ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿ ಪೂರೈಸಿದ ಅಮೆರಿಕ

ಶತ್ರುರಾಷ್ಟ್ರಗಳ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು (ಐಸಿಬಿಎಂ) ಅಮೆರಿಕ ಮೊದಲ ಬಾರಿಗೆ ಯಶಸ್ವಿಯಾಗಿ ಪೂರೈಸಿದೆ. ಪರೀಕ್ಷೆಯ ವೇಳೆ ಕ್ಯಾಲಿಫೋರ್ನಿಯಾದ ವಾಂಡನ್‌ಬರ್ಗ್‌ ವಾಯುನೆಲೆಯಿಂದ ಹಾರಿಸಲಾದ ನೆಲದಿಂದ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆ (ಜಿಎಂಡಿ)ಯು ಮಾರ್ಷಲ್ ದ್ವೀಪ ಪ್ರದೇಶದ ರೇಗನ್ ಪರೀಕ್ಷಾ ಸ್ಥಳದಿಂದ ಹಾರಿಸಲಾದ ಮತ್ತೊಂದು ಖಂಡಾತರ ಕ್ಷಿಪಣಿಯನ್ನು ಯಶಸ್ವಿಯಾಗಿ ಹೊಡೆದು ಉರುಳಿಸಿದೆ. ಭೂ-ಆಧಾರಿತ ಮಿಡ್ಕೋರ್ಸ್ ಡಿಫೆನ್ಸ್ (Ground Based Midcourse Defence(ಜಿಎಂಡಿ) ಯಿಂದ ರಾಕೆಟ್ ಬಾಹ್ಯಾಕಾಶಕ್ಕೆ ಪ್ರವೇಶಿಸಿದ ನಂತರ ಅದರಿಂದ ಬಿಡುಗಡೆಗೊಂಡ ಶತ್ರು ಕ್ಷಿಪಣಿ ನಾಶಕ ವಾಹನ ಬಿಡುಗಡೆಗೊಂಡು ನಿಯೋಜಿತ ಗುರಿಯನ್ನು ನಾಶಗೊಳಿಸಿದೆ.

            GMD ವ್ಯವಸ್ಥೆಯನ್ನು ಜಾಗತಿಕವಾಗಿ ಖಂಡಾಂತರ ಕ್ಷಿಪಣಿಗಳ ಅಪಾಯವನ್ನು ಪತ್ತೆಹಚ್ಚಲು ಮತ್ತು ಗುರಿತಿಸಲು ಬಳಸಲಾಗುತ್ತದೆ.

ಪರೀಕ್ಷೆಯ ಮಹತ್ವ:

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ಅಮೆರಿಕ ಈ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದೆ. ಈ ವರ್ಷ ಉತ್ತರ ಕೊರಿಯಾ ಒಂಬತ್ತು ಕ್ಷಿಪಣಿಗಳನ್ನು ಪರೀಕ್ಷಿಸಿದೆ. ಅಲ್ಲದೇ ಅಮೆರಿಕದ ಮೇಲೆ ನೇರವಾಗಿ ದಾಳಿ ಮಾಡುವ ಕ್ಷಿಪಣಿ ಅಭಿವೃದ್ದಿಪಡಿಸುವ ತವಕದಲ್ಲಿದೆ. ಈ ಹಿನ್ನಲೆಯಲ್ಲಿ ಈ ಪರೀಕ್ಷೆ ಅಮೆರಿಕಗೆ ಮಹತ್ವದೆನಿಸಿದೆ.

ಸೂರ್ಯನ ಅಧ್ಯಯನಕ್ಕೆ ನಾಸಾದಿಂದ ಪಾರ್ಕರ್ ನೌಕೆ

ಸೂರ್ಯನ ವಾತಾವರಣವನ್ನು ಅನ್ವೇಷಿಸಲು 2018ರ ಜುಲೈ 31ರಂದು ನಾಸಾ ಪಾರ್ಕರ್ ನೌಕೆಯನ್ನು ಉಡಾವಣೆ ಮಾಡಲಿದೆ. ನಾಸಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ನೌಕೆ ಉಡಾವಣೆಗೊಳ್ಳಲಿದೆ. ಮೊದಲು ಈ ನೌಕೆಗೆ ಸೋಲಾರ್ ಪ್ರೋಬ್ ಪ್ಲಸ್ ಎಂದು ಹೆಸರಿಡಲಾಗಿತ್ತು ಆದರೆ ಖಗೋಳಶಾಸ್ತ್ರಜ್ಞ ಯುಗೀನ್‌ ಪಾರ್ಕರ್‌ ಅವರ ಗೌರವಾರ್ಥ ‘ಪಾರ್ಕರ್‌ ಸೌರ ಶೋಧನಾನೌಕೆ’ ಎಂದು ಹೆಸರಿಟ್ಟಿರುವುದಾಗಿ ನಾಸಾ ತಿಳಿಸಿದೆ.

            ಖಗೋಳವಿಜ್ಞಾನಿ ಯೂಜೀನ್ ಪಾರ್ಕರ್ ಅವರು ಸೌರಮಂಡಲದ ಸೌರ ಮಾರುತ ಇರುವ ಬಗ್ಗೆ ಪ್ರಕಟಿಸಿದ್ದರು. ಇದೇ ಮೊದಲ ಬಾರಿಗೆ ನಾಸಾದಿಂದ ಜೀವಂತ ವಿಜ್ಞಾನಿಯೊಬ್ಬರ ಹೆಸರನ್ನು ಬಾಹ್ಯಕಾಶ ನೌಕೆಗೆ  ಇಡಲಾಗಿದೆ.

ಪಾರ್ಕರ್ ನೌಕೆ:

  • ಸೂರ್ಯನಿಂದ 40 ಲಕ್ಷ ಮೈಲು ದೂರದಿಂದ ಸೂರ್ಯನ ಮೇಲಿನ ವಾತಾವರಣವನ್ನು ಅಧ್ಯಯನ ಮಾಡಲಿದೆ. ಈ ನೌಕೆಯು 2500ಡಿಗ್ರಿ ಪ್ಯಾರಾನಿಟ್‌ ಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
  • ಇದರಿಂದ ಸೂರ್ಯನ ಪ್ರಭಾವಲಯದಲ್ಲಿ ಹೆಚ್ಚು ಉಷ್ಣತೆ, ಶಾಖ ಹೊಂದಿರುವ ಹಿಂದಿನ ರಹಸ್ಯವನ್ನು ತಿಳಿಯಲೂ ಸಾಧ್ಯವಾಗಲಿದೆ.
  • 5 ಇಂಚು ಕಾರ್ಬನ್‌ ಸಂಯೋಜಿತ ರಕ್ಷಣಾ ಕವಚವನ್ನು ಪಾರ್ಕರ್‌ ನೌಕೆ ಹೊಂದಿರಲಿದ್ದು ಅತಿ ತಾಪವನ್ನು ತಡೆದು ಶೋಧನಾಕಾರ್ಯ ನಡೆಸಲಿದೆ.
  • 10 ಅಡಿ ಎತ್ತರದ ಪಾರ್ಕರ್ ಸೌರ ಶೋಧನಾನೌಕೆ ಸೂರ್ಯನ ಮೇಲ್ಮೈಯಿಂದ4 ಮಿಲಿಯನ್ ಕಿ.ಮೀ ಚಲಿಸಲಿದೆ.
  • ನಾಸಾದಿಂದ ಸೂರ್ಯ ಮತ್ತು ಅದರ ಹೊರಗಿನ ವಾತಾವರಣ ಕರೋನದ ಅಧ್ಯಯನಕ್ಕೆ ಕಳುಹಿಸತಲಾಗಿರುವ ಮೊದಲ ಮಿಷನ್ ಆಗಿದೆ.

ಭಾರತದ ಜಿಡಿಪಿ ಬೆಳವಣಿಗೆ ಕುಸಿತ: ಭಾರತವನ್ನು ಹಿಂದಿಕ್ಕಿದ ಚೀನಾ

ಕೇಂದ್ರೀಯ ಅಂಕಿ–ಅಂಶ ಕಚೇರಿ  ಜಿಡಿಪಿ ಪ್ರಗತಿ ಮಾಹಿತಿ ಬಿಡುಗಡೆ ಮಾಡಿದ್ದು, 2016–17ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 6.1ಕ್ಕೆ ಮತ್ತು 2016–17ರ ಆರ್ಥಿಕ ವರ್ಷದಲ್ಲಿ ಶೇ 7.1ಕ್ಕೆ ಇಳಿಕೆ ಕಂಡಿದೆ. 2015-16ನೇ ಸಾಲಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಜಿಡಿಪಿ ಬೆಳವಣಿಗೆ ತೀವ್ರವಾಗಿ ಕುಸಿದಿದೆ. 2015-16ರಲ್ಲಿ ಶೇ. 8%ರಷ್ಟು ದಾಖಲಾಗಿತ್ತು. 2016-17 ರ ನಾಲ್ಕನೇ ತ್ರೈಮಾಸಿಕದಲ್ಲಿ, ಚೀನಾದ ಜಿಡಿಪಿ ಬೆಳವಣಿಗೆ  ಶೇ.6.9%ರಷ್ಟು ದಾಖಲಾಗಿದ್ದು ಇದೇ ಅವಧಿಯಲ್ಲಿ ಭಾರತದ ಜಿಡಿಪಿ ದರ ಶೇ.6.1% ರಷ್ಟು ದಾಖಲಾಗಿದೆ. ಆ ಮೂಲಕ 2016-17ರ ನಾಲ್ಕನೆಯ ತ್ರೈಮಾಸಿಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ರಾಷ್ಟ್ರವೆಂಬ ಖ್ಯಾತಿಯನ್ನು ಭಾರತ ಕಳೆದುಕೊಂಡಿದೆ.

ಕೇಂದ್ರ ಅಂಕಿ–ಅಂಶ ಕಚೇರಿ ಹೊಸದಾಗಿ ಜಾರಿಗೆ ತಂದಿರುವ ಒಟ್ಟು ಮೌಲ್ಯ ಸೇರ್ಪಡೆ (Gross Value Added(ಜಿವಿಎ))ಯಲ್ಲೂ ಸಹ ಬೆಳವಣಿಗೆ ಕುಂಠಿತಗೊಂಡಿರುವುದನ್ನು ಕಾಣಬಹುದಾಗಿದೆ. 2016–17ರಲ್ಲಿ ಶೇ7.9 ರಿಂದ ಶೇ 6.6ಕ್ಕೆ ಕುಸಿದಿತ್ತು. 2016–17ನೇ ಆರ್ಥಿಕ ವರ್ಷದ ಮೂರು ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಜಿಎವಿ ಮೇಲೆ ನೋಟು ರದ್ದತಿಯು ಋಣಾತ್ಮಕ ಪ್ರಭಾವ ಬೀರಿದ್ದು, ಕ್ರಮವಾಗಿ ಶೇ 7.3 ರಿಂದ ಶೇ 6.7ಕ್ಕೆ ಮತ್ತು ಶೇ 8.7 ರಿಂದ ಶೇ 5.6ಕ್ಕೆ ತಗ್ಗಿವೆ. ಸಬ್ಸಿಡಿಗಳ ಪರೋಕ್ಷ ತೆರಿಗೆ ನಿವ್ವಳ ಪ್ರಮಾಣದಲ್ಲಿ ಹೆಚ್ಚಳದ ಕಾರಣ ಜಿಡಿಪಿ ಬೆಳವಣಿಗೆ ದರವು ಸ್ವಲ್ಪ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ.

ಜಿಡಿಪಿ ಇಡೀ ಆರ್ಥಿಕತೆಯ ಚಿತ್ರಣವನ್ನು ನೀಡಿದರೆ, ಜಿಎವಿ ಉದ್ಯ, ಸರ್ಕಾರ ಮತ್ತು ಕುಟುಂಬಗಳ ಮಟ್ಟಗಳಲ್ಲಿ ಚಿತ್ರಣವನ್ನು ನೀಡುತ್ತದೆ. ಬೇರೆ ವಿಧಾನದಲ್ಲಿ ಹೇಳುವುದಾದರೆ, ಜಿಡಿಪಿಯು ಉದ್ಯಮಗಳು, ಸರ್ಕಾರ ಮತ್ತು ಮನೆಗಳ ಜಿವಿಎ ಆಗಿದೆ. ಇದಲ್ಲದೆ, ಒಟ್ಟು ಮೌಲ್ಯ ಸೇರ್ಪಡೆ (ಜಿ.ವಿ.ಎ) ಆರ್ಥಿಕತೆಯ ಪೂರೈಕೆ ಅಥವಾ ಉತ್ಪಾದನಾ ಭಾಗವನ್ನು ವಿಶಾಲವಾಗಿ ಪ್ರತಿಬಿಂಬಿಸುತ್ತದೆ.

ಕಾರಣ:

ನೋಟು ರದ್ದತಿ ಪರಿಣಾಮದಿಂದ 2016–17ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 7.1ಕ್ಕೆ ಇಳಿಕೆ ಕಂಡಿದೆ. ನೋಟು ರದ್ದತಿ ಬಳಿಕ ಕೃಷಿ ವಲಯ ಹೊರತುಪಡಿಸಿ ಉಳಿದೆಲ್ಲಾ ವಲಯಗಳ ಪ್ರಗತಿ ಇಳಿಕೆ ಕಂಡಿದೆ ಎಂದು ಕೇಂದ್ರ ಅಂಕಿಅಂಶ ಕಚೇರಿ ಮಾಹಿತಿ ನೀಡಿದೆ.

Leave a Comment

This site uses Akismet to reduce spam. Learn how your comment data is processed.