ಸರ್ವ ಶಿಕ್ಷಣ ಅಭಿಯಾನದ ಪ್ರಗತಿ ಮೇಲೆ ನಿಗಾವಹಿಸಲು ಶಗುಣ್ ಪೋರ್ಟಲ್ ಆರಂಭ

ಸರ್ವ ಶಿಕ್ಷಣ ಅಭಿಯಾನದ ಪ್ರಗತಿಯ ಮೇಲ್ವಿಚಾರಣೆ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಶಗುಣ್ ಪೋರ್ಟಲ್ (http://ssashagun.nic.in) ಅನ್ನು ಆರಂಭಿಸಿದೆ. ವಿಶ್ವಬ್ಯಾಂಕ್ ಈ ಪೋರ್ಟಲ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಸಹಯೋಗದೊಂದಿಗೆ  ಅಭಿವೃದ್ದಿಪಡಿಸಿದೆ. ಶಗುಣ್ ಹೆಸರು ಶಾಲಾ (ಶಾಲೆಗಳು) ಮತ್ತು ಗುಣ್ (ಗುಣ ಅಥವಾ ಕ್ವಾಲಿಟಿ) ನಿಂದ ಬಂದಿದೆ.

ಪ್ರಮುಖಾಂಶಗಳು:

  • ಸರ್ವ ಶಿಕ್ಷಣ ಅಭಿಯಾನದಡಿ ಶಾಲೆಗಳ ಮೇಲೆ ನಿಗಾವಹಿಸಲು ಹಾಗೂ ಈ ಶಾಲೆಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣದ ಗುಣಮಟ್ಟವನ್ನು ತಿಳಿಯಲು ಶಗುಣ್ ಪೋರ್ಟಲ್ ಅನ್ನು ಆರಂಭಿಸಲಾಗಿದೆ.
  • ಸರ್ವ ಶಿಕ್ಷಣ ಅಭಿಯಾನದ ಮೇಲೆ ನಿರಂತರವಾಗಿ ನಿಗಾವಹಿಸುವ ಮೂಲಕ ಭಾರತದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿನ ನಾವೀನ್ಯತೆ ಹಾಗೂ ಪ್ರಗತಿಯನ್ನು ಎತ್ತು ತೋರಲು ಇದು ಸಹಾಯವಾಗಲಿದೆ.
  • ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ವ ಶಿಕ್ಷಣ ಅಭಿಯಾನದಡಿ ಆಗಿರುವ ಪ್ರಗತಿಯನ್ನು ಗುರುತಿಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡಲು ಹಾಗೂ ಯೋಜನೆ ರೂಪಿಸಲು ಸರ್ಕಾರಕ್ಕೆ ಸಹಾಯವಾಗಲಿದೆ.
  • ಸರ್ವ ಶಿಕ್ಷಣ ಅಭಿಯಾನದಡಿ ಬಿಡುಗಡೆಯಾಗಿರುವ ಅನುದಾನದ ಬಳಕೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರ ಹಾಗೂ ಆಡಳಿತಾಧಿಕಾರಿಗಳಿಗೆ ವರದಿಯನ್ನು ಇದು ನೀಡಲಿದೆ.

ಸರ್ವ ಶಿಕ್ಷಣ ಅಭಿಯಾನ:

ಸರ್ವ ಶಿಕ್ಷಣ ಅಭಿಯಾನ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆ ಆಗಿದ್ದು, ವಿಶೇಷ ಸಾಮರ್ಥವುಳ್ಳ ಮಕ್ಕಳೂ ಸೇರಿದಂತೆ 6 ರಿಂದ 14 ವರ್ಷಗಳ ನಡುವಿನ ಎಲ್ಲಾ ಮಕ್ಕಳಿಗೆ ಶಾಲೆಯ ಲಭ್ಯತೆ,  ದಾಖಲಾತಿ ಮತ್ತು ಶಾಲೆಯಲ್ಲಿ ಉಳಿಸಿಕೊಳ್ಳುವುದು ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಮೂಲಕ ಸಾರ್ವತ್ರಿಕ ಮಾನವ ಮೌಲ್ಯಗಳನ್ನು ಬೆಳೆಸುವಂತೆ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು ಹಾಗೂ ಸಮುದಾಯವನ್ನು ರಚನಾತ್ಮಕವಾಗಿ ತೊಡಗಿಸುವುದು ಇದರ ಗುರಿ.

ಬೆಂಗಳೂರು, ತುಮಕೂರು ದಾವಣಗೆರೆ ಅತ್ಯಂತ ಕಲುಷಿತ ನಗರಗಳು

ಬೆಂಗಳೂರು, ತುಮಕೂರು ಮತ್ತು ದಾವಣಗೆರೆ ನಗರಗಳು ರಾಜ್ಯದ ಅತ್ಯಂತ ಕಲುಷಿತ ನಗರಗಳೆನಿಸಿವೆ. ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ರಾಜ್ಯದ ಹಲವು ನಗರಗಳಲ್ಲಿ ವಾಯು ಮಾಲಿನ್ಯ ಆತಂಕಕಾರಿ ಸ್ಥಿತಿ ತಲುಪಿದೆ ಎಂದು ಹೇಳಲಾಗಿದೆ.

ಪ್ರಮುಖಾಂಶಗಳು:

  • ದಾವಣಗೆರೆ, ರಾಯಚೂರು, ಹುಬ್ಬಳ್ಳಿ ನಗರಗಳಲ್ಲಿ ಸಹ ಮಾಲಿನ್ಯ ಪ್ರಮಾಣ ರಾಷ್ಟ್ರೀಯ ಮಿತಿಗಿಂತ ಹೆಚ್ಚಿದೆ ಎಂದು ವರದಿಯಲ್ಲಿ ಹೇಳಿದೆ.
  • ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆನ್‌ಲೈನ್‌ ವರದಿ ಹಾಗೂ ಎಲ್ಲಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿ ಆಧಾರದ ಮೇಲೆ ಸಂಸ್ಥೆ ಈ ವರದಿ ನೀಡಿದೆ.
  • ದೇಶದ 168 ನಗರಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದ ಪ್ರಕಾರ ವಾಹನಗಳ ಓಡಾಟದಿಂದ ಶೇ 42% ಮಾಲಿನ್ಯ ಉಂಟಾದರೆ, ರಸ್ತೆ ದೂಳಿನಿಂದ ಶೇ20 ರಷ್ಟಿದೆ.
  • ರಾಜ್ಯದ ನಾಲ್ಕು ನಗರಗಳಲ್ಲಿ ವಾರ್ಷಿಕ ಪಿಎಂ (Particulate Matter (ತೇಲಾಡುವ ಕಣ))–10 ಪ್ರಮಾಣ ಸುಮಾರು 120 ಮೈಕ್ರೋ ಗ್ರಾಂ ಕ್ಯೂಬಿಕ್‌ ಮೀಟರ್‌ನಷ್ಟಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ ನಂತಹ ಕೈಗಾರಿಕಾ ಪ್ರದೇಶದಲ್ಲಿ ಈ ವರ್ಷ ಆರ್‌ಎಸ್‌ಪಿಎಂ (Respiratory Suspended Particular Matter) ಪ್ರಮಾಣ 189 ಮೈಕ್ರೋ ಗ್ರಾಂ ಇದೆ.  ಇದು ರಾಷ್ಟ್ರೀಯ ಮಟ್ಟಕ್ಕಿಂತ ಮೂರು ಪಟ್ಟು ಅಧಿಕವಾಗಿದೆ.
  • ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಒಂದು ಸಾವಿರ ಲೀಟರ್ ಗಾಳಿಯಲ್ಲಿ ತೇಲಾಡುವ ದೂಳಿನ ಪ್ರಮಾಣ 20 ಮೈಕ್ರೋ ಗ್ರಾಂ ಕ್ಯೂಬಿಕ್‌ ಮೀಟರ್‌ ಹಾಗೂ ರಾಷ್ಟ್ರೀಯ ಮಿತಿ ಪ್ರಕಾರ 60 ಮೈಕ್ರೋ ಗ್ರಾಂ ನಷ್ಟಿರಬಹುದು.

ಮಾಲಿನ್ಯಕ್ಕೆ ಮುಖ್ಯ ಕಾರಣ:

ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ನಗರೀಕರಣ ಮತ್ತು ಕೈಗಾರಿಕೆಗಳಿಂದ ನಗರದ ಕೆಲವು ಭಾಗಗಳಲ್ಲಿ ಗಾಳಿಯಲ್ಲಿರುವ ತೇಲಾಡುವ ದೂಳಿನ ಕಣದ (ಆರ್‌ಎಸ್‌ಪಿಎಂ) ಪ್ರಮಾಣ ಹೆಚ್ಚಾಗಿದೆ ಮತ್ತು ಇನ್ನೂ ಕೆಲವು ಪ್ರದೇಶದಲ್ಲಿ ಅಪಾಯಕಾರಿ ಮಟ್ಟದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೂಕ್ಷ್ಮಾತಿ ಸೂಕ್ಷ್ಮ ಕಣ

ಗಾಳಿಯಲ್ಲಿ ತೇಲಾಡುವ ಸೂಕ್ಷ್ಮಾತಿ ಸೂಕ್ಷ್ಮ ಕಣಗಳನ್ನು ಪಾರ್ಟಿಕ್ಯುಲೇಟ್‌ ಮ್ಯಾಟರ್‌ (ಪಿಎಂ) ಎಂದು ಕರೆಯಲಾಗುತ್ತದೆ. ಮನುಷ್ಯರಿಗೆ ಮತ್ತು ಪರಿಸರಕ್ಕೆ ಹಾನಿ ಮಾಡಬಲ್ಲ ಗಾಳಿಯಲ್ಲಿನ ಘನರೂಪದ ಕಣಗಳು ಮತ್ತು ದ್ರವರೂಪದ ಸಣ್ಣ ಹನಿಗಳಿವು.  2.5 ಮೈಕ್ರೋಮೀಟರ್‌ಗಿಂತಲೂ ಚಿಕ್ಕದಾದ ಕಣಗಳನ್ನು ಪಿಎಂ 2.5 ಎಂದೂ, 10 ಮೈಕ್ರೋಮೀಟರ್‌ ಅಥವಾ ಅದಕ್ಕಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 10 ಎಂದು ವಿಭಾಗಿಸಲಾಗಿದೆ. ಭಾರತದಲ್ಲಿ ಪಿಎಂ 2.5 ಅಪಾಯಕಾರಿ ಹಾಗೂ ಪಿಎಂ 10 ಸಾಮಾನ್ಯ ಮಾಲಿನ್ಯ ಕಾರಕ ಎಂದು ಪರಿಗಣಿಸಲಾಗಿದೆ.

74ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ

74ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಧಾನ ಸಮಾರಂಭ ಬೆವೆರ್ಲಿ ಹಿಲ್ಸ್, ಕ್ಯಾಲಿಪೋರ್ನಿಯಾ, ಅಮೆರಿಕದಲ್ಲಿ ವಿಜೃಂಭಣೆಯಿಂದ ನಡೆಯಿತು. ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಾರ್ಷಿಕ ಪ್ರಶಸ್ತಿಯಾಗಿದ್ದು, ಹಿಂದಿನ ವರ್ಷದ ಅತ್ಯುತ್ತಮ ಮೋಷನ್ ಪಿಕ್ಚರ್ ಹಾಗೂ ಅಮೆರಿಕನ್ ಟೆಲಿವಿಷನ್ ಗುರುತಿಸಲು ನೀಡಲಾಗುತ್ತಿದೆ.  ಹಾಲಿವುಡ್ ಸಿನಿಮಾ ‘ಲಾ ಲಾ ಲ್ಯಾಂಡ್’ಗೆ ಗೋಲ್ಡನ್ ಗ್ಲೋಬ್ಸ್ ವತಿಯಿಂದ ನೀಡಲಾಗುವ ಏಳು ಪ್ರಶಸ್ತಿಗಳು ಸಂದಿವೆ. ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಹಾಸ್ಯ, ಸಂಗೀತ, ಉತ್ತಮ ನಟನೆ ಸೇರಿದಂತೆ ಶಿಫಾರಸು ಮಾಡಿದ ಎಲ್ಲ ವಿಭಾಗಗಳಲ್ಲೂ ಸಿನಿಮಾಗೆ ಪ್ರಶಸ್ತಿ ದೊರೆತಿದೆ. ಹಿರಿಯ ನಟಿ ಮೆರ್ಲಿ ಸ್ಟ್ರೀಪ್ ರವರಿಗೆ ಸೆಸಿಲ್ ಬಿ ಡೆಮಿಲ್ಲೆ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.

ವಿವಿಧ ವಿಭಾಗದಲ್ಲಿ ಪ್ರಶಸ್ತಿಯ ವಿವರ:

  • ಬೆಸ್ಟ್ ಮೋಷನ್ ಪಿಕ್ಚರ್ ಡ್ರಾಮಾ: ಮೂನ್ ಲೈಟ್
  • ಬೆಸ್ಟ್ ಮೋಷನ್ ಪಿಕ್ಚರ್ ಮ್ಯೂಸಿಕಲ್/ ಕಾಮಿಡಿ: ಲಾ ಲಾ ಲ್ಯಾಂಡ್
  • ಬೆಸ್ಟ್ ಡೈರೆಕ್ಟರ್ ಇನ್ ಮೋಷನ್ ಪಿಕ್ಚರ್ –ಡ್ರಾಮಾ: ಡಮಿಯನ್ ಚಾಝೆಲ್ (ಲಾ ಲಾ ಲ್ಯಾಂಡ್)
  • ಬೆಸ್ಟ್ ಆಕ್ಟರ್ ಇನ್ ಮೋಷನ್ ಪಿಕ್ಚರ್ –ಡ್ರಾಮಾ: ಕ್ಯಾಸೆ ಅಫ್ಲೆಕ್ (ಮ್ಯಾಂಚೆಸ್ಟರ್ ಬೈ ದ ಸಿ).
  • ಬೆಸ್ಟ್ ಆಕ್ಟ್ರೆಸ್ ಇನ್ ಮೋಷನ್ ಪಿಕ್ಚರ್ –ಡ್ರಾಮಾ: ಇಸಾ ಬೆಲ್ಲೆ ಹಪ್ಪರ್ಟ್ (ಎಲ್ಲೆ)
  • ಬೆಸ್ಟ್ ಆಕ್ಟರ್ ಇನ್ ಮೋಷನ್ ಪಿಕ್ಚರ್/ಮ್ಯೂಸಿಕಲ್/ಕಾಮಿಡಿ: ರ್ಯಾನ್ ಗೊಸ್ಲಿಂಗ್ (ಲಾ ಲಾ ಲ್ಯಾಂಡ್)
  • ಬೆಸ್ಟ್ ಆಕ್ಟ್ರೆಸ್ ಇನ್ ಮೋಷನ್ ಪಿಕ್ಚರ್/ಮ್ಯೂಸಿಕಲ್/ಕಾಮಿಡಿ: ಎಮ್ಮ ಸ್ಟೋನ್ (ಲಾ ಲಾ ಲ್ಯಾಂಡ್)
  • ಬೆಸ್ಟ್ ಅನಿಮೆಟೆಡ್ ಫೀಚರ್ ಫಿಲ್ಮ್: ಝೋಟೊಪಿಯ
  • ಬೆಸ್ಟ್ ಫಾರಿನ್ ಲಾಂಗ್ವೆಜ್ ಫಿಲ್ಮ್: ಎಲ್ಲೆ (ಫ್ರಾನ್ಸ್)

Leave a Comment

This site uses Akismet to reduce spam. Learn how your comment data is processed.