ನರ್ಮದಾ ನದಿಯಲ್ಲಿ ಮರಳು ಗಣಿಗಾರಿಕೆ ಮೇಲೆ ಮಧ್ಯಪ್ರದೇಶ ಸರ್ಕಾರದಿಂದ ನಿಷೇಧ

ಮಧ್ಯಪ್ರದೇಶ ರಾಜ್ಯ ಸರ್ಕಾರ ನರ್ಮದಾ ನದಿಯಲ್ಲಿ ಮರಳು ಗಣಿಗಾರಿಕೆ ಮೇಲೆ ಅನಿರ್ದಿಷ್ಟ ಅವಧಿ ನಿಷೇಧವನ್ನು ಹೇರಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ಭೋಪಾಲ್ ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ನದಿಗಳಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಧಾನಗಳನ್ನು ಸೂಚಿಸಲು ಸರ್ಕಾರ ಸಮಿತಿಯನ್ನು ಸಹ ರಚಿಸಿದೆ. ಈ ಸಮಿತಿಯು ನದಿಗಳಿಗೆ ಹಾನಿಯಾಗದಂತೆ ಮರಳು ಗಣಿಗಾರಿಕೆ ನಡೆಸುವ ವಿಧಾನಗಳನ್ನು ಅಧ್ಯಯನ ನಡೆಸಿ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಹಿನ್ನಲೆ:

ಅನಧಿಕೃತ ಮರಳು ಗಣಿಗಾರಿಕೆ ಮಧ್ಯಪ್ರದೇಶ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಗಂಭೀರವಾದ ಕಾನೂನು ವಿರೋಧತಾತ್ಮಕ ಹಾಗೂ ಪರಿಸರ ಸಮಸ್ಯೆಗಳಲ್ಲೊಂದು. ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಹೊಂದಾಣಿಕೆ ಕಾರಣ ಮರಳು ಮಾಫಿಯಾ ಪ್ರಮುಖ ವ್ಯಾಪಾರವಾಗಿ ಅಭಿವೃದ್ಧಿ ಹೊಂದಿದೆ. ಈ ಕಾನೂನುಬಾಹಿರ ಚಟುವಟಿಕೆಯನ್ನು ಹತ್ತಿಕ್ಕುವ ಹೋರಾಟದಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಚೌಹಣ್ ಸಿಂಗ್ ಅವರು “ನಮಮಿ ನರ್ಮದಾ ಯಾತ್ರಾ” ಮೂಲಕ “ನರ್ಮದಾ ಉಳಿಸಿ” ಅಭಿಯಾನವನ್ನು ಯಶಸ್ವಿಗೊಳಿಸಲು ನರ್ಮದಾ ನದಿಯ ಉದ್ದಕ್ಕೂ ಪ್ರಯಾಣಿಸಿ ಶ್ರಮಿಸುತ್ತಿದ್ದಾರೆ. ಆದರೆ ಫೆಬ್ರವರಿ 2017ರಲ್ಲಿ, ಮುಖ್ಯಮಂತ್ರಿಯ ಸೋದರ ಸಂಬಂಧಿಗೆ ಸೇರಿದ ಕಂಪೆನಿಯು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಸರ್ಕಾರಕ್ಕೆ ಮುಜುಗರವಾಗಿದೆ. ಸದ್ಯ ಈ ಪ್ರಕರಣ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿದ್ದು, ಈಗ ಬಗ್ಗೆ ಧೃಡ ನಿರ್ಧಾರವನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ನಾಸಾ ಕಂಡುಹಿಡಿದ ಹೊಸ ಜೀವಿಗೆ ಅಬ್ದುಲ್ ಕಲಾಂ ಹೆಸರು

ನಾಸಾ ವಿಜ್ಞಾನಿಗಳು ತಾವು ಕಂಡು ಹಿಡಿರುವ ಹೊಸ ಜೀವಿಗೆ ಮಿಸೈಲ್ ಮ್ಯಾನ್ ಖ್ಯಾತಿಯ ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡುವ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದ ಫಿಲ್ಟರ್ ಗಳಲ್ಲಿ ಪತ್ತೆಹಚ್ಚಲಾದ ಬ್ಯಾಕ್ಟೀರಿಯಾಗೆ “ಸೊಲಿಬಾಸಿಲಸ್ ಕಲಾಂಜೀ” ಎಂದು ಕಲಾಂ ಅವರ ಹೆಸರನ್ನು ಇಡಲಾಗಿದೆ. ಜೆಟ್ ಪ್ರೊಪಲಶನ್ ಲ್ಯಾಬೋರೆಟರಿಯನ ಸಂಶೋಧಕರು ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಈ ಬ್ಯಾಕ್ಟೀರಿಯಾ ಸುಮಾರು 40 ತಿಂಗಳ ಕಾಲ ಇರುವುದಾಗಿ ಪತ್ತೆಹಚ್ಚಿದ್ದಾರೆ. ಇನ್ನು ಈ ಜೀವಿ ಬಾಹ್ಯಾಕಾಶದಲ್ಲಿ ಮಾತ್ರ ಕಂಡುಬರುತ್ತದೆ. ಅಬ್ದುಲ್ ಕಲಾಂ ಅವರು 1963ರಲ್ಲಿ ನಾಸಾದಲ್ಲಿ ತರಬೇತಿ ಪಡೆದಿದ್ದರು.

.ಪಿ.ಜೆ ಕಲಾಂ:

ಅಹುಲ್ ಪಕೀರ್ ಜೈನುಲಾಬ್ದೀನ್ (ಎ.ಪಿ.ಜೆ) ಅಬ್ದುಲ್ ಕಲಾಂ 15 ಅಕ್ಟೋಬರ್ 1931 ರಂದು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನಲ್ಲಿ ಜನಿಸಿದರು. 1960ರಲ್ಲಿ ಅವರು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಗೆ ವಿಜ್ಞಾನಿಯಾಗಿ ಸೇರಿಕೊಂಡರು ಮತ್ತು ಭಾರತೀಯ ಸೇನೆಗೆ ಸಣ್ಣ ಹೆಲಿಕಾಪ್ಟರ್ ವಿನ್ಯಾಸಗೊಳಿಸುವ ಮೂಲಕ ತಮ್ಮ ವೃತ್ತಿಯನ್ನು ಆರಂಭಿಸಿದರು. 1969ರಲ್ಲಿ ಅವರು ಭಾರತದ ಬಾಹ್ಯಾಕಾಶ ಉಪಗ್ರಹ ಉಡಾವಣೆ ವಾಹನ ಕಾರ್ಯಕ್ರಮದ ಯೋಜನಾ ನಿರ್ದೇಶಕರಾಗಿ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇರಿದರು. ಅವರ ನಾಯಕತ್ವ ಮತ್ತು ದೂರದೃಷ್ಟಿಯಿಂದ ರೋಹಿಣಿ ಉಪಗ್ರಹವು 1980ರಲ್ಲಿ ಕಕ್ಷೆಗೆ ಸೇರ್ಪಡೆಗೊಂಡ ನಂತರ ಭಾರತವು ಉತ್ಕೃಷ್ಟ ದೇಶಗಳ ಸಾಲಿಗೆ ಸೇರ್ಪಡೆಗೊಂಡಿತು. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. 198ರಲ್ಲಿ ಅವರು ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್ಮೆಂಟ್ ಪ್ರೋಗ್ರಾಮ್ (IGMDP) ಅಧ್ಯಕ್ಷರಾಗಿ ನೇಮಕಗೊಂಡರು. ದೇಶದ ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಹಿಂದೆ ಕಲಾಂ ಅವರ ಸೇವೆ ಶ್ಲಾಘನೀಯ. ಇದಕ್ಕಾಗಿ ಅವರನ್ನು ಭಾರತದ ಮಿಸೈಲ್ ಮ್ಯಾನ್ ಎಂದೇ ಕರೆಯಲಾಗುತ್ತದೆ. ಕಲಾಂ ಅವರು 11 ಮೇ 1998 ರಂದು ನಡೆಸಿದ ಪೋಖ್ರಾನ್ II ನ್ಯೂಕ್ಲಿಯರ್ ಟೆಸ್ಟ್ (ಆಪರೇಷನ್ ಶಕ್ತಿ)ನ ಮುಖ್ಯ ಯೋಜನಾ ಸಂಯೋಜಕರಾಗಿದ್ದರು. ಕಲಾಂ ಭಾರತದ 11 ನೇ ರಾಷ್ಟ್ರಪತಿಯಾಗಿ 2002 ರಿಂದ 2007 ರವರೆಗೆ ಅಧಿಕಾರದಲ್ಲಿದ್ದರು. ಅವರಿಗೆ ಭಾರತ್ ರತ್ನ (1997), ಪದ್ಮ ವಿಭೂಷನ್ (1990), ಪದ್ಮಭೂಷಣ (1981) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಂಗಳೂರು ಫುಟ್ಬಾಲ್ ತಂಡಕ್ಕೆ ಫೆಡರೇಶನ್ ಕಪ್

ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್‌ಸಿ) 2017ರ ಫೆಡರೇಶನ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಓಡಿಶಾದ ಕಟಕ್ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 14 ಬಾರಿ ಚಾಂಪಿಯನ್ ಮೋಹನ್ ಬಗಾನ್ ತಂಡವನ್ನು 2-0 ಗೋಲುಗಳ ಅಂತರದಲ್ಲಿ ಸೋಲಿಸಿದ ಬಿಎಫ್‌ಸಿ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು. ಫೆಡರೇಶನ್ ಕಪ್ ಕ್ಲಬ್ಗಳನ್ನು ಒಳಗೊಂಡ ಭಾರತದ ಮೊದಲ ಪ್ರಮುಖ ಫುಟ್ಬಾಲ್ ಸ್ಪರ್ಧೆಯಾಗಿದೆ. ಇದನ್ನು 1977ರಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸ್ಥಾಪಿಸಿತು. 1980 ಮತ್ತು 1990ರ ದಶಕದಲ್ಲಿ, ಇದು ಭಾರತದ ಅತ್ಯಂತ ಜನಪ್ರಿಯ ಫುಟ್ಬಾಲ್ ಪಂದ್ಯಾವಳಿ ಎಂದು ಪರಿಗಣಿಸಲಾಗಿತ್ತು. ಭಾರತದ ಇತರ ಜನಪ್ರಿಯ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಡ್ಯುರಾಂಡ್ ಕಪ್, ಸಂತೋಷ್ ಟ್ರೋಫಿ, ಇಂಡಿಯನ್ ಸೂಪರ್ ಲೀಗ್, ಸುಬ್ರೊಟೊ ಕಪ್, ಐಎಫ್ಎ ಶೀಲ್ಡ್ ಇತ್ಯಾದಿ ಸೇರಿವೆ. ಇವುಗಳ ಕಿರುಪರಿಚಯ ಇಲ್ಲಿದೆ:

  • ಡ್ಯೂರಾಂಡ್ ಕಪ್: ಡ್ಯುರಾಂಡ್ ಕಪ್ ಭಾರತದ ಅತ್ಯಂತ ಹಳೆಯ ಫುಟ್ಬಾಲ್ ಪಂದ್ಯಾವಳಿಯಾಗಿದ್ದು, ಪ್ರಪಂಚದ ಅತ್ಯಂತ ಹಳೆಯ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಒಂದಾಗಿದೆ. ಇದನ್ನು 1884 ರಿಂದ 1894 ರವರೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಸರ್ ಮೊರ್ಟಿಮರ್ ಡ್ಯುರಾಂಡ್ ಹೆಸರನ್ನು ಇಡಲಾಗಿದೆ. 1888 ರಲ್ಲಿ ಮೊದಲ ಡ್ಯುರಾಂಡ್ ಕಪ್ ಪಂದ್ಯಾವಳಿ ನಡೆಯಿತು. ಆರಂಭದಲ್ಲಿ, ಇದು ಬ್ರಿಟಿಷ್ ಇಂಡಿಯನ್ ಸೇನಾ ಪಡೆಗಳ ನಡುವೆ ನಡೆಯುತ್ತಿದ್ದ ಸೇನಾ ಕಪ್ ಆಗಿತ್ತು. ಕಾಲಕ್ರಮೇಣ ನಾಗರಿಕ ತಂಡಗಳಿಗೆ ಮುಕ್ತವಾಯಿತು. 2006ರಲ್ಲಿ ಸೈನ್ಯವು ಡ್ಯುರಾಂಡ್ ಫುಟ್ಬಾಲ್ ಟೂರ್ನಮೆಂಟ್ ಸೊಸೈಟಿ (ಡಿಎಫ್ಟಿಎಸ್) ಮತ್ತು ಓಸಿಯನ್ಸ್ ಎಂದು ಕರೆಯುವ ನಾಗರಿಕರ ಸಂಘಟನೆಗೆ ತನ್ನ ಪಂದ್ಯಾವಳಿಯ ಆಡಳಿತವನ್ನು ಹಸ್ತಾಂತರಿಸಿತು. ಇತ್ತೀಚಿನ ಡ್ಯುರಾಂಡ್ ಕಪ್ ಟೂರ್ನಮೆಂಟ್ 2016 ರಲ್ಲಿ ನಡೆಯಿತು ಮತ್ತು ಪ್ರಸ್ತುತ ಚಾಂಪಿಯನ್ ಆರ್ಮಿ ಗ್ರೀನ್ ಆಗಿದೆ.
  • ಐಎಎಫ್ ಶೀಲ್ಡ್: ಐಎಫ್ಎ ಶೀಲ್ಡ್ ಭಾರತದ ಎರಡನೇ ಹಳೆಯ ಫುಟ್ಬಾಲ್ ಸ್ಪರ್ಧೆಯಾಗಿದ್ದು, ಭಾರತೀಯ ಫುಟ್ಬಾಲ್ ಅಸೋಸಿಯೇಷನ್ 1893 ರಿಂದ ಆಯೋಜಿಸುತ್ತಿದೆ. 2015ರಿಂದ ಐಎಫ್ಎ ಶೀಲ್ಡ್ ಅನ್ನು ಅಂಡರ್-19 ಯುವ ಫುಟ್ಬಾಲ್ ಪಂದ್ಯಾವಳಿಯಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಪ್ರಸ್ತುತ ಪ್ರಾಯೋಜಕರು LG ಮತ್ತು ಇತ್ತೀಚಿನ ಸ್ಪರ್ಧೆಯನ್ನು 2016 ರಲ್ಲಿ ನಡೆಸಲಾಯಿತು, ಟಾಟಾ ಫುಟ್ಬಾಲ್ ಅಕಾಡೆಮಿ ಪುಟ್ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
  • ಸುಬ್ರೊತೊ ಕಪ್: ಸುಬ್ರೊತೊ ಕಪ್ ಫುಟ್ಬಾಲ್ ಪಂದ್ಯಾವಳಿ ಏರ್ ಮಾರ್ಷಲ್ ಸುಬ್ರೊಟೊ ಮುಖರ್ಜಿ ಹೆಸರಿನ ಅಂತರ ಶಾಲಾ ಫುಟ್ಬಾಲ್ ಪಂದ್ಯಾವಳಿಯಾಗಿದೆ. ಇದು 1960ರಲ್ಲಿ ಪ್ರಾರಂಭವಾಯಿತು. ನೇಪಾಳ ಮತ್ತು ಅಫ್ಘಾನಿಸ್ತಾನದ ಶಾಲೆಗಳನ್ನು ಒಳಗೊಂಡಂತೆ ಈ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಶಾಲಾ ತಂಡಗಳು ಭಾಗವಹಿಸುತ್ತವೆ. ಭಾರತದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಬೆಂಬಲಿತವಾಗಿರುವ ಭಾರತೀಯ ವಾಯುಪಡೆಯಿಂದ ಇದನ್ನು ನಡೆಸಲಾಗುತ್ತದೆ. ಪಶ್ಚಿಮ ಬಂಗಾಳದ ಮಧ್ಯಮಗ್ರಾಮ್ ಹೈಸ್ಕೂಲ್ ಈ ಪಂದ್ಯಾವಳಿಯನ್ನು ಏಳು ಬಾರಿ ಗೆದ್ದುಕೊಂಡಿದೆ.
  • ಸಂತೋಷ್ ಕಪ್: 194 ರಲ್ಲಿ ಪ್ರಾರಂಭವಾದ ಸಂತೋಷ್ ಟ್ರೋಫಿ ರಾಜ್ಯಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ವಾರ್ಷಿಕವಾಗಿ ನಡೆಯುವ ಭಾರತೀಯ ಫುಟ್ಬಾಲ್ ಪಂದ್ಯಾವಳಿಯಾಗಿದೆ. ಸಂತೋಷ್ದ ಮಹಾರಾಜ ಸರ್ ಮನ್ಮಥಾ ನಾಥ್ ರಾಯ್ ಚೌಧರಿ ಅವರ ಹೆಸರಿನ್ನು ಟೂರ್ನಿಗೆ ಇಡಲಾಗಿದೆ. ಮೊದಲ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಗೆದ್ದುಕೊಂಡಿತು. ಪಂದ್ಯಾವಳಿಯಲ್ಲಿ ಪಶ್ಚಿಮ ಬಂಗಾಳವು ಅತ್ಯಂತ ಯಶಸ್ವೀ ತಂಡವಾಗಿದ್ದು, 32 ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
  • ಇಂಡಿಯನ್ ಸೂಪರ್ ಲೀಗ್: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪುರುಷರ ವೃತ್ತಿಪರ ಫುಟ್ ಬಾಲ್ ಲೀಗ್ ಆಗಿದೆ. 2013 ರಿಂದ ಆಯೋಜಿಸಲಾಗುತ್ತಿದ್ದು, ಐಪಿಎಲ್ ನಂತೆ ಫ್ರ್ಯಾಂಚೈಸ್ ಮಾದರಿಯನ್ನು ಆಧರಿಸಿದೆ. ಪ್ರಸ್ತುತ, ISLನಲ್ಲಿ ಎಂಟು ತಂಡಗಳಿವೆ. ಅಟ್ಲೆಟಿಕೊ ಡೆ ಕೋಲ್ಕತಾ; ಚೆನ್ನೈಯನ್ ಎಫ್ಸಿ; ದೆಹಲಿ ಡೈನಮೋಸ್; ಗೋವಾ; ಕೇರಳ ಬ್ಲಾಸ್ಟರ್ಸ್; ಮುಂಬೈ ನಗರ; ಉತ್ತರ ಪೂರ್ವ ಯುನೈಟೆಡ್ ಮತ್ತು ಪುಣೆ ನಗರ. ಇಲ್ಲಿಯವರೆಗೆ ಮೂರು ಕ್ರೀಡಾಋತುಗಳಲ್ಲಿ ಅಟ್ಲೆಟಿಕೊ ಡೆ ಕೊಲ್ಕತ್ತಾ (2014 ಮತ್ತು 2016) ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ, ಒಂದು ಋತುವಿನಲ್ಲಿ ಚೆನೈಯಿನ್ ಎಫ್ಸಿ (2015) ಪ್ರಶಸ್ತಿ ಗೆದ್ದಿದೆ.
  • ಲೀಗ್: ಐ-ಲೀಗ್ (ಅಧಿಕೃತವಾಗಿ ಹೀರೋ ಐ ಲೀಗ್) ಭಾರತದಲ್ಲಿನ ಫುಟ್ಬಾಲ್ನಲ್ಲಿ ಮತ್ತೊಂದು ವೃತ್ತಿಪರ ಲೀಗ್ ಆಗಿದೆ. 2007 ರಲ್ಲಿ ಒಎನ್ಜಿಸಿ ಐ-ಲೀಗ್ ಆಗಿ ಮತ್ತು ನ್ಯಾಷನಲ್ ಫುಟ್ಬಾಲ್ ಲೀಗ್ನ ಬದಲಾಗಿ ಇದನ್ನು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ, ಈ ಲೀಗ್ನ ಒಂಬತ್ತು ಅವಧಿಗಳನ್ನು ನಡೆಸಲಾಗಿದೆ. ಇದು 10 ಫುಟ್ಬಾಲ್ ಕ್ಲಬ್ಗಳಿಂದ ಸ್ಪರ್ಧಿಸಲ್ಪಡುತ್ತದೆ. ಐಜಾಲ್, ಬೆಂಗಳೂರು ಎಫ್ಸಿ, ಚೆನ್ನೈ ಸಿಟಿ, ಚರ್ಚಿಲ್ ಬ್ರದರ್ಸ್, ಡಿಎಸ್ಕೆ ಶಿವಜಿಯನ್ನರು, ಈಸ್ಟ್ ಬಂಗಾಳ, ಮಿನರ್ವಾ ಪಂಜಾಬ್, ಮೋಹನ್ ಬಗಾನ್, ಮುಂಬೈ ಮತ್ತು ಶಿಲ್ಲಾಂಗ್ ಲಾಜೊಂಗ್ ಈ 10 ಕ್ಲಬ್ಗಳಾಗಿವೆ.

ಆಫ್ರಿಕಾ ಅಭಿವೃದ್ದಿ ಬ್ಯಾಂಕಿನ 52ನೇ ವಾರ್ಷಿಕ ಸಾಮಾನ್ಯ ಸಭೆ

ಆಫ್ರಿಕನ್ ಅಭಿವೃದ್ದಿ ಬ್ಯಾಂಕಿನ 52 ನೇ ವಾರ್ಷಿಕ ಸಾಮಾನ್ಯ ಸಭೆ (ಎಫ್ಡಿಬಿ) ಯನ್ನು ಮೇ 22-26, 2017ರಿಂದ ಗುಜರಾತ್ನ ಗಾಂಧಿನಗರದಲ್ಲಿ ಆಯೋಜಿಸಲಾಗಿತ್ತು. ಇದೇ ಮೊದಲ ಭಾರಿಗೆ ಭಾರತದಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಆಫ್ರಿಕಾ ಅಭಿವೃದ್ದಿ ಬ್ಯಾಂಕಿನ ಸದಸ್ಯ ಮತ್ತು ಸದಸ್ಯರಲ್ಲದ ರಾಷ್ಟ್ರಗಳ ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್ಗಳು ಸೇರಿದಂತೆ ಸುಮಾರು 4500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಆಫ್ರಿಕಾ ಅಭಿವೃದ್ದಿ ಬ್ಯಾಂಕ್:

ಆಫ್ರಿಕಾ ಅಭಿವೃದ್ದಿ ಬ್ಯಾಂಕ್ ಗ್ರೂಪ್ (ಎಎಫ್ಡಿಬಿ) ಅನ್ನು “ಬಾಂಕ್ ಆಫ್ರಿಕಾನ್ ಡೆ ಡೆವಲ್ಪ್ಮೆಂಟ್ (ಬಿಎಡಿ)” ಎಂದು ಸಹ ಕರೆಯಲಾಗುತ್ತದೆ. 1964ರಲ್ಲಿ ಈ ಬ್ಯಾಂಕನ್ನು ಸ್ಥಾಪಿಸಲಾಗಿದೆ. ಸರ್ಕಾರ ಮತ್ತು ಖಾಸಗಿ ಬಂಡವಾಳ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ಆಫ್ರಿಕಾದ ಖಂಡದಲ್ಲಿ ಬಡತನದ ವಿರುದ್ಧ ಹೋರಾಡಲು ಮತ್ತು ಜನರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಆಫ್ರಿಕಾ ಅಭಿವೃದ್ದಿ ಬ್ಯಾಂಕ್ ಮೂರು ಘಟಕಗಳನ್ನು ಒಳಗೊಂಡಿದೆ. ಅವುಗಳೆಂದರೆ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕ್, ಆಫ್ರಿಕನ್ ಡೆವಲಪ್ಮೆಂಟ್ ಫಂಡ್ ಮತ್ತು ನೈಜೀರಿಯಾ ಟ್ರಸ್ಟ್ ಫಂಡ್. ಇದರ ಪ್ರಧಾನ ಕಛೇರಿ, ಕೋಟ್ ಡಿ ಐವೊರ್ (ಐವರಿ ಕೋಸ್ಟ್)ನ ಅಬಿಡ್ಜಾನ್ನಲ್ಲಿದೆ ಬ್ಯಾಂಕಿನ ಧ್ಯೇಯವಾಕ್ಯವು “Building today, a better Africa tomorrow” ಆಗಿದ್ದು, ಭಾರತ ಸೇರಿದಂತೆ ಒಟ್ಟು 78 ಸದಸ್ಯರನ್ನು ಹೊಂದಿದೆ. 1983ರಲ್ಲಿ ಭಾರತ ಈ ಬ್ಯಾಂಕಿಗೆ ಸೇರ್ಪಡೆಗೊಂಡಿತು.

ಭಾರತವು ಆಫ್ರಿಕಾ ಅಭಿವೃದ್ದಿ ಬ್ಯಾಂಕಿನ ಆಫ್ರಿಕೇತರ ಸದಸ್ಯ ರಾಷ್ಟ್ರ. ಆಫ್ರಿಕಾ ಅಭಿವೃದ್ದಿ ಬ್ಯಾಂಕಿನಲ್ಲಿ ಮತದಾನ ಅಧಿಕಾರಗಳ ಆಧಾರದ ಮೇಲೆ ನೈಜೀರಿಯಾವು ಅತಿ ದೊಡ್ಡ ರಾಷ್ಟ್ರವಾಗಿದೆ, ನಂತರದ ಸ್ಥಾನದಲ್ಲಿ ಅಮೆರಿಕ ಇದೆ. ಅಮೇರಿಕಾ, ಜಪಾನ್, ಜರ್ಮನಿ, ಕೆನಡಾ, ಫ್ರಾನ್ಸ್, ಚೀನಾ ಇತರೆ ಆಫ್ರಿಕೇತರ ರಾಷ್ಟ್ರಗಳು.

ಮಹತ್ವ:

ಇಲ್ಲಿಯವರೆಗೆ ಬ್ಯಾಂಕಿನ ವಾರ್ಷಿಕ ಸಮ್ಮೇಳನಗಳು ಆಫ್ರಿಕಾದ ಖಂಡದಲ್ಲಿ ಮಾತ್ರವೇ ನಡೆದಿವೆ. 2017ರಲ್ಲಿ ಮೊದಲ ಬಾರಿಗೆ ಬ್ಯಾಂಕ್ ತನ್ನ ಮೊದಲ ವಾರ್ಷಿಕ ಸಭೆಯು ಆಫ್ರಿಕಾದ ಹೊರಗೆ ಗುಜರಾತಿನ ಗಾಂಧಿನಗರದಲ್ಲಿ ನಡೆಯಿತು. ಈ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ದೆಹಲಿಯಲ್ಲಿ 2015ರಲ್ಲಿ ನಡೆದ ಭಾರತ ಆಫ್ರಿಕಾ ಫೋರಮ್ ಶೃಂಗಸಭೆಯ ಬೆನ್ನಲ್ಲೇ ಈ ಸಭೆಯನ್ನು ಭಾರತದಲ್ಲಿ ಆಯೋಜಿಸಲಾಗಿದ್ದು ವಿಶೇಷ.

ಚೂರು ಪಾರು:

  • ಕರ್ನಾಟಕದ ಪುಟಾಣಿ ಲಿಪಿಕಾ ಶೆಟ್ಟಿಗೆ “ಲಿಟಲ್ ಮಿಷ್ ಏಷ್ಯಾ” ಕಿರೀಟ: ಟರ್ಕಿ ದೇಶದ ಅಂತಾಲಿಯಾದಲ್ಲಿ ನಡೆದ ‘ಫೆಸ್ಟಿವೆಲ್‌ ಮಾಡೆಲ್‌ ಆಂಡ್‌ ಟ್ಯಾಲೆಂಟ್‌’ ಎಂಬ ಜಾಗತಿಕ ಸ್ಪರ್ಧೆಯಲ್ಲಿ ಕರಾವಳಿಯ ಪುಟಾಣಿ ‘ಲಿಟಲ್‌ ಮಿಸ್‌ ಏಷ್ಯಾ’  ಕಿರೀಟ ಮುಡಿಗೇರಿಸಿಕೊಂಡಿದ್ದಾಳೆ. ಕುಂದಾಪುರ ಗೋಪಾಡಿಯ ಲಿಪಿಕಾ ಶೆಟ್ಟಿಯ ತಂದೆ ವಿಠಲ ಶೆಟ್ಟಿ ತಾಯಿ ಸಾಂಚಿ ಶೆಟ್ಟಿ ಪ್ರಸ್ತುತ ಮುಂಬೈಯ ಅಂಧೇರಿಯಲ್ಲಿ ನೆಲೆಸಿದ್ದಾರೆ. ಲಿಪಿಕಾ ಈಗ ನಾಲ್ಕನೇ ತರಗತಿ ವಿದ್ಯಾರ್ಥಿನಿ.

3 Thoughts to “ಪ್ರಚಲಿತ ವಿದ್ಯಮಾನಗಳು-ಮೇ,29,2017”

  1. Good work carry on continue because just behind u only 15days .. Now u update may 29..today date 14june …so its good for us keep maintain this sir

  2. Jagadeesh K

    Very good work sir it will helps who are following you including me also

Leave a Comment

This site uses Akismet to reduce spam. Learn how your comment data is processed.