ವರಿಷ್ಠ ಪಿಂಚಣೆ ಭಿಮಾ ಯೋಜನೆ-2017ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ  

ಕೇಂದ್ರ ಸಚಿವ ಸಂಪುಟ “ವರಿಷ್ಠ ಪಿಂಚಣಿ ಭಿಮಾ ಯೋಜನೆ 2017” ಜಾರಿಗೊಳಿಸಲು ಅನುಮೋದನೆ ನೀಡಿದೆ.  ಕೇಂದ್ರ ಸರ್ಕಾರದ ಆರ್ಥಿಕ ಸೇರ್ಪಡೆ ಹಾಗೂ ಸಾಮಾಜಿಕ ಭದ್ರತೆ ಬದ್ದತೆಯ ಅಂಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯನ್ನು 2016-17ನೇ ಹಣಕಾಸು ವರ್ಷದಿಂದಲೇ “ಭಾರತೀಯ ಜೀವ ವಿಮಾ ನಿಗಮ” ಅನುಷ್ಟಾನಗೊಳಿಸಲಿದೆ. ಯೋಜನೆಯನ್ನು ಜಾರಿಗೊಳಿಸದ ಒಂದು ವರ್ಷ ಅವಧಿಯೊಳಗೆ ಯೋಜನೆಗೆ ಚಂದದಾರರಾಗಬಹುದು.

ಯೋಜನೆಯ ಪ್ರಮುಖಾಂಶಗಳು:

  • ಹಿರಿಯ ನಾಗರಿಕರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಹಾಗೂ ಅನಿರ್ದಿಷ್ಟ ಮಾರುಕಟ್ಟೆ ಪರಿಸ್ಥಿತಿಯಿಂದ ಆದಾಯ ಮೇಲಿನ ಬಡ್ಡಿ ದರ ಕುಸಿತದಿಂದ ರಕ್ಷಣೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶ.
  • ಯೋಜನೆಯಡಿ ಹತ್ತು ವರ್ಷಗಳ ಅವಧಿಗೆ ವಾರ್ಷಿಕ 8% ಖಚಿತ ಪಿಂಚಣಿಯನ್ನು ಪಡೆದುಕೊಳ್ಳಬಹುದು. ಪಿಂಚಣಿಯನ್ನು ಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಆಧಾರದ ಮೇಲೆ ಪಡೆಯಬಹುದಾಗಿದೆ.

ಮಕ್ಕಳ ರಾಷ್ಟ್ರೀಯ ಕ್ರಿಯಾ ಯೋಜನೆ (National Action Plan for Children)-2016 ಬಿಡುಗಡೆ

ಕೇಂದ್ರ ಮಹಿಳಾ ಮತ್ತು ಮಕ್ಕಳ  ಅಭಿವೃದ್ದಿ ಇಲಾಖೆ ಮಕ್ಕಳ ರಾಷ್ಟ್ರೀಯ ಕ್ರಿಯಾ ಯೋಜನೆ, 2016 ಅನ್ನು ಬಿಡುಗಡೆಗೊಳಿಸಿದೆ. ರಾಷ್ಟ್ರೀಯ ಹೆಣ್ಣು ಮಗು ದಿನ (ಜನವರಿ 24) ಅಂಗವಾಗಿ ಬಿಡುಗಡೆಗೊಳಿಸಲಾಯಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಮೇನಕ ಸಂಜಯ್ ಗಾಂಧಿ ರವರು ಯೋಜನೆಯನ್ನು ಬಿಡುಗಡೆಗೊಳಿಸಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ  ಕ್ರಿಯಾಯೋಜನೆಯನ್ನು ಸಿದ್ದಪಡಿಸಿದೆ.

NPAC 2016:

  • ಕ್ರಿಯಾ ಯೋಜನೆಯಲ್ಲಿ ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅವುಗಳೆಂದರೆ ಆರೋಗ್ಯ ಮತ್ತು ಪೋಷಕಾಂಶ, ಶಿಕ್ಷಣ ಮತ್ತು ಅಭಿವೃದ್ದಿ, ಪಾಲ್ಗೊಳ್ಳುವಿಕೆ ಮತ್ತು ರಕ್ಷಣೆ ಹಾಗೂ ಬದುಕುಳಿಯುವಿಕೆ.
  • ನಾಲ್ಕು ಪ್ರಮುಖ ಆದ್ಯತ ಕ್ಷೇತ್ರಗಳ ಅಡಿಯಲ್ಲಿ ಪ್ರಗತಿಯನ್ನು ಅಳೆಯಲು ಉದ್ದೇಶಗಳು, ಉಪ ಉದ್ದೇಶಗಳು, ತಂತ್ರಗಳು ಹಾಗೂ ಕ್ರಮಾಂಕಗಳನ್ನು ಹೇಳಲಾಗಿದೆ.
  • ನೈಸರ್ಗಿಕವಾಗಿ ಮತ್ತು ಮಾನವ ನಿರ್ಮಿತ ವಿಪತ್ತುಗಳು, ಹವಾಮಾನ ಬದಲಾವಣೆ ಮತ್ತು ಆನ್ ಲೈನ್ ದುರುಪಯೋಗದಿಂದ ಮಕ್ಕಳನ್ನು ರಕ್ಷಿಸಲು ವಿಶೇಷ ಕಾಳಜಿಯನ್ನು ವಹಿಸಲಾಗಿದೆ.
  • ವಿವಿಧ ಸಚಿವಾಲಯಗಳಡಿ ಜಾರಿಯಲ್ಲಿರುವ ಯೋಜನೆಗಳ ಆಧಾರದ ಮೇಲೆ ಈ ಕ್ರಿಯಾ ಯೋಜನೆಯ ಕಾರ್ಯತಂತ್ರ ಹಾಗೂ ಕ್ರಮಾಂಕಗಳನ್ನು ರೂಪಿಸಲಾಗಿದೆ.

ಹಿನ್ನಲೆ:

ಮಕ್ಕಳ ರಾಷ್ಟ್ರೀಯ ಕ್ರಿಯಾ ಯೋಜನೆ-2016 ಅನ್ನು ರಾಷ್ಟ್ರೀಯ ಮಕ್ಕಳ ನೀತಿ-2013 ಪ್ರಕಾರ ತಯಾರಿಸಲಾಗಿದೆ. ರಾಷ್ಟ್ರೀಯ ಮಕ್ಕಳ ನೀತಿಯು ಕೇಂದ್ರ ಮಹಿಳಾ ಮತ್ತು ಮಕ್ಕಳ ಸಚಿವಾಲಯದಡಿ ನ್ಯಾಷನಲ್ ಕೋ-ಆರ್ಡಿನೇಷನ್ ಅಂಡ್ ಆಕ್ಷನ್ ಗ್ರೂಫ್ (NCAG) ಸ್ಥಾಪಿಸಲು ಅವಕಾಶ ಕಲ್ಪಿಸಿದೆ.

ಕ್ಯೋಟೋ ಶಿಷ್ಟಾಚಾರದಡಿ ಎರಡನೇ ಬದ್ದ ಅವಧಿ ಅನುಮೋದನೆಗೆ ಸಚಿವ ಸಂಪುಟ ಒಪ್ಪಿಗೆ

ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ತಗ್ಗಿಸುವ “ಕ್ಯೋಟೋ ಶಿಷ್ಟಾಚಾರ (Kyoto Protocol)”ದ ಎರಡನೇ ಬದ್ದತೆ ಅವಧಿ (Second Commitment Period)ಯನ್ನು ಅನುಮೋದಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಕ್ಯೋಟೋ ಶಿಷ್ಟಾಚಾರ (Kyoto Protocol)”ದ ಎರಡನೇ ಬದ್ದ ಅವಧಿಯನ್ನು 2012ರಲ್ಲಿ ಅಳವಡಿಸಿಕೊಳ್ಳಲಾಗಿದ್ದು, 2020ರ ವೇಳಗೆ ಅಂತ್ಯಗೊಳ್ಳಲಿದೆ. ಇದುವರೆಗೆ 75 ರಾಷ್ಟ್ರಗಳು ಇದಕ್ಕೆ ಅನುಮೋದನೆ ನೀಡಿವೆ.

ಅನುಕೂಲ:

  • ಪರಿಸರ ಬದಲಾವಣೆ ಬದ್ದತೆಗಳನ್ನು ತಲುಪಲು ಅಭಿವೃದ್ದಿ ರಾಷ್ಟ್ರಗಳ ಮೇಲೆ ಒತ್ತಡ ಹಾಕಲು ಈ ನಿರ್ಧಾರ ಸಹಕಾರಿಯಾಗಲಿದೆ.
  • ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ನೀತಿ ಜಾರಿಗೊಳಿಸಲು ಭಾರತದ ಬದ್ದತೆಯನ್ನು ಪ್ರದರ್ಶಿಸುತ್ತದೆ.
  • ಭಾರತದ ಈ ನಿರ್ಣಯ ಇತರೆ ರಾಷ್ಟ್ರಗಳಿಗೆ ಮಾದರಿಯಾಗಲಿದ್ದು, ಅಭಿವೃದ್ದಿ ರಾಷ್ಟ್ರಗಳು ಒಪ್ಪಂದವನ್ನು ಅನುಮೋದಿಸಲು ಪ್ರೇರಣೆಯಾಗಲಿದೆ.

ಕ್ಯೋಟೋ ಶಿಷ್ಟಾಚಾರ:

  • ಕ್ಯೋಟೋ ಶಿಷ್ಟಾಚಾರವನ್ನು 1997 ರಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಹಸಿರು ಮನೆ ಅನಿಲ ಪ್ರಮಾಣವನ್ನು ತಗ್ಗಿಸಿ ಜಾಗತಿಕ ತಾಪಮಾನ ಹೆಚ್ಚಳ ವಿರುದ್ದ ಹೋರಾಡುವುದು ಇದರ ಗುರಿ. 2005 ರಿಂದ ಶಿಷ್ಟಾಚಾರ ಜಾರಿಗೆ ಬಂದಿದ್ದು, ಇದರ ಮೊದಲ ಬದ್ದತೆ ಅವಧಿ 2008 ರಿಂದ 2012 ರವರೆಗೆ ಜಾರಿಯಲ್ಲಿತ್ತು.
  • ಎರಡನೇ ಬದ್ದತೆ ಅವಧಿಯನ್ನು ದೋಹಾ ಕ್ಯೋಟೋ ಶಿಷ್ಟಾಚಾರ ತಿದ್ದುಪಡಿಯಡಿ 2012 ರಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದರ ಅವಧಿ 2012-2020.
  • 2012ರಲ್ಲಿ, ಹೊರಸೂಸುವಿಕೆಯನ್ನು 1990ರಲ್ಲಿದ್ದ ಮಟ್ಟಕ್ಕಿಂತಲೂ ಸರಾಸರಿ2%ರಷ್ಟು ಕಡಿಮೆ ಮಾಡುವುದು ಎಂದು ಒಪ್ಪಿಕೊಳ್ಳಲಾಗಿತ್ತು.
  • ಭಾರತದಂತಹ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ಈ ಶಿಷ್ಟಾಚಾರದಡಿ ಯಾವುದೇ ನಿರ್ಬಂಧ ಅಥವಾ ಗುರಿ ಇಲ್ಲ.

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳು (ಐಐಎಂ)-2017 ಮಸೂದೆಗೆ ಒಪ್ಪಿಗೆ

ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳು (ಐಐಎಂ) ತಮ್ಮ ವಿದ್ಯಾರ್ಥಿಗಳಿಗೆ ಪದವಿ ನೀಡಲು ಹಾಗೂ ಐಐಎಂ ಗಳಿಗೆ ರಾಷ್ಟ್ರೀಯ ಮಹತ್ವದ ಸ್ಥಾನ ನೀಡುವ ‘ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ ಮಸೂದೆ – 2017’ಕ್ಕೆ ಕೇಂದ್ರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆಗಳು ಸೊಸೈಟಿಯಾಗಿ ನೋಂದಾಯಿಸಿಕೊಂಡಿರುವ ಕಾರಣ ಪದವಿಯನ್ನು ನೀಡುವಾಗಿಲ್ಲ. ಈಗಿನ ನಿಯಮಗಳ ಪ್ರಕಾರ ಐಐಎಂಗಳು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಫೆಲೋಷಿಪ್ ನೀಡುತ್ತಿವೆ. ಇವುಗಳನ್ನು ಕ್ರಮವಾಗಿ ಎಂಬಿಎ ಹಾಗೂ ಪಿಎಚ್.ಡಿಗೆ ಸಮಾನ ಎಂದು ಪರಿಗಣಿಸಲಾಗುತ್ತಿದೆ.

ಮಸೂದೆಯ ಪ್ರಮುಖಾಂಶಗಳು:

  • ವಿದ್ಯಾರ್ಥಿಗಳಿಗೆ ಪದವಿ ನೀಡಲು ಅವಕಾಶ ಕಲ್ಪಿಸಲಿದೆ
  • ಹೊಸ ಮಸೂದೆಯು ಐಐಎಂಗಳಿಗೆ ಸಂಪೂರ್ಣ ಸ್ವಾಯತ್ತ ಸ್ಥಾನ ಕಲ್ಪಿಸುತ್ತದೆ. ಐಐಎಂನ ಸಮನ್ವಯ ವೇದಿಕೆಯನ್ನು ಒಂದು ಸಲಹೆಗಾರ ಅಂಗವಾಗಿ ಸ್ಥಾಪಿಸಲಾಗುವುದು.
  • ಐಐಎಂ ಮಂಡಳಿ ಸಂಸ್ಥೆಯ ನಿರ್ವಹಣೆಯನ್ನು ಮಾಡಲಿದೆ. ಐಐಎಂಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ಈ ಮಂಡಳಿ ಆಯ್ಕೆಮಾಡಲಿದೆ.
  • ಐಐಎಂ ಗಳ ಸಾಧನೆ ಹಾಗೂ ಪ್ರಗತಿಯ ಪರಾಮರ್ಶೆಯನ್ನು ಸ್ವತಂತ್ರ ಸಂಸ್ಥೆಯೊಂದು ನಡೆಸಲಿದೆ. ಈ ವಿವರಗಳನ್ನು ಸಾರ್ವಜನಿಕ ಪೋರ್ಟಲ್ ಗಳಲ್ಲಿ ಪ್ರಕಟಿಸಲಾಗುವುದು.
  • ಐಐಎಂ ಗಳ ವಾರ್ಷಿಕ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಸಿಎಜಿ ರವರು ಲೆಕ್ಕ ತಪಾಸಣೆ ನಡೆಸಲಿದ್ದಾರೆ.

 ಈ ಮಸೂದೆಯು ಐಐಎಂಗಳನ್ನು ರಾಷ್ಟ್ರೀಯ ಮಹತ್ವದ ಸಂಸ್ಥೆಗಳು ಎಂದು ಘೋಷಿಸಲು ಅವಕಾಶ ಕಲ್ಪಿಸುತ್ತದೆ. ಪ್ರಧಾನಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.

ಆದರೆ ಐಐಎಂನ ಫೆಲೋಷಿಪ್ಗೆ ಎಲ್ಲೆಡೆ ಮಾನ್ಯತೆ ಇಲ್ಲ ಎನ್ನಲಾಗಿದೆ.

 

Leave a Comment

This site uses Akismet to reduce spam. Learn how your comment data is processed.