ಭಾರತ-ಮಂಗೋಲಿಯಾ ಜಂಟಿ ಸಮರಾಭ್ಯಾಸ “ನೊಮಾಡಿಕ್ ಎಲಿಫೆಂಟ್-2017”ಗೆ ಚಾಲನೆ

ಭಾರತ ಮತ್ತು ಮಂಗೋಲಿಯಾ ನಡುವಿನ ಜಂಟಿ ಮಿಲಿಟರಿ ಸಮರಾಭ್ಯಾಸ “ನೊಮಾಡಿಕ್ ಎಲಿಫೆಂಟ್ (Nomadic Elephant)”ಮಿಜೋರಾಂನ ವೈರೆಂಗ್ಟೆಯಲ್ಲಿ ಆರಂಭಗೊಂಡಿತು. ಉಭಯ ದೇಶಗಳ ನಡುವೆ ನಡೆಯುತ್ತಿರುವ 12ನೇ ಜಂಟಿ ಸಮರಾಭ್ಯಾಸ ಇದಾಗಿದೆ. ಮಿಜೋರಾಂನ ವೈರೆಂಗ್ಟೆಯಲ್ಲಿ ಭಾರತೀಯ ಸೇನೆಯ ಪ್ರತಿಷ್ಠಿತ ಜಂಗಲ್ ವಾರ್ಫೇರ್ ಸ್ಕೂಲ್ ಇದೆ. 2004 ರಲ್ಲಿ ಉಭಯ ದೇಶಗಳ ನಡುವಿನ ಮೊದಲ ಮಿಲಿಟರಿ ಅಭ್ಯಾಸಕ್ಕೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಪ್ರತಿ ವರ್ಷ ಈ ಮಿಲಿಟರಿ ಅಭ್ಯಾಸ ನಡೆಯುತ್ತಿದೆ. ಭಾರತ ಮತ್ತು ಮಂಗೋಲಿಯಾ ನಡುವೆ ಮಿಲಿಟರಿ ಸಹಕಾರವನ್ನು ಹೆಚ್ಚಿಸುವುದು ಸಮರಾಭ್ಯಾಸದ ಧ್ಯೇಯವಾಗಿದೆ.

ಪ್ರಮುಖಾಂಶಗಳು:

  • ಏಪ್ರಿಲ್ 5 ರಿಂದ 18 ವರೆಗೆ ಎರಡು ವಾರಗಳ ಕಾಲ ಈ ಸಮರಾಭ್ಯಾಸ ನಡೆಯಲಿದೆ. ಭಯೋತ್ಪಾದನೆ ನಿಗ್ರಹ ಹಾಗೂ ಒಳನುಸುಳುವಿಕೆ ವಿರುದ್ದ ಕಾರ್ಯಾಚರಣೆಯ ಬಗ್ಗೆ ಸಮರಾಭ್ಯಾಸದಲ್ಲಿ ತರಭೇತಿ ನೀಡಲಾಗುವುದು.
  • ಈ ಭಾರಿಯ ಸಮರಾಭ್ಯಾಸದಲ್ಲಿ ಭಾರತ ಸೇನೆಯನ್ನು ಮೂರು ಅಧಿಕಾರಿಗಳು, ನಾಲ್ಕು ಜೂನಿಯರ್ ಕಮಾಂಡೊಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ರೈಫಲ್ ಪಡೆ ಪ್ರತಿನಿಧಿಸಿದೆ.
  • ಮಂಗೋಲಿಯಾದ ಪರವಾಗಿ 36 ಸೈನಿಕರನ್ನು ಒಳಗೊಂಡ 084 ಸ್ಪೆಷಲ್ ಫೋರ್ಸ್ ಟಾಸ್ಕ್ ಬೆಟಾಲಿಯನ್ ಪ್ರತಿನಿಧಿಸಿದೆ.

 ಲಕ್ಕಿ ಗ್ರಾಹಕ ಮತ್ತು ಡಿಜಿ ಧನ ವ್ಯಾಪಾರ ಯೋಜನೆಯ ಲಕ್ಕಿ ಗ್ರಾಹಕರ ಆಯ್ಕೆ

ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ “ಲಕ್ಕಿ ಗ್ರಾಹಕ” ಹಾಗೂ “ಡಿಜಿ ಧನ ವ್ಯಾಪಾರ ಯೋಜನೆಯ” ಲಕ್ಕಿ ಗ್ರಾಹಕ’ರನ್ನು ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರು. ಲಕ್ಕಿ ಗ್ರಾಹಕ ಯೋಜನೆ ಮತ್ತು ಡಿಜಿ ಧನ ವ್ಯಾಪಾರ ಯೋಜನೆಯಡಿ ಮೂವರು ಗ್ರಾಹಕರು ಹಾಗೂ ಮೂವರು ವ್ಯಾಪಾರಿಗಳನ್ನು ಆಯ್ಕೆ ಮಾಡಲಾಯಿತು. ಲಕ್ಕಿ ಡ್ರಾನಲ್ಲಿ ಆಯ್ಕೆಯಾಗುವ ಅದೃಷ್ಟಶಾಲಿಗಳನ್ನು ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯಂದು ಅಭಿನಂದಿಸಲಾಗುವುದು.

ಪ್ರಮುಖಾಂಶಗಳು:

  • ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಅಭಿವೃದ್ದಿಪಡಿಸಿರುವ ಸಾಫ್ಟ್ ವೇರ್ ಮೂಲಕ ವಹಿವಾಟು ಐಡಿಗಳನ್ನು ಲಾಟರಿ ಎತ್ತುವ ಮೂಲಕ ವಿಜೇತರನ್ನು ಆಯ್ಕೆಮಾಡಲಾಯಿತು.
  • ಗ್ರಾಹಕ ವಿಭಾಗದಲ್ಲಿ: ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗ್ರಾಹಕ ರು.1 ಕೋಟಿ ಬಹುಮಾನ ಗೆದ್ದಿದ್ದಾರೆ. ಬ್ಯಾಂಕ್ ಆಫ್ ಬರೋಡದ ಗ್ರಾಹಕ ರೂ 50 ಲಕ್ಷ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಗ್ರಾಹಕನಿಗೆ ರೂ 25 ಲಕ್ಷ ಬಹುಮಾನ ಲಭಿಸಿದೆ.
  • ವ್ಯಾಪಾರಸ್ಥರ ವಿಭಾಗ: ಡಿಜಿ–ಧನ ವ್ಯಾಪಾರ ಯೋಜನೆ’ ವಿಭಾಗದಲ್ಲಿ ಮೂವರು 50 ಲಕ್ಷ, ರು 25 ಲಕ್ಷ, ರು 12 ಲಕ್ಷ ಬಹುಮಾನ ಗೆದ್ದಿದ್ದಾರೆ.

ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ನೇಮಕ

ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ದೇಶದಲ್ಲಿ ಮಹಿಳಾ ಮುಖ್ಯ ನ್ಯಾಯಧೀಶರನ್ನು ಹೊಂದಿರುವ ಹೈಕೋರ್ಟ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಏಕಕಾಲದಲ್ಲಿ ದೇಶದ ನಾಲ್ಕು ಹೈಕೋರ್ಟ್‌ಗಳಲ್ಲಿ ಮಹಿಳೆಯರು ಮುಖ್ಯ ನ್ಯಾಯಮೂರ್ತಿಗಳಾಗಿರುವುದು ಇದೇ ಮೊದಲು. ದೇಶದ ಎಲ್ಲಾ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಒಟ್ಟು  ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ 10ರಷ್ಟು ಮಾತ್ರ.

ಪ್ರಮುಖಾಂಶಗಳು:

  • ಸುಪ್ರೀಂಕೋಟಿನ ಮೊದಲ ಮಹಿಳಾ ನ್ಯಾಯಮೂರ್ತಿ ಆಗಿ ನೇಮಕಗೊಂಡವರು ಫಾತಿಮಾ ಬೀವಿ. ಬೀವಿ ಅವರು ಕೇರಳದವರು. 1989ರಲ್ಲಿ ಇವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
  • 1989ರಿಂದ ಈವರೆಗೆ ಕೇವಲ ಆರು ಮಂದಿ ಮಹಿಳೆಯರಷ್ಟೇ ಸುಪ್ರೀಂ ಕೋರ್ಟ್‌ನಲ್ಲಿನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಆರ್‌. ಭಾನುಮತಿ ಅವರು ಮಾತ್ರ ಸುಪ್ರೀಂ ಕೋರ್ಟ್‌ನ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ.

ಹೈಕೋರ್ಟಿನ ಇತರೆ ಮಹಿಳಾ ನ್ಯಾಯಮೂರ್ತಿಗಳು:

  • ಬಾಂಬೆ ಹೈಕೋರ್ಟ್: ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು
  • ನ್ಯಾಯಮೂರ್ತಿ ಜಿ.ರೋಹಿಣಿ: ದೆಹಲಿ ಹೈಕೋರ್ಟ್
  • ನ್ಯಾಯಮೂರ್ತಿ ನಿಶಿತಾ ನಿರ್ಮಲ್ ಮ್ಹಾತ್ರೆ (ಹಂಗಾಮಿ ಮುಖ್ಯ ನ್ಯಾಯಮೂರ್ತಿ): ಕೋಲ್ಕತ್ತ ಹೈಕೋರ್ಟ್‌

ಯುನೈಟೆಡ್ ಕಿಂಗ್ಡಮ್ ನಿಂದ ಚೀನಾಗೆ ಮೊದಲ ಸರಕು ರೈಲು ಸಂಚಾರ ಆರಂಭ

ಯುನೈಟೆಡ್ ಕಿಂಗ್ಡಮ್ ನಿಂದ ಚೀನಾಗೆ ಮೊದಲ ಸರಕು ರೈಲು ಸಂಚಾರ ಆರಂಭಗೊಂಡಿತು. ಈ ಮುಂಚೆ ಚೀನಾದಿಂದ ಯುಕೆ ಗೆ ಸರಕು ರೈಲು ಸಂಚಾರ ಆರಂಭಗೊಂಡು, ಜನವರಿ 2017 ರಲ್ಲಿ ಲಂಡನ್ ತಲುಪಿತ್ತು. ಚೀನಾದ “ಒನ್ ಬೆಲ್ಟ್, ಒನ್ ರೋಡ್” ಕಾರ್ಯಕ್ರಮದಡಿ ಈ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಪುರಾತನ ಕಾಲದ ಸಿಲ್ಕ್ ರೋಡ್ ಗೆ ಮತ್ತೆ ಜೀವ ತುಂಬುವ ಸಲುವಾಗಿ “ಒನ್ ಬೆಲ್ಟ್ ಒನ್ ರೋಡ್” ಯೋಜನೆಗೆ ಚಾಲನೆ ನೀಡಲಾಗಿದೆ.

ಪ್ರಮುಖಾಂಶಗಳು:

  • 30 ಬೋಗಿಗಳನ್ನು ಹೊಂದಿರುವ ಈ ರೈಲು ಔಷಧೀಯ ವಸ್ತುಗಳು ಸೇರಿದಂತೆ ಬ್ರಿಟನ್ ಉತ್ಪನ್ನಗಳನ್ನು ಚೀನಾದ ಯಿವು ಪ್ರದೇಶಕ್ಕೆ ಸಾಗಿಸಲಿದೆ. ಈ ವೇಳೆ ಸುಮಾರು 7500 ಮೈಲಿ ಕ್ರಮಿಸಲಿದೆ.
  • ಪ್ರಯಾಣದ ವೇಳೆ ಈ ಸರಕು ರೈಲು ಏಳು ದೇಶಗಳಲ್ಲಿ ಸಂಚರಿಸಲಿದೆ. ಈ ರಾಷ್ಟ್ರಗಳೆಂದರೆ ಫ್ರಾನ್ಸ್, ಜರ್ಮನಿ, ಬೆಲ್ಜಿಯಂ, ಪೋಲ್ಯಾಂಡ್, ರಷ್ಯಾ, ಕಜಕಸ್ತಾನ ಆ ನಂತರ ಕೊನೆಯದಾಗಿ ಚೀನಾ.
  • ಮೂಲಗಳ ಪ್ರಕಾರ ಯುಕೆ ಮತ್ತು ಚೀನಾ ನಡುವೆ ರೈಲಿನ ಮೂಲಕ ಸರಕು ಸಾಗಣೆ ವಿಮಾನ ಹಾಗೂ ಹಡುಗಿಗಿಂತ ಕಡಿಮೆ ಎನ್ನಲಾಗಿದೆ.

ಚೂರು ಪಾರು ಸುದ್ದಿ:

  • ಬೆಂಗಳೂರಿನಲ್ಲಿ ಲಂಡನ್ ಮಾದರಿಯ ಕಂಟ್ರೋಲ್ ರೂಂ: ಬೆಂಗಳೂರಿನಲ್ಲಿ ಲಂಡನ್ ಮಾದರಿಯ ಲ್ಲಿ ₹ 50 ಕೋಟಿ ವೆಚ್ಚದಲ್ಲಿ ಕಂಟ್ರೋಲ್ ರೂಂ ನಿರ್ಮಿಸಲಾಗುತ್ತಿದೆ. ಗೃಹ ಸಚಿವ ಪರಮೇಶ್ವರ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. ತಾಂತ್ರಿಕವಾಗಿ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಸಶಕ್ತಗೊಳಿಸಲು ಸರ್ಕಾರ ಮುಂದಾಗಿದೆ. ಇದರಿಂದ ಪೊಲೀಸರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ.
  • ಶಿವಕುಮಾರ ಸ್ವಾಮೀಜಿಗೆ ಶ್ರೀ ಭಗವನ್ ಮಹಾವೀರ ಶಾಂತಿ ಪ್ರಶಸ್ತಿ”: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲ ಬಾರಿಗೆ ನೀಡುತ್ತಿರುವ ‘ಶ್ರೀ ಭಗವನ್ ಮಹಾವೀರ ಶಾಂತಿ ಪ್ರಶಸ್ತಿ’ಗೆ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಆಯ್ಕೆಯಾಗಿದ್ದಾರೆ. ‘ಅಕ್ಕಮಹಾದೇವಿ ಪ್ರಶಸ್ತಿ’ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಭಾಜನರಾಗಿದ್ದಾರೆ. ಈ ಎರಡೂ ಪ್ರಶಸ್ತಿಗಳು ತಲಾ ₹ ಮೂರು ಲಕ್ಷ ನಗದು ಮತ್ತು ಫಲಕಗಳನ್ನು ಒಳಗೊಂಡಿವೆ. ಇತಿಹಾಸ ತಜ್ಞ ಷ.ಶೆಟ್ಟರ್‌ ಅಧ್ಯಕ್ಷತೆಯ ಆಯ್ಕೆ ಸಮಿತಿ ಸ್ವಾಮೀಜಿ ಅವರನ್ನು ಈ ಪ್ರಶಸ್ತಿಗೆ  ಆಯ್ಕೆ ಮಾಡಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಏಪ್ರಿಲ್,10,2017”

  1. This app is very late to uploding the current affirs every month so plz uplode day to day current affirs .

Leave a Comment

This site uses Akismet to reduce spam. Learn how your comment data is processed.