97 ನೇ ಸ್ಥಾನ), ಆಸ್ಟ್ರೇಲಿಯಾ (96 ನೇ ಸ್ಥಾನ), ದಕ್ಷಿಣ ಆಫ್ರಿಕಾ (95 ನೇ ಸ್ಥಾನ), ಸೈಪ್ರಸ್ (94 ನೇ ಸ್ಥಾನ) ಮಲೇಷಿಯಾ (93 ನೇ ಸ್ಥಾನ).

ಮೊಜಾಂಬಿಕ್ ನವೀಕರಿಸಬಹುದಾದ ಮೂಲಗಳಿಂದ ಬಹುತೇಕ ಇಂಧನ ಪೂರೈಕೆ ಮಾಡುತ್ತಿರುವ ಕಾರಣ ಈ ಪಟ್ಟಿಯ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ ಭಾರತವು 75 ನೇ ಸ್ಥಾನದಲ್ಲಿದೆ, ಏಕೆಂದರೆ ದೇಶದ ಒಟ್ಟಾರೆ ಇಂಧನ ಉತ್ಪಾದನೆ ಪೈಕಿ ನವೀಕರಿಸಬಹುದಾದ ಇಂಧನ ಮೂಲಗಳು ಕೇವಲ 15.2% ರಷ್ಟು ಮಾತ್ರ. ಅಮೆರಿಕದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ತಲಾ 17 ಟನ್ ಇರುವುದರಿಂದ ಯುಎಸ್ 101 ನೇ ಸ್ಥಾನದಲ್ಲಿರುವ ಮೂಲಕ ಪಟ್ಟಿಯಲ್ಲಿ ಕೊನೆಯ ಎರಡನೇ ಸ್ಥಾನದಲ್ಲಿದೆ. ಇದಲ್ಲದೆ, ಪ್ರತಿ ವ್ಯಕ್ತಿಗೆ 2.58 ಕೆಜಿ ಮುನ್ಸಿಪಲ್ ಘನ ತ್ಯಾಜ್ಯವನ್ನು ಉತ್ಪಾದನೆಯಾಗುತ್ತಿದೆ ಹಾಗೂ ಇಂಧನ ಬಳಕೆ ಪ್ರತಿ ವ್ಯಕ್ತಿಗೆ 312.79 ಬಿಟಿಯು ರಷ್ಟಿದೆ.

ಭಾರತದಲ್ಲಿ ಪ್ರತಿವರ್ಷಕ್ಕೆ 1.7 ಟನ್ ಇಂಗಾಲದ ಡೈಆಕ್ಸೈಡ್ (1990 ಮತ್ತು 2011 ರ ನಡುವೆ) ಮತ್ತು ಪ್ರತಿ ದಿನ 0.34 ಕೆಜಿ ಮುನ್ಸಿಪಲ್ ಘನ ತ್ಯಾಜ್ಯವನ್ನು ಉತ್ಪಾದಿಸುತ್ತಿದೆ. ದೇಶದ ಇಂಧನ ಬಳಕೆ 19.75 ಬಿಟಿಯು (ಬ್ರಿಟೀಷ್ ಥರ್ಮಲ್ ಯುನಿಟ್). ಭಾರತವು ನವೀಕರಿಸಬಹುದಾದ ಶಕ್ತಿ (15.2%) ನ್ನು ಕಡಿಮೆ ಅವಲಂಬಿಸಿರುವುದರಿಂದ ಕಳಪೆ ಸ್ಥಾನದಲ್ಲಿದೆ. ಟ್ರಿನಿಡಾಡ್ ಮತ್ತು ಟೊಬಾಗೋವು ಯಾವುದೇ ಹಸಿರು ಶಕ್ತಿ ಮೂಲಗಳ ಮೇಲೆ ಅವಲಂಬಿತವಾಗಿರುವುದರಿಂದ ಕೊನೆಯ ಸ್ಥಾನದಲ್ಲಿದೆ.

ಚೂರು ಪಾರು:

  • ಹೆಲ್ಮೆಟ್ ಕೋಲ್ ನಿಧನ: ಜರ್ಮನಿಯ ಮಾಜಿ ಚಾನ್ಸಲರ್‌ ಹೆಲ್ಮಟ್‌ ಕೋಲ್‌ (87) ಮರಣ ಹೊಂದಿದ್ದಾರೆ. ಶೀತಲ ಸಮರದಿಂದಾಗಿ ವಿಭಜನೆಗೊಂಡಿದ್ದ ಜರ್ಮನಿಯನ್ನು ಒಗ್ಗೂಡಿಸುವಲ್ಲಿ ಕೋಲ್‌ ಪ್ರಮುಖ ಪಾತ್ರ ವಹಿಸಿದ್ದರು. 1982ರಿಂದ 16 ವರ್ಷಗಳ ಕಾಲ ಅವರು ಛಾನ್ಸಲರ್‌ ಆಗಿದ್ದರು. 1989ರಲ್ಲಿ ಬರ್ಲಿನ್‌ ಗೋಡೆ ನೆಲಸಮದ ಬಳಿಕ, ಯುರೋಪ್‌ನ ಏಕೀಕರಣಕ್ಕಾಗಿ ಶ್ರಮಿಸಿದ ಹೆಗ್ಗಳಿಕೆಯನ್ನು ಕೋಲ್‌ ಹೊಂದಿದ್ದಾರೆ.
  • ವೈವಿಡ್ ಸಿಡ್ನಿ (Vivid Sydney) ಗಿನ್ನಿಸ್ ದಾಖಲೆ: ಪ್ರಪಂಚದ ಅತಿ ದೊಡ್ಡ ಬೆಳಕಿನ, ಸಂಗೀತ ಮತ್ತು ವಿಚಾರಗಳ ಉತ್ಸವ, ವೈವಿಡ್ ಸಿಡ್ನಿ ಗಿನ್ನೆಸ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಗೆ ಪ್ರವೇಶಿಸಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ವಿವಿಡ್ ಸಿಡ್ನಿ ಇನ್ಸ್ಟಿಟ್ಯೂಟ್ ಡ್ರೀಮ್ಸ್ ಸ್ಕೇಪ್ ಅನ್ನು ‘ಲಾರ್ಜೆಸ್ಟ್ ಇಂಟರಾಕ್ಟಿವ್ ಲೈಟ್ ಪ್ರದರ್ಶನ’ ಗಾಗಿ ನೀಡಿದೆ.
  • ಕಿಡಿಂಬಿ ಶ್ರೀಕಾಂತ್ ಮಡಿಲಿಗೆ ಇಂಡೋನೇಷಿಯಾ ಓಪನ್ ಕಿರೀಟ: ಜಕಾರ್ತಾದಲ್ಲಿ ನಡೆದ ಇಂಡೋನೇಷ್ಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಸರಣಿಯಲ್ಲಿ ಕಿಡಿಂಬಿ ಶ್ರೀಕಾಂತ್ ಅವರು ಜಪಾನಿನ ಕಜುಮಾಸಾ ಸಕೈ ಅವರನ್ನು 21-11, 21-19 ಸೆಟ್ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಶ್ರೀಕಾಂತ್ ಅವರು ಈಗ ವಿಶ್ವದ ನಂಬರ್ 22 ಸ್ಥಾನದಲ್ಲಿದ್ದಾರೆ. 2014 ಚೀನಾ ಓಪನ್ ಮತ್ತು 2015 ಇಂಡಿಯಾ ಓಪನ್ ನಂತರ ಶ್ರೀಕಾಂತ್ ಮೂರನೇ ಸೂಪರ್ ಸೀರೀಸ್ ಪ್ರಶಸ್ತಿಯನ್ನು ಪಡೆದಿದ್ದಾರೆ.
  • ಪಾಕಿಸ್ತಾನಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಪಿ: ಪಾಕಿಸ್ತಾನ ತಂಡವು ಮೊಟ್ಟಮೊದಲ ಚಾಂಪಿಯನ್ಸ್‌ ಟ್ರೋಫಿ ಜಯಿಸಿ ಸಂಭ್ರಮಿಸಿತು. ಕೆನಿಂಗ್ಟನ್ ಓವೆಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 180 ರನ್‌ಗಳಿಂದ ಸೋಲಿಸಿದ ಪಾಕ್ ತಂಡವು ಪ್ರಶಸ್ತಿ ಗೆದ್ದಿತು.

2 Thoughts to “ಪ್ರಚಲಿತ ವಿದ್ಯಮಾನಗಳು-ಜೂನ್,28,2017”

Leave a Comment

This site uses Akismet to reduce spam. Learn how your comment data is processed.