ಭಾರತ-ಮಲೇಷಿಯಾ ನಡುವೆ ಏಳು ಒಪ್ಪಂದಕ್ಕೆ ಸಹಿ

ಭಾರತ ಮತ್ತು ಮಲೇಷಿಯಾ ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು, ಉಭಯ ದೇಶಗಳ ನಡುವಿನ ಬಾಂದವ್ಯವನ್ನು ಗಟ್ಟಿಗೊಳಿಸಲು ದಿಟ್ಟ ಹೆಜ್ಜೆ ಇಟ್ಟಿವೆ. ಭಾರತ ಪ್ರವಾಸದಲ್ಲಿರುವ ಮಲೇಷಿಯಾದ ಪ್ರಧಾನಿ ನಜೀಬ್ ಅಬ್ದುಲ್ ರಜಾಕ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ನವದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಸಹಿ ಹಾಕಲಾದ ಒಪ್ಪಂದಗಳು:

  • ವಾಯು ಸೇವೆ ಒಪ್ಪಂದ: ಉಭಯ ದೇಶಗಳ ನಡುವೆ 1974ರಲ್ಲಿ ಸಹಿ ಹಾಕಲಾದ ವಾಯು ಸೇವೆ ಒಪ್ಪಂದವನ್ನು ಪರಿಷ್ಕರಿಸುವುದಾಗಿ.
  • ರಸಗೊಬ್ಬರ ವಲಯದಲ್ಲಿ ಸಹಕಾರಕ್ಕೆ ಒಪ್ಪಂದ: ಮಲೇಷಿಯಾದಲ್ಲಿ ಉದ್ದೇಶಿತ ಯೂರಿಯಾ ಮತ್ತು ಅಮೋನಿಯಾ ಘಟಕಗಳನ್ನು ಒಪ್ಪಂದದಡಿ ಅಭಿವೃದ್ದಿಪಡಿಸಲಾಗುವುದು.
  • ಕ್ರೀಡಾ ಕ್ಷೇತ್ರದಲ್ಲಿ ಸಹಕಾರಕ್ಕೆ ಒಪ್ಪಂದ: ಕ್ರೀಡಾ ಕ್ಷೇತ್ರದಲ್ಲಿ ತರಭೇತುದಾರರ ವಿನಿಮಯ, ಕ್ರೀಡೆಗೆ ಸಂಬಂಧಿಸಿದ ಮಾಹಿತಿ ವಿನಿಮಯವನ್ನು ಒಪ್ಪಂದದಡಿ ಮಾಡಿಕೊಳ್ಳಲಾಗುವುದು.
  • ತರಭೇತಿ ಸಂಬಂಧಿಸಿದ ಒಪ್ಪಂದ: ಮಲೇಷಿಯಾದ ಮಾನವ ಅಭಿವೃದ್ದಿ ನಿಧಿ ಮತ್ತು ಅಹಮದಬಾದಿನ ಇಐಐಡಿ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದಡಿ ಅಗತ್ಯ ತರಭೇತಿಯನ್ನು ಅಹಮದಬಾದಿನ ಇಐಐಡಿ ನಡೆಸಲಿದೆ.
  • ತಾಳೆ ಎಣ್ಣೆ ಕ್ಷೇತ್ರದಲ್ಲಿ ತಂತ್ರಜ್ಞಾನ ಅಭಿವೃದ್ದಿಗೆ ಒಪ್ಪಂದ: ಮಲೇಷಿಯಾ ತಾಳೆ ಎಣ್ಣೆ ಮಂಡಳಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
  • ಆಂಧ್ರಪ್ರದೇಶದಲ್ಲಿ 4ನೇ ತಲೆಮಾರಿನ ತಾಂತ್ರಿಕ ಪಾರ್ಕ್ ಅಭಿವೃದ್ದಿಗೆ ಒಪ್ಪಂದ: ಎಂಐಜಿಹೆಚ್ಟಿ ಮಲೇಷಿಯಾ ಹಾಗೂ ಎಪಿ ಎಕಾನಿಮಿಕ್ ಡೆಮೆಲಪ್ಮೆಂಟ್ ಬೋರ್ಡ್ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
  • ಶೈಕ್ಷಣಿಕ ಅರ್ಹತೆಯನ್ನು ಪರಸ್ಪರ ಗುರುತಿಸುವ ಒಪ್ಪಂದಕ್ಕೆ ಸಹಿ: ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಸ್ ಹಾಗೂ ಮಲೇಷಿಯನ್ ಕ್ವಾಲಿಫಿಕೇಶನ್ ಏಜೆನ್ಸಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ರಾಷ್ಟ್ರೀಯ ವಯೋಶ್ರಿ ಯೋಜನೆಗೆ ನೆಲ್ಲೂರಿನಲ್ಲಿ ಚಾಲನೆ

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ರಾಷ್ಟ್ರೀಯ ವಯೋಶ್ರೀ ಯೋಜನೆಗೆ ಚಾಲನೆ ನೀಡಿದೆ. ಬಿಪಿಎಲ್ ಕುಟುಂಗಬಳಿಗೆ ಸೇರಿದ ವಯಸ್ಸಾದವರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಜೀವನಕ್ಕೆ ನೆರವಾಗುವ ವೈದ್ಯಕೀಯ ಉಪಕರಣಗಳನ್ನು ಉಚಿತವಾಗಿ ನೀಡುವುದು ಯೋಜನೆಯ ಉದ್ದೇಶ.

ಯೋಜನೆಯ ಪ್ರಮುಖಾಂಶಗಳು:     

  • ಬಿಪಿಎಲ್ ಕುಟುಂಬಗಳಿಗೆ ಸೇರಿದ ಹಿರಿಯ ನಾಗರಿಕರಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಜೀವನಕ್ಕೆ ನೆರವಾಗುವ ವೈದ್ಯಕೀಯ ಉಪಕರಣಗಳನ್ನು ಉಚಿತವಾಗಿ ಕ್ಯಾಂಪ್ ಆಯೋಜಿಸುವ ಮೂಲಕ ನೀಡಲಾಗುವುದು.
  • ಇದೊಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಯೋಜನೆಯ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ.
  • ಸುಮಾರು 5,20,000 ಹಿರಿಯ ನಾಗರಿಕರಿಗೆ ಯೋಜನೆಯ ಉಪಯೋಗವಾಗಲಿದ್ದು, ಹಿರಿಯ ನಾಗರಿಕರ ಕಲ್ಯಾಣ ನಿಧಿಯಿಂದ ವೆಚ್ಚವನ್ನು ಭರಿಸಲಾಗುವುದು.
  • ಅನುಷ್ಟಾನ ಏಜೆನ್ಸಿ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುವ “ಕೃತಕ ಕಾಲು ತಯಾರಕ ಮಂಡಳಿ” ಯೋಜನೆಯನ್ನು ಅನುಷ್ಟಾನಗೊಳಿಸಲಿದೆ.
  • ಈ ಯೋಜನೆಯಡಿ ಜೀವನಕ್ಕೆ ನೆರವಾಗುವ ಉಪಕರಣಗಳಾದ ಊರುಗೋಲು, ವಾಕರ್, ಶ್ರವಣ ಯಂತ್ರ, ವೀಲ್ ಚೇರ್, ಕನ್ನಡಕ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಲಾಗುವುದು.

ಫಲಾನುಭವಿಗಳನ್ನು ಗುರುತಿಸುವಿಕೆ:

  • ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಗಳ ಮೂಲಕ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಫಲಾನುಭವಿಗಳನ್ನು ಗುರುತಿಸಲಿವೆ. ಪ್ರತಿ ಜಿಲ್ಲೆಯಲ್ಲಿ ಶೇ 30% ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಕಡ್ಡಾಯ.

ಹಿನ್ನಲೆ:

2015-16ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಹಾಗೂ ಜೀವನಕ್ಕೆ ನೆರವಾಗುವ ಉಪಕರಣಗಳನ್ನು ನೀಡುವ ಯೋಜನೆಯನ್ನು ಹೊರತರವುದಾಗಿ ಹೇಳಿದ್ದಾರೆ. ಅದರಂತೆ ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಜಾರಿಗೆ ತರಲಾಗಿದೆ. 2011 ಜನಗಣತಿ ಪ್ರಕಾರ ದೇಶದಲ್ಲಿ 10.38 ಕೋಟಿ ಹಿರಿಯ ನಾಗರಿಕರಿದ್ದಾರೆ. ಇವರಲ್ಲಿ ಶೇ 70% ಹಿರಿಯ ನಾಗರಿಕರು ಗ್ರಾಮೀಣ ಪ್ರದೇಶದಲ್ಲಿ ವಾಸವಿದ್ದಾರೆ.

ದೇಶದ ಅತಿ ಉದ್ದದ ಸುರಂಗ ರಸ್ತೆ ಲೋಕಾರ್ಪಣೆ

ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚೆನಾನಿ– ನಶ್ರಿ  ಸಂಪರ್ಕಿಸುವ 9.2 ಕಿ.ಮೀ. ಉದ್ದದ ಸುರಂಗ ರಸ್ತೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದು ದೇಶದ ಅತಿ ಉದ್ದದ ಸುರಂಗ ರಸ್ತೆ ಮಾರ್ಗವಾಗಿದೆ.

ಪ್ರಮುಖಾಂಶಗಳು:

  • ಸಮುದ್ರ ಮಟ್ಟದಿಂದ ಸುಮಾರು 1200 ಮೀಟರ್ ಎತ್ತರದಲ್ಲಿ ಈ ಮಾರ್ಗವನ್ನು ನಿರ್ಮಿಸಲಾಗಿದೆ.
  • ಐದು ವರ್ಷಗಳ ಕಾಲ ನಡೆದಿರುವ ಈ ಕಾಮಗಾರಿಗೆ, ಸುಮಾರು ₹ 2,500 ಕೋಟಿ ವೆಚ್ಚವಾಗಿದೆ.
  • ಈ ಮಾರ್ಗದಿಂದ ಜಮ್ಮು– ಶ್ರೀನಗರ ಅಂತರವು 30 ಕಿ.ಮೀ ಕಡಿಮೆಯಾಗುತ್ತದೆ. ಪ್ರಯಾಣದ ಅವಧಿಯಲ್ಲಿ ಸುಮಾರು 2 ಗಂಟೆ ಉಳಿಯುತ್ತದೆ.
  • ಹಿಮಪಾತ, ಮಳೆಯಿಂದ ವಾಹನ ಸಂಚಾರಕ್ಕೆ ಆಗಾಗ ತೊಂದರೆಯಾಗುವ ಸ್ಥಳಗಳಾದ ಪಟ್ನಿಟಾಪ್, ಕುಡ್ ಮತ್ತು ಬಟೋಟೆ ಪ್ರದೇಶಗಳಿಗೆ ಬೈಪಾಸ್ ರಸ್ತೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಇದರಿಂದ ಪ್ರತಿದಿನ 27 ಲಕ್ಷ ಮೌಲ್ಯದ ಇಂಧನ ಉಳಿಸಬಹುದು.
  • ಇದು ಪ್ರವಾಸೋದ್ಯಮಕ್ಕೆ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಲಿದೆ.

Leave a Comment

This site uses Akismet to reduce spam. Learn how your comment data is processed.