ಪ್ರಫುಲ್ಲಾ ಸಮಂತ್ರಾಗೆ ಗೋಲ್ಡ್ ಮನ್ ಎನ್ವಿರಾನ್ಮೆಂಟಲ್ ಪ್ರಶಸ್ತಿ

ಸಾಮಾಜಿಕ ಕಾರ್ಯಕರ್ತ ಪ್ರಫುಲ್ಲಾ ಸಮಂತ್ರಾ ಅವರನ್ನು ಪ್ರತಿಷ್ಠಿತ ಗೋಲ್ಡ್ ಮನ್ ಎನ್ವಿರಾನ್ಮೆಂಟಲ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರತಿಷ್ಠಿತ ಪ್ರಶಸ್ತಿಗೆ ಒಟ್ಟು ಆರು ಜನರನ್ನು ಆಯ್ಕೆಮಾಡಲಾಗಿದ್ದು, ಅದರಲ್ಲಿ ಪ್ರಫುಲ್ಲಾ ಅವರು ಸಹ ಒಬ್ಬರಾಗಿದ್ದಾರೆ. ಸತತವಾಗಿ 12 ವರ್ಷಗಳ ಕಾಲ ನ್ಯಾಯಾಂಗ ಹೋರಾಟ ನಡೆಸಿ ದೊಂಗ್ರಿ ಕಾಂಡ್ನ ಭೂಮಿ ಹಕ್ಕನ್ನು ಎತ್ತಿಹಿಡಿದಕ್ಕಾಗಿ ಹಾಗೂ ಅಲ್ಯೂಮಿನಿಯಂ ಗಣಿಗಾರಿಕೆಯಿಂದ ನಿಯಾಮಗಿರಿ ಬೆಟ್ಟ ಪ್ರದೇಶವನ್ನು ಸಂರಕ್ಷಿಸಲು ಶ್ರಮಿಸಿದಕ್ಕಾಗಿ ಈ ಪ್ರಶಸ್ತಿಯನ್ನು ಸಮಂತ್ರಾ ಅವರಿಗೆ ನೀಡಲಾಗಿದೆ.

ಪ್ರಶಸ್ತಿ ಗೆದ್ದ ಇತರ ಐದು ಮಂದಿ:

ಮಾರ್ಕ್ ಲೊಪೆಝ್ (ಅಮೆರಿಕ), ಉರೊಸ್ ಮಸೆರ್ಲ್ (ಸ್ಲೊವೊನಿಯಾ), ರೊಡ್ರಿಗೊ ಟೊಟ್ (ಗ್ವಾಟೆಮಾಲ), ರೊಡ್ರಿಗೊ ಕಟೆಮ್ಬೊ (ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ) ಮತ್ತು ವೆಂಡಿ ಬೌಮನ್ (ಆಸ್ಟ್ರೇಲಿಯಾ).

ಪ್ರಫುಲ್ಲಾ ಸಮಂತ್ರಾ:

ಕಾನೂನು ಪದವಿಯನ್ನು ಪಡೆದಿರುವ ಪ್ರಫುಲ್ಲಾ ಸಮಂತ್ರಾ ಅವರು ಜಯಪ್ರಕಾಶ್ ನಾರಾಯಣ್ ಚಳುವಳಿ ಅವಧಿಯಿಂದಲೂ ಅವರು ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ನಿಯಾಮಗಿರಿ ಪ್ರದೇಶದಲ್ಲಿ ವೇದಾಂತ ಕಂಪನಿ ಅಲ್ಯೂಮಿನಿಯಂ ಅದಿರು ಗಣಿಗಾರಿಕೆಯನ್ನು ನಡೆಸುವುದರ ವಿರುದ್ದ ಬುಡಕಟ್ಟು ಜನಾಂಗದವರು ನಡೆಸಿದ ಹೋರಾಟದ ನಾಯಕತ್ವವನ್ನು ಪ್ರಫುಲ್ಲಾ ಅವರು ವಹಿಸಿಕೊಂಡಿದ್ದರು. ಸಮಂತ್ರಾ ಅವರ ಹೋರಾಟದಿಂದಾಗಿ ನಿಯಾಮಗಿರಿ ಪ್ರದೇಶದಲ್ಲಿ ವೇದಾಂತ ಸಂಸ್ಥೆ ಅಲ್ಯೂಮಿನಿಯಂ ಅದಿರು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತು. ಏಪ್ರಿಲ್ 18, 2013 ರಲ್ಲಿ ಅಲ್ಯೂಮಿನಿಯಂ ಗಣಿಗಾರಿಕೆ ನಡೆಸಬೇಕೆ ಅಥವಾ ಬೇಡವೆ ಎನ್ನುವ ನಿರ್ಧಾರವನ್ನು ಗ್ರಾಮಸಭೆಯಲ್ಲಿ ನಿರ್ಧರಿಸತಕ್ಕದ್ದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಅದರಂತೆ ನಿಯಾಮಗಿರಿಯಲ್ಲಿ ಗಣಿಗಾರಿಕೆ ನಡೆಸುವುದರ ವಿರುದ್ದ ಅಲ್ಲಿನ ಗ್ರಾಮ ಸಭೆ ಠರಾವು ಹೊರಡಿಸಿತು. ಇದರಿಂದಾಗಿ 2015 ಆಗಸ್ಟ್ ರಲ್ಲಿ ವೇದಾಂತ ಕಂಪನಿ ಗಣಿಗಾರಿಕೆಯನ್ನು ನಿಲ್ಲಿಸುವುದಾಗಿ ತನ್ನ ತೀರ್ಮಾನವನ್ನು ಪ್ರಕಟಿಸಿತು.

  • ಸಮಂತ್ರಾ ಅವರು ಈ ಪ್ರಶಸ್ತಿಯನ್ನು ಪಡೆದ ಆರನೇ ಭಾರತೀಯ. ಈ ಹಿಂದೆ ಮೇಧಾ ಪಾಟ್ಕರ್, ಎಂ ಸಿ ಮೆಹ್ತಾ, ರಶೀದ ಬಿ, ಚಂಪಾರಣ್ ಶುಕ್ಲಾ ಮತ್ತು ರಮೇಶ್ ಅಗರವಾಲ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಗೋಲ್ಡ್ ಮನ್ ಎನ್ವಿರಾನ್ಮೆಂಟಲ್ ಪ್ರಶಸ್ತಿ:

  • ಪ್ರಶಸ್ತಿಯನ್ನು 1990 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಾಣವನ್ನು ಒತ್ತೆ ಇಟ್ಟು ತಳಮಟ್ಟದಲ್ಲಿ ಪರಿಸರ ಸಂರಕ್ಷಣೆಗೆ ತಮ್ಮನೇ ತಾವೆ ತೊಡಗಿಸಿಕೊಳ್ಳುವ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸ್ಯಾನ್ ಫ್ರಾನ್ಸಿಕೊದಲ್ಲಿರುವ ಗೋಲ್ಡ್ ಮನ್ ಎನ್ವಿರಾನ್ಮೆಂಟಲ್ ಫೌಂಡೇಶನ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯನ್ನು ಗ್ರೀನ್ ನೊಬೆಲ್ ಎಂತಲೂ ಕರೆಯಲಾಗುತ್ತದೆ. ಪ್ರತಿ ವರ್ಷ ಆರು ಜನರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ನ್ಯೂಟನ್” ಚಿತ್ರಕ್ಕೆ ಪ್ರಶಸ್ತಿ

ಹಿಂದಿ ಸಿನಿಮಾ “ನ್ಯೂಟನ್”ಗೆ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ. ಈ ಮುಂಚೆ ಬರ್ಲಿನಾಲ್ನಲ್ಲಿ ಈ ಚಿತ್ರ ಮೊದಲ ಪ್ರದರ್ಶನ ಕಂಡಿತ್ತು. ಅಲ್ಲದೇ ಬರ್ಲಿನಾಲ್ನ ಫೋರಂ ವಿಭಾಗದಲ್ಲಿ ಅತ್ಯುತ್ತಮ ಕಲಾ ಸಿನಿಮಾ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. 16ನೇ ವಾರ್ಷಿಕ ಟ್ರಿಬೆಕಾ ಚಲನಚಿತ್ರೋತ್ಸವಕ್ಕೆ ಸಹ ಆಯ್ಕೆಯಾಗಿತ್ತು.

  • ನ್ಯೂಟನ್ ಸಿನಿಮಾ ರಾಜಕೀಯ ಹಾಸ್ಯ ಭರಿತ ಚಿತ್ರವಾಗಿದ್ದು, ಅಮಿತ್ ಮಸುರ್ಕರ್ ಅವರು ನಿರ್ದೇಶಿಸಿದ್ದಾರೆ. ಚತ್ತಿಸ್ ಘರ್ ನ ಸಂಘರ್ಷಿತ ಸ್ಥಳದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಗುಮಾಸ್ತನೊಬ್ಬನ ಸುತ್ತಾ ಕತೆಯನ್ನು ಎಣೆಯಲಾಗಿದೆ. ಈ ಚಿತ್ರವನ್ನು ಚತ್ತಿಸ್ ಘರ್ ನ ಕಾಡಿನಲ್ಲಿ ಚಿತ್ರೀಕರಿಸಲಾಗಿದೆ.

ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ:

ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು 1976 ರಿಂದ ಆಯೋಜಿಸಲಾಗುತ್ತಿದೆ. ಇದು ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವ. ಪ್ರತಿ ವರ್ಷ ಸುಮಾರು 55 ದೇಶಗಳ 250 ಸಿನಿಮಾಗಳನ್ನು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ರಕ್ಷಣಾ ಕ್ಷೇತ್ರಕ್ಕೆ ವ್ಯಯಿಸುವ ರಾಷ್ಟ್ರಗಳ ಪೈಕಿ ಭಾರತಕ್ಕೆ 5ನೇ ಸ್ಥಾನ

ಮಿಲಿಟರಿ ಕ್ಷೇತ್ರಕ್ಕೆ ಖರ್ಚು ಮಾಡುವ ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ವರದಿಯ ಪ್ರಕಾರ 2016ರಲ್ಲಿ ಭಾರತ ಮಿಲಿಟರಿ ಕ್ಷೇತ್ರಕ್ಕೆ $55.9 ಬಿಲಿಯನ್ ಖರ್ಚು ಮಾಡಿದೆ. ಈ ಪಟ್ಟಿಯಲ್ಲಿ ಎಂದಿನಂತೆ ಅಮೆರಿಕ ಮೊದಲ ಸ್ಥಾನದಲ್ಲಿದೆ. ಚೀನಾ, ರಷ್ಯಾ ಮತ್ತು ಸೌದಿ ಅರೇಬಿಯಾ ನಂತರದ ಸ್ಥಾನದಲ್ಲಿವೆ. ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಟಾಪ್ 15 ರಾಷ್ಟ್ರಗಳಲ್ಲಿ ಒಂದಾಗಿವೆ.

ಜಾಗತಿಕ ವರದಿ:

  • ವಿಶ್ವದ ಶೇ 2.2% ಜಿಡಿಪಿ ಯನ್ನು ಮಿಲಿಟರಿ ಕ್ಷೇತ್ರಕ್ಕೆ ಖರ್ಚು ಮಾಡಲಾಗುತ್ತಿದೆ. ಜಿಡಿಪಿಯಲ್ಲಿ ಮಿಲಿಟರಿ ಕ್ಷೇತ್ರಕ್ಕೆ ಖರ್ಚು ಮಾಡುವ ಪ್ರಮಾಣ ಮಧ್ಯಪ್ರಾಚ್ಯಗಳಲ್ಲಿ ಅತಿ ಹೆಚ್ಚು ಮತ್ತು ಅಮೆರಿಕದಲ್ಲಿ ಅತಿ ಕಡಿಮೆ.
  • ಏಷ್ಯಾ ಮತ್ತು ಒಷೇನಿಯಾ ವಲಯದಲ್ಲಿ ಮಿಲಿಟರಿ ಖರ್ಚು ಶೇ 4.4% ಹೆಚ್ಚಾಗಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಸಾರ್ವಭೌಮತ್ವ ಸಾಧಿಸಲು ಕೆಲವು ರಾಷ್ಟ್ರಗಳು ಸೆಣಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
  • ಜಗತ್ತಿನಲ್ಲಿ ಮಿಲಿಟರಿ ಕ್ಷೇತ್ರಕ್ಕೆ ಖರ್ಚು ಮಾಡುವ ಅತಿ ದೊಡ್ಡ ರಾಷ್ಟ್ರವಾದ ಅಮೆರಿಕದಲ್ಲಿ 2015 ಮತ್ತು 2016ರ ನಡುವೆ ಶೇ 1.7% ಹೆಚ್ಚಾಗಿದ್ದು $ 611 ಬಿಲಿಯನ್ ರಷ್ಟಿದೆ.
  • ಚೀನಾ $ 215 ಬಿಲಿಯನ್ ಖರ್ಚು ಮಾಡಿದರೆ, ರಷ್ಯಾ $ 69.2 ಬಿಲಿಯನ್ ಖರ್ಚು ಮಾಡಿದೆ.
  • 2015ರಲ್ಲಿ ಮೂರನೇ ಸ್ಥಾನದಲ್ಲಿ ಸೌದಿ ಅರೇಬಿಯಾ ಈ ಬಾರಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.
  • ಪಾಕಿಸ್ತಾನ $ 9.93 ಬಿಲಿಯನ್ ಖರ್ಚು ಮಾಡಿದೆ ಆದರೆ ಟಾಪ್ 15 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.

SIPRI:

ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಒಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಂತಾರಾಷ್ಟ್ರೀಯ ಸಂಸ್ಥೆ. ಸಂಘರ್ಷ, ಶಸ್ತ್ರಾಸ್ತ್ರಗಳು, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿರಸ್ತ್ರೀಕರಣದ ಬಗ್ಗೆ ಸಂಶೋಧನೆಗೆ ಮೀಸಲಾಗಿರುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ.

Leave a Comment

This site uses Akismet to reduce spam. Learn how your comment data is processed.