ಕೊರಗ ಮತ್ತು ಜೇನುಕುರುಬ ಜನಾಂಗದ ಮಕ್ಕಳಿಗೆ ಸ್ಟೈಫಂಡ್ ನೀಡಲಿರುವ ರಾಜ್ಯ ಸರ್ಕಾರ

ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಮತ್ತು ಜೇನುಕುರುಬ ಜನಾಂಗದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದವರಿಗೆ ಸ್ಟೈಪೆಂಡ್ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರ ಜೊತೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಬುಡಕಟ್ಟು ಜನಾಂಗದವರಿಗೆ ಪೌಷ್ಠಿಕ ಆಹಾರ ವಿತರಣೆ ಸೇರಿ ಇತರ ಯೋಜನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಬುಡಕಟ್ಟು ಸಮುದಾಯದವರಿಗೂ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದುಮೈಸೂರಿನಲ್ಲಿ ಫೆ.1ರಂದು ನಡೆಯಲಿರುವ ಆದಿವಾಸಿಗಳಿಗೆ ಸವಲತ್ತು ವಿತರಣೆ ಕುರಿತ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಈ ಎರಡೂ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಮುಖ್ಯಾಂಶಗಳು:

  • ಕೊರಗ ಮತ್ತು ಜೇನುಕುರುಬ ಜನಾಂಗವನ್ನು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ ಅವರಿಗೆ ಸ್ಟೈಪೆಂಡ್ ವಿತರಿಸಲಾಗುತ್ತಿದೆ.
  • ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದವರಿಗೆ ಮಾಸಿಕ ರೂ 2000, ಪಿಯು ಪೂರ್ಣಗೊಳಿಸಿದವರಿಗೆ 2,500 ರೂ., ಪದವಿ ಮುಗಿಸಿದವರಿಗೆ 3,500 ರೂ. ಮತ್ತು ಸ್ನಾತಕೋತ್ತರ ಪದವಿ ಮಾಡಿದವರಿಗೆ 4500 ರೂ. ಸ್ಟೈಪಂಡ್ ನೀಡಲಾಗುವುದು.
  • ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಆದಿವಾಸಿ ಕುಟುಂಬಗಳಿಗೆ ಪ್ರತಿ ತಿಂಗಳು ನೀಡುವ ಆಹಾರಧಾನ್ಯ (ಒಂದು ಕುಟುಂಬಕ್ಕೆ 15 ಕೆ.ಜಿ.ಅಕ್ಕಿ, ರಾಗಿ ಅಥವಾ ಗೋಧಿ, 5 ಕೆ.ಜಿ.ತೊಗರಿಬೇಳೆ, ಐದು ಕೆ.ಜಿ.ಕಾಳುಗಳು, 2 ಲೀಟರ್ ಅಡುಗೆ ಎಣ್ಣೆ, 4 ಕೆ.ಜಿ.ಬೆಲ್ಲ ಅಥವಾ ಸಕ್ಕರೆ, 45 ಮೊಟ್ಟೆ, 1 ಕೆ.ಜಿ.ನಂದಿನಿ ತುಪ್ಪ)ವನ್ನು ಚಿಕ್ಕಮಗಳೂರು ಜಿಲ್ಲೆಯ ಬುಡಕಟ್ಟು ಸಮುದಾಯದವರಿಗೂ ನೀಡಲು ತೀರ್ಮಾನಿಸಲಾಗಿದೆ.

ದೆಹಲಿ ಪೊಲೀಸ್ ಕಮೀಷನರ್ ಅಲೋಕ್ ಕುಮಾರ್ ವರ್ಮಾ ಸಿಬಿಐನ ನೂತನ ನಿರ್ದೇಶಕ

ಸಿಬಿಐ ನೂತನ ನಿರ್ದೇಶಕರಾಗಿ ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್‌ ವರ್ಮಾ ಅವರನ್ನು ನೇಮಿಸಲಾಗಿದೆ. ಮುಂದಿನ ಎರಡು ವರ್ಷಗಳ ಕಾಲ ವರ್ಮಾ ರವರು ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಮೂರ್ತಿ ಜೆ.ಎಸ್.ಖೇಹರ್ ಹಾಗೂ ಕಾಂಗ್ರೇಸ್ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದ ಮೂವರು ಜನರನ್ನು ಒಳಗೊಂಡ ಸಮಿತಿ ವರ್ಮಾ ಅವರನ್ನು ಈ ಹುದ್ದೆಗೆ ನೇಮಕ ಮಾಡಿದೆ.  ನಿರ್ದೇಶಕರಾಗಿದ್ದ ಅನಿಲ್‌ ಸಿನ್ಹಾ ಡಿ. 2ರಂದು ನಿವೃತ್ತಿಯಾಗಿದ್ದರು. ಅಂದಿನಿಂದ ರಾಕೇಶ್‌ ಆಸ್ತಾನಾ ಅವರು ಹಂಗಾಮಿ ನಿರ್ದೇಶಕರಾಗಿದ್ದರು.

ಅಲೋಕ್ ಕುಮಾರ್ ವರ್ಮಾ:

  • ಅಲೋಕ್ ಕುಮಾರ್ ವರ್ಮಾ ರವರು 1979ನೇ ಬ್ಯಾಚ್​ನ ಅರುಣಾಚಲ ಪ್ರದೇಶ-ಗೋವಾ- ಮಿಜೊರಾಂ ಹಾಗೂ ಕೇಂದ್ರಾಡಳಿತ ಪ್ರದೇಶದ ಕೇಡರ್​ನ ಅಧಿಕಾರಿ.
  • ದೆಹಲಿ ಪೊಲೀಸ್ ಕಮೀಷನರ್ ಆಗಿ ನೇಮಕವಾಗುವ ಮುಂಚೆ ತಿಹಾರ್ ಜೈಲಿನ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
  • ದೆಹಲಿ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿ ಅನುಭವವನ್ನು ಹೊಂದಿದ್ದಾರೆ. ದೆಹಲಿಯ ಸೌಥ್ ಡಿಸ್ಟ್ರಿಕ್ ನ ಡಿಸಿಪಿ ಯಾಗಿ, ಕ್ರೈಂ ವಿಭಾಗದ ಜೆಸಿ ಯಾಗಿ, ಅಪರಾಧ ವಿಭಾಗಧಿಕಾರಿಯಾಗಿ ಸಹ ಕಾರ್ಯನಿರ್ವಹಿಸಿದ್ದರು.
  • ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಹಾಗೂ ಪುದುಚೇರಿಯಲ್ಲಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಐದು ಜನರಲ್ ವಿಮಾ ಕಂಪನಿಗಳನ್ನು ಷೇರು ವಿನಿಮಯದಲ್ಲಿ ಸೇರ್ಪಡೆಗೊಳಿಸಲು ಒಪ್ಪಿಗೆ

ಸರ್ಕಾರಿ ಸ್ವಾಮ್ಯದ ಐದು ಜನರಲ್ ವಿಮಾ ಕಂಪನಿಗಳನ್ನು ಷೇರು ವಿನಿಮಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಆರ್ಥಿಕ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಈ ಐದು ವಿಮಾ ಕಂಪನಿಗಳೆಂದರೆ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಲಿಮಿಟೆಡ್, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ಒರಿಯೆಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಜನರಲ್ ಇನ್ಶುರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ. ಈ ಐದು ವಿಮಾ ಕಂಪನಿಗಳ ಷೇರು ಪಾಲುದಾರಿಕೆಯನ್ನು ಸೆಬಿ ಮತ್ತು ಭಾರತೀಯ ವಿಮಾ ಅಭಿವೃದ್ದಿ ಪ್ರಾಧಿಕಾರದ (IRDAI) ನಿಯಮಗಳ ಪ್ರಕಾರ ಕಾಲಕ್ರಮೇಣ ಶೇ 100% ರಿಂದ ಶೇ 75%ಕ್ಕೆ ಇಳಿಸಲಾಗುವುದು.

ನಿರ್ಣಯದ ಮಹತ್ವ?

  • ಷೇರು ವಿನಿಮಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಮೂಲಕ ಸೆಬಿ ಅಂಗೀಕಾರದ ಅವಶ್ಯಕತೆಯಂತೆ ಕಂಪನಿಗಳ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಮತ್ತು ಇಕ್ವಿಟಿಯನ್ನು ತರುವುದು.
  • ಸಾಂಸ್ಥಿಕ ಆಡಳಿತ ಮತ್ತು ಅಪಾಯ ನಿರ್ವಹಣೆ ಸುಧಾರಿಸುವ ಮೂಲಕ ದಕ್ಷತೆಯನ್ನು ಹೆಚ್ಚಿಸುವುದು. ಆ ಮೂಲಕ ಸಂಸ್ಥೆಗಳ ಬೆಳವಣಿಗೆ ಹಾಗೂ ಆದಾಯಕ್ಕೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗಲಿದೆ.
  • ಕಂಪನಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅಗತ್ಯವಿರುವ ನಿಧಿಯನ್ನು ಬಂಡವಾಳ ಮಾರುಕಟ್ಟೆಯಿಂದ ಪೂರೈಸಲು ಸಹಾಯವಾಗಲಿದೆ. ಇದರಿಂದ ಸರ್ಕಾರದ ಮೇಲೆ ಅವಲಂಬಿತವಾಗುವುದು ತಪ್ಪಲಿದೆ.

ಚೂರುಪಾರು

ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡಮಾಡುವ 2017ನೇ ಸಾಲಿನ ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಭಾಷಾ ತಜ್ಞ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ.ನಾರಾಯಣ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡಿದೆ. ಇದೇ 31ರಂದು ನಡೆಯುವ ಬೇಂದ್ರೆ ಅವರ 122ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕವಿ ಚನ್ನವೀರ ಕಣವಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

One Thought to “ಪ್ರಚಲಿತ ವಿದ್ಯಮಾನಗಳು-ಜನವರಿ-19, 2017”

Leave a Comment

This site uses Akismet to reduce spam. Learn how your comment data is processed.