ನವದೆಹಲಿಯಲ್ಲಿ ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿಯ 16ನೇ ಸಭೆ

ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿ (Financial Stability and Development Council)ಯ 16ನೇ ಸಭೆ ನವದೆಹಲಿಯಲ್ಲಿ ನಡೆಯಿತು. ಹಣಕಾಸು ಸಚಿವ ಅರುಣ್ ಜೇಟ್ಲಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಡಳಿಯ ಸದಸ್ಯರಾದ ಆರ್ಥಿಕ ವಲಯದ ನಿಯಂತ್ರಕರು ಸಭೆಯಲ್ಲಿ ಭಾಗವಹಿಸಿದ್ದರು. ದೇಶದ ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆ ಹಾಗೂ ಸವಾಲುಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ಸಭೆಯ ಪ್ರಮುಖಾಂಶಗಳು:

  • ಭಾರತದ ಆರ್ಥಿಕತೆ: ವಿಶ್ವದ ದುರ್ಬಲ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಭಾರತದ ಆರ್ಥಿಕತೆ ಸಧೃಡವಾಗಿದೆ. ಭಾರತದ ಆರ್ಥಿತಕೆ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
  • ಬ್ಯಾಂಕಿಂಗ್: ಸಾರ್ವಜನಿಕ ಬ್ಯಾಂಕ್ ಗಳಲ್ಲಿ ವಸೂಲಾಗದ ಸಾಲದ ಬಗ್ಗೆ ಹಾಗೂ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸಹ ಚರ್ಚಿಸಲಾಯಿತು.
  • ಆರ್ಥಿಕ ಸೇರ್ಪಡೆ/ಆರ್ಥಿಕ ಸಾಕ್ಷರತೆ: ಆರ್ಥಿಕ ಸೇರ್ಪಡೆ ಮತ್ತು ಆರ್ಥಿಕ ಸಾಕ್ಷರತೆಗೆ ಸರ್ಕಾರ ಕೈಗೊಂಡಿರುವ ಹಲವಾರು ಉಪಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆರ್ಥಿಕ ಸೇರ್ಪಡೆ/ಆರ್ಥಿಕ ಸಾಕ್ಷರತೆ ಉತ್ತೇಜಿಸಲು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
  • ತಂತ್ರಜ್ಞಾನ: ಸೈಬರ್ ಭದ್ರತೆ, ಫಿನ್ ಟೆಕ್ ಮತ್ತು ಡಿಜಿಟಲ್ ನಾವೀನ್ಯತೆ ಬಗ್ಗೆ ಚರ್ಚಿಸಲಾಯಿತು.
  • ನೋಟು ಅಮಾನ್ಯ: ಜಿಡಿಪಿ ಬೆಳವಣಿಗೆ ಹಾಗೂ ತೆರಿಗೆ ವಂಚನೆ ತಡೆಯಲು ನೋಟು ಅಮಾನ್ಯಕರಣ ಸಹಾಯ ಮಾಡಲಿದೆ ಎಂಬ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿ:

  • ಕೇಂದ್ರ ಸರ್ಕಾರ ಡಿಸೆಂಬರ್ 2010ರಲ್ಲಿ ಹಣಕಾಸು ಸ್ಥಿರತೆ ಮತ್ತು ಅಭಿವೃದ್ದಿ ಮಂಡಳಿ (FSDC)ಯನ್ನು ಸ್ಥಾಪಿಸಿದೆ. ಕೇಂದ್ರ ಹಣಕಾಸು ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ.
  • ಹಣಕಾಸು ವಲಯ ಸುಧಾರಣೆಗೆ 2008 ರಲ್ಲಿ ರಚಿಸಲಾದ ರಘುರಾಮ್ ರಾಜನ್ ಸಮಿತಿಯ ಶಿಫಾರಸ್ಸಿನಲ್ಲಿ ಈ ಮಂಡಳಿಯ ಸ್ಥಾಪನೆಯ ಬಗ್ಗೆ ಮೊದಲು ಪ್ರಸ್ತಾಪಿಸಲಾಗಿತ್ತು.
  • ಆರೋಗ್ಯಕರ ಮತ್ತು ಸಮರ್ಥವಾದ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸುವ ಆರ್ಥಿಕ ನಿಯಂತ್ರಕ ಸಂಸ್ಥೆಯಾಗಿ ಇದು ಕಾರ್ಯನಿರ್ವಹಿಸುತ್ತದೆ.
  • ಹಣಕಾಸು ಸ್ಥಿರತೆಯನ್ನು ಕಾಪಾಡುವುದು, ಆರ್ಥಿಕ ವಲಯವನ್ನು ಅಭಿವೃದ್ದಿಪಡಿಸುವುದು ಇದರ ಜವಾಬ್ದಾರಿಯಾಗಿದೆ.

ಮಂಡಳಿಯ ರಚನೆ:

  • ಅಧ್ಯಕ್ಷರು: ಕೇಂದ್ರ ಹಣಕಾಸು ಸಚಿವರು
  • ಸದಸ್ಯರು: ಆರ್ಥಿಕ ವಲಯ ನಿಯಂತ್ರಣ ಪ್ರಾಧಿಕಾರಗಳ ಮುಖ್ಯಸ್ಥರು ಇದರ ಸದಸ್ಯರಾಗಿರುತ್ತಾರೆ (RBI, PFRDA, SEBI, IRDA ), ಮುಖ್ಯ ಆರ್ಥಿಕ ಸಲಹೆಗಾರರು, ಆರ್ಥಿಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ.

 ಸಹಕಾರಿ ಮತ್ತು ಸಕ್ಕರೆ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್ ನಿಧನ

ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌.ಮಹದೇವ ಪ್ರಸಾದ್‌ ತೀವ್ರ ಹೃದಯಾಘಾತದಿಂದ  ಚಿಕ್ಕಮಗಳೂರು ನಗರದ ಹೊರವಲಯದ ಸೆರಾಯ್‌ ರೆಸಾರ್ಟ್‌ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮಹದೇವ ಪ್ರಸಾದ್ ಬಗ್ಗೆ:

  • ಹಾಲಹಳ್ಳಿ ಶ್ರೀಕಂಠಶೆಟ್ಟಿ ಮಹದೇವ ಪ್ರಸಾದ್‌ (ಎಚ್.ಎಸ್. ಮಹದೇವ ಪ್ರಸಾದ್) ರವರು 1958 ಆಗಸ್ಟ್‌ 5 ರಂದು ಗುಂಡ್ಲುಪೇಟೆಯಲ್ಲಿ ಜನಿಸಿದರು.
  • ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಆಪ್ತರಾಗಿದ್ದ ಅವರು 5 ಬಾರಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು.
  • ಪ್ರಸ್ತುತ ಅವರು ಸಕ್ಕರೆ ಮತ್ತು ಸಹಕಾರ ಸಚಿವರು ಹಾಗೂ   ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.
  • ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಅವರು ನಂತರದ ದಿನಗಳಲ್ಲಿ   ಕಾಂಗ್ರೆಸ್ ಪಕ್ಷ ಸೇರಿದ್ದರು. ಈ ಹಿಂದೆ  ಆಹಾರ ಮತ್ತು ನಾಗರಿಕ ಸರಬರಾಜು , ಕನ್ನಡ ಮತ್ತು ಸಂಸ್ಕೃತಿ  ಖಾತೆಗಳನ್ನು ನಿರ್ವಹಿಸಿದ್ದರು.

 ರಾಷ್ಟ್ರೀಯ ಕ್ರೀಡಾ ನೀತಿ ರೂಪಿಸಲು ಇಂಜೇತಿ ಶ್ರೀನಿವಾಸ್ ಸಮಿತಿ ರಚಿಸಿದ ಕೇಂದ್ರ ಸರ್ಕಾರ

ಸಮಗ್ರ ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ನೀತಿಯನ್ನು ರೂಪಿಸುವ ಸಲುವಾಗಿ ಕೇಂದ್ರ ಕ್ರೀಡಾ ಸಚಿವಾಲಯವು ಸಮಿತಿಯೊಂದನ್ನು ರಚಿಸಿದೆ. ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಇಂಜೇತಿ ಶ್ರೀನಿವಾಸ್ ರವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ಕ್ರೀಡಾ ಆಡಳಿತ ಚೌಕಟ್ಟು, ಕ್ರೀಡಾ ಆಡಳಿತಕ್ಕೆ ಸಂಬಂಧಿಸಿದಂತೆ ವಿಷಯಗಳು ಹಾಗೂ ಕ್ರೀಡಾ ಆಡಳಿತದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮಿತಿಯು ಅಧ್ಯಯನ ನಡೆಸಲಿದೆ. ಅಲ್ಲದೇ ಸಮಗ್ರ ಕ್ರೀಡಾ ನೀತಿಯನ್ನು ರೂಪಿಸಲು ನ್ಯಾಯಾಲಗಳ ತೀರ್ಪು ಹಾಗೂ ಅತ್ಯುತ್ತಮ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಬಗ್ಗೆಯು ಅಧ್ಯಯನ ನಡೆಸಲಿದೆ.

ಸಮಿತಿಯ ಸದಸ್ಯರು:

  • ಅಭಿನವ್ ಬಿಂದ್ರಾ (ಒಲಂಪಿಯನ್), ಅಂಜು ಬಾಬ್ಬಿ (ಒಲಂಪಿಯನ್), ಪ್ರಕಾಶ್ ಪಡುಕೋಣೆ (ಖ್ಯಾತ ಕ್ರೀಡಾ ಪಟು), ನರೀಂದರ್ ಬಾತ್ರ (ಹಾಕಿ ಫೆಡರೇಷನ್ ಅಧ್ಯಕ್ಷರು), ನಂದನ್ ಕಾಮತ್ (ವಕೀಲರು), ಬಿಶ್ವೇಶ್ವರ್ ನಂದಿ (ತರಭೇತುದಾರ) ಮತ್ತು ವಿಜಯ್ ಲೋಕಪಲ್ಲಿ (ಕ್ರೀಡಾ ಬರಹಗಾರ).

ಸಮಿತಿಯ ಹೊಣೆಗಾರಿಕೆ:

  • ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ ಚಾರ್ಟರ್ ನಂತೆ ಅತ್ಯುತ್ತಮ ಅಂತಾರಾಷ್ಟ್ರೀಯ ಕಾರ್ಯಾಚರಣೆ ಆಧರಿತ ನೀತಿಗಳನ್ನು ಹಾಗೂ ಉತ್ತಮ ಆಡಳಿತ ಮತ್ತು ಮೂಲಭೂತ ಸಾರ್ವತ್ರಿಕ ತತ್ವಗಳನ್ನು ಗುರುತಿಸುವುದು.
  • ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ಕರಡು ಮಸೂದೆ, ರಾಷ್ಟ್ರೀಯ ಕ್ರೀಡಾ ಅಭಿವೃದ್ದಿ ನೀತಿ-2011, ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಪರಿಶೀಲಿಸಿ ಉತ್ತಮ ಕ್ರೀಡಾ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರುವುದು.
  • ರಾಷ್ಟ್ರೀಯ ಕ್ರೀಡಾ ಒಕ್ಕೂಟ ಮತ್ತು ರಾಷ್ಟ್ರೀಯ ಒಲಂಪಿಕ್ ಸಮಿತಿ ಆಡಳಿತಕ್ಕೆ ಸಂಬಂಧಿಸಿದಂತೆ ಸಮಗ್ರ ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೆ ತರಲು ಶಿಫಾರಸ್ಸು ಮಾಡುವುದು.

44ನೇ ನವದೆಹಲಿ ವಿಶ್ವ ಪುಸ್ತಕ ಮೇಳ ಆರಂಭ

ನವದೆಹಲಿ ವಿಶ್ವ ಪುಸ್ತಕ ಮೇಳದ 44ನೇ ಆವೃತ್ತಿ ನವದೆಹಲಿಯ ಪ್ರಗತಿ ಮೈದಾನದಲ್ಲಿಆರಂಭಗೊಂಡಿತು. “ಮನುಷಿ-ಬುಕ್ಸ್ ರಿಟನ್ ಆನ್ ಅಂಡ್ ಬೈ ವುಮೆನ್ (Manushi-Books Written on and by Women) ಇದು ಈ ವರ್ಷ ಪುಸ್ತಕ ಮೇಳದ ಧ್ಯೇಯವಾಕ್ಯ. ಕೇಂದ್ರ ಮಾನವ ಅಭಿವೃದ್ದಿ ಸಚಿವಾಲಯ ರಾಜ್ಯ ಖಾತೆ ಸಚಿವ ಮಹೇಂದ್ರ ನಾಥ್ ಪಾಂಡೆ ರವರು ಈ ಮೇಳವನ್ನು ಉದ್ಘಾಟಿಸಿದರು.

ಪ್ರಮುಖಾಂಶಗಳು:

  • ಒಂಬತ್ತು ದಿನಗಳ ಕಾಲ ನಡೆಯುವ ಈ ಪುಸ್ತಕ ಮೇಳವನ್ನು ರಾಷ್ಟ್ರೀಯ ಪುಸ್ತಕ ಟ್ರಸ್ಟ್ ಕೇಂದ್ರ ಮಾನವ ಅಭಿವೃದ್ದಿ ಸಚಿವಾಲಯದಡಿ ಆಯೋಜಿಸುತ್ತಿದೆ. ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಈ ಮೇಳದ ಸಹ ಸಂಘಟಕ ಸಂಸ್ಥೆ.
  • ಈ ಬಾರಿಯ ಧ್ಯೇಯವಾಕ್ಯದಂತೆ ಪುಸ್ತಕ ಮೇಳದಲ್ಲಿ ಪುರಾತನ ಕಾಲದಿಂದ ಮಹಿಳಾ ಸಾಹಿತ್ಯ ಶ್ರೀಮಂತಿಕೆಯನ್ನು ಬಿಂಬಿಸಲಿದೆ.
  • ಪ್ರಾಚೀನ ಮತ್ತು ಮಧ್ಯ ಪ್ರಾಚೀನ ಮತ್ತು ಆಧುನಿಕ ಭಾರತದ ಶ್ರೇಷ್ಠ ಮಹಿಳಾ ಸಾಹಿತಿಗಳ ಪೋಸ್ಟರ್ ಹಾಗೂ ಫಲಕಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುವುದು.
  • ದೇಶದ ವಿವಿಧೆಡೆಯಿಂದ ಸುಮಾರು 800 ಕ್ಕೂ ಹೆಚ್ಚು ಪ್ರಕಾಶಕರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ ಚೀನಾ, ಫ್ರಾನ್ಸ್, ಜರ್ಮನಿ, ಈಜಿಪ್ಟ್, ಜಪಾನ್ ಮತ್ತು ಇರಾನ್ ಸೇರಿದಂತೆ 20 ದೇಶಗಳು ಪಾಲ್ಗೊಳ್ಳಲಿವೆ.
  • ಮಕ್ಕಳ ಪುಸ್ತಕ, ಕವಿತೆ, ಸಾಮಾಜಿಕ ವಿಜ್ಞಾನ ಮತ್ತು ಕಾದಂಬರಿ ಸೇರಿದಂತೆ ವಿವಿಧ ಬಗೆಯ ಪುಸ್ತಕಗಳನ್ನು ಮೇಳದಲ್ಲಿ ಪ್ರದರ್ಶನದ ಆಕರ್ಷಣೆ ಎನಿಸಲಿವೆ.

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ ಸಿ) ನೂತನ ಅಧ್ಯಕ್ಷರಾಗಿ ಡೇವಿಡ್ ಸೈಮ್ಲಿ

 ಶಿಕ್ಷಣ ತಜ್ಞ ಮತ್ತು ಇತಿಹಾಸಕಾರ ಡೇವಿಡ್ ಸೈಮ್ಲಿ ರವರನ್ನು ಕೇಂದ್ರ ಲೋಕ ಸೇವಾ ಆಯೋಗದ ನೂತನ ಅಧ್ಯಕ್ಷರಾಗಿ ಸಂವಿಧಾನದ ಪರಿಚ್ಛೇದ 316ರ ಪ್ರಕಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ನೇಮಕ ಮಾಡಿದ್ದಾರೆ. ಅಲ್ಕ ಸಿರೋಹಿರವರ ಉತ್ತರಾಧಿಕಾರಿಯಾಗಿ ಇವರು ಕಾರ್ಯನಿರ್ವಹಿಸಲಿದ್ದು, ಸೈಮಿ ಅವರ ಅಧಿಕಾರ ಅವಧಿ ಜನವರಿ 21, 2018ರ ವರೆಗೆ ಅಥವಾ ಮುಂದಿನ ಆದೇಶದ ವರೆಗೆ ಇರಲಿದೆ. ಈ ನೇಮಕಾತಿ ಮುಂಚೆ ಸೈಮ್ಲಿ ರವರು ಆಯೋಗದ ಸದಸ್ಯರಾಗಿ ಜೂನ್ 25, 2012ರಿಂದ ಸೇವೆ ಸಲ್ಲಿಸುತ್ತಿದ್ದರು.

ಡೇವಿಡ್ ಸೈಮ್ಲಿ ಬಗ್ಗೆ:

  • ಸೈಮಿ ರವರು ಪ್ರಸಿದ್ದ ಇತಿಹಾಸಕಾರ, ಶಿಕ್ಷಣ ತಜ್ಞ ಮತ್ತು ಲೇಖಕರಾಗಿದ್ದಾರೆ. ಅರುಣಾಚಲ ಪ್ರದೇಶದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಯು ಆಗಿರುವ ಇವರು ಈಶಾನ್ಯ ಭಾರತಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕ ಮತ್ತು ಲೇಖನಗಳನ್ನು ಬರೆದಿದ್ದಾರೆ.

ಯುಪಿಎಸ್ ಸಿ:

  • ಕೇಂದ್ರ ಲೋಕ ಸೇವಾ ಆಯೋಗ ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ದೇಶದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್, ಐಎಫ್ಎಸ್ ಮತ್ತು ಐಪಿಎಸ್ ಸೇರಿದಂತೆ ಇತರೆ ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸುತ್ತದೆ.
  • ಸಂವಿಧಾನದ 315ನೇ ಪರಿಚ್ಛೇದದಡಿ ಕೇಂದ್ರ ಲೋಕ ಸೇವಾ ಆಯೋಗವನ್ನು ಸ್ಥಾಪಿಸಲಾಗಿದ್ದು, ಒಬ್ಬ ಅಧ್ಯಕ್ಷ ಮತ್ತು ಹತ್ತು ಸದಸ್ಯರನ್ನು ಒಳಗೊಂಡಿದೆ. ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುವ ಮತ್ತು ತೆಗೆದುಹಾಕುವ ಅಧಿಕಾರವನ್ನು ರಾಷ್ಟ್ರಪತಿಗಳು ಹೊಂದಿದ್ದಾರೆ.
  • ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿ ಆರು ವರ್ಷ ಅಥವಾ 65 ವರ್ಷ ತುಂಬುವವರೆಗೆ ಅಥವಾ ಯಾವುದು ಮುಂಚಿತವೊ ಅದು ಆಗಿರುತ್ತದೆ.

Leave a Comment

This site uses Akismet to reduce spam. Learn how your comment data is processed.