ಏಪ್ರಿಲ್ 24: ಪಂಚಾಯತ್ ರಾಜ್ ದಿವಸ್

ಭಾರತದಲ್ಲಿ ಪ್ರತಿ ವರ್ಷ ಪಂಚಾಯತ್ ರಾಜ್ ದಿವಸವನ್ನು ಏಪ್ರಿಲ್ 24 ರಂದು ಆಚರಿಸಲಾಗುತ್ತದೆ. ಸಂವಿಧಾನದ 73ನೇ ತಿದ್ದುಪಡಿ ಕಾಯಿದೆ,-1992, ಏಪ್ರಿಲ್ 24, 1993ರಂದು ಜಾರಿಗೆ ಬಂದ ಕಾರಣ ಈ ದಿನದಂದು ಪಂಚಾಯತ್ ರಾಜ್ ದಿವಸವನ್ನು ಆಚರಿಸಲಾಗುತ್ತದೆ. ಸಂವಿಧಾನ 73ನೇ ತಿದ್ದುಪಡಿ ಜಾರಿಗೆ ಬಂದಿದ್ದು, ಭಾರತ ಇತಿಹಾಸದಲ್ಲಿ ಒಂದು ಅವಿಸ್ಮರಣಿಯ ಸಾಧನೆ ಎಂದೇ ಹೇಳಲಾಗಿದೆ. ಈ ಕಾಯಿದೆಯಿಂದಾಗಿ ರಾಜ್ಯಗಳು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತಿಗಳನ್ನು ರಚಿಸಿ, ಅವುಗಳ ಕಾರ್ಯನಿರ್ವಹಣೆಗೆ ಅಗತ್ಯವಿರುವ ಅಧಿಕಾರಗಳನ್ನು ಓದಗಿಸಿ ವಿಕೇಂದ್ರಿಕರಣ ಸರ್ಕಾರವನ್ನು ರಚಿಸಿವೆ. ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಪ್ರತಿ ವರ್ಷ ಈ ದಿನದಂದು ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವುದರೊಂದಿಗೆ ಅತ್ಯುತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ/ಪಂಚಾಯತ್ ಸಶಕ್ತೀಕರಣ ಪುರಸ್ಕಾರವನ್ನು ನೀಡುತ್ತಿದೆ.

ಹಿನ್ನಲೆ:

  • ಪ್ರಪ್ರಥಮ ರಾಷ್ಟ್ರೀಯ ಪಂಚಾಯತ್ ದಿವಸವನ್ನು 2010ರಲ್ಲಿ ಆಚರಿಸಲಾಯಿತು.
  • ಸಂವಿಧಾನದ 73ನೇ ತಿದ್ದುಪಡಿ ಕಾಯಿದೆಯಡಿ ಸಂವಿಧಾನದಲ್ಲಿ ಹೊಸದಾಗಿ “ಭಾಗ IX” ಅಳವಡಿಸಲಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದಂತೆ “ವಿಧಿ 243 ರಿಂದ ವಿಧಿ 243 (O) ಅನ್ನು ಈ ಭಾಗ ಒಳಗೊಂಡಿದೆ.

ರಾಷ್ಟ್ರೀಯ ಯುವ ಅಥ್ಲೇಟಿಕ್ಸ್ ಕ್ರೀಡಾಕೂಟ: ಹರಿಯಾಣ ಚಾಂಪಿಯನ್

ರಾಷ್ಟ್ರೀಯ ಯುವ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಕೇರಳವನ್ನು ಹಿಂದಿಕ್ಕಿ ಹರಿಯಾಣ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಐದು ವರ್ಷಗಳಿಂದ ಕೇರಳ ಮೊದಲ ಸ್ಥಾನವನ್ನು ಕಾಯ್ದುಕೊಂಡಿತ್ತು. ಈ ಬಾರಿ 116.5 ಸಮಗ್ರ ಅಂಕಗಳೊಂದಿಗೆ ಹರಿಯಾಣ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕೇರಳ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

  • ಬಾಲಕಿಯರ ವಿಭಾಗದಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ, ಬಾಲಕರ ವಿಭಾಗದಲ್ಲಿ ಹರಿಯಾಣ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿತು.
  • ರಾಷ್ಟ್ರೀಯ ಯುವ ಅಥ್ಲೇಟಿಕ್ಸ್ ಕ್ರೀಡಾಕೂಟ GMC ಬಾಲಯೋಗಿ ಅಥ್ಲೇಟಿಕ್ ಸ್ಟೇಡಿಯಂ, ಗಚ್ಚಿಬೋಲಿಯಲ್ಲಿ ಆಯೋಜನೆಗೊಂಡಿತ್ತು. ಏಪ್ರಿಲ್ 21 ರಿಂದ 23 ರವರೆಗೆ ನಡೆದ ಕ್ರೀಡಾಕೂಟದಲ್ಲಿ 505 ಅಥ್ಲೇಟಿಕ್ ಗಳು ಭಾಗವಹಿಸಿದ್ದರು.
  • ರಾಷ್ಟ್ರೀಯ ಯುವ ಅಥ್ಲೇಟಿಕ್ಸ್ ಕ್ರೀಡಾಕೂಟ ಮೇ ನಲ್ಲಿ ನಡೆಯಲಿರುವ ಮುಂಬರುವ ಏಷ್ಯಾ ಚಾಂಪಿಯನ್ ಷಿಪ್ ಹಾಗೂ ಜುಲೈನಲ್ಲಿ ನೈರೊಬಿನಲ್ಲಿ ನಡೆಯಲಿರುವ ವಿಶ್ವ ಯುವ ಚಾಂಪಿಯನ್ ಷಿಪ್ ಗೆ ಅಥ್ಲೇಟಿಕ್ಸ್ ಗಳನ್ನು ಆಯ್ಕೆಮಾಡಲು ಪ್ರಮುಖ ಪಾತ್ರವಹಿಸಲಿದೆ.

ಶಂಕರಾಭರಣಂ ವಿಶ್ವನಾಥ್ ಗೆ 2016- ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ

ಖ್ಯಾತ ನಿರ್ದೇಶಕ, ನಟ ಹಾಗೂ ಧ್ವನಿ ವಿನ್ಯಾಸಕ ಕೆ. ವಿಶ್ವನಾಥ್ ಅವರನ್ನು 2016 ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರೂ 10 ಲಕ್ಷ ನಗದು,  ಸ್ವರ್ಣ ಕಮಲ ಹಾಗೂ ಶಾಲು ಒಳಗೊಂಡಿದ್ದು, ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ಮೇ 3ರಂದು ಪ್ರದಾನ ಮಾಡಲಿದ್ದಾರೆ. ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಕೆ ವಿಶ್ವನಾಥ್ ಅವರು 50 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಪ್ರಮುಖಾಂಶಗಳು:

  • ಕೃಷ್ಣಾ ನದಿ ತೀರದ ಪೆದಪುಲಿವರ್ರು ಎಂಬ ಹಳ್ಳಿಯಲ್ಲಿ ಸುಬ್ರಹ್ಮಣ್ಯಂ ಹಾಗೂ ಸರಸ್ವತಿ ದಂಪತಿಯ ಮಗನಾಗಿ 1930ರಲ್ಲಿ ಹುಟ್ಟಿದರು.
  • ಚೆನ್ನೈನ ಸ್ಟುಡಿಯೊದಲ್ಲಿ ತಂತ್ರಜ್ಞನಾಗಿ ಚಲನಚಿತ್ರ ವೃತ್ತಿ ಪ್ರಾರಂಭಿಸಿದರು. ನಿರ್ದೇಶಕರಾದ ಅದುರ್ತಿ ಸುಬ್ಬರಾವ್ ಹಾಗೂ ರಾಮನಾಥ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿ ಅನುಭವ ಪಡೆದುಕೊಂಡರು..
  • ಅಕ್ಕಿನೇನಿ ನಾಗೇಶ್ವರ ರಾವ್ ಅಭಿನಯದ ‘ಆತ್ಮಗೌರವಂ’ ಮೂಲಕ ಸ್ವತಂತ್ರ ನಿರ್ದೇಶಕರಾದರು.
  • ಪರ್ಯಾಯ ಸಿನಿಮಾಗಳಿಗೆ ಇರುವಂಥ ಕಲಾತ್ಮಕತೆಯನ್ನು ಜನಪ್ರಿಯ ಧಾಟಿಗೆ ಒಗ್ಗಿಸುವ ಮೂಲಕ ವಿಶ್ವನಾಥ್ ತಾವು ನಂಬಿದ ಸಿನಿಮಾ ಮಾಲೆ ಕಟ್ಟತೊಡಗಿದರು. ‘ಶಾರದಾ’, ‘ಓ ಸೀತ ಕಥಾ’ ಅವರ ಪಾಲಿಗೆ ಪ್ರಯೋಗಶಾಲೆ ಆಗಿತ್ತಾದರೂ ‘ಸಿರಿ ಸಿರಿ ಮುವ್ವಾ’ ತೆಲುಗು ಚಿತ್ರದಲ್ಲಿ ಅವರ ಅನನ್ಯತೆ ಮೊದಲು ವ್ಯಕ್ತಗೊಂಡಿತು. ಅದು ಗೆದ್ದುದೇ ಸಂಗೀತ, ನಾಟ್ಯದಂಥ ಕಲೆಯನ್ನು ಬೆಸೆದು ಚಿತ್ರಕಥೆ ಹೊಸೆಯಲಾರಂಭಿಸಿದರು. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಪಾಶ್ಚಾತ್ಯ ಸಂಗೀತಕ್ಕೆ ಮುಖಾಮುಖಿಯಾಗಿಸಿದ ಹರಳುಗಟ್ಟಿದ ಯತ್ನವಾಗಿ ಸದ್ದು ಮಾಡಿದ್ದು ‘ಶಂಕರಾಭರಣಂ’.
  • ತೆಲುಗಿನ ‘ಸಪ್ತಪದಿ’, ‘ಓ ಸೀತ ಕಥಾ’, ‘ಜೀವನ ಜ್ಯೋತಿ’, ‘ಶುಭಲೇಖ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿ ಪ್ರಸಿದ್ದರಾದರು.
  • ‘ಕಾಮ್‌ಚೋರ್‌’, ‘ಸಂಜೋಗ್‌’, ‘ಜಾಗ್‌ ಉಠಾ ಇನ್ಸಾನ್’, ‘ಈಶ್ವರ್’ (ಸ್ವಾತಿಮುತ್ಯಂ ರೀಮೇಕ್), ‘ಸುರ್‌ ಸಂಗಮ್’, ‘ಶುಭ್ ಕಾಮ್ನಾ’, ‘ಸಂಗೀತ್’, ‘ಧನ್‌ವಾನ್’ ಅವರು ನಿರ್ದೇಶನದ ಹಿಂದಿ ಚಿತ್ರಗಳು. ಐದು ರಾಷ್ಟ್ರ ಪ್ರಶಸ್ತಿಗಳು, ಆರು ನಂದಿ ಹಾಗೂ ಹತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳು ಅವರ ಪ್ರಭಾವಳಿಗೆ ಮೆರುಗು ನೀಡಿವೆ.
  • ಇವರ ಸ್ವಾತಿ ಮುತ್ಯಂ ಚಿತ್ರ 1987ರಲ್ಲಿ ಅಕಾಡೆಮಿ ಆವಾರ್ಡ್ಸ್ಗೆ ನಾಮನಿರ್ದೇಶನಗೊಂಡ ಭಾರತದ ಸಿನಿಮಾ.
  • 1979ರಲ್ಲಿ ತೆರೆಕಂಡ ಶಂಕರಭರಣಂ ಸಿನಿಮಾ ವಿಶ್ವನಾಥ್ ಅವರಿಗೆ ಅಪಾರ ಕೀರ್ತಿ ತಂದು ಕೊಟ್ಟಿತು. ಈ ಚಿತ್ರದಿಂದ ಜನ ಅವರನ್ನು ಶಂಕರಭರಣಂ ವಿಶ್ವನಾಥ್ ಎಂತಲೇ ಈಗಲೂ ಗುರುತಿಸುತ್ತಿದ್ದಾರೆ.

ಚೂರು ಪಾರು:

  • ಹುಣಸವಾಡಿ ರಾಜನ್‌ ಗೆ ಖಾದ್ರಿ ಶಾಮಣ್ಣ ಪ್ರಶಸ್ತಿ: ಪತ್ರಿಕೋದ್ಯಮ ಪ್ರಶಸ್ತಿ’ಗೆ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಸಂಪಾದಕ ಹುಣಸವಾಡಿ ರಾಜನ್‌ ಆಯ್ಕೆಯಾಗಿದ್ದಾರೆ. ‘ಪ್ರಶಸ್ತಿಯು ₹15 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
  • ಬಿಸ್ವಾ ಶರ್ಮಾ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಹಂಗಾಮಿ ಅಧ್ಯಕ್ಷ: ಹಿರಿಯ ಕ್ರೀಡಾ ಆಡಳಿತಗಾರ ಹಿಮಾಂತ ಬಿಸ್ವಾ ಶರ್ಮಾ ಅವರು ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ (ಬಿಎಐ) ಹಂಗಾಮಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.
    ಅಖಿಲೇಶ್‌ ದಾಸ್‌ ಗುಪ್ತಾ ಅವರ ನಿಧನದಿಂದಾಗಿ ಅಧ್ಯಕ್ಷ ಹುದ್ದೆ ತೆರವಾಗಿತ್ತು. ಅಸ್ಸಾಂ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷರಾಗಿರುವ ಹಿಮಾಂತ 2018ರ ವರೆಗೂ ಅಧ್ಯಕ್ಷರಾಗಿರಲಿದ್ದಾರೆ.
  • ರಫೆಲ್ ನಡಾಲ್ಗೆ ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್ ಟೂರ್ನಿ ಪ್ರಶಸ್ತಿ: ಸ್ಪೇನ್‌ನ ಅಗ್ರಗಣ್ಯ ಆಟಗಾರ ರಫೆಲ್ ನಡಾಲ್ ಅವರು ಮಾಂಟೆ ಕಾರ್ಲೊ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಹತ್ತನೇ ಪ್ರಶಸ್ತಿ ಗೆದ್ದುಕೊಂಡರು.
    ಈ ಹಿಂದೆ ಇಲ್ಲಿ ನಡಾಲ್ ಒಂಬತ್ತು ಬಾರಿ ಚಾಂಪಿಯನ್ ಆಗಿದ್ದರು. ಹತ್ತು ಬಾರಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಅವರು ತಮ್ಮದಾಸಿಕೊಂಡರು. ಫೈನಲ್‌ ಹಣಾಹಣಿಯಲ್ಲಿ ನಡಾಲ್‌ 6–1, 6–3ರ ನೇರ ಸೆಟ್‌ಗಳಿಂದ ಆಲ್ಬರ್ಟ್‌ ರಾಮೋಸ್ ವಿನೋಸ್ ಅವ ರನ್ನು ಮಣಿಸಿ ಈ ಸಾಧನೆ ಮಾಡಿದರು.

Leave a Comment

This site uses Akismet to reduce spam. Learn how your comment data is processed.