ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-31,2016

ಪಾಸ್ ಪೋರ್ಟ್ ನಿಯಮ ಸಡಿಲಗೊಳಿಸಿದ ಕೇಂದ್ರ ಸರ್ಕಾರ

ಪಾಸ್ ಪೋರ್ಟ್ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಲು ಕೇಂದ್ರ ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ನಿಯಮ-1980ಗೆ ತಿದ್ದುಪಡಿ ತಂದಿದ್ದು, ಕೆಲವೊಂದು ಕಠಿಣ ನಿಯಮಗಳಿಗೆ ಬದಲಾವಣೆಗಳನ್ನು ತಂದು ಪ್ರಕಟಣೆ ಹೊರಡಿಸಿದೆ. ಪಾಸ್ ಪೋರ್ಟ್ ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸುವುದು ಮತ್ತು ತ್ವರಿತಗೊಳಿಸುವುದು ಹಾಗೂ ವಿಧವೆಯರು, ಆನಾಥ ಮಕ್ಕಳು ಮತ್ತು ಸಾಧು ಸನ್ಯಾಸಿಗಳಿಗೆ ಸುಲಭವಾಗಿ ಪಾಸ್ ಪೋರ್ಟ್ ದೊರಕುವಂತೆ ಮಾಡುವುದು ಇದರ ಉದ್ದೇಶ. ಅಲ್ಲದೇ ಸರ್ಕಾರೇತರ ಏಜೆಂಟ್ ಮತ್ತು ಮಧ್ಯವರ್ತಿಗಳ ಅವಶ್ಯಕತೆಯು ಬೇಕಾಗಿಲ್ಲ.

ಹೊಸ ನಿಯಮಗಳು:

 • ವಿಚ್ಛೇದಿತರು/ ಗಂಡನಿಂದ ಪ್ರತ್ಯೇಕವಾಗಿ ಜೀವಿಸುತ್ತಿರುವವರು ಪಾಸ್‌ಪೋರ್ಟ್ ಅರ್ಜಿಯಲ್ಲಿ ಗಂಡನ ಹೆಸರು ಬರೆಯುವ ಅಗತ್ಯ ಇಲ್ಲ.
 • ಸಾಧುಗಳು ಮತ್ತು ಸನ್ಯಾಸಿನಿಯರ ಪಾಸ್‌ಪೋರ್ಟಿನಲ್ಲಿ ಹೆತ್ತವರ ಹೆಸರಿನ ಬದಲಿಗೆ ತಮ್ಮ ಗುರುವಿನ ಹೆಸರು ನಮೂದಿಸಲು ಅವಕಾಶ ನೀಡಲಾಗಿದೆ
 • ಅನಾಥಾಲಯದಲ್ಲಿರುವ ಮಕ್ಕಳ ವಯಸ್ಸನ್ನು ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಬಹುದು. ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅದನ್ನುಘೋಷಿಸಿದರೆ ಸಾಕು.
 • ದತ್ತು ಮಕ್ಕಳಿಗೆ ಪಾಸ್‌ಪೋರ್ಟ್‌ ಪಡೆಯಲು ಅವರನ್ನು ದತ್ತು ಪಡೆದ ಕರಾರಿನ ನೋಂದಿತ ಪ್ರತಿಯನ್ನು ಸಲ್ಲಿಸುವ ಅಗತ್ಯ ಇಲ್ಲ. ದತ್ತು ಪಡೆದಿರುವುದನ್ನು ದೃಢಪಡಿಸುವ ಪತ್ರ ನೀಡಿದರೆ ಸಾಕು
 • ಪಾಸ್ ಪೋರ್ಟ್ ವಿತರಿಸಿದ ಐದು ವರ್ಷಗಳವರೆಗೆ ಜನ್ಮದಿನಾಂಕದಲ್ಲಿ ಬದಲಾವಣೆಯಿಲ್ಲ ಎನ್ನುವ ನಿಯಮವನ್ನು ಸಡಿಲಿಸಿ, ಈ ಬಗ್ಗೆ ಸಲ್ಲಿಕೆಯಾಗುವ ಅರ್ಜಿಯ ವಿಲೇವಾರಿ ಮಾಡುವುದನ್ನು ಪಾಸ್ಪೋರ್ಟ್ ಅಧಿಕಾರಿಗಳ ವಿವೇಚನೆಗೆ ಬಿಡಲು ನಿರ್ಧರಿಸಲಾಗಿದೆ.
 • ಸರಕಾರೀ ನೌಕರರು ಎನ್ಓಸಿ ಸೂಕ್ತ ಸಮಯಕ್ಕೆ ನೀಡಲಾಗದಿದ್ದ ಪಕ್ಷದಲ್ಲಿ, ನೌಕರರು ಪಾಸ್ಪೋರ್ಟ್ ಪಡೆಯುವ ಬಗ್ಗೆ ತಮ್ಮತಮ್ಮ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಡಿಕ್ಲರೇಶನ್ ನೀಡಿದರೆ ಸಾಕು.
 • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ತಂದೆ, ತಾಯಿ ಅಥವಾ ಪೋಷಕರಲ್ಲಿ ಯಾರದರೊಬ್ಬರ ಹೆಸರು ನಮೂದಿಸಿದರೆ ಸಾಕು.
 • ಜನನ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನೀಡಬೇಕೆನ್ನುವ ನಿಯಮವನ್ನು ಸಡಿಲಿಸಿ, ಎಸ್ಎಸ್ಎಲ್ಸಿ ಸರ್ಟಿಫಿಕೇಟ್, ಪ್ಯಾನ್ ಕಾರ್ಡ್, ಜನ್ಮದಿನಾಂಕ ನಮೂದಿಸಿರುವ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಕಾರ್ಡ್ ಅಥವಾ ಎಲ್ಐಸಿ ಬಾಂಡ್ ನೀಡಬಹುದಾಗಿದೆ.

ಬಂಗಾಳಿ ಕವಿ ಶಾಂಖ ಘೋಷ್ ರವರಿಗೆ 2016ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ

ಬಂಗಾಳದ ಪ್ರಸಿದ್ದ ಆಧುನಿಕ ಕವಿ ಶಂಖ ಘೋಷ್ ಅವರಿಗೆ 2016ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಗೌರವ ಸಂದಿದೆ. ಘೋಷ್ ಅವರನ್ನು 52ನೇ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶಂಖ ಘೋಷ್ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುತ್ತಿರುವ ಬಂಗಾಳದ ಆರನೇಯವರು. ಈ ಹಿಂದೆ ತಾರಶಂಕರ್ ಬಂಡೋಪಾಧ್ಯಯ (1966), ಬಿಷ್ಣು ಡೇ (1971), ಆಶಾಪೂರ್ಣ ದೇವಿ (1976), ಸುಭಾಷ್ ಮುಖೋಪಾಧ್ಯಯ (1991) ಮತ್ತು ಮಹಾಶ್ವೇತ ದೇವಿ ರವರಿಗೆ ನೀಡಲಾಗಿದೆ.

ಶಂಖ ಘೋಷ್ ಬಗ್ಗೆ:

 • ಫ್ರೆಬವರಿ 6, 1932ರಲ್ಲಿ ಚಾಂಡ್‌ಪುರ್‌ನಲ್ಲಿ (ಬಾಂಗ್ಲಾದೇಶದಲ್ಲಿದೆ) ಜನಿಸಿದರು. ಘೋಷರ್ ರವರು ಕವಿ, ವಿಮರ್ಶಕ ಮತ್ತು ಶಿಕ್ಷಣತಜ್ಞ.
 • ಅವರ ಕವಿತೆ, ವಿಮರ್ಶೆಗಳಿಗೆ ಹಲವು ಪ್ರಶಸ್ತಿ ಮತ್ತು ಗೌರವ ಸಂದಿವೆ. ಅವರು ಸಾಹಿತ್ಯ ಅಕಾಡೆಮಿ ಪುರಸ್ಕಾರ, ಸರಸ್ವತಿ ಸಮ್ಮಾನ್‌ ಮತ್ತಿತರ ಅತ್ಯುನ್ನತ ಗೌರವಗಳಿಗೆ ಭಾಜನರಾಗಿದ್ದಾರೆ.
 • ರವೀಂದ್ರನಾಥ ಟ್ಯಾಗೋರ್ ಅವರ ಬರಹಗಳ ಬಗ್ಗೆ ಹೆಚ್ಚು ಅಧಿಕಾರಯುತವಾಗಿ ಮಾತಾಡಬಲ್ಲ ಬಂಗಾಳಿ ಕವಿಗಳ ಸಾಲಿನಲ್ಲಿ ಶಂಖ ಘೋಷ್ (84) ಅವರ ಹೆಸರು ಮೊದಲು ಕೇಳಿಬರುತ್ತದೆ.
 • ಆಧುನಿಕೋತ್ತರ ಬಂಗಾಳ ಸಾಹಿತ್ಯದಲ್ಲಿ ಹೊಸ ಕಾವ್ಯ ಪ್ರಕಾರಕ್ಕೆ ಮುನ್ನುಡಿ ಬರೆದ ಹೆಗ್ಗಳಿಕೆ ಘೋಷ್‌ ಅವರ ಹೆಸರಿನಲ್ಲೇ ಇದೆ. ಸಾಮಾಜಿಕ ವಿಡಂಬನೆ ಅವರ ಬಹುತೇಕ ಕವಿತೆಗಳ ವಸ್ತು. ಅವರಒಂದು ಕವಿತೆಯಲ್ಲಿ, ಜನರು  ಸಮಾಜದ ಎದುರು ಮುಖವಾಡ ತೊಟ್ಟು ಅಭಿನಯಿಸುತ್ತಾರೆ. ಮತ್ಯಾರನ್ನೋ ಮೆಚ್ಚಿಸಲು ಬದುಕುತ್ತಾರೆ. ಆದರೆ ಅದು ಬದುಕಾಗದೆ ಕೇವಲ ಕೂಲಿಯಾಗುತ್ತದೆ ಎಂದು ವಿಡಂಬಿಸಿದ್ದಾರೆ.
 • “ಕಬೀರ್ ಅಭಿಪ್ರಾಯ್”, “ಮುರ್ಖಬರೋ ಸಾಮಾಜಿಕ್ ನಾಯ್”, ಅವರ ‘ದಿನ್‌ಗೂಲಿ, ರಾತ್‌ಗೂಲಿ’ ಕವಿತೆ ಆಧುನಿಕೋತ್ತರ ಬಂಗಾಳ ಸಾಹಿತ್ಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು.
 • ಘೋಷ್ ರವರು ಸಾಹಿತ್ಯ ಅಕಾಡೆಮಿ ಪುರಸ್ಕಾರ, ಸರಸ್ವತಿ ಸಮ್ಮಾನ್‌ ಮತ್ತಿತರ ಅತ್ಯುನ್ನತ ಗೌರವಗಳಿಗೆ ಭಾಜನರಾಗಿದ್ದಾರೆ.

ಜ್ಞಾನಪೀಠ ಪ್ರಶಸ್ತಿ:

 • ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ನೀಡಲಾಗುತ್ತದೆ.
 • ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು.
 • ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು.
 • ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರುಪಾಯಿ ಚೆಕ್ ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.
 • ಬಂಗಾಳದ ಮಹಾಶ್ವೇತದೇವಿ ರವರು ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ. 1976 ರಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು.
 • ಕರ್ನಾಟಕದ ಕುವೆಂಪು, ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರ ರವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.

ಒಡಿಶಾ ಸರ್ಕಾರದಿಂದ ಬಿಜು ಶಿಶು ಸುರಕ್ಷ್ಯ ಯೋಜನೆಗೆ ಚಾಲನೆ 

ಮಕ್ಕಳ ಆರೈಕೆ ಕೇಂದ್ರ ಮತ್ತು ಆನಾಥಶ್ರಮಗಳಲ್ಲಿರುವ ಆನಾಥ ಮತ್ತು ಹೆಚ್ಐವಿ ಸೋಕು ಪೀಡಿತ ಮಕ್ಕಳ ಪಾಲನೆ ಮಾಡಲು ಒಡಿಶಾ ಸರ್ಕಾರ ಬಿಜು ಶಿಶು ಸುರಕ್ಷ್ಯ ಯೋಜನೆಯನ್ನು ಜಾರಿಗೆ ತಂದಿದೆ. ಆನಾಥ ಮತ್ತು ಹೆಚ್ಐವಿ ಸೋಂಕು ಪೀಡಿತ ಮಕ್ಕಳ ರಕ್ಷಣೆ ಮತ್ತು ಆರೈಕೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

ಯೋಜನೆಯ ಮುಖ್ಯಾಂಶಗಳು:

 • ಹೆಚ್ಐವಿ ಪೀಡಿತ ಮಕ್ಕಳ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ಹಾಗೂ ಉತ್ತಮ ಭವಿಷ್ಯ, ಪುನರ್ವಸತಿಗಾಗಿ ಆರ್ಥಿಕ ನೆರವನ್ನು ನೀಡಲಾಗುವುದು.
 • ಈ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನವನ್ನು ನೀಡಲಿದೆ.
 • ಹೆಣ್ಣು ಮಕ್ಕಳ ಸುಕನ್ಯಾ ಸಮೃದ್ದಿ ಯೋಜನೆ ಖಾತೆಗೆ ರಾಜ್ಯ ಸರ್ಕಾರ ಹೆಣ್ಣು ಮಗುವಿನ ವಯಸ್ಸು 18 ವರ್ಷ ತುಂಬುವವರೆಗೆ ರೂ 1000 ಜಮೆ ಮಾಡಲಿದೆ.
 • ಪ್ರತಿ ಜಿಲ್ಲೆಯ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು ಮತ್ತು ಹೈಯರ್ ಸೆಕೆಂಡರಿ ಸ್ಕೂಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ರೂ 20000ವನ್ನು ನೀಡಲಾಗುವುದು.

 ಯುಪಿಐ ಆಧರಿತ ಭೀಮ್ ಆ್ಯಪ್ ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಸಾಮಾನ್ಯ ಜನರಿಗೆ ಡಿಜಿಟಲ್ ವ್ಯವಹಾರ ನಡೆಸಲು ಸುಲಭವಾಗುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ಭೀಮ್ (BHIM (Bharat Interface for Money)) ಆ್ಯಪ್ ಬಿಡುಗಡೆ ಮಾಡಿದರು. ನವದೆಹಲಿಯ ಟಾಲ್ಕೊಟರಾ ಸ್ಟೇಡಿಯಂನಲ್ಲಿ ನಡೆದ ಡಿಜಿ ಧನ್ ಮೇಳದಲ್ಲಿ ಮೋದಿರವರು ಭೀಮ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು. ಭೀಮ್ ಆ್ಯಪ್ ಯುನಿಪೈಡ್ ಪೇಮೆಂಟ್ ಇಂಟರ್ಫೆಸ್ (ಯುಪಿಐ) ಮತ್ತು ಅನ್ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವೀಸ್ ಡಾಟ (USSD)ದ ಪರಿಷ್ಕೃತ ಆವೃತಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನೇ ಈ ಆ್ಯಪ್‍ಗೆ ಇಡಲಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಮುಖಾಂಶಗಳು:

 • ಭೀಮ್ ಆಧಾರ್ ಆಧರಿತ ಪೇಮೆಂಟ್ ವ್ಯವಸ್ಥೆಯಾಗಿದ್ದು, ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಅಭಿವೃದ್ದಿಪಡಿಸಿದೆ.
 • ಕೇವಲ ಮೊಬೈಲ್ ಸಂಖ್ಯೆ ಬಳಸಿ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಅಥವಾ ವರ್ಗಾವಣೆಯನ್ನು ಮಾಡಬಹುದು. ಬೇಸಿಕ್ ಮೊಬೈಲ್ ಗಳಲ್ಲೂ ಇದನ್ನು ಬಳಸಬಹುದಾಗಿದೆ.
 • ಈ ಆ್ಯಪ್ ಮೂಲಕ ಬಳಕೆದಾರರು QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾಗಿದೆ. ವ್ಯಾಪರಸ್ಥರು ಆ್ಯಪ್ ಮೂಲಕ QR ಸ್ಕ್ಯಾನ್ ಸೃಜಿಸಬಹುದು. ಈ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣವನ್ನು ಪಾವತಿ ಮಾಡಬಹುದು.

ಮಿತಿ ಎಷ್ಟು?

ಒಂದು ಬಾರಿ 10 ಸಾವಿರ ರೂಪಾಯಿ ಮತ್ತು 24 ಗಂಟೆಯಲ್ಲಿ 20 ಸಾವಿರ ರೂಪಾಯಿ ಮೊತ್ತವನ್ನು ಈ App ಮೂಲಕ ವರ್ಗಾವಣೆ ಮಾಡಬಹುದು.

ಸುಸಜ್ಜಿತ ನಗರ ಯೋಜನೆ ಹರಪ್ಪರು ಶಾಂತಿಯಾಗಿರಲು ಕಾರಣ

ಹರಪ್ಪ ನಾಗರಿಕತೆ ಅಳವಡಿಸಿಕೊಂಡಿದ್ದ ಸುಸಜ್ಜಿತ ನಗರ ಯೋಜನೆ ಹರಪ್ಪರು ಶಾಂತಿಯಾಗಿ ಜೀವನ ನಡೆಸಲು ಕಾರಣವಾಯಿತೆಂದು ಸಿಂಧೂ ಕಣಿವೆ ತಜ್ಞರಾದ ಜೊನಾಥನ್ ಮಾರ್ಕ್ ಕೆನೊಯೆರ್ ಅಭಿಪ್ರಾಯಪಟ್ಟಿದ್ದಾರೆ. ಸಮರ್ಥನೀರು ಪೂರೈಕೆ, ಸುಸಜ್ಜಿತವಾದ ಮತ್ತು ಉತ್ತಮವಾದ ಚರಂಡಿ ವ್ಯವಸ್ಥೆ ಹರಪ್ಪರಲ್ಲಿ ಸಂಘರ್ಷ ಕಡಿಮೆಗೊಳಿಸಲು ಕಾರಣವಾಯಿತು ಎನ್ನಲಾಗಿದೆ. ಆ ಮೂಲಕ ಹರಪ್ಪ ನಾಗರಿಕತೆಯ ಈ ಕಲ್ಪನೆಯಿಂದ ನಾವು ಕಲಿಯುವುದು ಸಾಕಷ್ಟಿದೆ.

ಹರಪ್ಪ:

 • ಹರಪ್ಪ ಸಿಂಧೂ ನಾಗರಿಕತೆಯ ಪ್ರಮುಖ ನಗರ ಕೇಂದ್ರ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾವಿ ನದಿಯ ದಡದಲ್ಲಿ ಹರಪ್ಪ ನಗರ ನೆಲೆಗೊಂಡಿತ್ತು.
 • ಸಿಂಧೂ ನಾಗರಿಕತೆಗೆ ಸಂಬಂಧಿಸಿದಂತೆ ಮೊದಲು ಉತ್ಖನನ ಮಾಡಿದ ಸ್ಥಳವಿದು. ದಯಾ ರಾಮ್ ಸಹನಿ ನೇತೃತ್ವದ ತಂಡ 1921 ರಲ್ಲಿ ಈ ಪ್ರದೇಶವನ್ನು ಪತ್ತೆಹಚ್ಚಿತು.
 • ಸುಸಜ್ಜಿತವಾದ ನಗರ ಯೋಜನೆ, ಚರಂಡಿ ವ್ಯವಸ್ಥೆ ಹಾಗೂ ಸುಟ್ಟ ಇಟ್ಟಿಗೆ ಬಳಕೆ ಈ ನಗರದ ಪ್ರಾಮುಖ್ಯತೆ.

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿಗೆ ಪ್ರಚಾರ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ನಿಧಿಗೆ (ಯುನಿಸೆಫ್‌) ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.  ಫುಟ್‌ಬಾಲ್‌ ಆಟಗಾರ ಇಂಗ್ಲೆಂಡ್‌ನ ಡೇವಿಡ್‌ ಬೆಕಂ ಮತ್ತು ನಟಿ ಮಿಲ್ಲಿ ಬೊಬಿ ಬ್ರೌನ್‌ ಅವರು ಪ್ರಿಯಾಂಕಾ ಆಯ್ಕೆಯನ್ನು ಘೋಷಿಸಿದ್ದಾರೆ.

Leave a Reply

Your email address will not be published. Required fields are marked *