ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ ನಂ.1

ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಸ್ಟಾರ್ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 862 ರೇಟಿಂಗ್ ಪಾಯಿಂಟ್‌ ಗಳೊಂದಿಗೆ ವಿರಾಟ್‌ ಕೊಹ್ಲಿ ಏಕದಿನ ಬ್ಯಾಟ್ಸ್ ಮನ್‌ ಪಟ್ಟಿಯಲ್ಲಿ ಆಗ್ರಸ್ಥಾನಕ್ಕೇರಿದ್ದಾರೆ. ಇತರ ಆಟಗಾರರ ಪೈಕಿ ಶಿಖರ್ ಧವನ್ ಅವರು ಟಾಪ್ 10 ಸ್ಥಾನಕ್ಕೆ ಮರಳಿದ್ದಾರೆ. ಯುವರಾಜ್ ಸಿಂಗ್ ಅವರು ತಮ್ಮ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದ್ದು ಮತ್ತು ಪ್ರಸ್ತುತ 88 ನೇ ಸ್ಥಾನದಲ್ಲಿದ್ದಾರೆ.

ಪ್ರಥಮ ಸ್ಥಾನ: ವಿರಾಟ್ ಕೊಹ್ಲಿ

ಎರಡನೇ ಸ್ಥಾನ: ಡೇವಿಡ್ ವಾರ್ನರ್

ಮೂರನೇ ಸ್ಥಾನ: ಎಬಿ ಡಿ ವಿಲ್ಲಿಯರ್ಸ್

ನಾಲ್ಕನೇ ಸ್ಥಾನ: ಜೋ ರೂಟ್

ಐದನೇ ಸ್ಥಾನ: ಕೇನ್ ವಿಲಿಯಂಸನ್

ಬೌಲಿಂಗ್ ವಿಭಾಗ

 ಇನ್ನು ಬೌಲರ್ ಗಳ ಶ್ರೇಯಾಂಕದಲ್ಲಿ ಆಸೀಸ್ ವೇಗಿ ಹ್ಯಾಜಲ್ ವುಡ್ ನಂ.1ಸ್ಥಾನ ಅಲಂಕರಿಸಿದ್ದಾರೆ. ಭುವನೇಶ್ವರ ಕುಮಾರ್ 13 ಸ್ಥಾನಗಳನ್ನು ಹೆಚ್ಚಿಸಿಕೊಂಡು ಶ್ರೇಯಾಂಕದಲ್ಲಿ 23 ನೇ ಸ್ಥಾನದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರು ಕ್ರಮವಾಗಿ 20 ಮತ್ತು 29ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಪ್ರಥಮ ಸ್ಥಾನ: ಜೋಶ್ ಹ್ಯಾಜಲ್ ವುಡ್

ಎರಡನೇ ಸ್ಥಾನ: ಇಮ್ರಾನ್ ತಹೀರ್

ಮೂರನೇ ಸ್ಥಾನ: ಮೈಕೆಲ್ ಸ್ಟಾರ್ಕ್

ನಾಲ್ಕನೇ ಸ್ಥಾನ: ಕಗಿಸೊ ರಬಡ

ಐದನೇ ಸ್ಥಾನ: ಸುನೀಲ್ ನರೈನ್

AUSINDEX-17 ನಲ್ಲಿ ಭಾಗವಹಿಸಲು ಆಸ್ಟ್ರೇಲಿಯಾ ತಲುಪಿದ ಭಾರತದ ಯುದ್ದನೌಕೆಗಳು

ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿಯಲ್ಲಿ ಒಂದು ವಾರ ಕಾಲ ನಡೆಯಲಿರುವ ನೌಕಾ ಸಮರಭ್ಯಾಸದಲ್ಲಿ ಭಾಗವಹಿಸಲು ಭಾರತೀಯ ಯುದ್ಧನೌಕೆಗಳು ಆಸ್ಟ್ರೇಲಿಯಾದ ಬಂದರು ನಗರವಾದ ಫ್ರೀಮ್ಯಾಂಟಲ್ಗೆ ತಲುಪಿವೆ.

ಪ್ರಮುಖಾಂಶಗಳು:

  • ಆಸ್ಟ್ರೇಲಿಯಾ-ಭಾರತ ನಡುವಿನ ನೌಕ ಸಮರಭ್ಯಾಸ (AUSINDEX) ವನ್ನು ಮೊದಲ ಬಾರಿಗೆ ಸೆಪ್ಟೆಂಬರ್ 2015ರಲ್ಲಿ ಭಾರತದ ಪೂರ್ವ ಕರಾವಳಿಯಲ್ಲಿ ನಡೆಸಲಾಯಿತು. AUSINDEX-17 ಭಾರತೀಯ ನೌಕಾಪಡೆ ಮತ್ತು ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ನಡುವಿನ ಎರಡನೆಯ ಒಟ್ಟಾರೆ ದ್ವಿಪಕ್ಷೀಯ ಸಮರಭ್ಯಾಸ ಆಗಿದೆ.
  • AUSINDEX-17 ದ್ವಿಪಕ್ಷೀಯ ಅಭ್ಯಾಸವು ಎರಡು ನೌಕಾಪಡೆಗಳ ನಡುವಿನ ಪರಸ್ಪರ ಕಾರ್ಯಾಚರಣೆಯನ್ನು ಮತ್ತು ವೃತ್ತಿಪರತೆಯನ್ನು ಹೆಚ್ಚಿಸಲಿದೆ. ಈ ವರ್ಷ ಭಾರತ-ನೇತೃತ್ವದ ಮಲಬಾರ್ ನೌಕಾಪಡೆಯ ವ್ಯಾಯಾಮದಲ್ಲಿ ಪಾಲ್ಗೊಳ್ಳಲು ಆಸ್ಟ್ರೇಲಿಯದ ಕೋರಿಕೆಯನ್ನು ಸರಿಹೊಂದುವಂತೆ ಭಾರತವು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಳ್ಳದ ಕಾರಣ ರಾಜಕೀಯವಾಗಿ ಜಂಟಿ ಅಭ್ಯಾಸ ಮಹತ್ವದ ಪಾತ್ರವನ್ನು ವಹಿಸಲಿದೆ. ಮಲಬಾರ್ ನೌಕಾಪಡೆಯ ವ್ಯಾಯಾಮವು ಭಾರತ, ಜಪಾನ್, ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ನೌಕಾಪಡೆಗಳನ್ನು ಒಳಗೊಂಡಿದೆ.
  • ಭಾರತೀಯ ಯುದ್ಧನೌಕೆಗಳಾದ ಐಎನ್ಎಸ್ ಕಾಮೋರ್ಟಾ, ಐಎನ್ಎಸ್ ಶಿವಾಲಿಕ್ (ಭಾರತದಲ್ಲಿ ನಿರ್ಮಿಸಲಾದ ಮೊದಲ ಸ್ಟೆಲ್ತ್ ಯುದ್ಧನೌಕೆ), ಮತ್ತು ಐಎನ್ಎಸ್ ಜ್ಯೋತಿ, ಈ ವ್ಯಾಯಾಮದಲ್ಲಿ ಪಾಲ್ಗೊಳ್ಳಲಿವೆ. ವ್ಯಾಯಾಮದಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾದ ಯುದ್ಧನೌಕೆಗಳೆಂದರೆ ಕ್ಷಿಪಣಿ ಫ್ರಿಗೇಟ್ HMAS ನ್ಯುಕೆಸಲ್; ಡೀಸೆಲ್-ವಿದ್ಯುತ್ ಜಲಾಂತರ್ಗಾಮಿ HMAS ವಾಲರ್; ವಿಶೇಷ ಕಾರ್ಯಾಚರಣೆ ಘಟಕ, ನಾಲ್ಕು ಕ್ಲಿಯರೆನ್ಸ್ ಡೈವಿಂಗ್ ತಂಡ ಮತ್ತು ರಾಯಲ್ ಆಸ್ಟ್ರೇಲಿಯನ್ ಏರ್ ಫೋರ್ಸ್ನ ಪಿ 3 ಓರಿಯನ್ ಮೆರಿಟೈಮ್ ಗಸ್ತು ವಿಮಾನ.

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಜನರ ಸಂಚಾರ ಮೇಲಿನ ನಿಯಮ ರೂಪಿಸಲು ಸಮಿತಿ

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿರುವ ಜನರು ಮುಕ್ತವಾಗಿ ಸಂಚರಿಸುವ ಅನುಮತಿ ನಿಯಮಗಳನ್ನು ಪರಿಶೀಲನೆ ನಡೆಸಲು ಗೃಹ ವ್ಯವಹಾರ ಸಚಿವಾಲಯ ಪರಿಣಿತ ಸಮಿತಿಯನ್ನು ರಚಿಸಿದೆ. ಭಾರತೀಯ ಮತ್ತು ಮ್ಯಾನ್ಮಾರ್ ನಾಗರಿಕರಿಗೆ ಅಂತರರಾಷ್ಟ್ರೀಯ ಗಡಿಯ 16 ಕಿ.ಮೀ ವ್ಯಾಪ್ತಿಯಲ್ಲಿ ಮುಕ್ತ ಸಂಚಾರವನ್ನು ಅನುಮತಿಸಲಾಗಿದೆ. ಆದರೆ ಈ ನಿಯಮಗಳನ್ನು ಶಸ್ತ್ರಾಸ್ತ್ರಗಳು, ಔಷಧಗಳು ಮತ್ತು ನಕಲಿ ಭಾರತೀಯ ಕರೆನ್ಸಿಗಳನ್ನು ಕಳ್ಳಸಾಗಣೆ ಮಾಡಲು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ.

            ಮಯನ್ಮಾರ್ ಜೊತೆ ಗಡಿಯನ್ನು ಹಂಚಿಕೊಳ್ಳುವ ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಲಾದ ಸಭೆಯಲ್ಲಿ ಗೃಹ ಸಚಿವಾಲಯ ಸಮಿತಿಯನ್ನು ರಚಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಮಯನ್ಮಾರ್ ಗಡಿಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೇ ಮೊದಲ ಬಾರಿಗೆ ರಾಜ್ಯ ಸರಕಾರಗಳೊಂದಿಗೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಯಲ್ಲಿ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಕಿರೆನ್ ರಿಜಿಜು ಮತ್ತು ಅರುಣಾಚಲಪ್ರದೇಶ, ಮಣಿಪುರ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು ಮತ್ತು ನಾಗಾಲ್ಯಾಂಡ್ ಗೃಹ ಸಚಿವರು ಭಾಗವಹಿಸಿದ್ದರು.

ಪ್ರಮುಖಾಂಶಗಳು:

ಗೃಹ ವ್ಯವಹಾರಗಳ ಸಚಿವಾಲಯದ ವಿಶೇಷ ಕಾರ್ಯದರ್ಶಿ (ಆಂತರಿಕ ಭದ್ರತೆ) ತಜ್ಞರ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಜನರ ಮುಕ್ತ ಸಂಚಾರಕ್ಕೆ ಗಡಿ ರಾಜ್ಯಗಳು ಅಳವಡಿಸಿಕೊಂಡಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ಸಮಿತಿಯು ಪರಿಶೀಲಿಸಲಿದೆ. ಮಯನ್ಮಾರ್ ಜೊತೆಗಿನ ಗಡಿಯನ್ನು ಹಂಚಿಕೊಳ್ಳುವ ರಾಜ್ಯಗಳಲ್ಲಿ ಮುಕ್ತ ಸಂಚಾರಕ್ಕೆ ಏಕರೂಪ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಸಮಿತಿ ಶಿಫಾರಸ್ಸು ಮಾಡಲಿದೆ. ನೈಜ ಜನರಿಗೆ ಅನಾನುಕೂಲತೆ ಉಂಟಾಗದಂತೆ ಉಗ್ರಗಾಮಿಗಳನ್ನು, ಅಪರಾಧಿಗಳ ಒಳನುಸುಳುವಿಕೆಯನ್ನು ತಡೆಯಲು ಎಲ್ಲಾ ನಾಲ್ಕು ರಾಜ್ಯಗಳಿಗೂ ಸಾಮಾನ್ಯವಾದ ಕಾರ್ಯವಿಧಾನವನ್ನು ರಚಿಸಲಿದೆ. ಸಮಿತಿಯು ತನ್ನ ವರದಿಯನ್ನು ಮೂರು ತಿಂಗಳೊಳಗೆ ಸಲ್ಲಿಸಲಿದೆ.

ಹಿನ್ನಲೆ:

ಭಾರತವು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ ಮತ್ತು ಮಿಜೋರಾಂ ಈ ನಾಲ್ಕು ರಾಜ್ಯಗಳ ಮೂಲಕ ಹಾದುಹೋಗುವ 1,643 ಕಿಮೀ ಉದ್ದದ ಗಡಿಯನ್ನು ಮಯನ್ಮಾರ್ ಜೊತೆಗೆ ಹಂಚಿಕೊಂಡಿದೆ. ಪ್ರಸ್ತುತ, ಭಾರತೀಯ ಮತ್ತು ಮ್ಯಾನ್ಮಾರಿನ ನಾಗರಿಕರಿಗೆ ಗಡಿ ಎರಡೂ ಬದಿಯಲ್ಲಿ 16 ಕಿಮೀ ವ್ಯಾಪ್ತಿಯಲ್ಲಿ ವೀಸಾ ಮುಕ್ತ ಸಂಚಾರವನ್ನು ಅನುಮತಿಸಲಾಗಿದೆ. ಮಾನ್ಯ ಪರವಾನಗಿಗಳೊಂದಿಗೆ 72 ಗಂಟೆಗಳವರೆಗೆ ಉಳಿಯಲು ಅವರಿಗೆ ಅನುಮತಿ ನೀಡಲಾಗಿದೆ. ಗಡಿ ಜನರಲ್ಲಿ ಸಾಂಪ್ರದಾಯಿಕ ಮತ್ತು ಸಾಮಾಜಿಕ ಸಂಬಂಧಗಳ ದೃಷ್ಟಿಯಿಂದ ಈ ನಿಯಮಗಳನ್ನು ಇರಿಸಲಾಗಿತ್ತು. ಗಡಿರೇಖೆಯ 10 ಕಿ.ಮೀ ವ್ಯಾಪ್ತಿಯಲ್ಲಿ 2.5 ಲಕ್ಷ ಜನಸಂಖ್ಯೆ ಇರುವ ಸುಮಾರು 240 ಹಳ್ಳಿಗಳಿವೆ. ಆದಾಗ್ಯೂ, ಮ್ಯಾನ್ಮಾರ್ ಜೊತೆಗಿನ ಭಾರತದ ಅಂತರಾಷ್ಟ್ರೀಯ ಗಡಿರೇಖೆಯಲ್ಲಿ ಬಂಡಾಯಗಾರರು ಗಡಿಯಾಚೆಗಿನ ಚಲನೆ ಮತ್ತು ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ಕಳ್ಳಸಾಗಣೆ ಮಾಡುವುದು ಸಾಮಾನ್ಯವಾಗಿದೆ.

ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ಪನಾಮ

ಚೀನಾದೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಪನಾಮ ಸ್ಥಾಪಿಸಿದ್ದು, ತೈವಾನ್ ನೊಂದಿಗೆ ತನ್ನ ಎಲ್ಲಾ ಸಂಬಂಧವನ್ನು ಮುರಿದುಕೊಂಡಿದೆ. ಆ ಮೂಲಕ ಜಗತ್ತಿನ ಉಳಿದ ಭಾಗಗಳಿಂದ ತೈವಾನ್ ಅನ್ನು ಪ್ರತ್ಯೇಕಿಸಲು ಚೀನಾ ನಡೆಸುತ್ತಿರುವ ಪ್ರಯತ್ನಕ್ಕೆ ಜಯ ಸಂದಿದ ಆಗಿದೆ. ತೈವಾನ್ ತನ್ನದೇ ಆದ ಭೂಪ್ರದೇಶವೆಂದು ಚೀನಾ ಹೇಳುತ್ತಿದೆ.

ಪನಾಮ ನಿಲುವು:

ಪನಾಮದ ಅಧ್ಯಕ್ಷ ಜುವಾನ್ ಕಾರ್ಲೋಸ್ ವಾರೆಲಾ ಅವರು ತಮ್ಮ ದೇಶವು ಚೀನಾದೊಂದಿಗಿನ ತನ್ನ ವಾಣಿಜ್ಯ ಸಂಬಂಧಗಳನ್ನು ನವೀಕರಿಸಿದೆ ಮತ್ತು ಚೀನಾದೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಪರ್ಕಗಳನ್ನು ಸ್ಥಾಪಿಸಿದೆ ಎಂದು ಘೋಷಿಸಿದ್ದಾರೆ. ಚೀನಾ ಪನಾಮ ಕಾಲುವೆಯ ಎರಡನೇ ಪ್ರಮುಖ ಗ್ರಾಹಕ ಮತ್ತು ಪನಾಮದಲ್ಲಿನ ಕೊಲೊನ್ ನಗರದಲ್ಲಿ ಮುಕ್ತ ವಾಣಿಜ್ಯ ವಲಯಕ್ಕೆ ವ್ಯಾಪಾರದ ಪ್ರಮುಖ ಪೂರೈಕೆದಾರ.

ಇದಲ್ಲದೆ, ಪನಾಮವು ತೈವಾನ್ ನೊಂದಿಗೆ ತನ್ನ ಔಪಚಾರಿಕ ಸಂಬಂಧಗಳನ್ನು ಮುರಿಯುತ್ತಿದೆ ಎಂದು ಹೇಳಿದೆ. ತೈವಾನ್ ನೊಂದಿಗೆ ಅಧಿಕೃತ ಸಂಬಂಧ ಅಥವಾ ಅಧಿಕೃತ ವಿನಿಮಯವನ್ನು ಅದು ನಿರ್ವಹಿಸುವುದಿಲ್ಲ ಎಂದು ಹೇಳಿದೆ.

ಪನಾಮ ತೆಗೆದುಕೊಂಡ ನಿರ್ಧಾರವನ್ನು ಚೀನಾ ಸ್ವಾಗತಿಸಿದೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ತೈವಾನ್ ಜೊತೆ ಸಂಬಂಧಗಳನ್ನು ಮುರಿಯಲು ಮಧ್ಯ ಅಮೇರಿಕಾದಾ ರಾಷ್ಟ್ರಗಳನ್ನು ಗಾಢವಾಗಿ ಪ್ರೇರೇಪಿಸುತ್ತಿದೆ.

ತೈವಾನ್ ಪ್ರತಿಕ್ರಿಯೆ:

ತೈವಾನ್ ತಕ್ಷಣವೇ ಪನಾಮದೊಂದಿಗೆ ತನ್ನ ಸಂಬಂಧಗಳನ್ನು ಕಡಿದು ಎಲ್ಲಾ ದ್ವಿಪಕ್ಷೀಯ ಸಹಕಾರ ಯೋಜನೆಗಳನ್ನು ನಿಲ್ಲಿಸಲಿದೆ ಎಂದು ಹೇಳಿದೆ. ಪನಾಮದಿಂದ ಎಲ್ಲಾ ರಾಜತಾಂತ್ರಿಕ ಸಿಬ್ಬಂದಿ ಮತ್ತು ತಾಂತ್ರಿಕ ಸಲಹೆಗಾರರನ್ನು ಹಿಂಪಡೆಯುವುದಾಗಿ ತಿಳಿಸಿದೆ. ಪನಾಮವು ತೈವಾನಿನ ಹಳೆಯ ಸ್ನೇಹಿತ ರಾಷ್ಟ್ರಗಳಲ್ಲಿ ಒಂದಾಗಿದೆ. ತೈವಾನ್ ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರುವ ಅತಿದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಪನಾಮ ಒಂದಾಗಿದೆ.

ಹಿನ್ನಲೆ:

ಪನಾಮ ತನ್ನ ಸಂಬಂಧಗಳನ್ನು ಕಳೆದುಕೊಂಡ ನಂತರ ತೈವಾನ್ ಈಗ ಕೇವಲ 20 ಔಪಚಾರಿಕ ರಾಜತಾಂತ್ರಿಕ ಪಾಲುದಾರ ರಾಷ್ಟ್ರಗಳನ್ನು ಹೊಂದಿದೆ. ಅವುಗಳಲ್ಲಿ, 12 ರಾಷ್ಟ್ರಗಳು ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಗೆ ಸೇರಿವೆ. 1949ರಲ್ಲಿ ಚೀನಾ ನಾಗರಿಕ ಯುದ್ಧದ ನಂತರ ಚೀನಾ ಮತ್ತು ತೈವಾನ್ ಪ್ರತ್ಯೇಕ ಸರ್ಕಾರಗಳಿಂದ ಆಳಲ್ಪಡುತ್ತವೆ. ಚೀನಾದ ಸಂವಿಧಾನವು ತೈವಾನ್ ತನ್ನದೇ ಆದ ಪ್ರದೇಶದ ಭಾಗವೆಂದು ಹೇಳುತ್ತದೆ. ತೈವಾನೀಸ್ ಅಧ್ಯಕ್ಷ ಸಾಯಿ ಇಂಗ್-ವೆನ್ ಕಳೆದ ವರ್ಷ ಅಧಿಕಾರ ವಹಿಸಿಕೊಂಡ ನಂತರ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಚೀನಾದ ಒತ್ತಾಯದ ಮೇರೆಗೆ ತೈವಾನ್ ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಅಂತರರಾಷ್ಟ್ರೀಯ ಒಕ್ಕೂಟಗಳಿಂದ ಹೊರಗಿಡಲ್ಪಟ್ಟಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಜೂನ್,22,2017”

  1. ಪ್ರತಿಯೊಬ್ಬ ವಿದ್ಯಾರ್ಥಿಗಳಿಗು ಸ್ಪರ್ಧೆ ಕಡೆಗೆ ಕಳಿಸುವ ಪ್ರಚಲಿತ ವಿದ್ಯಮಾನ

Leave a Comment

This site uses Akismet to reduce spam. Learn how your comment data is processed.