ಬಾಹ್ಯಕಾಶದಲ್ಲಿ ಹೊಸ ದಾಖಲೆ ಬರೆದ ಪೆಗ್ಗಿ ವಿಟ್ಸನ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅತಿ ಹೆಚ್ಚು ಕಾಲ ಕಳೆದ ಮಹಿಳೆ ಎಂಬ ಹೆಗ್ಗಳಿಕೆಗೆ ಅಮೆರಿಕದ ಗಗನಯಾತ್ರಿ ಪೆಗ್ಗಿ ವಿಟ್ಸನ್‌  ಪಾತ್ರರಾಗಿದ್ದಾರೆ. ಪೆಗ್ಗಿ ಅವರು 577 ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದಾರೆ. ಆ ಮೂಲಕ ಈ ಹಿಂದೆ ಗಗನಯಾತ್ರಿ ಜೆಫ್ ವಿಲಿಯಮ್ಸ್ ಅವರು 534 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದು ನಿರ್ಮಿಸಿದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.  ಪೆಗ್ಗಿ ಅವರ ಈ ಸಾಧನೆಯನ್ನು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಎಕ್ಸಿಪಿಡಿಶನ್-51 ರಲ್ಲಿ ಸ್ಪೇಸ್ ಕಮಾಂಡರ್ ಆಗಿ ಪೆಗ್ಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನವೆಂಬರ್ 2016ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ರಷ್ಯಾದ ಸೊಯುಝ್ ನೌಕೆ ಮೂಲಕ ಅವರನ್ನು ಕಳುಹಿಸಿ ಕೊಡಲಾಗಿತ್ತು. ಇದಕ್ಕೂ ಮೊದಲು 377 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದರು. ಭೂಮಿಗೆ ಮರಳುವ ವೇಳೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಅವರು ಕಳೆದ ದಿನಗಳು 650ಅನ್ನೂ ಮೀರಲಿದೆ ಎಂದು ನಾಸಾ ತಿಳಿಸಿದೆ.

  • 2008ರಲ್ಲಿ ಬಾಹ್ಯಾಕಾಶ ನಿಲ್ದಾಣದ ಸಾರಥ್ಯ ವಹಿಸಿಕೊಳ್ಳುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಎರಡು ಬಾರಿ ಈ ಹುದ್ದೆಯನ್ನು ಅಲಂಕರಿಸಿರುವುದು ಸಹ ದಾಖಲೆ ಎನಿಸಿದೆ.
  • ಪೆಗ್ಗಿ, 53 ಗಂಟೆಗೂ ಹೆಚ್ಚು ಕಾಲ ಬಾಹ್ಯಾಕಾಶ ನಡಿಗೆ ನಡೆಸಿದ ದಾಖಲೆಯನ್ನೂ ಮಾರ್ಚ್‌ನಲ್ಲಿ ತಮ್ಮದಾಗಿಸಿಕೊಂಡಿದ್ದರು.
  • ಭಾರತ ಮೂಲದ ಅಮೆರಿಕದ ನಿವಾಸಿ ಸುನಿತಾ ವಿಲಿಯಮ್ಸ್‌ ಅವರು 50 ಗಂಟೆ 40 ನಿಮಿಷದ ಅವಧಿಯಲ್ಲಿ ಒಟ್ಟು ಏಳು ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದರು.
  • 1980ರಲ್ಲಿ ನಾಸಾದಲ್ಲಿ ವೃತ್ತಿ ಬದುಕು ಆರಂಭಿಸಿದ ಪೆಗ್ಗಿ, ಸಂಶೋಧನೆ ಸಂಬಂಧಿತ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 1992ರಲ್ಲಿ ಷಟ್ಲ್‌ ಮಿರ್‌ ಕಾರ್ಯಕ್ರಮದ ಯೋಜನಾ ವಿಜ್ಞಾನಿಯಾಗಿ ನೇಮಕವಾಗಿದ್ದರು.  2002ರಲ್ಲಿ ಅವರು ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಆಗ 184 ದಿನಗಳಲ್ಲಿ ಅಲ್ಲಿ ಕಳೆದಿದ್ದರು.
  • 57ನೇ ವರ್ಷದವರಾದ ಇವರು ಬಾಹ್ಯಕಾಶಕ್ಕೆ ತೆರಳಿದ ಹಿರಿಯ ಮಹಿಳೆ ಸಹ ಆಗಿದ್ದಾರೆ.

ಗೋವುಗಳಿಗೂ ಆಧಾರ ಮಾದರಿಯ ಗುರುತಿನ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ

ಗೋವುಗಳ ರಕ್ಷಣೆ ಮತ್ತು ಅಕ್ರಮ ಸಾಗಾಟವನ್ನು ತಪ್ಪಿಸಲು ಆಧಾರ್ ನಂತಹ ಗುರುತು ಸಂಖ್ಯೆಯನ್ನು ನೀಡುವಂತೆ ತಜ್ಞರ ಸಮಿತಿಯ ಶಿಫಾರಸ್ಸಿನಂತೆ ಗೋವುಗಳಿಗೂ ಗುರುತಿನ ಸಂಖ್ಯೆಯನ್ನು ನೀಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಗೃಹ ಸಚಿವಾಲಯ ರಚಿಸಿದ್ದ ಸಮಿತಿಯು ಆಗಸ್ಟ್ 2016ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಅದರಂತೆ ಆಯಾ ಗೋವುಗಳ ವಯಸ್ಸು, ತಳಿ, ಲಿಂಗ, ಸ್ಥಳ, ಎತ್ತರ, ದೇಹ, ಬಣ್ಣ, ಕೊಂಬುವಿನತಹ ಇತರೆ ಮಾಹಿತಿ ಈ ಆಧಾರ್ ಕಾರ್ಡ್ ನಲ್ಲಿ ಇರಲಿದೆ. ಪಾಲಿಯುರೇಥಿನ್ ಟ್ಯಾಗ್ ರೂಪದಲ್ಲಿ ಗುರುತಿನ ಸಂಖ್ಯೆ ಇರಲಿದೆ. ಇದರ ಜೊತೆಗೆ ನೋಂದಣಿ ದಾಖಲೆಯನ್ನು ಹಸುವಿನ ಮಾಲೀಕನು ನಿರ್ವಹಿಸಬೇಕಿದ್ದು, ಮಾರಾಟದ ವೇಳೆ ಇದನ್ನು ವರ್ಗಾಯಿಸಬಹುದಾಗಿದೆ. ಅಖಿಲ ಭಾರತ ಕೃಷಿ ಗೋಸೇವಾ ಸಂಘ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ವಿಚಾರವನ್ನು ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಅವಶ್ಯಕತೆ

ಗುರುತಿನ ಸಂಖ್ಯೆಯಿಂದಾಗಿ ಭಾರತ- ಬಾಂಗ್ಲಾದೇಶದ ಗಡಿಭಾಗದಲ್ಲಿ ನಡೆಯುವ ಗೋವುಗಳ ಕಳ್ಳಸಾಗಾಣಿಕೆ, ಮಾರಾಟವನ್ನು ತಪ್ಪಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.

ಈಶಾನ್ಯ ಭಾರತದ ಅತಿ ದೊಡ್ಡ IT ಹಬ್ ಗೆ ತ್ರಿಪುರಾದಲ್ಲಿ ಚಾಲನೆ

ಈಶಾನ್ಯ ಭಾರತದ ಆರನೇ ಹಾಗೂ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಹಬ್ ಅನ್ನು ತ್ರಿಪುರಾದ ಅಗರ್ತಲಾದಲ್ಲಿ ಉದ್ಘಾಟಿಸಲಾಯಿತು. ಸುಮಾರು ರೂ 50 ಕೋಟಿ ವೆಚ್ಚದಲ್ಲಿ ಈ ಹಬ್ ನಿರ್ಮಾಣಗೊಂಡಿದೆ. ಉದ್ಯೋಗವಕಾಶ ಹಾಗೂ ಇ-ಆಡಳಿತವನ್ನು ಬೆಂಬಲಿಸುವುದರ ಜೊತೆಗೆ ಸಾಫ್ಟ್ ವೇರ್ ತಂತ್ರಜ್ಞಾನವನ್ನು ರಫ್ತು ಮಾಡುವ ಸಲುವಾಗಿ ಈ ಹಬ್ ಗೆ ಚಾಲನೆ ನೀಡಲಾಗಿದೆ. ಇದರಿಂದ ಈಶಾನ್ಯ ಭಾಗದ ಯುವ ಜನತೆಗೆ ಹೆಚ್ಚಿನ ಉದ್ಯೋಗವಕಾಶ ಸೃಷ್ಟಿಯಾಗುವುದರ ಜೊತೆಗೆ ಈ ಭಾಗಕ್ಕೆ ಇ-ಆಡಳಿತ ವಿಸ್ತರಣೆಗೂ ಸಹಾಯವಾಗಲಿದೆ. ಈಶಾನ್ಯ ಭಾಗದಲ್ಲಿ ಇದು ಅತಿ ದೊಡ್ಡ ಐಟಿ ಹಬ್ ಆಗಿದೆ.

ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ: ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ರಾಜ್ಯ ಸರ್ಕಾರಗಳಿಗೆ ಸಾಫ್ಟ್ ವೇರ್ ಹಬ್ ಗಳನ್ನು ಅಭಿವೃದ್ದಿಪಡಿಸಲು ತಂತ್ರಜ್ಞಾನ ವಿನಿಮಯವನ್ನು ಮಾಡಿಕೊಳ್ಳಲಾಗುತ್ತಿದೆ.

ಅವಶ್ಯಕತೆ:

ಇಂಗ್ಲೀಷ್ ಭಾಷೆ ನೈಪುಣ್ಯತೆ ಹೊಂದಿರುವ ಐಟಿ ಮಾನವ ಸಂಪನ್ಮೂಲ ತ್ರಿಪುರದಲ್ಲಿ ಹೇರಳವಾಗಿದೆ. ಆದರೆ ಸಾವಿರಾರು ಜನರು ಬೆಂಗಳೂರು, ಹೈದ್ರಾಬಾದಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಐಟಿ ಹಬ್ ಸ್ಥಾಪನೆಯಿಂದ ಕೇವಲ ತ್ರಿಪುರದವರಿಗೆ ಮಾತ್ರವಲ್ಲದೇ ಇತರೆ ಈಶಾನ್ಯ ರಾಜ್ಯದವರಿಗೂ ಅನುಕೂಲವಾಗಲಿದೆ.

GNFCಗೆ ಗೋಲ್ಡನ್ ಗ್ಲೋಬ್ ಟೈಗರ್ಸ್ ಅವಾರ್ಡ್

ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ಕಂಪನಿಗೆ 2017 ಗೋಲ್ಡನ್ ಗ್ಲೋಬ್ ಟೈಗರ್ಸ್ ಆವಾರ್ಡ್ ಫಾರ್ ಸಿಎಸ್ಆರ್ ಪ್ರಶಸ್ತಿ ಲಭಿಸಿದೆ. ಇ-ಪೇಮೆಂಟ್ ಲೀಡರ್ಶಿಪ್ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. GNFC ಟೌನ್ ಷಿಪ್ ನಲ್ಲಿ ಡಿಜಿಟಲ್ ವಹಿವಾಟನ್ನು ಅನುಷ್ಠಾನಗೊಳಿಸಿದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಮಲೇಷಿಯಾದ ಕೌಲಾಲಂಪುರದಲ್ಲಿ ನಡೆದ ಗೋಲ್ಡನ್ ಗ್ಲೋಬ್ ಟೈಗರ್ಸ್ ನೈಟ್ -2017 ಅಲ್ಲಿ GNFC ಗೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. 43 ದೇಶಗಳ ಜಾಗತಿಕ ಸಿಎಸ್ಆರ್ ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು. GNFCಗೆ ಈ ವಿಭಾಗದಲ್ಲಿ ದೊರೆತಿರುವ ಎರಡನೇ ಪ್ರಶಸ್ತಿ ಇದಾಗಿದೆ. ನಗದು ರಹಿತ ವ್ಯವಹಾರಕ್ಕಾಗಿ ಗೋಲ್ಡನ್ ಪಿಕಾಕ್ ಪ್ರಶಸ್ತಿಯನ್ನು ಈಗಾಗಲೇ ಪಡೆದುಕೊಂಡಿದೆ.

GNFC:

  • ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, 1976ರಲ್ಲಿ ಸ್ಥಾಪಿಸಲಾಗಿದೆ.
  • ನಗದು ರಹಿತ ಆರ್ಥಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಸಗೊಬ್ಬರ ಸಂಸ್ಥೆ ಇದಾಗಿದೆ.
  • GNFC ಬರೂಚ್ ಟೌನ್ ಷಿಪ್ ದೇಶದ ಮೊದಲ 100% ನಗದು ರಹಿತ ಟೌನ್ ಷಿಪ್ ಎನಿಸಿದೆ.
  • ಇತ್ತೀಚೆಗೆ ಪ್ರಧಾನಿ ಮೋದಿ ಅವರು 12 ರಾಜ್ಯಗಳ 81 GNFC ನಗದು ರಹಿತ ಮಾದರಿಯ ಟೌನ್ ಷಿಪ್ಗಳಿಗೆ ಚಾಲನೆ ನೀಡಿದರು.

ಚೂರು ಪಾರು ಪ್ರಶಸ್ತಿ:

  • KSRTCಗೆ ಹುಡ್ಕೊ ಪ್ರಶಸ್ತಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮೈಸೂರಿನಲ್ಲಿ ಜಾರಿಗೊಳಿಸಿರುವ ‘ಜಾಣ ಸಾರಿಗೆ’ ವ್ಯವಸ್ಥೆಗೆ ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ನಿಗಮ (ಹುಡ್ಕೊ) ನೀಡುವ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿದೆ.ಪ್ರಶಸ್ತಿಯು ₹ 1 ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,28,29,2017”

  1. Supriya

    Sir kas model test nadisi please

Leave a Comment

This site uses Akismet to reduce spam. Learn how your comment data is processed.