ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇ.70 ರಷ್ಟು ಉದ್ಯೋಗ ಮೀಸಲಾತಿ

ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಕನ್ನಡಿಗರಿಗೆ ಶೇ. 70 ರಷ್ಟು ಮೀಸಲಾತಿ ಕಲ್ಪಿಸಲು ಕರಡು ಮಸೂದೆ ಸಿದ್ದಪಡಿಸಲಾಗಿದೆ. ಈ ಮಸೂದೆಯನ್ನು ಇನ್ನೆರಡು ತಿಂಗಳಲ್ಲಿ ಸಚಿವ ಸಂಪುಟದ ಮುಂದೆ ತಂದು ಒಪ್ಪಿಗೆ ಪಡೆಯಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಮಸೂದೆಯ ಪ್ರಮುಖಾಂಶಗಳು:

  • ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಸಿ ಮತ್ತು ಡಿ ಹುದ್ದೆಗಳಲ್ಲಿ  ಶೇ. 50 ರಷ್ಟು, ಎ ಮತ್ತು ಬಿ ದರ್ಜೆಯ ಹುದ್ದೆಗಳ ಪೈಕಿ ಶೇ. 20 ರಷ್ಟು ಹುದ್ದೆಗಳನ್ನು ಮೀಸಲಿಡಬೇಕು.
  • ಒಟ್ಟಾರೆ ಶೇ. 70 ರಷ್ಟು ಹುದ್ದೆಗಳು ಕನ್ನಡಿಗರಿಗೆ ಸಿಗಬೇಕು ಎಂಬ ಷರತ್ತನ್ನು ಮಸೂದೆಯಲ್ಲಿ ಅಳವಡಿಸಲಾಗಿದೆ ಎಂದರು.
  • ಐಟಿ-ಬಿಟಿ ಕಂಪನಿಗಳ ಮೇಲೆ ಈ ನಿರ್ಬಂಧ ಸದ್ಯಕ್ಕೆ ಅನ್ವಯವಾಗುವುದಿಲ್ಲ.
  • ಕನ್ನಡಿಗರಿಗೆ ಕಡ್ಡಾಯವಾಗಿ ಶೇ. 70 ರಷ್ಟು ಉದ್ಯೋಗಾವಕಾಶಗಳನ್ನು ಕೊಡದಿದ್ದರೆ ಅಂತಹ ಕೈಗಾರಿಕೆಗಳಿಗೆ ಸರ್ಕಾರ ನೀಡಿರುವ ವಿನಾಯ್ತಿ ಮತ್ತಿತರ ಸೌಲಭ್ಯಗಳನ್ನು ಹಿಂಪಡೆಯಬೇಕ ಬೇಡವೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು.

ಕೈಸಾ ಮಟೊಮಕಿ ಮತ್ತು ಮಕ್ಸಿಮ್ ರಡ್ಝಿವಿಲ್ ರವರಿಗೆ 2016 SASTRA ರಾಮಾನುಜನ್ ಪ್ರಶಸ್ತಿ

ಕೈಸಾ ಮಟೊಮಕಿ ಮತ್ತು ಮಕ್ಸಿಮ್ ರಡ್ಝಿವಿಲ್ ರವರಿಗೆ ಜಂಟಿಯಾಗಿ 2016ನೇ ಸಾಲಿನ SASTRA ರಾಮಾನುಜನ್ ಗಣಿತ ಪ್ರಶಸ್ತಿ ಲಭಿಸಿದೆ. ಸಂಖ್ಯೆ ಸಿದ್ದಾಂತ ಮೇಲೆ ಇವರ ಮಹತ್ತರ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಇಬ್ಬರೂ ಮಹನೀಯರು ಫೀಲ್ಡ್ ಪದಕ ವಿಜೇತ ಟೆರೆನ್ಸ್ ಟವೊ ರವರೊಂದಿಗೆ “ಚೌಲ ಕಂಜೆಕ್ಚರ್ (Chowla Conjecture)” ಅಭಿವೃದ್ದಿಪಡಿಸುವಲ್ಲಿ ಯಶಸ್ವಿಯಾಗಿದ್ದರು. ತಮಿಳುನಾಡಿನ ಕುಂಭಕೋಣನಲ್ಲಿರುವ SASTRA ವಿಶ್ವವಿದ್ಯಾಲಯದಲ್ಲಿ ನಡೆದ “ಇಂಟರ್ನ್ಯಾಷನಲ್ ಕಾನ್ಪೇರೆನ್ಸ್ ಆನ್ ನಂಬರ್ ಥಿಯರಿ” ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

  • ಫಿನ್ ಲ್ಯಾಂಡ್ ನ ಟುರ್ಕು ವಿಶ್ವವಿದ್ಯಾಲಯದವರಾದ ಕೈಸಾ ಮಟೊಮಕಿ ರವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ. ಮಕ್ಸಿಮ್ ರಡ್ಝಿವಿಲ್ ರವರು ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಪಕರಾಗಿದ್ದಾರೆ.

SASTRA ರಾಮಾನುಜನ್ ಪ್ರಶಸ್ತಿ:

  • ಗಣಿತಶಾಸ್ತ್ರಕ್ಕೆ ಅಘನೀಯ ಕೊಡುಗೆ ನೀಡುವ ಯುವ ಗಣಿತಶಾಸ್ತ್ರಜ್ಞರಿಗೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ.
  • ಷಣ್ಗುಂ ಆರ್ಟ್ ಸೈನ್ಸ್, ಟೆಕ್ನಾಲಜಿ ಮತ್ತು ರಿಸರ್ಚ್ ಅಕಾಡೆಮಿ (SASTRA) ಈ ಪ್ರಶಸ್ತಿಯನ್ನು 2005 ರಲ್ಲಿ ಸ್ಥಾಪಿಸಿದೆ. ಭಾರತದ ಖ್ಯಾತ ಗಣಿತತಜ್ಞ ಶ್ರೀನಿವಾಸ ರಾಮಾನುಜನ್ ರವರ ಹೆಸರನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
  • ಪ್ರಶಸ್ತಿಯನ್ನು ಪಡೆದುಕೊಳ್ಳಲು ವಯಸ್ಸಿನ ಮಿತಿಯನ್ನು 32 ವರ್ಷಕ್ಕೆ ನಿಗದಿಪಡಿಸಲಾಗಿದೆ. ಏಕೆಂದರೆ ರಾಮಾನುಜನ್ ರವರು ತಮ್ಮ 32ನೇ ವಯಸ್ಸಿನೊಳಗೆ ಗಣಿತದಲ್ಲಿ ಅಪಾರ ಸಾಧನೆಯನ್ನು ಮಾಡಿದ್ದರು.

ಸ್ವದೇಶಿ ನಿರ್ಮಿತ ದೂರಗಾಮಿ “ನಿರ್ಭಯ ಕ್ಷಿಪಣಿ” ಪರೀಕ್ಷೆ

ಸ್ವದೇಶೀಯವಾಗಿ ನಿರ್ಮಿಸಿ ಅಭಿವೃದ್ಧಿಪಡಿಸಲಾದ ದೂರಗಾಮಿ ಸಬ್‌ಸಾನಿಕ್‌ ಕ್ಷಿಪಣಿ ‘ನಿರ್ಭಯ’ ಪರೀಕ್ಷೆಯನ್ನು    ಒಡಿಶಾದ ಚಂಡಿಪುರದಲ್ಲಿ ಕೈಗೊಳ್ಳಲಾಯಿತು. ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿತು. ಆದರೆ ಕ್ಷಿಪಣಿ ಪರೀಕ್ಷೆ ಸಂಪೂರ್ಣ ವಿಫಲವಾಗಿದೆ. ಇದುವರೆಗೆ ಒಟ್ಟು ನಾಲ್ಕು ಬಾರಿ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಲಾಗಿದ್ದು, ನಾಲ್ಕರಲ್ಲಿ ಒಂದು ಬಾರಿ ಮಾತ್ರ ಯಶಸ್ವಿಯಾಗಿದೆ.  ಮೊದಲ ಬಾರಿಗೆ 2013 ರಲ್ಲಿ ಪರೀಕ್ಷಿಸಲಾಯಿತು ಆದರೆ ವಿಫಲವಾಯಿತು. ಆನಂತರ ಅಕ್ಟೋಬರ್ 2014 ರಲ್ಲಿ ನಡೆಸಲಾದ ಪರೀಕ್ಷೆಯಲ್ಲಿ 800 ಕಿ.ಮೀ ಬದಲಿಗೆ 1,010 ಕಿ,ಮೀ ಗುರಿ ತಲುಪಿ ನಿರೀಕ್ಷೆಗೂ ಮೀರಿ ಯಶಸ್ವಿಯಾಯಿತು. ಅಕ್ಟೋಬರ್ 16, 2015 ರಲ್ಲಿ ನಡೆಸಲಾದ ಮೂರನೆ ಪರೀಕ್ಷೆಯಲ್ಲಿ ಮತ್ತೆ ವಿಫಲವಾಯಿತು.

ನಿರ್ಭಯ ಕ್ಷಿಪಣಿ:

  • ನಿರ್ಭಯ ಕ್ಷಿಪಣಿ ದೂರಗಾಮಿ ಕ್ಷಿಪಣಿಯಾಗಿದ್ದು, ಭೂಮಿಯಿಂದ ಭೂಮಿಗೆ ನೆಗೆಯಬಲ್ಲ ಅಣ್ವಸ್ತ್ರ ಒಯ್ಯಬಲ್ಲ ಸಬ್ ಸಾನಿಕ್ ಕ್ಷಿಪಣಿ. ಇದನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ದಿಪಡಿಸಿದೆ.
  • ನಿರ್ಭಯ ಕ್ಷಿಪಣಿ 700 ಕಿ.ಮೀ ಯಿಂದ 1000 ಕಿ.ಮೀ ಸಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

Leave a Comment

This site uses Akismet to reduce spam. Learn how your comment data is processed.