ಈಶಾನ್ಯ ಭಾರತಕ್ಕೆ ಪ್ರತ್ಯೇಕ ಸಮಯ ವಲಯಕ್ಕೆ ಒತ್ತಾಯ

ಈಶಾನ್ಯ ರಾಜ್ಯಗಳಲ್ಲಿ ಕೆಲಸದ ದಕ್ಷತೆಯನ್ನು ಸುಧಾರಿಸಲು ಮತ್ತು ಈ ಪ್ರದೇಶದಲ್ಲಿ ವಿದ್ಯುತ್ ಉಳಿಸಲು ಪ್ರತ್ಯೇಕ ಸಮಯ ವಲಯಕ್ಕೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಒತ್ತಾಯಿಸಿದ್ದಾರೆ. ಸರಕಾರಿ ಕಚೇರಿಗಳು 10 ಗಂಟೆಗೆ ತೆರೆಯುತ್ತಿದ್ದು, 4 ಗಂಟೆ ಮುಂಚೆಯೇ ಮುಚ್ಚುತ್ತಿರುವ ಕಾರಣ ಹಗಲು ಸಮಯದಲ್ಲಿ ಸಾಕಷ್ಟು ವ್ಯರ್ಥವಾಗುತ್ತಿರುವುದಾಗಿ ಪೆಮಾ ಖಂಡು ವಾದಿಸಿದ್ದಾರೆ.

ಹಿನ್ನಲೆ:

ಇತ್ತೀಚೆಗೆ ಈಶಾನ್ಯ ಪ್ರದೇಶಕ್ಕೆ ಪ್ರತ್ಯೇಕ ಸಮಯ ವಲಯವನ್ನು ಕೋರಿ ಗುವಾಹಟಿ ಹೈಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯನ್ನು ನ್ಯಾಯಾಲಯ ವಜಾಗೊಳಿಸಿತು.

            ಬೆಂಗಳೂರು ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಡೆಸಿದ ಅಧ್ಯಯನದ ಪ್ರಕಾರ, ಈಶಾನ್ಯ ಪ್ರದೇಶದಲ್ಲಿ ಪ್ರತ್ಯೇಕ ಸಮಯ ವಲಯವು ಪ್ರತಿ ವರ್ಷ 2.7 ಬಿಲಿಯನ್ ಯೂನಿಟ್ ವಿದ್ಯುತ್ ಉಳಿಸುವಲ್ಲಿ ನೆರವಾಗಲಿದೆ.

                2006ರಲ್ಲಿ ಪ್ರಕಟವಾದ ಯೋಜನಾ ಆಯೋಗದ ವರದಿ ಸಹ ದಕ್ಷತೆಯನ್ನು ಸುಧಾರಿಸಲು ಭಾರತದಲ್ಲಿ ವಿವಿಧ ಸಮಯ ವಲಯಗಳಿಗೆ ಕರೆ ನೀಡಿತ್ತು.

            ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್ 2014 ರಲ್ಲಿ ಪ್ರತ್ಯೇಕ ಸಮಯ ವಲಯಕ್ಕೆ ಮನವಿ ಸಲ್ಲಿಸಿದ್ದರು. ಈಶಾನ್ಯ ಪ್ರದೇಶವು ಚಾಯ್ ಬಗಾನ್ (ಚಹಾ ತೋಟ) ಸಮಯವನ್ನು ಅನುಸರಿಸಬೇಕೆಂದು ಅವರು ಸೂಚಿಸಿದ್ದರು. ಚಾಯ್ ಬಗಾನ್ ಸಮಯವು ಚಹಾ ತೋಟಗಳಲ್ಲಿ ಆಚರಿಸಲಾಗುತ್ತದೆ ಮತ್ತು ಭಾರತೀಯ ಸ್ಟ್ಯಾಂಡರ್ಡ್ ಟೈಮ್ (IST) ಗಿಂತ ಒಂದು ಗಂಟೆ ಮುಂದಿದೆ.

ಪ್ರತ್ಯೇಕ ಸಮಯ ವಲಯದ ಅವಶ್ಯಕತೆ:

ಪ್ರತ್ಯೇಕ ಸಮಯ ವಲಯವನ್ನು ಹೊಂದಲು ಈಶಾನ್ಯ ಪ್ರದೇಶದ ಜನರು ಬಹಳ ಹಿಂದಿನ ಕಾಲದಿಂದಲೂ ಬೇಡಿಕೆ ಇಡುತ್ತಾ ಬಂದಿದ್ದಾರೆ. 1906 ರಲ್ಲಿ 82.5 °, ಅಥವಾ ಗ್ರೀನ್ವಿಚ್ ಮೀನ್ ಟೈಮ್ (GMT)ಗಿಂತ 5.30 ಗಂಟೆಗಳ ಮುಂಚೆ ಭಾರತೀಯ ಸ್ಟ್ಯಾಂಡರ್ಡ್ ಟೈಮ್ ನಿಗದಿಪಡಿಸಲಾಗಿದೆ.  ಹೆಚ್ಚಿನ ಭಾರತೀಯರು ಇದನ್ನು ಅನುಭವಿಸದಿದ್ದರೂ, ಈಶಾನ್ಯ ಭಾಗದಲ್ಲಿ ವಾಸಿಸುವ ಜನರಿಗೆ ತೊಂದರೆ ಉಂಟಾಗುತ್ತದೆ. ಈಶಾನ್ಯದಲ್ಲಿ, ದಿನವು ಬೆಳಿಗ್ಗೆ 4ಗಂಟೆ ಹೊತ್ತಿಗೆ ಬೆಳಕಾಗಿ ಸಂಜೆ 5 ಗಂಟೆಗೆ ಕತ್ತಲಾಗುತ್ತಿದೆ. ಪ್ರತ್ಯೇಕ ಸಮಯ ವಲಯವನ್ನು ಅಳವಡಿಸಿಕೊಳ್ಳುವುದರಿಂದ ಈಶಾನ್ಯ ಭಾಗದ ಜನರು ಪ್ರಸ್ತುತ ವ್ಯರ್ಥವಾಗುವ ಸಮಯವನ್ನು ಬಳಸಿಕೊಳ್ಳಲು ಸಹಾಯವಾಗಲಿದೆ.

                ಸುಮಾರು 150 ವರ್ಷಗಳ ಹಿಂದೆ ಚಾಯ್ಬಗಾನ್ ಸಮಯವನ್ನು ಬ್ರಿಟಿಷರು ಪರಿಚಯಿಸಿದರು. ಅಸ್ಸಾಂನ ಚಹಾ ತೋಟಗಳು, ಕಲ್ಲಿದ್ದಲುಗಳು ಮತ್ತು ತೈಲ ಉದ್ಯಮಕ್ಕಾಗಿ ಭಾರತೀಯ ಸ್ಟ್ಯಾಂಡರ್ಡ್ ಟೈಮ್ (IST)ನ ಒಂದು ಗಂಟೆ ಮುಂಚಿತವಾಗಿ ಇದನ್ನು ಅಳವಡಿಸಿಕೊಳ್ಳಲಾಯಿತು.

CSIR-SERC ನಿಂದ ಸುಲಭವಾಗಿ ನಿರ್ಮಿಸಬಲ್ಲ ಶೌಚಾಲಯ ವಿನ್ಯಾಸ

ಚೆನ್ನೈ ಮೂಲದ ಸಿಎಸ್ಐಆರ್-ಸ್ಟ್ರಕ್ಚರಲ್ ಇಂಜಿನಿಯರಿಂಗ್ ರಿಸರ್ಚ್ ಸೆಂಟರ್ (ಎಸ್ಇಆರ್ಸಿ), ಕಡಿಮೆ ವೆಚ್ಚದಲ್ಲಿ ಸುಲುಭವಾಗಿ ನಿರ್ಮಿಸಬಲ್ಲ ಶೌಚಾಲಯವನ್ನು ವಿನ್ಯಾಸಗೊಳಿಸಿದೆ.  ಶೌಚಾಲಯ ವ್ಯವಸ್ಥೆ ಲಭ್ಯವಿಲ್ಲದ ಪ್ರದೇಶಗಳಲ್ಲಿ ಶೌಚಾಲಯವನ್ನು ಸ್ಥಾಪಿಸಲು ಇದರಿಂದ ಅನುಕೂಲವಾಗಲಿದೆ.

ಪ್ರಮುಖಾಂಶಗಳು:

  • ಕಡಿಮೆ ವೆಚ್ಚದ ಶೌಚಾಲಯವು 500 ಕೆಜಿಗಿಂತಲೂ ಕಡಿಮೆ ತೂಕವಿದೆ ಮತ್ತು 25-30 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಇದನ್ನು ಐದು ಗಂಟೆಗಳೊಳಗೆ ಜೋಡಿಸಬಹುದು.
  • ಟೆಕ್ಸ್ಟೈಲ್ ರಿಇನ್ಫೋರ್ಸಡ್ ಕಾಂಕ್ರೀಟ್ (TRC) ಫಲಕಗಳ ಸಹಾಯದಿಂದ ಟಾಯ್ಲೆಟ್ ನಿರ್ಮಿಸಲಾಗಿದೆ. TRC ಪ್ಯಾನಲ್ಗಳನ್ನು CSIR-SERCನ ಟೆಕ್ಸ್ಟೈಲ್ ರಿಇನ್ಫೋರ್ಸಡ್ ಕಾಂಕ್ರೀಟ್ ಪ್ರೊಟೊಟೈಪಿಂಗ್ ತಂತ್ರಜ್ಞಾನ (TRCPT) ಬಳಸಿ ಅಭಿವೃದ್ಧಿಪಡಿಸಲಾಗಿದೆ. CSIR-SERC 2014ರಲ್ಲಿ ಈ ನವೀನ ತಂತ್ರಜ್ಞಾನಕ್ಕೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಿದೆ.
  • ಇದೇ TRC ಫಲಕಗಳನ್ನು ಬಾಗಿಲು, ಛಾವಣಿ, ಗೋಡೆಗಳು ಮತ್ತು ನೆಲಮಾಳಿಗೆಯಂತೆ ಬಳಸಬಹುದಾಗಿದೆ. ಈ ಶೀಟ್ಗಳನ್ನು ತಯಾರಿಸಲು ಯಾವುದೇ ಮೌಲ್ಡಿಂಗ್ ಅಗತ್ಯವಿಲ್ಲ. ಈ ಶೀಟುಗಳು 15mm ನಿಂದ 25mm ದಪ್ಪವಿರಲಿವೆ. ಇವು ತುಕ್ಕು ರಹಿತವಾಗಿರಲಿದ್ದು, ಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

CSIR-SERC:

CSIR-SERC ಸ್ವಾಯತತೆಯಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಪ್ರಧಾನ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಸಂಸ್ಥೆಯಾಗಿದೆ. ಇದನ್ನು 1942ರಲ್ಲಿ ಸ್ಥಾಪಿಸಲಾಗಿದೆ. 1860ರ ಸೊಸೈಟೀಸ್ ಕಾಯಿದೆಯಡಿ ನೋಂದಾಯಿತವಾದ ಒಂದು ಸ್ವಾಯತ್ತ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಏರೋಸ್ಪೇಸ್ ಇಂಜಿನಿಯರಿಂಗ್, ಸಾಗರ ವಿಜ್ಞಾನ, ರಚನಾತ್ಮಕ ಇಂಜಿನಿಯರಿಂಗ್, ಮೆಟಲರ್ಜಿ, ಲೈಫ್ ಸೈನ್ಸ್, ರಾಸಾಯನಿಕಗಳು, ಗಣಿಗಾರಿಕೆ, ಆಹಾರ, ಪೆಟ್ರೋಲಿಯಂ, ಚರ್ಮ ಮತ್ತು ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದಂತೆ CSIR R & D ಚಟುವಟಿಕೆಗಳನ್ನು ನಡೆಸುತ್ತಿದೆ. CSIR-SERC ಚೆನ್ನೈನಲ್ಲಿದೆ.

POSCO-IMD ಹವಾಮಾನ ಪೋರ್ಟಲ್ “MERIT”ಗೆ ಚಾಲನೆ

ಇಂಧನ, ಕಲ್ಲಿದ್ದಲು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ಗಣಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ರವರು ಇಂಧನ ವಲಯಕ್ಕಾಗಿ ಹವಾಮಾನ ಪೋರ್ಟಲ್ ಮತ್ತು ವೆಬ್ ಪೋರ್ಟಲ್ ‘ಮೆರಿಟ್’ (Merit Order Despatch of Electricity for Rejuvenation of Income and Transparency) ಗೆ ಚಾಲನೆ ನೀಡಿದರು.

POSCO IMD ಹವಾಮಾನ ಪೋರ್ಟಲ್ ಪ್ರಮುಖಾಂಶಗಳು:

  • ಹವಾಮಾನ ಪೋರ್ಟಲ್ ಅನ್ನು POSOCO ಮತ್ತು IMD ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಪೋರ್ಟಲ್ ಡಿಸ್ಕಾಮ್ಸ್ಗೆ (DISCOM) ಹವಾಮಾನ ಮುನ್ಸೂಚನೆಯ ಬಗ್ಗೆ ಮಾಹಿತಿಯನ್ನು ಹೊಂದಿರಲಿದೆ.
  • ಹವಾಮಾನ ವ್ಯತ್ಯಾಸಗಳು ಲೋಡ್ ಡಿಮ್ಯಾಂಡ್, ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣಾ ನಿರ್ವಹಣೆಯ ಮೇಲೆ ಮತ್ತು ವಿದ್ಯುತ್ ಬೆಲೆ ಮೇಲೆ ಪ್ರಭಾವ ಬೀರುತ್ತವೆ. ಹವಾಮಾನ ಸಂಬಂಧಿತ ಪ್ರಕ್ರಿಯೆಗಳಾದ ಉಷ್ಣ ಅಥವಾ ಶೀತ ಗಾಳಿ, ಬಿರುಗಾಳಿ ಅಥವಾ ಪ್ರವಾಹಗಳು ವಿದ್ಯುತ್ ಉತ್ಪಾದನೆ ಹಾಗೂ ಉತ್ಪಾದನಾ ಘಟಕಕ್ಕೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿ ಭೌತಿಕ ಹಾನಿ ಉಂಟಾಗುತ್ತದೆ. ಹವಾಮಾನ ಸಂಬಂಧಿತ ಮಾಹಿತಿಯನ್ನು ರಾಜ್ಯಗಳಿಗೆ ಒದಗಿಸಿ ಮೂಲಸೌಕರ್ಯ ಲಭ್ಯತೆ ಹಾಗೂ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಾತರಿಪಡಿಸಲು ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶವನ್ನು ಪೋರ್ಟಲ್ ಹೊಂದಿದೆ.

MERIT:

MERIT (Merit Order Despatch of Electricity for Rejuvenation of Income and Transparency) ಅನ್ನು ಕೇಂದ್ರ ಇಂಧನ ಸಚಿವಾಲಯ ಪೊಸ್ಕೊ ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ಅರ್ಹತೆ ಆಧಾರದ ಮೇರೆಗೆ ರಾಜ್ಯಗಳು ಖರೀದಿ ಮಾಡಿದ ಮಾಹಿತಿಯನ್ನು ಈ ಪೋರ್ಟಲ್ ನೀಡುತ್ತದೆ.

Leave a Comment

This site uses Akismet to reduce spam. Learn how your comment data is processed.