2017 ಸ್ವಚ್ಚ ಭಾರತ ಸಮೀಕ್ಷೆಗೆ ಕೇಂದ್ರ ಸರ್ಕಾರ ಚಾಲನೆ

ಕೇಂದ್ರ ನಗರಾಭಿವೃದ್ದಿ ಸಚಿವಾಲಯ ಸ್ವಚ್ಚ ಭಾರತ ಸಮೀಕ್ಷೆಗೆ ಚಾಲನೆ ನೀಡಿದೆ. ಇದರಡಿ ದೇಶದಾದ್ಯಂತ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 500 ನಗರ/ಪಟ್ಟಣಗಳಲ್ಲಿ ಸ್ವಚ್ಚತೆಯ ಮೇಲೆ ಸಮೀಕ್ಷೆಯನ್ನು ನಡೆಸಲಾಗುವುದು. ಈ ಸಮೀಕ್ಷೆಯನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸ್ವಚ್ಚ ಭಾರತ ಅಭಿಯಾನದಡಿ ನಡೆಸುತ್ತಿದ್ದು, ನೈಮರ್ಲ್ಯತೆ ಸುಧಾರಿಸಲು ನಗರಗಳ ನಡುವೆ ಸ್ಮರ್ಧಾತ್ಮಕ ವಾತಾವರಣ ಸೃಷ್ಟಿಸುವುದು ಸಮೀಕ್ಷೆಯ ಉದ್ದೇಶ.

ಪ್ರಮುಖಾಂಶಗಳು:

  • ಸ್ವಚ್ಚ ಭಾರತ ಸಮೀಕ್ಷೆಯಡಿ ಮುನಿಸಿಪಾಲಿಟಿ ಸಂಸ್ಥೆಗಳು ನೀಡುವ ಮಾಹಿತಿ, ನೇರ ಪರಿಶೀಲನೆ ಮತ್ತು ಸಾರ್ವಜನಿಕರಿಂದ ಪಡೆದ ಅಭಿಪ್ರಾಯ ಆಧಾರದ ಮೇಲೆ ನಗರಗಳ ಸ್ಚಚ್ಚತೆಯನ್ನು ನಿರ್ಧರಿಸಲಾಗುವುದು.
  • ಮುನಿಸಿಪಾಲಿಟಿ ಸಂಸ್ಥೆಗಳು ನೀಡುವ ಮಾಹಿತಿಯು 900 ಅಂಕಗಳನ್ನು, ನೇರ ಪರಿಶೀಲನೆಗೆ 500 ಅಂಕಗಳು ಹಾಗೂ ಸಾರ್ವಜನಿಕರು ನೀಡುವ ಅಭಿಪ್ರಾಯವು 600 ಅಂಕಗಳನ್ನು ಒಳಗೊಂಡಿರಲಿದೆ.

ಮೌಲ್ಯಮಾಪನಕ್ಕೆ ಪರಿಗಣಿಸುವ ಅಂಶಗಳು:

  • ಕಸ ಸಂಗ್ರಹಣೆ, ಕಸಗುಡಿಸುವಿಕೆ ಮತ್ತು ಸಾಗಣೆ (40% ಅಂಕ), ಬಯಲು ಮಲ ವಿಸರ್ಜನೆ ಮುಕ್ತ ಮತ್ತು ಶೌಚಾಲಯ (ಶೇ 30%), ಮುನಿಸಿಪಾಲ್ ಘನ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ (ಶೇ 20%), ಸ್ಚಚ್ಚ ಭಾರತ ಅಭಿಯಾನದಡಿ ಶಿಕ್ಷಣ ಮತ್ತು ವರ್ತನೆಯಲ್ಲಾದ ಬದಲಾವಣೆ ಹಾಗೂ ಸಾಮರ್ಥ್ಯ ವರ್ಧನೆ (ಶೇ 10%).
  • ನಾಗರಿಕರು ತಮ್ಮ ಅಭಿಪ್ರಾಯವನ್ನು ಸ್ವಚ್ಚ ಸಮೀಕ್ಷೆ ವೆಬ್ ಸೈಟ್ ನಲ್ಲಿರುವ ಅರ್ಜಿಯನ್ನು ತುಂಬುವ ಮೂಲಕ ಅಥವಾ 1969 ನಂಬರ್ ಗೆ ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಅಭಿಪ್ರಾಯವನ್ನು ನೀಡಬಹುದು.

ಸ್ವಚ್ಚ ಭಾರತ ಸಮೀಕ್ಷೆ 2016 ರಲ್ಲಿ 73 ನಗರಗಳಿಗೆ ಸ್ಥಾನವನ್ನು ನೀಡಲಾಗಿತ್ತು. ಮೈಸೂರು ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಎರಡನೇ ಸ್ಥಾನ ಚತ್ತೀಸಗರ್ ಗೆ ಲಭಿಸಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ನೀಡಿದ್ದರು.

 2017 ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ದಿ ಅಂತಾರಾಷ್ಟ್ರೀಯ ವರ್ಷ: ವಿಶ್ವಸಂಸ್ಥೆ

ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2017 ಅನ್ನು ಇಂಟರ್ನ್ಯಾಷನಲ್ ಇಯರ್ ಆಫ್ ಸಸ್ಟೈನಬಲ್ ಟೂರಿಸಂ ಫಾರ್ ಡೆವೆಲಪ್ಮೆಂಟ್ (International Year of Sustainable Tourism for Development) ಎಂದು ಘೋಷಿಸಿದೆ. ಪ್ರವಾಸೋದ್ಯಮ ಕ್ಷೇತ್ರದ ಪ್ರಾಮುಖ್ಯತೆಯನ್ನು ಸಾರುವುದು ಹಾಗೂ 2030ರ ಸುಸ್ಥಿರ ಅಭಿವೃದ್ದಿ ಅಜೆಂಡಾ ಹಾಗೂ 17 ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಸಾಧಿಸಲು ಈ ಘೋಷಣೆ ಮಾಡಲಾಗಿದೆ.

ಪ್ರಮುಖಾಂಶಗಳು:

  • ಅಂತಾರಾಷ್ಟ್ರೀಯ ವರ್ಷ ಘೋಷಣೆಯು ಸುಸ್ಥಿರ ಪ್ರವಾಸೋದ್ಯಮ ವಲಯದ ಕಡೆಗೆ ವ್ಯವಹಾರ, ನೀತಿಗಳು ಮತ್ತು ಗ್ರಾಹಕರ ವರ್ತನಾ ಪರಿಣಾಮಕಾರಿಯಾದ ಬದಲಾವಣೆ ಬೆಂಬಲಿಸಲು ಮೂಲಕ ಸುಸ್ಥಿರ ಅಭಿವೃದ್ದಿ ಗುರಿ ಸಾಧಿಸಲು ಕೊಡುಗೆ ನೀಡಲಿದೆ.
  • ಇದು ಐದು ಪ್ರಮುಖ ಕ್ಷೇತ್ರಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯನ್ನು ಉತ್ತೇಜಿಸಲಿದೆ: ಅವುಗಳೆಂದರೆ ಒಳಗೊಳ್ಳುವಿಕೆ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ, ಸಮಾಜದ ಒಳಗೊಳ್ಳುವಿಕೆ, ಉದ್ಯೋಗ ಮತ್ತು ಬಡತನ ನಿವಾರಣೆ, ಸಾಂಸ್ಕೃತಿಕ ಮೌಲ್ಯ, ವಿವಿಧತೆ ಮತ್ತು ಪಾರಂಪರೆ, ಸಂಪನ್ಮೂಲ ದಕ್ಷತೆ, ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಹಾಗೂ ಪರಸ್ಪರ ಸಾಮರಸ್ಯ, ಶಾಂತಿ ಮತ್ತು ಭದ್ರತೆ.
  • ಪ್ರವಾಸೋದ್ಯಮ ವಲಯವು ವಿಶ್ವದಾದ್ಯಂತ ಶೇ 7% ರಫ್ತು, ವಿಶ್ವದ ಶೇ 10% ಜಿಡಿಪಿ ಹಾಗೂ ಪ್ರತಿ ಹನ್ನೊಂದು ಉದ್ಯೋಗಗಳಲ್ಲಿ ಒಂದು ಉದ್ಯೋಗವನ್ನು ನೀಡುತ್ತಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡರೆ ಆರ್ಥಿಕ ಬೆಳವಣಿಗೆ, ಸಮಾಜದ ಒಳಗೊಳ್ಳುವಿಕೆ ಜೊತೆಗೆ ಪರಿಸರ ಸಂರಕ್ಷಣೆ ಮಾಡಬಹುದಾಗಿದೆ.

ಮಣಿಪುರದ ಖ್ಯಾತ ಇತಿಹಾಸಕಾರ ಗಂಗ್ಮುಮೈ ಕಮೈ ನಿಧನ

ಮಣಿಪುರ ಮೂಲದ ಖ್ಯಾತ ಇತಿಹಾಸಕಾರ, ಸಾಹಿತಿ ಮತ್ತು ವಿದ್ವಾಂಸ ಗಂಗ್ಮುಮೈ ಕಮೈ (Gangumumei Kamei) ಅನಾರೋಗ್ಯದ ಕಾರಣ ಇಫಾಂಲದಲ್ಲಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕಮೈ ಅವರು ಪ್ರಸ್ತುತ ಈಶಾನ್ಯ ಮಂಡಳಿಯ ಸದಸ್ಯರಾಗಿದ್ದರು. ಈ ಹಿಂದೆ ಅವರು ಎರಡು ಸಂದರ್ಭಗಳಲ್ಲಿ ಸಚಿವರಾಗಿ ಸೇವೆಸಲ್ಲಿಸಿದ್ದರು.

ಗಂಗ್ಮುಮೈ ಕಮೈ:

  • ಕಮೈ ಅವರು 21ನೇ ಅಕ್ಟೋಬರ್, 1939 ರಲ್ಲಿ ಇಂಫಾಲದಲ್ಲಿ ಜನಿಸಿದ್ದರು. ಈಶಾನ್ಯ ಭಾಗದ ಇತಿಹಾಸ ಅದರಲ್ಲೂ ವಿಶೇಷವಾಗಿ ಮಣಿಪುರದ ಇತಿಹಾಸದ ಪರಿಣಿತ ಎನಿಸಿದ್ದರು.
  • ಕಮೈ ಅವರು ಅಸ್ಸಾಂ, ಮಣಿಪುರ ಮತ್ತು ನಾಗಲ್ಯಾಂಡ್ ರಾಜ್ಯಗಳಲ್ಲಿ ಕಂಡುಬರುವ ಝೆಲಿಯಾನ್ ಗ್ರಾಂಗ್ ಸಮುದಾಯಕ್ಕೆ ಸೇರಿದ್ದವರಾಗಿದ್ದರು.
  • ಮಣಿಪುರ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಪಕರಾಗಿ ಹಾಗೂ ಈಶಾನ್ಯ ಭಾರತ ಇತಿಹಾಸ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
  • ಕಮೈ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ “ಎ ಹಿಸ್ಟರಿ ಆಫ್ ಮಾರ್ಡನ್ ಮಣಿಪುರ”, “ಆನ್ ಹಿಸ್ಟರಿ ಅಂಡ್ ಹಿಸ್ಟರಿಯೋಗ್ರಾಫಿ ಆಫ್ ಮಣಿಪುರ”.
  • ರಾಷ್ಟ್ರೀಯ ಪ್ರಸಿದ್ದ ಇತಿಹಾಸಕಾರರಲ್ಲಿ ಒಬ್ಬರಾಗಿದ್ದ ಕಮೈ ಅವರು ಅಂಥ್ರೋಪೊಲಾಜಿಕಲ್ ಸರ್ವೇ ಆಫ್ ಇಂಡಿಯಾದ ಸಲಹಗಾರ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
  • ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಕಮೈ, 1993 ರಲ್ಲಿ ಫೆಡರಲ್ ಪಾರ್ಟಿ ಆಫ್ ಮಣಿಪುರವನ್ನು ಸ್ಥಾಪಿಸಿದ್ದರು. 1995 ಮತ್ತು 2001ರಲ್ಲಿ ಮಣಿಪುರ ವಿಧಾನಸಭಾಗೆ ಆಯ್ಕೆಯಾಗಿ ಎರಡು ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
  • 2013ರಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಜುಲೈ, 2015ರಲ್ಲಿ ಕೇಂದ್ರ ಸರ್ಕಾರ ಇವರನ್ನು ಈಶಾನ್ಯ ವಲಯ ಮಂಡಳಿ ಸದಸ್ಯರಾಗಿ ನೇಮಕಮಾಡಿತ್ತು.

 ಹೃದಯಾಘಾತದಿಂದ ಹಿರಿಯ ನಟ ಓಂ ಪುರಿ ನಿಧನ

ಬಾಲಿವುಡ್​ನ ಹಿರಿಯ ನಟ ಓಂ ಪುರಿ ರವರು ಮುಂಬೈನ ತಮ್ಮ ಸ್ವಗೃಹದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಓಂ ಪುರಿ ರವರು ಭಾರತೀಯ ಸಿನಿಮಾ, ಹಾಲಿವುಡ್ ಸಿನಿಮಾ ಹಾಗೂ ಇತರೆ ದೇಶಗಳ ಸಿನಿಮಾಗಳಲ್ಲಿ ಅಭಿನಿಯಸಿದ್ದರು.

  • 1950ರ ಅಕ್ಟೋಬರ್ 18 ರಂದು ಹರಿಯಾಣದ ಅಂಬಾಲದಲ್ಲಿ ಓಂ ಪುರಿ ಜನಿಸಿದ್ದರು. 1976 ಪುಣೆಯ ಫಿಲಂ ಇನ್ಸ್​ಟಿಟ್ಯೂಟ್​ನಲ್ಲಿ ಮತ್ತು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲಿ ಪದವಿ ಪಡೆದಿದ್ದರು.
  • ಓಂ ಪುರಿ 1976ರಲ್ಲಿ ಮರಾಠಿಯ ಘಾಷಿರಾಂ ಕೊತ್ವಾಲ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
  • ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ನಟನೆ ಬಗ್ಗೆ ಅಭ್ಯಾಸ ಮಾಡಿದ್ದರು.
  • ಭವ್ನಿ ಭವೈ (1980), ಸದ್ಗತಿ (1981), ಅರ್ಧ್ ಸತ್ಯ (1982), ಮಿರ್ಚ್ ಮಸಾಲ (1986) ಮತ್ತು ಧಾರವಿ (1992) ಚಿತ್ರಗಳಲ್ಲಿ ಅವರ ಅಭಿನಯ ಮರೆಯುವಂತಿಲ್ಲ.
  • 1977ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ ಓಂ ಪುರಿ ಅಭಿನಯಿಸಿದ್ದರು. ನಂತರದ ವರ್ಷಗಳಲ್ಲಿ ಹಲವು ಕನ್ನಡ ಚಿತ್ರಗಳಲ್ಲಿ ಓಂ ಪುರಿ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಅವರೊಂದಿಗೆ ಎ.ಕೆ.47, ಟೈಗರ್, ಧೃವ ಚಿತ್ರಗಳಲ್ಲೂ ಪಾತ್ರ ನಿರ್ವಹಿಸಿದ್ದಾರೆ.
  • ಆರೋಹಣ್ ಮತ್ತು ಅರ್ಧ ಸತ್ಯ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಓಂ ಪುರಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

 ಕಮಲಾಪುರ ನಿರ್ಸಗಧಾಮದಲ್ಲಿ ಮೂರನೇ “ಹಕ್ಕಿ ಹಬ್ಬ”

ಕಮಲಾಪುರ ಬಳಿಯ ನಿಸರ್ಗಧಾಮದಲ್ಲಿ ಎರಡು ದಿನ ‘ಕರ್ನಾಟಕ ಹಕ್ಕಿ ಹಬ್ಬ’ಕ್ಕೆ ಚಾಲನೆ ನೀಡಲಾಯಿತು.  ದೇಶದ ವಿವಿಧೆಡೆಯ 300ಕ್ಕೂ ಹೆಚ್ಚು ಪಕ್ಷಿ ತಜ್ಞರು, ಛಾಯಾ ಗ್ರಾಹಕರು, ಪಕ್ಷಿ ಸಂಶೋಧಕರು ಭಾಗವಹಿಸಲಿದ್ದಾರೆ. ನೂರಕ್ಕೂ ಹೆಚ್ಚು ಅಪರೂಪದ ಪಕ್ಷಿಗಳ ಛಾಯಾಚಿತ್ರ ಪ್ರದರ್ಶನ, ಸಂವಾದ ನಡೆಯಲಿದೆ. ಹಂಪಿ, ದರೋಜಿ ಕರಡಿಧಾಮ, ಹಂಪಿ ಕನ್ನಡ ವಿಶ್ವ ವಿದ್ಯಾಲಯ ಮತ್ತು ಕಮಲಾಪುರ ಕೆರೆ ಬಳಿ ಪಕ್ಷಿ ವೀಕ್ಷಣೆ ಕಾರ್ಯ ಕ್ರಮವಿದ್ದು, ಹಕ್ಕಿಗಳಿಗೆ ಸಂಬಂಧಿ ಸಿದ ಚಲನಚಿತ್ರ ಪ್ರದರ್ಶನ ನಡೆಯಲಿದೆ.

ಕರ್ನಾಟಕ ಹಕ್ಕಿ ಹಬ್ಬ:

  • ಕರ್ನಾಟಕ ಅರಣ್ಯ ಇಲಾಖೆ, ದರೋ ಜಿ ಕರಡಿ ಧಾಮ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಈ ಬಾರಿಯ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿದೆ.
  • 2015 ಜನೆವರಿಯಲ್ಲಿ ರಂಗನ ತಿಟ್ಟುವಿನಲ್ಲಿ ಮೊದಲನೇ ಕರ್ನಾಟಕ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿತ್ತು.
  • ಎರಡನೇ ಕರ್ನಾಟಕ ಹಕ್ಕಿ ಹಬ್ಬ ದಾಂಡೇಲಿಯಲ್ಲಿ 2016ರಲ್ಲಿ ನಡೆದಿತ್ತು.

2 Thoughts to “ಪ್ರಚಲಿತ ವಿದ್ಯಮಾನಗಳು-ಜನವರಿ-4,2017”

  1. Shuvu

    Nice…. . Thanks u

  2. Good information for competitors

Leave a Comment

This site uses Akismet to reduce spam. Learn how your comment data is processed.