ದೌರ್ಜನ್ಯ ತಡೆಗೆ ಕಾಮನ್ ವೆಲ್ತ್ ನಿಂದ “ಪೀಸ್ ಇನ್ ದಿ ಹೋಮ್” ಕಾರ್ಯಕ್ರಮ

ಕಾಮನ್ ವೆಲ್ತ್ ಆಫ್ ನೇಷನ್ಸ್ ತನ್ನ ಸದಸ್ಯ ರಾಷ್ಟ್ರಗಳಲ್ಲಿ ದೌರ್ಜನ್ಯ ತಡೆಯುವ ಸಲುವಾಗಿ ಮುಖ್ಯವಾಗಿ ಸಮುದಾಯ ಹಾಗೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು “ಪೀಸ್ ಇನ್ ದಿ ಹೋಮ್ (Peace in the Home)” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆ ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, 2018 ರವರೆಗೆ ಚಾಲನೆಯಲ್ಲಿ ಇರಲಿದೆ. 2018ರ ವೇಳೆಗೆ ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿ ದೌರ್ಜನ್ಯ ನಿಲ್ಲಲಿದೆ ಎಂದು ಭಾವಿಸಲಾಗಿದೆ.

ಪ್ರಮುಖಾಂಶಗಳು:

  • ದೇಶಿಯ ಹಿಂಸಾಚಾರವನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ, ಸಾಮಾಜಿಕ ಸಂಸ್ಥೆಗಳು, ಮಾನವ ಹಕ್ಕು ಸಂಸ್ಥೆಗಳು ಹಾಗೂ ನಾಗರಿಕರ ನಡುವೆ ಸಂಪರ್ಕವನ್ನು ಸಾಧಿಸಲಾಗುವುದು.
  • ಕಾಮನ್ ವೆಲ್ತ್ ರಾಷ್ಟ್ರಗಳಲ್ಲಿನ ಶಾಲೆಗಳು, ಆಸ್ಪತ್ರೆಗಳು ಮತ್ತು ವೈದ್ಯರು ಹಾಗೂ ಕಾನೂನು ಜಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಲು ಅಗತ್ಯ ಸಹಾಯವನ್ನು ಒದಗಿಸಲಾಗುವುದು.
  • ದೇಶಿಯ ಹಿಂಸಾಚಾರವನ್ನು ಹತ್ತಿಕ್ಕಲು ಸದಸ್ಯ ರಾಷ್ಟ್ರಗಳು ಕೈಗೊಂಡಿರುವ ಕ್ರಮಗಳು ಹಾಗೂ ಯಶಸ್ವಿಯಾಗಿರುವ ಸೂತ್ರಗಳನ್ನು ಎತ್ತಿ ತೋರಿಸುವ ಮೂಲಕ ಇತರೆ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುವುದು.
  • ಮಹಿಳೆಯರಿಗೆ ಪ್ರತ್ಯೇಕವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಅಲ್ಲದೇ ರಾಜಕೀಯ ಮತ್ತು ಚುನಾವಣೆ ಸಂದರ್ಭದಲ್ಲಾಗುವ ಹಿಂಸಾಚಾರವನ್ನು ತಡೆಯಲು ಅಗತ್ಯಕ್ರಮವನ್ನು ರಚಿಸುವುದು.

ಕಾಮನ್ ವೆಲ್ತ್ ಆಫ್ ನೇಷನ್ಸ್:

  • ಕಾಮನ್ ವೆಲ್ತ್ ಆಫ್ ನೇಷನ್ಸ್ ಅನ್ನು 1949ರ ಲಂಡನ್ ಘೋಷಣೆಯಡಿಯಲ್ಲಿ ಸ್ಥಾಪಿಸಲಾಗಿದೆ. ಇದೊಂದು ಅಂತಾರಾಷ್ಟ್ರೀಯ ಅಂತರ್ ಸರ್ಕಾರಗಳ ಒಕ್ಕೂಟವಾಗಿದೆ. ಈ ಹಿಂದೆ ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದ್ದ ರಾಷ್ಟ್ರಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ.
  • ಪ್ರಸ್ತುತ ಕಾಮನ್ ವೆಲ್ತ್ ಒಕ್ಕೂಟ 52 ರಾಷ್ಟ್ರಗಳನ್ನು ಒಳಗೊಂಡಿದೆ.
  • ರಾಣಿ ಎಲಿಜೆಬೆತ್-II ಕಾಮನ್ ವೆಲ್ತ್ ಆಫ್ ನೇಷನ್ಸ್ ನ ಮುಖ್ಯಸ್ಥೆ.

ಕೊಪರ್ನಿಕಸ್ ವೀಕ್ಷಣಾ ಕಾರ್ಯಕ್ರಮದ 5ನೇ ಉಪಗ್ರಹ ಯಶಸ್ವಿ ಉಡಾವಣೆ

ಯುರೋಪ್ ಬಾಹ್ಯಕಾಶ ಸಂಸ್ಥೆ ತನ್ನ ಬಹು ಬಿಲಿಯನ್ ಯುರೋ “ಕೊಪರ್ನಿಕಸ್ ವೀಕ್ಷಣಾ ಕಾರ್ಯಕ್ರಮ (Copernicus Observation Programme)”ದ 5ನೇ ಉಪಗ್ರಹ ಸೆಂಟಿನೆಲ್-2ಬಿ ಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಫ್ರೆಂಚ್ ಗಯಾನದ ಬಾಹ್ಯಕಾಶ ಸಂಸ್ಥೆಯಿಂದ “ವೆಗಾ ರಾಕೆಟ್” ಬಳಸಿ ಈ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ವೆಗಾ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾಯಿಸಿದ 9ನೇ ಉಪಗ್ರಹ ಇದಾಗಿದೆ.

ಪ್ರಮುಖಾಂಶಗಳು:

  • ಸೆಂಟಿನೆಲ್-2ಬಿ ಉಪಗ್ರಹ ಭೂಮಿಯ ಮೇಲೆ ನಿಗಾವಹಿಸುವ ಉಪಗ್ರಹ ಸಮೂಹಗಳ ಒಂದು ಭಾಗವಾಗಿದೆ. 2015ರಲ್ಲಿ ಹಾರಿ ಬಿಡಲಾದ ಅವಳಿ ಸೆಂಟಿನೆಲ್-2ಎ ಉಪಗ್ರಹಗಳೊಂದಿಗೆ ಇದು ಕಾರ್ಯನಿರ್ವಹಿಸಲಿದೆ. ಭೂಮಿಯಿಂದ 786 ಕಿ.ಮೀ ಎತ್ತರದಲ್ಲಿ ಭೂಮಿಯ ವಿರುದ್ದ ದಿಕ್ಕಿನಲ್ಲಿ ಇವು ಕಾರ್ಯನಿರ್ವಹಿಸಲಿವೆ.
  • ಬೆಳೆ ಮುನ್ಸೂಚನೆ ಹಾಗೂ ನೈಸರ್ಗಿಕ ವಿಪತ್ತು ಸೇರಿದಂತೆ ಪರಿಸರ ಉಪಕ್ರಮಗಳ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸುವ ಕಾರ್ಯವನ್ನು ಮಾಡಲಿವೆ.
  • ದೊಡ್ಡ ದೊಡ್ಡ ದ್ವೀಪ ಪ್ರದೇಶಗಳು, ಕರಾವಳಿ ಜಲಮಾರ್ಗಳು ಸೇರಿದಂತೆ ಭೂಮಿಯ ಪೂರ್ತಿ ಮೇಲ್ಮೈ ಪ್ರದೇಶದ ಹೈ ರೆಸಲ್ಯೂಷನ್ ಚಿತ್ರಗಳನ್ನು ಉಪಗ್ರಹಗಳು ತೆಗೆಯಲಿವೆ.
  • ಆ ಮೂಲಕ ಸರೋವರ, ಸಾಗರ ಹಾಗೂ ಕರಾವಳಿ ತೀರಾ ಪ್ರದೇಶಗಳ ಮಾಲಿನ್ಯ,, ಭೂಮಿಯ ಬದಲಾವಣೆ, ಪ್ರವಾಹ, ಭೂಕುಸಿತ ಹಾಗೂ ಜ್ವಾಲಾಮುಖಿ ಚಟುವಟಿಕೆ ಮೇಲೆ ನಿಗಾವಹಿಸಿ ನೈಸರ್ಗಿಕ ವಿಪತ್ತು ಮ್ಯಾಪ್ ತಯಾರಿಸಲು ಸಹಾಯವಾಗಲಿದೆ.

ಕೊಪರ್ನಿಕಸ್ ವೀಕ್ಷಣಾ ಕಾರ್ಯಕ್ರಮ:

  • ಕೊಪರ್ನಿಕಸ್ ವೀಕ್ಷಣಾ ಕಾರ್ಯಕ್ರಮ ಜಗತ್ತಿನ ಅತಿದೊಡ್ಡ ಭೂ ವೀಕ್ಷಣಾ ಕಾರ್ಯಕ್ರಮ. ಐರೋಪ್ಯ ಕಮೀಷನ್ ಹಾಗೂ ಯುರೋಪ್ ಬಾಹ್ಯಕಾಶ ಸಂಸ್ಥೆ ಜೊತೆಗೂಡಿ ಕಾರ್ಯಕ್ರಮವನ್ನು ವಿನ್ಯಾಸಪಡಿಸಿವೆ.
  • ಏಳು ಸೆಂಟಿನೆಲ್ ಭೂವೀಕ್ಷಣಾ ಉಪಗ್ರಹಗಳ ಸಮೂಹವಿರುವ ಕಾರ್ಯಕ್ರಮ ಇದಾಗಿದೆ. ಇದರ ಮೊದಲ ಉಪಗ್ರಹವನ್ನು ಏಪ್ರಿಲ್ 2014ರಲ್ಲಿ ಉಡಾಯಿಸಲಾಯಿತು.

ಟೈಮ್ಸ್‌ ಹೈಯರ್‌ ಎಜುಕೇಶನ್‌ ಸಂಸ್ಥೆ ಸಮೀಕ್ಷೆ: ಬೆಂಗಳೂರಿನ ಐಐಎಸ್‌ಸಿ ಗೆ 8ನೇ ಸ್ಥಾನ

ಟೈಮ್ಸ್‌ ಹೈಯರ್‌ ಎಜುಕೇಶನ್‌ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯು ‘ಜಗತ್ತಿನ ಅತ್ಯುತ್ತಮ ಸಣ್ಣ ವಿಶ್ವವಿದ್ಯಾಲಯ’ಗಳ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿದೆ.

ಪ್ರಮುಖಾಂಶಗಳು:

  • ಐಐಎಸ್‌ಸಿಯು 2011ರಲ್ಲಿ ಇದೇ ಸಂಸ್ಥೆ ನಡೆಸಿದ್ದ ಸಮೀಕ್ಷೆಯಲ್ಲಿ 91ರಿಂದ 100ನೇ ಸ್ಥಾನ ಗಳಿಸಿತ್ತು.
  • ಕಳೆದ ವರ್ಷ ಕ್ರಮವಾಗಿ 14 ಮತ್ತು 18ನೇ ಸ್ಥಾನ ಗಳಿಸಿದ್ದ ಗುವಾಹತಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯಗಳು ಈ ಬಾರಿ ಆ ಸ್ಥಾನ ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.
  • ಭಾರತದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯೂ ಜಗತ್ತಿನ ಅತ್ಯುತ್ತಮ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಗಳಿಸಲು ಸಫಲವಾಗಿಲ್ಲ

ಐಐಎಸ್ಸಿ ಬೆಂಗಳೂರು:

ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science(IISc)) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ 1909 ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ 321 ಎಕರೆ (೧.೫೦ ಕಿಮೀ ಚದರಡಿ) ಭೂಮಿ ದಾನ ಮಾಡಿದರು. ಹಾಗೇ ಜೆಮ್ಷೇಟ್ಜೀ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ “ಟಾಟಾ ಇನ್ಸ್ಟಿಟ್ಯೂಟ್” ಎಂದು ಕರೆಯಲಾಗುತ್ತದೆ.

Leave a Comment

This site uses Akismet to reduce spam. Learn how your comment data is processed.