ಪ್ರಚಲಿತ ವಿದ್ಯಮಾನಗಳು-ಡಿಸೆಂಬರ್-30,2016

ಮಾಲಿನ್ಯ ತಡೆಯಲು ಪರಿಸರ ತೆರಿಗೆ ಕಾನೂನು ಜಾರಿಗೆ ತರಲಿರುವ ಚೀನಾ

ಮಲಿನಕಾರರಿಗೆ ಅದರಲ್ಲೂ ಭಾರೀ ಉದ್ಯಮಗಳ ಮೇಲೆ ಪರಿಸರ ತೆರಿಗೆ ವಿಧಿಸುವ ಕಾನೂನನ್ನು ಚೀನಾದ ಉನ್ನತ ಶಾಸಕಾಂಗ ಅಂಗೀಕರಿಸಿದ್ದು, ಜನವರಿ 1, 2018 ರಿಂದ ಜಾರಿಗೆ ಬರಲಿದೆ. ತೆರಿಗೆದಾರರಲ್ಲಿ ಪರಿಸರದ ಜಾಗೃತಿ ಮೂಡಿಸುವುದು, ಅತ್ಯುನ್ನತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕಂಪನಿಗಳಿಗೆ ಒತ್ತಡ ಹೇರುವುದು ಮತ್ತು ಸ್ವಚ್ಚ ಉತ್ಪಾದನೆಗೆ ಪರಿವರ್ತನೆಗೊಳ್ಳುವಂತೆ ಮಾಡಲು ಈ ಕಾನೂನನ್ನು ಜಾರಿಗೆ ತರಲಾಗುತ್ತಿದೆ.

 ಕಾನೂನಿನ ಪ್ರಮುಖಾಂಶಗಳು:

 • ಹೊಸ ಕಾನೂನಿನಡಿ ಶಬ್ದ ಮಾಲಿನ್ಯಕ್ಕಾಗಿ ಕಂಪನಿಗಳು ಪ್ರತಿ ತಿಂಗಳಿಗೆ 350 ಯೆನ್ ನಿಂದ 11,200 ಯೆನ್ ಪರಿಸರ ತೆರಿಗೆಯನ್ನು ಪಾವತಿ ಮಾಡಬೇಕು.
 • ಜನ ಮಾಲಿನ್ಯಕಾರಕಗಳ ಮೇಲೆ 1.4 ಯೆನ್, ವಾಯು ಮಾಲಿನ್ಯಕಾರಿಕಗಳ 1.2 ಯೆನ್ ಮತ್ತು ಪ್ರತಿ ಟನ್ ಘನ ತ್ಯಾಜ್ಯದ ಮೇಲೆ 5 ರಿಂದ 1000 ಯೆನ್ ವಿಧಿಸಲು ನಿರ್ಧರಿಸಲಾಗಿದೆ.
 • ಸ್ಥಳೀಯ ಸರ್ಕಾರಗಳು ಜಲ ಮತ್ತು ವಾಯು ಮಾಲಿನ್ಯದ ಮೇಲಿನ ಪರಿಸರ ತೆರಿಗೆಯನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ.
 • ಕಾನೂನು ಉಲ್ಲಂಘನೆ ಮಾಡಿದವರಿಗೆ ಯಾವ ಶಿಕ್ಷೆಯನ್ನು ವಿಧಿಸಬಹುದೆಂದು ತಿಳಿಸಲಾಗಿಲ್ಲ. ಆದರೆ ತೆರಿಗೆ ಕಾನೂನು ಮತ್ತು ಪರಿಸರ ಕಾನೂನು ಉಲ್ಲಂಘನೆ ಮಾಡಿದವರಿಗೆ ವಿಧಿಸಲಾಗುವ ಶಿಕ್ಷೆಗೆ ಅರ್ಹರಾಗಿರುತ್ತಾರೆ ಎನ್ನಲಾಗಿದೆ.

ಹಿನ್ನಲೆ:

ಚೀನಾ ವಿಶ್ವದ ಅತ್ಯಂತ ಹೆಚ್ಚು ಹಸಿರು ಮನೆ ಅನಿಲ ಹೊರಸೂಸುವ ರಾಷ್ಟ್ರ. ವಿದ್ಯುತ್ ಉತ್ಪಾದನೆಗೆ  ಚೀನಾ ಕಲ್ಲಿದ್ದಲ ಮೇಲೆ ಅವಲಂಬಿತವಾಗಿರುವುದರಿಂದ ಹಸಿರು ಮನೆ ಅನಿಲ ಹೊರಸೂಸುವಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. 1979 ರಿಂದ ಚೀನಾ ಮಾಲಿನ್ಯಕಾರಕ ವಿಸರ್ಜನೆ ಶುಲ್ಕವನ್ನು ವಿಧಿಸುತ್ತಿದೆ. ಆದರೆ ಇದನ್ನು ಕಾನೂನು ಮೂಲಕ ಜಾರಿಗೊಳಿಸದೆ ಇರುವ ಕಾರಣ  ಸ್ಥಳೀಯ ಸರ್ಕಾರಗಳು ಮನಬಂದತೆ ಶುಲ್ಕ ವಿಧಿಸುತ್ತಿರುವುದು ವಿರೋದಕ್ಕೆ ಕಾರಣವಾಗಿತ್ತು.

ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಭಾರತದ ಸ್ವದೇಶಿ ನಿರ್ಮಿತ, ಭೂಮಿಯಿಂದ ಭೂಮಿಗೆ ಚಿಮ್ಮುವ ಅತ್ಯಂತ ಶಕ್ತಿಶಾಲಿ  ಖಂಡಾಂತರ ಕ್ಷಿಪಣಿ ಅಗ್ನಿ–5ರ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಒಡಿಶಾದ ವೀಲರ್ ದ್ವೀಪದಲ್ಲಿ ದೂರಗಾಮಿ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು.

ಅಗ್ನಿ-5 ಕ್ಷಿಪಣಿ ಬಗ್ಗೆ:

 • ಅಗ್ನಿ-5 ಕ್ಷಿಪಣಿ ಮೂರು ಹಂತದ ಘನ ನೋದಕ ಖಂಡಾಂತರ ಕ್ಷಿಪಣಿ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಇದನ್ನು ಅಭಿವೃದ್ದಿಪಡಿಸಿದೆ.
 • ಅಗ್ನಿ ಸರಣಿಯ ಇತರೆ ಕ್ಷಿಪಣಿಗಳಿಗೆ ಹೋಲಿಸಿದರೆ ಅಗ್ನಿ-5 ಕ್ಷಿಪಣಿ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.
 • ಅಗ್ನಿ 5 ಕ್ಷಿಪಣಿಯು 17 ಮೀಟರ್‌ ಉದ್ದವಿದೆ; 2 ಮೀಟರ್‌ ಅಗಲವಿದೆ ಮತ್ತು ಉಡಾವಣಾ ಭಾರ ಸುಮಾರು 50 ಟನ್‌ ಇದೆ. ಒಂದು ಟನ್‌ಗಿಂತಲೂ ಅಧಿಕ ತೂಕದ ಅಣು ಸಿಡಿತಲೆಯನ್ನು ಇದು ಒಯ್ಯುವ ಸಾಮರ್ಥ್ಯ ಹೊಂದಿದೆ. ಇದರ ದಾಳಿ ವ್ಯಾಪ್ತಿ 5,000 ಕಿ.ಮೀ ಗಿಂತಲೂ ಹೆಚ್ಚಿದೆ.
 • ಆ ಮೂಲಕ ಈ ಕ್ಷಿಪಣಿ ಚೀನಾದ ಪ್ರತೀ ಸ್ಥಳವೂ ಸೆರಿದಂತೆ ಏಷ್ಯಾ, ಆಫ್ರಿಕಾ ಮತ್ತು ಯರೋಪ್ ಖಂಡದ ಹಲವು ರಾಷ್ಟ್ರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಕ್ಷಿಪಣಿ ಹೊಂದಿದೆ.

ಈ ಕ್ಷಿಪಣಿ ಭಾರತ ಸೇನೆಗೆ ಸೇರ್ಪಡೆಗೊಂಡರೆ ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಲಿದೆ. ಅಮೆರಿಕ, ಚೀನಾ, ಫ್ರಾನ್ಸ್, ಯುಕೆ ಈಗಾಗಲೇ ಖಂಡಾಂತರ ಕ್ಷಿಪಣಿಯನ್ನು ಹೊಂದಿವೆ. ಅಲ್ಲದೇ ಇದರಿಂದ ಭಾರತದ ರಕ್ಷಣಾ ಸಾಮರ್ಥ್ಯವು ಹೆಚ್ಚಲಿದೆ. ಪ್ರಸ್ತುತ ಭಾರತ ಈಗಾಗಲೇ ಅಗ್ನಿ ಕ್ಷಿಪಣಿ ಸರಣಿಯ ಅಗ್ನಿ-1 (700 ಕಿ.ಮೀ ವ್ಯಾಪ್ತಿ), ಅಗ್ನಿ-2 (2000 ಕಿ.ಮೀ ವ್ಯಾಪ್ತಿ), ಅಗ್ನಿ-3 (2500 ಕಿ.ಮೀ ವ್ಯಾಪ್ತಿ) ಮತ್ತು ಅಗ್ನಿ-4 (3,500 ಕಿ.ಮೀ ವ್ಯಾಪ್ತಿಯನ್ನು) ಹೊಂದಿದೆ.

ವಿಶ್ವದ ಅತಿ ಹೆಚ್ಚು ಶಾಖ ನಿರೋಧಕ ವಸ್ತುವನ್ನು ಪತ್ತೆಹಚ್ಚಿದ ವಿಜ್ಞಾನಿಗಳು

ಯುಕೆ ಮೂಲದ ವಿಜ್ಞಾನಿಗಳ ತಂಡ ವಿಶ್ವದ ಅತಿ ಹೆಚ್ಚು ಶಾಖ ನಿರೋಧಕ ವಸ್ತುವನ್ನು ಪತ್ತೆಹಚ್ಚಿದ್ದಾರೆ. “ಹಫ್ನಿಯಂ ಕಾರ್ಬೈಡ್ (Hafnium Carbide)” ವಿಜ್ಞಾನಿಗಳ ಪತ್ತೆಹಚ್ಚಿರುವ ವಿಶ್ವದ ಅತಿ ಹೆಚ್ಚು ಶಾಖ ನಿರೋಧಕತೆಯನ್ನು ಹೊಂದಿರುವ ವಸ್ತು. 3958 ಡಿಗ್ರಿ ಸೆಲ್ಸಿಯಸ್ ಕರಗುವ ಬಿಂದುವನ್ನು ಇದು ಹೊಂದಿದೆ. ಆತ್ಯಾಧುನಿಕ ಲೇಸರ್ ಹೀಟಿಂಗ್ ತಂತ್ರಜ್ಞಾನವನ್ನು ಬಳಸಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.

ಪ್ರಮುಖಾಂಶಗಳು:

 • “ಹಫ್ನಿಯಂ ಕಾರ್ಬೈಡ್ (Hafnium Carbide)” ಮತ್ತು”ಟಾಂಟಲಮ್ ಕಾರ್ಬೈಡ್ (Tantalum Carbide)” ಗಳು ರಿಫ್ರಾಕ್ಟರಿ ಸೆರಾಮಿಕ್ಸ್ ಆಗಿದ್ದು, ಅತ್ಯುತ್ತಮ ತಾಪ ನಿರೋಧಕವಾಗಿವೆ.
 • ಟಾಂಟಲಮ್ ಕಾರ್ಬೈಡ್ 3,768 ಡಿಗ್ರಿ ಸೆಲ್ಸಿಯಸ್ ನಲ್ಲಿ ಕರಗಿದರೆ, ಹಫ್ನಿಯಂ ಕಾರ್ಬೈಡ್ 3,958 ಡಿಗ್ರಿ ಸೆಲ್ಸಿಯಸ್ ನಲ್ಲಿ ಕರಗಿದೆ. ಇವರೆಡನ್ನು ಮಿಶ್ರಣ ಮಾಡಿದಾಗ ಕರಗುವ ಬಿಂದು ಇದಕ್ಕಿಂತಲೂ ಹೆಚ್ಚಿರುವುದನ್ನು ಸಂಶೋಧನೆಯಿಂದ ತಿಳಿದುಬಂದಿದೆ.
 • ಪ್ರಸ್ತುತ ಈ ಪದಾರ್ಥಗಳನ್ನು ಹೈ ಸ್ಪೀಡ್ ವಾಹನಗಳಲ್ಲಿ ಉಷ್ಣ ರಕ್ಷಣೆ ವ್ಯವಸ್ಥೆಯಲ್ಲಿ ಮತ್ತು ಅಣು ವಿದ್ಯುತ್ ಘಟಕಗಳಲ್ಲಿ ಬಳಸಲಾಗುತ್ತಿದೆ.
 • ಈ ಸಂಶೋಧನೆ ಬಾಹ್ಯಕಾಶ ಕ್ಷೇತ್ರಕ್ಕೆ ವರದಾನವಾಗಲಿದೆ. ಭವಿಷ್ಯದಲ್ಲಿ ಬಾಹ್ಯಕಾಶ ನೌಕೆ ಎಂದಿಗಿಂತಲೂ ಹೆಚ್ಚು ವೇಗವಾಗಿ ಚಲಿಸಲು ಸಾಧ್ಯವಾಗಲಿದೆ.

ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ ಪರೀಕ್ಷಾರ್ಥ ಯಶಸ್ವಿ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (DRDO) ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ (Samrt Anti Airfield Weapon (SAAW)) ಅನ್ನು ಭಾರತೀಯ ವಾಯು ಪಡೆಯ ವಿಮಾನದಿಂದ ಯಶಸ್ವಿಯಾಗಿ ಪರೀಕ್ಷಿಸಿದೆ. ಒಡಿಶಾದ ಚಂಡೀಪುರ್ ನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷಾರ್ಥ ಸಮಯದಲ್ಲಿ SAAW ವ್ಯವಸ್ಥೆ ತೃಪ್ತಿದಾಯಕವಾಗಿ ಕಾರ್ಯನಿರ್ವಹಿಸಿದ್ದು, ನಿಗದಿತ ಉದ್ದೇಶವನ್ನು ತಲುಪಲು ಯಶಸ್ವಿಯಾಗಿದೆ.

ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ ಬಗ್ಗೆ:

 • ಸ್ಮಾರ್ಟ್ ಆ್ಯಂಟಿ ಏರ್ಪೀಲ್ಡ್ ವೆಪನ್ ಅನ್ನು ಡಿಆರ್ ಡಿಓ ಅಭಿವೃದ್ದಿಪಡಿಸಿದೆ. ಇದು 120 ಕೆಜಿ ಸ್ಮಾರ್ಟ್ ಕ್ಲಾಸ್ ವೆಪನ್ ಆಗಿದೆ.
 • 100 ಕಿ.ಮೀ ಎತ್ತರದಿಂದ ಭೂಮಿಗೆ ನಿಖರವಾಗಿ ಗುರಿ ಇಡುವ ಸಾಮರ್ಥ್ಯವನ್ನು ಹೊಂದಿದೆ. ಆ ಮೂಲಕ ದೂರದಿಂದಲೇ ನಿಖರವಾಗಿ ಗುರಿಯಿಟ್ಟು ಭಾರತೀಯ ಸೇನೆಗೆ ಬಲತುಂಬಲಿದೆ.
 • ವಿಶ್ವ ದರ್ಜೆಯ ಅತ್ಯುನ್ನತ ಶಸ್ತಾಸ್ತ್ರಗಳಲ್ಲಿ ಇದು ಒಂದಾಗಿದ್ದು, ವಿಮಾನದ ರನ್ ವೇ, ಬಂಕರ್ ಮತ್ತು ವಿಮಾನದ ಹ್ಯಾಂಗರ್ ಅನ್ನು ಧ್ವಂಸಮಾಡಲು ಶಕ್ತವಾಗಿದೆ.

ಹಿನ್ನಲೆ:

SAAW ಯೋಜನೆಗೆ ಕೇಂದ್ರ ಸರ್ಕಾರ ಸೆಪ್ಟೆಂಬರ್ 2013ರಲ್ಲಿ 56.58 ಕೋಟಿಯನ್ನು ಬಿಡುಗಡೆಗೊಳಿಸತ್ತು. ಇದರ ಮೊದಲ ಪರೀಕ್ಷೆಯನ್ನು ಮೇ 2016 ರಲ್ಲಿ ಐಎಎಫ್ ನ ದರಿನ್-II ವಿಮಾನದಿಂದ ಬೆಂಗಳೂರಿನಲ್ಲಿ ನಡೆಸಲಾಗಿತ್ತು.

ಪಂಜಾಬ್ ನಲ್ಲಿ ಭಾರತದ ಮೊದಲ ಎರಡನೇ ಪೀಳಿಗೆ ಎಥನಾಲ್ ಬಯೋ-ರಿಫೈನರಿ ಘಟಕ

ದೇಶದ ಮೊದಲ ಎರಡನೇ ತಲೆಮಾರಿನ ಎಥನಾಲ್ ಜೈವಿಕ ಶುದ್ದೀಕರಣ ಘಟಕ ಪಂಜಾಬ್ ನ ಬಥಿಂದ ಜಿಲ್ಲೆಯ ಟರ್ಕನ್ವಾಲ ಹಳ್ಳಿಯಲ್ಲಿ ಸ್ಥಾಪನೆಯಾಗಲಿದೆ. ಈ ಘಟಕದ ಶಂಕುಸ್ಥಾಪನೆಯನ್ನು ಇತ್ತೀಚೆಗೆ ನೆರವೇರಿಸಲಾಯಿತು. ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ (CPSU), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್, ರೂ 600 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಪ್ರಮುಖಾಂಶಗಳು:

 • ಪ್ರತಿ ದಿನ ಈ ಘಟಕದಲ್ಲಿ 100 ಕಿ.ಲೀ ಎಥನಾಲ್ ಅನ್ನು ಉತ್ಪಾದಿಸಲಾಗುವುದು. ಅಂದರೆ ವಾರ್ಷಿಕ 3.20 ಕೋಟಿ ಲೀಟರ್ ಎಥನಾಲ್ ಅನ್ನು ಕೃಷಿ ತ್ಯಾಜ್ಯದಿಂದ ಉತ್ಪಾದಿಸಲಾಗುವುದು.
 • ಪಂಜಾಬ್ ರಾಜ್ಯದಲ್ಲಿ ಎಥನಾಲ್ ಮಿಶ್ರಣಕ್ಕೆ ಅಗತ್ಯವಿರುವ ಶೇ 26% ಎಥನಾಲ್ ಇದರಿಂದ ಲಭ್ಯವಾಗಲಿದೆ. ಅಲ್ಲದೇ ವಾರ್ಷಿಕ 30,000 ಟನ್ ಜೈವಿಕ ಗೊಬ್ಬರ ಸಹ ತಯಾರಿಸಲಾಗುವುದು.
 • ವಾರ್ಷಿಕ 1 ಲಕ್ಷ ಕೆಜಿ ಬಯೋ-ಸಿಎನ್ ಜಿ ಸಹ ಇಲ್ಲಿ ಉತ್ಪಾದನೆಯಾಗಲಿದೆ. ಬಯೋ-ಸಿಎನ್ ಜಿ ಯನ್ನು ಸಾರಿಗೆ ಮತ್ತು ಅಡುಗೆ ಇಂಧನವಾಗಿ ಬಳಸಬಹುದು.
 • ಈ ಘಟಕದ ಸ್ಥಾಪನೆಯಿಂದ 1200-1400 ಉದ್ಯೋಗ ಸೃಷ್ಟಿಯಾಗಲಿದೆ.
 • ಇವೆಲ್ಲಕ್ಕಿಂತ ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಭತ್ತದ ಹುಲ್ಲನ್ನು ಸುಡುವುದು ತಪ್ಪಲಿದೆ. ಇದರಿಂದ ಇಂಗಾಲದ ಡೈ ಆಕ್ಸೈಡ್ ಅನಿಲ ಬಿಡುಗಡೆ ಗಣನೀಯವಾಗಿ ತಗ್ಗಲಿದೆ.

ಎರಡನೇ ತಲೆಮಾರಿನ ಎಥನಾಲ್ (2nd Generation Ethanol):

ಎರಡನೇ ತಲೆಮಾರಿನ ಎಥನಾಲ್ ಎಂದರೆ ವಿವಿಧ ಬಯೋಮಾಸ್ ನಿಂದ ತಯಾರಿಸಬಹುದಾದ ಇಂಧನ. ಒಂದನೇ ತಲೆಮಾರಿನ ಎಥನಾಲ್ ಅನ್ನು ಕೃಷಿಯೋಗ್ಯ ಬೆಳಗಳಲ್ಲಿನ ಸಕ್ಕರೆ ಮತ್ತು ಎಣ್ಣೆಯನ್ನು ಸಾಂಪ್ರದಾಯಿಕ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಒಂದನೇ ತಲೆಮಾರಿನ ಎಥನಾಲ್ ಗೆ ಹೋಲಿಸಿದರೆ ಎರಡನೇ ತಲೆಮಾರಿನ ಎಥನಾಲ್ ಅನ್ನು ಸಾಂಪ್ರದಾಯಿಕ ತಂತ್ರಜ್ಞಾನದಿಂದ ಉತ್ಪಾದಿಸುವುದು ಸುಲಭವಲ್ಲ ಮತ್ತು ಈ ಎಥನಾಲ್ ಅನ್ನು ಕೃಷಿ ತ್ಯಾಜ್ಯ, ಲಿಗ್ನೊಸೆಲ್ಯುಲೊಸಿಕ್ ಬಯೊಮಾಸ್ ನಿಂದ ತಯಾರಿಸಲಾಗುತ್ತದೆ.

6117 ಕುಚಿಪುಡಿ ನೃತ್ಯಪಟುಗಳಿಂದ ಗಿನ್ನಿಸ್ ದಾಖಲೆ

ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಲ್ಲಿ ಒಂದೇ ಬಾರಿಗೆ ಸುಮಾರು 6117 ಕುಚಿಪುಡಿ ನೃತ್ಯಪಟುಗಳು ಕುಚಿಪುಡಿ ನೃತ್ಯ ಪ್ರದರ್ಶನ ಮಾಡುವ ಮೂಲಕ ನೂತನ ಗಿನ್ನಿಸ್ ದಾಖಲೆಯನ್ನ ನಿರ್ಮಿಸಿದ್ದಾರೆ. 12 ನಿಮಿಷಗಳ  “ಜಯಮು ಜಯಮು” ಕುಚಿಪುಡಿ ನೃತ್ಯ ಪ್ರದರ್ಶನ ಅತಿ ದೀರ್ಘಕಾಲದ ಪ್ರದರ್ಶನವೆಂದು ಗಿನ್ನಿಸ್ ದಾಖಲೆ ಸೇರ್ಪಡೆಗೊಂಡಿದೆ.

ಪ್ರಮುಖಾಂಶಗಳು:

 • ಅಮೆರಿಕ, ಯುಕೆ, ಯುಎಇ, ರಷ್ಯಾ ಮತ್ತು ಹಾಂಕ್ ಕಾಂಗ್ ಸೇರಿದಂತೆ ದೇಶ ವಿದೇಶಗಳ ಕುಚಿಪುಡಿ ನೃತ್ಯಪಟುಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
 • ಆಂಧ್ರಪ್ರದೇಶದ ಸಾಂಸ್ಕೃತಿಕ ಸಂಸ್ಥೆಯಾದ ಸಿಲಿಕಾನ್ ಆಂಧ್ರ ಈ ಕಾರ್ಯಕ್ರಮವನ್ನು ಆಂಧ್ರ ಪ್ರದೇಶ ಸರ್ಕಾರದ ಸಹಕಾರದೊಂದಿಗೆ ಆಯೋಜಿಸಿತ್ತು.
 • ಖ್ಯಾತ ನೃತ್ಯ ನಿರ್ದೇಶಕ ವೆಂಪಟಿ ಚಿನ ಸತ್ಯಂ ರವರು ಜಯಮು ಜಯಮುಗೆ ನೃತ್ಯ ಸಂಯೋಜನೆ ಮಾಡಿದ್ದರು.

ಕುಚಿಪುಡಿ:

 • ಕುಚಿಪುಡಿ ಭಾರತದ ಹತ್ತು ಶಾಸ್ತ್ರೀಯ ನೃತ್ಯಗಳಲ್ಲಿ ಒಂದಾಗಿದೆ. ಈ ನೃತ್ಯದ ಮೂಲ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಒಂದು ಹಳ್ಳಿ. ಆ ಹಳ್ಳಿಯ ಹೆಸರನ್ನೆ ಈ ನೃತ್ಯಕ್ಕೆ ಇಡಲಾಗಿದೆ.
 • ಇದು ನೃತ್ಯ ರೂಪಕ ಒಂದು ರೂಪ. ಸಿದ್ಧೆಂದ್ರ ಯೋಗಿ, ಮಹಾನ್ ಖ್ಯಾತಿ ಮತ್ತು ಬುದ್ಧಿವಂತಿಕೆಯ ಋಷಿ ಕೂಚಿಪುಡಿ ಸಂಸ್ಥಾಪಕ ಪರಿಗಣಿಸಲಾಗಿದೆ.
 • ನೃತ್ಯವನ್ನು ಸಾಂಪ್ರದಾಯಿಕ ಕರ್ನಾಟಕ ಸಂಗೀತ ಉಪಕರಣ ಮತ್ತು ಹಾಡುಗಳನ್ನು ಜೊತೆಗೂಡಿ ಆಕರ್ಷಕವಾದ ಚಲನೆಗಳು ಮತ್ತು ವೇಗದ ಲಯಬದ್ಧ ನಮೂನೆಗಳ ಸರಣಿ ಬಳಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇಂದಿನ ಏಕವ್ಯಕ್ತಿ ಅಥವಾ ಸಮೂಹ ಸಂಗೀತ ನೀಡಲ್ಪಟ್ಟಿರುವ, ಇದು ಇನ್ನೂ ತನ್ನ ಥೀಮ್ ಹಿಂದೂ ಪುರಾಣಗಳಲ್ಲಿ ತೆಗೆದುಕೊಳ್ಳಲಾಗಿದೆ ವಿವಿಧ ಉಳಿಸಿಕೊಂಡಿದೆ.

ಡಿಜಿಟಲಿ ಸುರಕ್ಷತೆ ಗ್ರಾಹಕ ಪ್ರಚಾರಕ್ಕೆ ಗೂಗಲ್ ಇಂಡಿಯಾ ಮತ್ತು ಗ್ರಾಹಕ ವ್ಯವಹಾರ ಸಚಿವಾಲಯ ಒಪ್ಪಂದ

ಗ್ರಾಹಕರಲ್ಲಿ ಆನ್ ಲೈನ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆನ್ ಲೈನ್ ಗ್ರಾಹಕರ ಹಿತಾಸಕ್ತಿ ಕಾಪಾಡಲು ರಾಷ್ಟ್ರವ್ಯಾಪ್ತಿ “ಡಿಜಿಟಲಿ ಸುರಕ್ಷತೆ ಗ್ರಾಹಕ ಪ್ರಚಾರ (Digitally Safe Consumer Campaign)” ಕಾರ್ಯಕ್ರಮವನ್ನು ಆರಂಭಿಸಲು ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯ ಮತ್ತು ಗೂಗಲ್ ಇಂಡಿಯಾ ಒಪ್ಪಂದಕ್ಕೆ ಸಹಿಹಾಕಿವೆ. ಜನವರಿ 2017 ರಲ್ಲಿ ಈ ಪ್ರಚಾರ ಕಾರ್ಯಕ್ರಮ ಆರಂಭವಾಗುವ ನಿರೀಕ್ಷೆ ಇದೆ. ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಗ್ರಾಹಕ ವ್ಯವಹಾರ ಇಲಾಖೆ ಮತ್ತು ಸುಮಾರು 1200 ಗ್ರಾಹಕ ಸಂಸ್ಥೆಗಳಲ್ಲಿ ತರಭೇತಿ ಪಠ್ಯಪುಸ್ತಕಗಳೊಂದಿಗೆ ಪ್ರಚಾರ ಕಾರ್ಯಕ್ರಮ ನಡೆಯಲಿದೆ.

ಪ್ರಮುಖಾಂಶಗಳು:

 • ವರ್ಷಪೂರ್ತಿ ನಡೆಯಲಿರುವ ಈ ಪ್ರಚಾರ ಕಾರ್ಯಕ್ರಮದಲ್ಲಿ, ಇಂಟರ್ನೆಟ್ ಸುರಕ್ಷತೆ ಬಗ್ಗೆ ಗ್ರಾಹಕ ಸಂಸ್ಥೆಗಳು, ಗ್ರಾಹಕ ವ್ಯವಹಾರಗಳ ಇಲಾಖೆ ಸಿಬ್ಬಂದಿ ಮತ್ತು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಲಹೆಗಾರರ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು.
 • ಇದರಡಿ ಗೂಗಲ್ ಇಂಡಿಯಾ ತನ್ನ ಪಾಲುದಾರಿಕೆ ಏಜೆನ್ಸಿಗಳೊಂದಿಗೆ ಕಾರ್ಯಾಗಾರ ಏರ್ಪಾಡಿಸುವ ಮೂಲಕ ಡಿಜಿಟಲ್ ಭದ್ರತೆ ಮತ್ತು ಪ್ರೈವೆಸಿ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.
 • ದೇಶದಾದ್ಯಂತ 250 ಗ್ರಾಹಕ ಸಂಸ್ಥೆಗಳು ಸೇರಿದಂತೆ 500 ಜನರಿಗೆ “ಟ್ರೈನ್ ದಿ ಟ್ರೈನರ್” ಮಾದರಿಯಲ್ಲಿ ತರಭೇತಿಯನ್ನು ನೀಡಲಾಗುವುದು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.