ಜೂನ್ 16ರಿಂದ ಪ್ರತಿ ದಿನ ಪೆಟ್ರೋಲ್ ಡಿಸೇಲ್ ಬೆಲೆ ಪರಿಷ್ಕರಣೆ

ಜೂನ್ 16 ರಿಂದ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿದಿನ ಪರಿಷ್ಕರಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಎಲ್ಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ (ಬಿಪಿಸಿಎಲ್) ನಿರ್ಧರಿಸಿವೆ. ಖಾಸಗಿ ತೈಲ ಉದ್ಯಮಗಳಿಗೆ ಸೆಡ್ಡು ಹೊಡೆಯಲು ಮತ್ತು ಯು.ಎಸ್. ತೈಲ ಮಾರುಕಟ್ಟೆಯೊಂದಿಗೆ ಭಾರತವನ್ನು ಸರಿದೂಗಿಸಲು ಈ ಕ್ರಮಕೈಗೊಳ್ಳಲಾಗಿದೆ. ರಿಲಯನ್ಸ್ ಮತ್ತು ಎಸ್ಸಾರ್ ಸೇರಿದಂತೆ ಪ್ರಮುಖ ಖಾಸಗಿ ತೈಲ ಸಂಸ್ಥೆಗಳು ಸಹ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.

ಪ್ರಸ್ತುತ ಹದಿನೈದು ದಿನಗಳ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ಕರೆನ್ಸಿ  ವಿನಿಮಯ ದರವನ್ನು ಗಣನೆಗೆ ತೆಗೆದುಕೊಂಡು ಪ್ರತಿ ತಿಂಗಳು 1 ಮತ್ತು 16ನೇ ದಿನಾಂಕದಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪರಿಷ್ಕರಿಸುತ್ತವೆ.

ಉಪಯೋಗ:

  • ದಿನನಿತ್ಯ ತೈಲ ಪರಿಷ್ಕರಣೆಯಿಂದ ಜಾಗತಿಕ ಕಚ್ಚಾ ಬೆಲೆಯ ಅಸ್ಥಿರತೆಯಿಂದ ರಿಟೈಲರ್ ಗಳಿಗೆ ರಕ್ಷಣೆ ಸಿಗಲಿದೆ.
  • ಅಲ್ಲದೇ ದೈನಂದಿನ ಪರಿಷ್ಕರಣೆಯಿಂದ ತೈಲ ಬೆಲೆಯು ಒಂದೇ ಬಾರಿ ಏರಿಕೆಯಾಗದೆ ಅಲ್ಪ ಬದಲಾವಣೆ ಆಗಲಿದೆ. ಇದರಿಂದ ಗ್ರಾಹಕರ ಆಕ್ರೋಶಕ್ಕೂ ಕಡಿವಾಣ ಬೀಳಲಿದೆ.
  • ತೈಲು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯನ್ನು ತರಲಿದೆ.
  • ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಖಾಸಗಿ ತೈಲ ಕಂಪೆನಿಗಳೊಂದಿಗೆ ಸ್ಪರ್ಧೆ ಒಡ್ಡಲು ಸಹಾಯವಾಗಲಿದೆ.

ಹಿನ್ನಲೆ:

ಮೇ1ರಿಂದ ದೇಶದ ಐದು ನಗರಗಳಲ್ಲಿ ಪ್ರತಿ ದಿನ ತೈಲ ಬೆಲೆ ಪರಿಷ್ಕರಿಸುವ ಕ್ರಮವನ್ನು ಪ್ರಾಯೋಗಿಕವಾಗಿ ದೇಶದ ಐದು ನಗರಗಳಲ್ಲಿ ಜಾರಿ ಮಾಡಲಾಗಿತ್ತು. ಈ ನೂತನ ಕ್ರಮ ಯಶಸ್ವಿಯಾದ ನಂತರ ದೇಶದಾದ್ಯಂತ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್,ರಾಜಸ್ಥಾನದ ಉದಯ್ ಪುರ್ ,ಜಾರ್ಖಂಡ್ ನ ಜೇಮ್ಶೆಡ್ ಪುರ್ ಮತ್ತು ಚಂಡೀಗಢ್ ನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

ವಿಶ್ವಸಂಸ್ಥೆ ಮತ್ತು UNOSSC ನಿಂದ ಸುಸ್ಥಿರ ಅಭಿವೃದ್ದಿಗೆ ಪಾಲುದಾರಿಕೆ ನಿಧಿ ಸ್ಥಾಪನೆ

ಭಾರತ ಮತ್ತು ವಿಶ್ವಸಂಸ್ಥೆಯ ದಕ್ಷಿಣ-ದಕ್ಷಿಣ ಸಹಕಾರ ಸಂಸ್ಥೆ (UNOSSC) ಅಭಿವೃದ್ಧಿಶೀಲ ಪ್ರಪಂಚದಾದ್ಯಂತ  ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲು ಪಾಲುದಾರಿಕೆ ನಿಧಿಯನ್ನು ಪ್ರಾರಂಭಿಸಿವೆ. ವಿಶ್ವ ಸಾಗರಗಳ ದಿನ ಸಂದರ್ಭದಲ್ಲಿ ಭಾರತ-ವಿಶ್ವಸಂಸ್ಥೆ ಅಭಿವೃದ್ಧಿ ಸಹಭಾಗಿತ್ವ ನಿಧಿಯನ್ನು ಪ್ರಾರಂಭಿಸಲಾಯಿತು.

ಪ್ರಮುಖಾಂಶಗಳು:

  • 2030 ಅಜೆಂಡಾದ 17 ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (SDG ಗಳು) ಸಾಧಿಸಲು ದೇಶ-ಮಟ್ಟದ ಯೋಜನೆಗಳನ್ನು ವೇಗವರ್ಧಕಗೊಳಿಸಲು ಭಾರತ-ವಿಶ್ವಸಂಸ್ಥೆ ಅಭಿವೃದ್ಧಿ ಸಹಭಾಗಿತ್ವ ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ.
  • ಈ ಸಹಭಾಗಿತ್ವ ನಿಧಿಯ ನಿರ್ವಹಣೆಯನ್ನು UNOSSC ನೋಡಿಕೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತವು ವಿಶ್ವಸಂಸ್ಥೆ ಜೊತೆ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ತ್ರಿಕೋನ ಸಹಕಾರ ಪಾಲುದಾರಿಕೆಯನ್ನು ಆರಂಭಿಸಿದೆ.
  • ಬಡತನ ಮತ್ತು ಹಸಿವನ್ನು ಕಡಿಮೆ ಮಾಡುವುದು, ಆರೋಗ್ಯ, ಶಿಕ್ಷಣ ಮತ್ತು ಸಮಾನತೆಯನ್ನು ಸುಧಾರಿಸುವುದು, ಮತ್ತು ಶುದ್ಧ ನೀರು, ಇಂಧನ ಮತ್ತು ಜೀವನೋಪಾಯ ಸೇವೆಗಳನ್ನು ವಿಸ್ತರಣೆ ಮಾಡುವ ಉದ್ದೇಶದೊಂದಿಗೆ ನಿಧಿಯನ್ನು ಸ್ಥಾಪನೆ ಮಾಡಲಾಗಿದೆ.
  • ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು (ಎಲ್ಡಿಸಿಗಳು) ಮತ್ತು ಸಣ್ಣ ದ್ವೀಪ ಅಭಿವೃದ್ದಿ ದೇಶ(ಎಸ್ಐಡಿಎಸ್) ಗಳಲ್ಲಿ ಸಮರ್ಥನೀಯ ಅಭಿವೃದ್ಧಿಯ ಯೋಜನೆಗಳ ಮೇಲೆ ನಿಧಿ ಗಮನಹರಿಸಲಿದೆ.

ಮೊದಲನೆದಾಗಿ ಪೆಸಿಫಿಕ್ ದ್ವೀಪ ದೇಶಗಳಲ್ಲಿ ‘ಹವಾಮಾನ ಆರಂಭಿಕ ಎಚ್ಚರಿಕೆ ವ್ಯವಸ್ಥೆ’ಯನ್ನು ಹೊಸ ಪಾಲುದಾರಿಕೆ ನಿಧಿಯಡಿ ಬೆಂಬಲಿಸಲಾಗುವುದು. ಈ ಯೋಜನೆಯು ಏಳು ಪೆಸಿಫಿಕ್ ದ್ವೀಪ ರಾಷ್ಟ್ರಗಳ (ಕುಕ್ ದ್ವೀಪಗಳು, ಕಿರಿಬಾಟಿ, ಮಾರ್ಷಲ್ ದ್ವೀಪಗಳು, ಮೈಕ್ರೋನೇಶಿಯಾ, ನೌರು, ಸೊಲೊಮನ್ ದ್ವೀಪಗಳು ಮತ್ತು ಟೊಂಗಾ) ಸರ್ಕಾರಗಳೊಂದಿಗೆ ಸಮಾಲೋಚಿಸಿ ಭಾರತ ಮತ್ತು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ನಿಂದ ರೂಪಿಸಲ್ಪಟ್ಟಿದೆ. ಈ ಪೆಸಿಫಿಕ್ ದ್ವೀಪ ದೇಶಗಳಲ್ಲಿ ನೈಸರ್ಗಿಕ ವಿಪತ್ತುಗಳಿಂದ ರಕ್ಷಿಸುವುದು ಯೋಜನೆಯ ಉದ್ದೇಶ.

UNSOCC:

ದಕ್ಷಿಣ-ದಕ್ಷಿಣ ಸಹಕಾರಕ್ಕಾಗಿ ವಿಶ್ವಸಂಸ್ಥೆಯ ಕಚೇರಿ (UNOSSC) ಅನ್ನು ದಕ್ಷಿಣ-ದಕ್ಷಿಣ ಮತ್ತು ತ್ರಿಕೋನ ಸಹಕಾರವನ್ನು ವಿಶ್ವದಾದ್ಯಂತ ಮತ್ತು ವಿಶ್ವಸಂಸ್ಥೆಯ ವ್ಯವಸ್ಥೆಯಲ್ಲಿ ಉತ್ತೇಜಿಸುವ, ಸಂಘಟಿಸುವ ಮತ್ತು ಬೆಂಬಲಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್ (ಯುಎನ್ಡಿಪಿ) ವ್ಯಾಪ್ತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಾಂತ್ರಿಕ ಸಹಕಾರವನ್ನು ಉತ್ತೇಜಿಸಲು ವಿಶೇಷ ಘಟಕವನ್ನು ಸ್ಥಾಪಿಸಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 1974 ರಲ್ಲಿ ಅನುಮೋದಿಸಿದಾಗ UNOSSC ತನ್ನ ಹುಟ್ಟನ್ನು ಪಡೆದುಕೊಂಡಿತು.

CRY ವರದಿ: ಬಾಲ ಕಾರ್ಮಿಕರ ಪಟ್ಟಿಯಲ್ಲಿ ಉತ್ತರ ಪ್ರದೇಶಕ್ಕೆ ನಂ.1 ಸ್ಥಾನ

ಇತ್ತೀಚೆಗೆ ಬಿಡುಗಡೆಯಾದ CRY ವರದಿಯ ಪ್ರಕಾರ ಭಾರತದಲ್ಲಿ 5 ರಿಂದ 6 ವರ್ಷ ವಯಸ್ಸಿನ 8 ಲಕ್ಷಕ್ಕೂ ಹೆಚ್ಚು ಮಕ್ಕಳು ಬಾಲ ಕಾರ್ಮಿಕರು ಎನ್ನಲಾಗಿದೆ. Child Rights and You (CRY)  ಸವಲತ್ತು ವಂಚಿತ ಮಕ್ಕಳ ಉನ್ನತಿಗಾಗಿ ಕೆಲಸ ಮಾಡುವ ಒಂದು NGO ಆಗಿದೆ. 1979 ರಲ್ಲಿ ಈ ಸಂಸ್ಥೆಯನ್ನು ರಿಪ್ಪನ್ ಕಪೂರ್ ನಿಂದ ಸ್ಥಾಪಿಸಲಾಗಿದೆ.

ಪ್ರಮುಖಾಂಶಗಳು:

  • ವರದಿಯ ಪ್ರಕಾರ, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಇವರಲ್ಲಿ ಬಹುಪಾಲು ಕುಟುಂಬ ಆಧಾರಿತ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶವು ಬಾಲಕಾರ್ಮಿಕರ ಸಂಖ್ಯೆ (2,50,672 ಮಕ್ಕಳು) ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಬಿಹಾರ (1,28,087 ಮಕ್ಕಳು) ಮತ್ತು ಮಹಾರಾಷ್ಟ್ರ (82,847 ಮಕ್ಕಳು) ನಂತರದ ಸ್ಥಾನದಲ್ಲಿವೆ.
  • ಬಡತನ ಮತ್ತು ನಿರುದ್ಯೋಗ ಹಾಗೂ ಸಮರ್ಪಕ ಸಾಮಾಜಿಕ ಭದ್ರತಾ ಕೊರತೆ ಮಕ್ಕಳನ್ನು ಕೆಲಸಕ್ಕೆ ದೂಡುವಲ್ಲಿ ಪ್ರಮುಖ ಕಾರಣವಾಗಿವೆ. ಈ ಮಕ್ಕಳನ್ನು ಅನೇಕವೇಳೆ ತಮ್ಮ ಹೆತ್ತವರೊಂದಿಗೆ ವಲಸೆ ಹೋಗುವಂತೆ ಮತ್ತು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವಂತಹ ಕುಟುಂಬದ ಉದ್ಯೋಗಗಳಲ್ಲಿ ಸಹಾಯ ಮಾಡಲು ಒತ್ತಾಯಿಸಲಾಗುತ್ತದೆ.
  • ಸಮಗ್ರ ಶಿಶು ಅಭಿವೃದ್ದಿ ಯೋಜನೆ (ಐಸಿಡಿಎಸ್) ಹಲವು ಕೊರತೆಗಳನ್ನು ಎದುರಿಸುತ್ತಿದ್ದು, ಶೇ .50 ರಷ್ಟು ಬಾಲಕಾರ್ಮಿಕರನ್ನು ಒಳಗೊಂಡಿದೆ ಎಂದು ವರದಿಯು ಉಲ್ಲೇಖಿಸಿದೆ. 2001-11ರ ದಶಕದಲ್ಲಿ, 10-14 ವರ್ಷ ವಯಸ್ಸಿನ ಕಾರ್ಮಿಕ ಮಕ್ಕಳು ಶೇ.30% ನಷ್ಟು ಕಡಿಮೆ ಆಗಿದೆ ಆದರೆ 5-9 ವರ್ಷ ವಯಸ್ಸಿನ ಬಾಲಕಾರ್ಮಿಕರು 2001 ರಿಂದ ಶೇ.37% ನಷ್ಟು ಏರಿಕೆ ಕಂಡಿದೆ.

ಸಮಗ್ರ ಶಿಶು ಅಭಿವೃದ್ದಿ ಯೋಜನೆ (ICDS):

ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸುತ್ತಿರುವ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ. ಈ ಯೋಜನೆಯನ್ನು 1975ರ ಅಕ್ಟೋಬರ್ 2ರಂದು ಪ್ರಾರಂಭಿಸಲಾಯಿತು. ಯೋಜನೆಯು ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ: 0-6 ವಯಸ್ಸಿನ ಮಕ್ಕಳ ಪೋಷಣೆಯ ಮತ್ತು ಆರೋಗ್ಯ ಸ್ಥಿತಿಯನ್ನು ಸುಧಾರಿಸಲು; ಮರಣ ಪ್ರಮಾಣ, ದೌರ್ಬಲ್ಯ, ಅಪೌಷ್ಟಿಕತೆ ಮತ್ತು ಶಾಲಾ ದಾಖಲಾತಿಯಿಂದ ಹೊರಗುಳಿಯುವುದನ್ನು ಕಡಿಮೆ ಮಾಡುವುದು; ಮಗುವಿನ ಬೆಳವಣಿಗೆಯನ್ನು ಉತ್ತೇಜಿಸಲು ನೀತಿ ಸಹಕಾರ ಮತ್ತು ಅನುಷ್ಠಾನವನ್ನು ಉತ್ತೇಜಿಸುವುದು; ಮಕ್ಕಳ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಯೋಗಕ್ಷೇಮಕ್ಕೆ ಸಮರ್ಪಕವಾದ ಅಡಿಪಾಯವನ್ನು ಇಡುವುದು. ಯೋಜನೆಯ ಅಡಿಯಲ್ಲಿ, ಪೂರಕ ಪೋಷಣೆಯಂತಹ ಸೇವೆಗಳು; ಪೂರ್ವ-ಶಾಲಾ ಔಪಚಾರಿಕ ಶಿಕ್ಷಣ; ಪೋಷಣೆ ಮತ್ತು ಆರೋಗ್ಯ ಶಿಕ್ಷಣ, ಪ್ರತಿರಕ್ಷಣೆ, ಆರೋಗ್ಯ ತಪಾಸಣೆ; 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ಮತ್ತು ಗರ್ಭಿಣಿ ಮಹಿಳೆಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಸಮಾಲೋಚನ ಸೇವೆಗಳನ್ನು ನೀಡಲಾಗುತ್ತದೆ.

Leave a Comment

This site uses Akismet to reduce spam. Learn how your comment data is processed.