ಭಾರತೀಯ ಹವಾಮಾನ ಇಲಾಖೆಯಿಂದ ಚಿಕನ್ ಗುನ್ಯ/ಮಲೇರಿಯಾ ಮುನ್ಸೂಚನೆ ವ್ಯವಸ್ಥೆ

ದೇಶದ ವಿವಿಧ ಪ್ರದೇಶಗಳಲ್ಲಿ ಮಲೇರಿಯಾ ಅಥವಾ ಚಿಕುಂಗುನ್ಯಾ ಸಂಭವಿಸುವ ಸಾಧ್ಯತೆಯ ಬಗ್ಗೆ 15 ದಿನಗಳ ಮುಂಚಿತವಾಗಿ ಮುನ್ಸೂಚನೆ ನೀಡುವ ವ್ಯವಸ್ಥೆಯನ್ನು ಅಭಿವೃದ್ದಿಪಡಿಸುತ್ತಿರುವುದಾಗಿ  ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಘೋಷಿಸಿದೆ.

  • ಜಾಗತಿಕ ತಾಪಮಾನ ಏರಿಕೆಯ ಸವಾಲುಗಳು ಮತ್ತು ಅದರಿಂದ ವಾತಾವರಣದ ಮೇಲಾಗುವ ಪ್ರಭಾವಕ್ಕೆ ಸೇರಿದಂತೆ ಹವಾಮಾನ-ಸಂಬಂಧಿತ ಮಾಹಿತಿಯನ್ನು ಒದಗಿಸುವುದು ಈ ಸೇವೆಯ ಉದ್ದೇಶವಾಗಿದೆ. ತೀವ್ರ ಮಳೆಯಿಂದ ವಾತಾವರಣದಲ್ಲಿ ಆರ್ದ್ರತೆಯು ಹೆಚ್ಚುವುದಲ್ಲದೆ ನೀರು ನಿಲ್ಲುವುದು ಸಾಮಾನ್ಯ. ಇದರಿಂದ ವೆಕ್ಟರ್ ಬಾರ್ನ್ (Vector Born) ರೋಗಗಳ ಸಮಸ್ಯೆ ಉಲ್ಬಣಗೊಳ್ಳಲಿದೆ.
  • ಭಾರತೀಯ ಹವಾಮಾನ ಇಲಾಖೆಯು ಉಷ್ಣಗಾಳಿ, ಶೀತ ಗಾಳಿ ಮತ್ತು ರೋಗದ ಹರಡುವಿಕೆಗಳ ಬಗ್ಗೆ ಐದು ದಿನಗಳ ಮತ್ತು 15 ದಿನಗಳ ಮುನ್ಸೂಚನೆಯನ್ನು ಬಿಡುಗಡೆ ಮಾಡಲಿದೆ.
  • ಐಎಂಡಿಯು ಈ ಸೇವೆಯನ್ನು ಭಾರತದ ವೈದ್ಯಕೀಯ ಮಂಡಳಿ ಮತ್ತು ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿದೆ ಸೇವೆಯನ್ನು ಒದಗಿಸಲಿದೆ

ಭಾರತೀಯ ಹವಾಮಾನ ಇಲಾಖೆಯು ಹವಾಮಾನ, ಹವಾಮಾನ ಮುನ್ಸೂಚನೆ ಮತ್ತು ಭೂಕಂಪನದ ಬಗ್ಗೆ ಅಧ್ಯಯನ ನಡೆಸುವ ಪ್ರಮುಖ ಸಂಸ್ಥೆಯಾಗಿದೆ. ಇದು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಪ್ರಧಾನ ಕಚೇರಿ ದೆಹಲಿಯಲ್ಲಿದ್ದು, ಭಾರತದಾದ್ಯಂತ ನೂರಾರು ವೀಕ್ಷಣಾ ಕೇಂದ್ರಗಳನ್ನು ಹೊಂದಿದೆ.

ಹಬೀಬ್ ಗಂಜ್ ರೈಲ್ವೆ ನಿಲ್ದಾಣ: ದೇಶದ ಮೊದಲ ರೈಲ್ವೆ ನಿಲ್ದಾಣ

ಭೋಪಾಲ್ ಉಪನಗರದಲ್ಲಿರುವ ಹಬೀಬ್ ಗಂಜ್ ರೈಲ್ವೇ ನಿಲ್ದಾಣ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಪುನರಾಭಿವೃದ್ಧಿಗೊಳ್ಳುತ್ತಿರುವ ದೇಶದ ಪ್ರಥಮ ರೈಲ್ವೆ ನಿಲ್ದಾಣ ಎನಿಸಲಿದೆ. ಜೂನ್ 9 ರಂದು ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ಕೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಚಾಲನೆ ನೀಡಲಿದ್ದಾರೆ. ಹಬೀಬ್ ಗಂಜ್ ರೈಲ್ವೆ ನಿಲ್ದಾಣವನ್ನು ವಿಶ್ವ ದರ್ಜೆಯ ಸೌಕರ್ಯಗಳನ್ನು ಹೊಂದಿದ ಸಾರಿಗೆ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ಇದರ ಉದ್ದೇಶವಾಗಿದೆ.

  • ರೈಲ್ವೆ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಎಂಟು ವರ್ಷಗಳ ಕಾಲ ಭೋಪಾಲ್ ಮೂಲದ ಬನ್ಸಾಲ್ ಗ್ರೂಪ್ಗೆ ನೀಡಲಾಗಿದೆ. 2016ರಲ್ಲಿ ಬನ್ಸಾಲ್ ಗ್ರೂಫ್ ಬಿಡ್ ಗೆದ್ದಿತ್ತು. ಬನ್ಸಾಲ್ ಗ್ರೂಪ್ ಈ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಪುನರಾಭಿವೃದ್ದಿಪಡಿಸಲಿದೆ.ಮೂರು ವರ್ಷಗಳ ಅವಧಿಯಲ್ಲಿ ಅಂಗಡಿಗಳು, ಕಛೇರಿಗಳು ಮತ್ತು ಹೊಟೇಲುಗಳೊಂದಿಗೆ ಹಬೀಬ್ ಗಂಜ್ ವಾಣಿಜ್ಯ ಕೇಂದ್ರವಾಗಲಿದೆ.
  • ಈ ಪರಿಸರ ಸ್ನೇಹಿ ರೈಲ್ವೆ ನಿಲ್ದಾಣವು ಸೌರ ಶಕ್ತಿಯಿಂದ ಕಾರ್ಯನಿರ್ವಹಿಸಲಿದೆ. ನಿಲ್ದಾಣದಲ್ಲಿ ಲಿಫ್ಟ್ಗಳು, ಎಸ್ಕಲೇಟರ್ಗಳು, ಅಂಡರ್ಪಾಸ್ ಸೇರಿದಂತೆ ವಿಕಲಚೇತನರಿಗೆ ಅಗತ್ಯ ಸೌಲಭ್ಯವನ್ನು ಹೊಂದಿರಲಿದೆ. ತುರ್ತುಸ್ಥಿತಿಯ ಸಂದರ್ಭದಲ್ಲಿ ಪ್ರಯಾಣಿಕರನ್ನು ಆರು ನಿಮಿಷಗಳಲ್ಲಿ ಸುರಕ್ಷತೆಯ ಸ್ಥಳಕ್ಕೆ ವರ್ಗಾಯಿಸಬಹುದಾಗಿದೆ.
  • ಆಹಾರ ಮಳಿಗೆಗಳು, ವಿಶ್ರಾಂತಿ ಕೊಠಡಿಗಳು, ವಿದ್ಯುತ್, ಪ್ಲಾಟ್ಫಾರ್ಮ್ ನಿರ್ವಹಣೆ, ಪಾರ್ಕಿಂಗ್ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಬನ್ಸಾಲ್ ಗ್ರೂಪ್ ಜವಾಬ್ದಾರಿಯಾಗಿರಲಿದೆ. ಆದರೆ, ರೈಲು ಮತ್ತು ಪಾರ್ಸೆಲ್ ಚಲನೆ, ಸಿಗ್ನಲಿಂಗ್ ಮತ್ತು ಟಿಕೇಟ್ಗಳಂತಹ ಪ್ರಮುಖ ಕಾರ್ಯಾಚರಣೆಗಳು ಬನ್ಸಾಲ್ ಗ್ರೂಫ್ ಜವಾಬ್ದಾರಿಯಲ್ಲ.

ಹಿನ್ನಲೆ:

ವಿಶ್ವದರ್ಜೆಯ ರೈಲ್ವೆ ನಿಲ್ದಾಣಗಳನ್ನು ಸ್ಥಾಪಿಸುವ ಉದ್ದೇಶವನ್ನು 2009-10ರಲ್ಲಿ ಮಾಜಿ ರೈಲ್ವೇ ಸಚಿವ ಮಮತಾ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ್ದರು. ಆದರೆ 2015ರಲ್ಲಿ ಈ ಯೋಜನೆಯು ರೈಲ್ವೇ ಸಚಿವ ಸುರೇಶ್ ಪ್ರಭುರವರಿಂದ ಪುನಶ್ಚೇತನಗೊಂಡಿತು. ಹಬೀಬ್ ಗಂಜ್ ಯೋಜನೆಯು 400A1 ಮತ್ತು A ವರ್ಗ ರೈಲ್ವೆ ಸ್ಟೇಷನ್ಗಳನ್ನು ಪುನಃ ಅಭಿವೃದ್ಧಿಪಡಿಸುವ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ಯೋಜನೆಯ ಒಂದು ಭಾಗವಾಗಿದೆ.

ಆಂಧ್ರಪ್ರದೇಶದಲ್ಲಿ ದೇಶದ ಪ್ರಥಮ ಗ್ರಾಮೀಣ LED ಬೀದಿ ದೀಪ ಯೋಜನೆ

ಆಂಧ್ರಪ್ರದೇಶದ 7 ಜಿಲ್ಲೆಗಳ ಗ್ರಾಮ ಪಂಚಾಯತಿಗಳಲ್ಲಿ 10 ಲಕ್ಷ ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಎಲ್ಇಡಿ ದೀಪಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಇಂಧನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ “ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್ (EESL) ಯೋಜನೆಯನ್ನು ಅನುಷ್ಟಾನಗೊಳಿಸಲಿದೆ. ಈ ಯೋಜನೆಯು ಭಾರತದ “ಸ್ಟ್ರೀಟ್ ಲೈಟಿಂಗ್ ನ್ಯಾಷನಲ್ ಪ್ರಾಜೆಕ್ಟ್ (ಎಸ್ಎಲ್ಎನ್ಪಿ)” ಯಡಿಯಲ್ಲಿ ಮೊದಲ ಗ್ರಾಮೀಣ ಎಲ್ಇಡಿ ಬೀದಿ ದೀಪ ಯೋಜನೆಯಾಗಿದೆ.

            ಮೊದಲ ಹಂತದಲ್ಲಿ ಯೋಜನೆಯನ್ನು ಗುಂಟೂರು, ಪ್ರಕಾಶಂ, ನೆಲ್ಲೂರು, ಕರ್ನೂಲ್, ಕಡಪಾ, ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸಲಾಗುವುದು.

            ಯೋಜನೆಯ ಒಟ್ಟು ಮುಂಗಡ ಬಂಡವಾಳ ವೆಚ್ಚವನ್ನು ಫ್ರೆಂಚ್ ಡೆವೆಲಪ್ಮೆಂಟ್ ಏಜೆನ್ಸಿ ಏಜೆನ್ಸ್ ಫ್ರಾಂಕಾಯಿಸ್ ಡೆ ಡೆವಲಪ್ಮೆಂಟ್ (ಎಎಫ್ಡಿ) ನಿಂದ ನೀಡಲಾಗುತ್ತದೆ.

ಯೋಜನೆಯ ಪ್ರಾಮುಖ್ಯತೆ:

ಈ ಯೋಜನೆಯಿಂದ ಗ್ರಾಮ ಪಂಚಾಯತಿಗಳಲ್ಲಿ ವರ್ಷಕ್ಕೆ ಸುಮಾರು 147 ದಶಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ. ಇದರಿಂದ ಸರಿ ಸುಮಾರು 12 ಕೋಟಿ ಟನ್ ಗಳಷ್ಟು CO2 ನ ಕಡಿತಕ್ಕೆ ಕಾರಣವಾಗಲಿದೆ.

            ಈ ಗ್ರಾಮ ಪಂಚಾಯತಿಗಳಲ್ಲಿ ದೀಪಗಳ ವಾರ್ಷಿಕ ನಿರ್ವಹಣೆ ಮತ್ತು ಬದಲಾವಣೆ ಜವಾಬ್ದಾರಿಯು ಎಂಟು ವರ್ಷಗಳ  EESL ನದು ಆಗಿರಲಿದೆ.

ಹಿನ್ನಲೆ:

ಸೈಕ್ಲೋನ್ ಹುಡ್ಹುಡ್ ನಿಂದ ವಿಶಾಖಪಟ್ಟಣದಲ್ಲಿ ಆದ ಹಾನಿಯಿಂದಾಗಿ ಸಾಂಪ್ರದಾಯಿಕ ಬೀದಿ ದೀಪಗಳ ಬದಲಿದೆ LED ದೀಪಗಳನ್ನು ಅಳವಡಿಸಲು EESLನಿಂದ ನೆರವು ಪಡೆದ ಮೊದಲ ರಾಜ್ಯಆಂಧ್ರಪ್ರದೇಶ. ಅಂದಿನಿಂದ, ರಾಜ್ಯದಲ್ಲಿ ಅಂದಾಜು 5,90,000 LED ಬೀದಿ ದೀಪಗಳನ್ನು ಇಇಎಸ್ಎಲ್ ಅಳವಡಿಸಿದೆ. ಈ ದೀಪಗಳು ಪ್ರತಿವರ್ಷ 65,000 ಟನ್ಗಳಷ್ಟು CO2 ಅನ್ನು ಕಡಿಮೆ ಮಾಡಲು ರಾಜ್ಯಕ್ಕೆ ಸಹಾಯ ಮಾಡಿದೆ.

            ದೇಶಾದ್ಯಂತ, 21 ರಾಜ್ಯಗಳಲ್ಲಿ 23 ಲಕ್ಷ ಸಾಂಪ್ರದಾಯಿಕ ಬೀದಿ ದೀಪಗಳನ್ನು ಎಲ್ಇಡಿ ಬೀದಿ ದೀಪಗಳಿಂದ ಬದಲಾಯಿಸಲಾಗಿದೆ. ಸಾಂಪ್ರದಾಯಿಕ ದೀಪಗಳ ಬದಲಾಗಿ ಇಂಧನ ದಕ್ಷ ಎಲ್ಇಡಿ ದೀಪಗಳನ್ನು ಅಳವಡಿಸಲು ಪ್ರಧಾನಿ ನರೇಂದ್ರ ಮೋದಿ ರವರು ಜನವರಿ 5, 2015ರಂದು ‘100 ನಗರಗಳಲ್ಲಿ ರಾಷ್ಟ್ರೀಯ ಕಾರ್ಯಕ್ರಮ’ಕ್ಕೆ ಚಾಲನೆ ನೀಡಿದರು. ಅಂತೆಯೇ, “ಸ್ಟ್ರೀಟ್ ಲೈಟ್ ನ್ಯಾಷನಲ್ ಪ್ರೋಗ್ರಾಂ (ಎಸ್ಎಲ್ಎನ್ಪಿ)” ಅಡಿಯಲ್ಲಿ, ದೇಶದಾದ್ಯಂತ ಎಲ್ಇಡಿ ದೀಪಗಳೊಂದಿಗೆ 1.34 ಕೋಟಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

LED ಬಲ್ಬ್:

ಎಲ್ಇಡಿ ಬಲ್ಬ್ಗಳು ಸಾಮಾನ್ಯ ಬಲ್ಬ್ಗಳಿಗಿಂತ 50 ಪಟ್ಟು ಹೆಚ್ಚು ಮತ್ತು CFL ಬಲ್ಬಗಳಿಗಿಂತ 8 ರಿಂದ 10 ಪಟ್ಟು ಹೆಚ್ಚು ದೀರ್ಘಾವಧಿಯನ್ನು ಹೊಂದಿವೆ. ಆದ್ದರಿಂದ ಮಧ್ಯಮ ಅವಧಿಯಲ್ಲಿ ವಿದ್ಯುತ್ ಮತ್ತು ವೆಚ್ಚದ ಉಳಿತಾಯವನ್ನು ಮಾಡಲಿವೆ. ಎಲ್ಇಡಿ ದೀಪಗಳ ಪ್ರಯೋಜನಗಳೆಂದರೆ: (i) ವಿದ್ಯುತ್ ಉಳಿತಾಯ (ii) ವಿದ್ಯುತ್ ಭಾರವನ್ನು ಕಡಿಮೆಗೊಳಿಸುವುದು (iii) ಗ್ರಾಹಕರ ವಿದ್ಯುತ್ ಬಿಲ್ ಇಳಿಕೆ (iv) ಹಸಿರುಮನೆ ಅನಿಲ ಹೊರಸೂಸುವಿಕೆಯ ಕಡಿತ.

ಚೂರು ಪಾರು:

  • ಸಾಯಿ ಪ್ರಣೀತ್ ಗೆ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿ ಕಿರೀಟ: ಭಾರತದ ಬಿ. ಸಾಯಿ ಪ್ರಣೀತ್‌ ಅವರು ಥಾಯ್ಲೆಂಡ್‌ ಓಪನ್‌ ಗ್ರ್ಯಾನ್ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.ಪ್ರಣೀತ್‌ 17–21, 21–18, 21–19ರಲ್ಲಿ ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ಅವರನ್ನು ಮಣಿಸುವ ಮೂಲಕ ಗ್ರ್ಯಾಂಡ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದರು.
  • ವಿಮಾನಯಾನ ಬಳಕೆ ರಾಜ್ಯಕ್ಕೆ ಮೂರನೇ ಸ್ಥಾನ: ವಾಯು ಮಾರ್ಗದ ಮೂಲಕ ಪ್ರಯಾಣ ಮಾಡುವವರ ಸಂಖ್ಯೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲಿ ಮೂರನೇ ಸ್ಥಾನದಲ್ಲಿದೆ. ಮಾಹಿತಿ ನಾಗರಿಕ ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ ಈ ಮಾಹಿತಿ ಬೆಳಕಿಗೆ ಬಂದಿದೆ. ವಿಮಾನಗಳ ಹಾರಾಟದ ಸಂಖ್ಯೆಯಲ್ಲೂ ಕರ್ನಾಟಕ ದಕ್ಷಿಣ ಭಾರತದ ಐದು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗಿಂತ ಮುಂದಿದೆ.

Leave a Comment

This site uses Akismet to reduce spam. Learn how your comment data is processed.