ನ್ಯೂಟ್ರಿನೋ ಪ್ರಾಜೆಕ್ಟ್ ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ತಡೆ

ಭಾರತ ಮೂಲದ ನ್ಯೂಟ್ರಿನೋ ಪ್ರಾಜೆಕ್ಟ್ ಗೆ ಪರಿಸರ ಅನುಮೋದನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ ತಡೆ ನೀಡಿದೆ. ಅಲ್ಲದೇ ಪ್ರತಿವಾದಿಗಳಿಗೆ ಹೊಸ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ಉದ್ದೇಶಿತ ನ್ಯೂಟ್ರಿನೋ ಪ್ರಾಜೆಕ್ಟ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಮಥಿಕೆತ್ತನ್ ಶೋಲಾ ರಾಷ್ಟ್ರೀಯ ಉದ್ಯಾನವನದಿಂದ 4.5 ಕಿ.ಮೀ ದೂರದಲ್ಲಿ ಹಾಗೂ ಕೇರಳ-ತಮಿಳುನಾಡು ಗಡಿ ಭಾಗದಿಂದ ಒಂದು ಕಿ.ಮೀ ದೂರದಲ್ಲಿದ್ದು, ಈ ಭಾಗ ಎನ್ವಿರಾಲ್ಮೆಂಟಲ್ ಇಂಪಾಕ್ಟ್ ಅಸಸ್ಮೆಂಟ್ ನಲ್ಲಿ ಕೆಟಗರಿ “ಎ” ಭಾಗದಲ್ಲಿ ಇರುವುದಾಗಿ ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದರು.

ಏನಿದು ವಿವಾದ?

  • ಕೇಂದ್ರ ಪರಿಸರ ಸಚಿವಾಲಯ ನ್ಯೂಟ್ರಿನೋ ಪ್ರಾಜೆಕ್ಟ್ ಕೆಟಗರಿ “ಬಿ” ಪ್ರಾಜೆಕ್ಟ್ ಎಂದು ಗುರಿತಿಸಿದೆ. ಕೆಟಗರಿ “ಬಿ” ಯೋಜನೆಗಳಿಗೆ ಎನ್ವಿರಾಲ್ಮೆಂಟಲ್ ಇಂಪಾಕ್ಟ್ ಅಸಸ್ಮೆಂಟ್ ಅಗತ್ಯವಿಲ್ಲ.
  • ಆದರೆ ಎನ್ವಿರಾಲ್ಮೆಂಟಲ್ ಇಂಪಾಕ್ಟ್ ಅಸಸ್ಮೆಂಟ್-2006 ಅಧಿಸೂಚನೆ ಪ್ರಕಾರ ಯಾವುದೇ ಯೋಜನೆ ವನ್ಯ ಜೀವಿ ಕಾಯಿದೆ-1972ರಡಿ ಗುರುತಿಸಿರುವ ಸಂರಕ್ಷಿತ ವಲಯದ 10ಕಿ.ಮೀ ವ್ಯಾಪ್ತಿಯೊಳಗಿದ್ದರೆ ಅಂತಹ ಯೋಜನೆಯನ್ನು ಕೆಟಗರಿ “ಎ” ಎಂದು ಪರಿಗಣಿಸಬೇಕು.

“ಇಂಡಿಯಾ ಬೇಸ್ಡ್ ನ್ಯೂಟ್ರಿನೋ ಅಬರ್ಸವೇಟರಿ (INO)”

  • ಐಎನ್ಓ ತಮಿಳುನಾಡಿನ ಥೇಣಿ ಜಿಲ್ಲೆಯ ಮಧುರೈ ಸಮೀಪದ ಬೆಟ್ಟವೊಂದರ ಬುಡದಿಂದ 4300 ಅಡಿ ಆಳದಲ್ಲಿರುವ ಗುಹೆಯೊಂದರಲ್ಲಿ 1500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ‘ನ್ಯೂಟ್ರಿನೊ ವೀಕ್ಷಣಾಲಯ’ ಎಂಬ ಭೌತ ಕಣ ಸಂಶೋಧನಾ ಕೇಂದ್ರದಲ್ಲಿ ಈ ದೈತ್ಯ ಗಾತ್ರದ ಅಯಸ್ಕಾಂತವನ್ನು ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ‘ದೇವಕಣ’ದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಜಿನೇವಾದ ಸಿಇಆರ್‌ಎನ್ ಕೇಂದ್ರದಲ್ಲಿರುವ ಅಯಸ್ಕಾಂತವು ಜಗತ್ತಿನಲ್ಲೇ ಅತಿ ಬೃಹತ್ ಗಾತ್ರದ ಆಯಸ್ಕಾಂತವೆನಿಸಿದ್ದು, ಅದು 12,500 ಸಾವಿರ ಟನ್‌ಗಳಷ್ಟು ಭಾರವಿದೆ. ಆದರೆ ನ್ಯೂಟ್ರಿನೋ ವೀಕ್ಷಣಾಲಯದಲ್ಲಿ ಸ್ಥಾಪನೆಯಾಗಲಿರುವ ಅಯಸ್ಕಾಂತವು ಇದಕ್ಕಿಂತ ಹಲವಾರು ಪಟ್ಟು ದೊಡ್ಡದಾಗಿದ್ದು, ಅದರ ಭಾರವು ಸುಮಾರು 50 ಸಾವಿರ ಟನ್‌ಗಳಷ್ಟಿರುವುದು ಎಂದು ಹೇಳಲಾಗಿದೆ.

ಈಶಾನ್ಯ ರಸ್ತೆ ಜಾಲ ಸಂಪರ್ಕ ಯೋಜನೆ ಹಂತ-1ಕ್ಕೆ ಸಿಸಿಇಎ ಅನುಮೋದನೆ

ಮಹತ್ವಕಾಂಕ್ಷಿ ಈಶಾನ್ಯ ರಸ್ತೆ ಜಾಲ ಸಂಪರ್ಕ ಯೋಜನೆ ಹಂತ-1ಕ್ಕೆ ಕೇಂದ್ರ ಆರ್ಥಿಕ ವ್ಯವಹಾರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ ಮಿಜೋರಾಂ ಹಾಗೂ ಮೇಘಾಲಯ ರಾಜ್ಯಗಳಲ್ಲಿ 403 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ದಿಪಡಿಸಲಾಗುವುದು. ಈ 403 ಕಿ.ಮೀ ಉದ್ದದ ರಸ್ತೆಯಲ್ಲಿ ಮಿಜೋರಾಂನಲ್ಲಿ 351 ಕಿ.ಮೀ ಹಾಗೂ ಮೇಘಾಲಯದಲ್ಲಿ 52 ಕಿ.ಮೀ ಅಭಿವೃದ್ದಿಪಡಿಸಲಾಗುವುದು.

ಪ್ರಮುಖಾಂಶಗಳು:

  • ಈ ಯೋಜನೆಯ ಅನುಷ್ಟಾನ 2017-18ನೇ ಆರ್ಥಿಕ ವರ್ಷದಿಂದಲೇ ಆರಂಭವಾಗಲಿದೆ. ಸಿವಿಲ್ ಕೆಲಸಗಳು 2021ರ ವೇಳೆಗೆ ಮುಕ್ತಾಯವಾಗಲಿದ್ದು, ನಿರ್ವಹಣಾ ಕೆಲಸಗಳು 2025ಕ್ಕೆ ಪೂರ್ಣಗೊಳ್ಳಲಿವೆ.
  • ಮಿಜೋರಾಂ ಮತ್ತು ಮೇಘಾಲಯ ರಾಜ್ಯಗಳ ಉಪ ಪ್ರಾಂತ್ಯಗಳಲ್ಲಿ ಸಾಮಾಜಿಕ ಆರ್ಥಿಕ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಈ ಯೋಜನೆ ನೆರವಾಗಲಿದೆ.
  • ಅಲ್ಲದೇ ಅಂತರ ರಾಜ್ಯ ಹಾಗೂ ಅಂತರಾಷ್ಟ್ರೀಯ ಗಡಿ ಭಾಗಕ್ಕೆ ಸಂಪರ್ಕ ವ್ಯವಸ್ಥೆ ಸುಗಮಗೊಳ್ಳಲಿದೆ.

ನಬಾರ್ಡ್ ಕಾಯಿದೆ-1981ಕ್ಕೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)-1981 ಕಾಯಿದೆಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಪ್ರಮುಖಾಂಶಗಳು:

  • ಕಾಯಿದೆಗೆ ತಿದ್ದುಪಡಿ ತರುವ ಮೂಲಕ ನಬಾರ್ಡ್ ನ ಅಧಿಕೃತ ಬಂಡವಾಳವನ್ನು ರೂ 5000 ಕೋಟಿಯಿಂದ ರೂ 30,000 ಕೋಟಿಗೆ ಹೆಚ್ಚಿಸಲಾಗುವುದು. ಅಲ್ಲದೇ ಕಾಲ ಕಾಲಕ್ಕೆ ಅವಶ್ಯವೆನಿಸಿದಾಗ ಭಾರತೀಯ ರಿಸರ್ವ್ ಬ್ಯಾಂಕಿನೊಂದಿಗೆ ಸಮಾಲೋಚಿಸಿ ರೂ 30000 ಕೋಟಿಗಿಂತಲೂ ಅಧಿಕವಾಗಿ ಹೆಚ್ಚಿಸಬಹುದು.
  • ಕೈಮಗ್ಗ ಮತ್ತು ಸಣ್ಣ ಉದ್ದಿಮೆಗಳನ್ನು ನಬಾರ್ಡ್ ಹಿಡಿತದಲ್ಲಿ ತರುವ ಸಲುವಾಗಿ ಶೀರ್ಷಿಕೆ ಹಾಗೂ ಇತರೆ ವಿಭಾಗಗಳಿಗೆ ತಿದ್ದುಪಡಿ ತರಲಾಗುವುದು.

ನಬಾರ್ಡ್ ಬಗ್ಗೆ:

  • ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್) ಮುಂಬಯಿ (ಮಹಾರಾಷ್ಟ್ರ) ಪ್ರಧಾನ ಕಾರ್ಯಾಲಯಗಳು ಹೊಂದಿರುವ ಭಾರತದಲ್ಲಿ ಒಂದು ಸರ್ವೋಚ್ಚ ಅಭಿವೃದ್ಧಿ ಬ್ಯಾಂಕ್ ಆಗಿದೆ.
  • ಶ್ರೀ ಬಿ ಶಿವರಾಮನ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯ ಶಿಫಾರಸ್ಸಿನ ಮೇರೆಗೆ 12 ಜುಲೈ 1982 ರಲ್ಲಿ ಈ ಬ್ಯಾಂಕನ್ನು ಸ್ಥಾಪಿಸಲಾಯಿತು.
  • ಕೃಷಿ & ಗ್ರಾಮೀಣ ಅಲ್ಲದ ಕೃಷಿ ಕ್ಷೇತ್ರಕ್ಕೆ ಸಾಲ ವಿತರಣೆಯನ್ನು ಹೆಚ್ಚಿಸಿ ಗ್ರಾಮೀಣ ಅಭಿವೃದ್ದಿ ಮಾಡುವುದು ಇದರ ಉದ್ದೇಶ.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ರಚನೆಗೆ ಕೇಂದ್ರ ಅಸ್ತು

ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ ಆಗಿರಲಿದ್ದು, ಸಂವಿಧಾನಕ್ಕೆ ಹೊಸದಾಗಿ 338ಬಿ ವಿಧಿಯನ್ನು ಸೇರಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.

ಪ್ರಮುಖಾಂಶಗಳು:

  • ಸಂವಿಧಾನದ ಹೊಸ ವಿಧಿ 338ಬಿ ಅಡಿ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು ಸ್ಥಾಪಿಸುವುದು.
  • ಹೊಸ ಆಯೋಗವು ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಹಾಗೂ ಮೂರು ಜನ ಸದಸ್ಯರನ್ನು ಒಳಗೊಂಡಿರಲಿದೆ.
  • ಸಂವಿಧಾನದ ವಿಧಿ 366ರಡಿ ಹೊಸ ಸೆಕ್ಷನ್ 26ಸಿ ಸೇರಿಸುವ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ವರ್ಗಗಳಿಗೆ ವ್ಯಾಖ್ಯಾನ ನೀಡಲಾಗುವುದು.
  • ರಾಷ್ಟ್ರೀಯ ಹಿಂದುಳಿದ ವರ್ಗಗಳ ಕಾಯಿದೆ-1993 ರಡಿ ರಚಿಸಲಾದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ವಿರ್ಸಜಿಸುವುದು.

ಹಿನ್ನಲೆ:

ರಾಷ್ಟ್ರೀಯ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಆಯೋಗದ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಕುಂದು ಕೊರತೆ ಆಲಿಸಲು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸಂಸ್ಥೆ ಸ್ಥಾನಮಾನ ನೀಡಬೇಕೆಂಬ ಕೂಗು ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

One Thought to “ಪ್ರಚಲಿತ ವಿದ್ಯಮಾನಗಳು-ಮಾರ್ಚ್,27,2017”

Leave a Comment

This site uses Akismet to reduce spam. Learn how your comment data is processed.