ಮಚ್ಚೆಯುಳ್ಳ ಜಿಂಕೆ ಮತ್ತು ಸಾಂಬಾರ್ ಜಿಂಕೆಯ ಕೊಂಬುಗಳನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲು ಅನುಮತಿ ನೀಡುವಂತೆ ಕೇರಳ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಈ ಸಂಬಂಧ ಕೇರಳ ರಾಜ್ಯ ವನ್ಯಜೀವಿ ಮಂಡಳಿ ಅಧ್ಯಕ್ಷರೂ ಆಗಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ಮೂಲಕ ಕೇರಳ ರಾಜ್ಯ ವನ್ಯಜೀವಿ ಮಂಡಳಿಯೂ ವನ್ಯಜೀವಿ ಸಂರಕ್ಷಣೆ ಕಾಯಿದೆ-1972ಕ್ಕೆ ತಿದ್ದುಪಡಿ ತರಲು ಕೋರಿದೆ.
ಜಿಂಕೆ ಕೊಂಬುಗಳು?
ಜಿಂಕೆಗಳ ತಲೆ ಭಾಗದಿಂದ ಹೊರಚಾಚಿ ಬೆಳೆದಿರುವ ಭಾಗಗಳೆ ಕೊಂಬುಗಳು. ಮಚ್ಚೆಗಳನ್ನು ಹೊಂದಿರುವ ಜಿಂಕೆಗಳು, ಸಾಂಬಾರ್ ಜಿಂಕೆ ಮತ್ತು ಕೂಗುವ ಜಿಂಕೆಗಳು ಕೊಂಬುಗಳನ್ನು ಹೊಂದಿದ್ದು, ಕೇರಳದಲ್ಲಿ ಕಾಣಬಹುದಾಗಿದೆ. ಪ್ರತಿವರ್ಷ ಈ ಕೊಂಬುಗಳು ಕಳಚಿ ಬೀಳುತ್ತವೆ. ಈ ಕೊಂಬುಗಳು ಆಯುರ್ವೇದ ಔಷಧಿ ಗುಣಗಳನ್ನು ಹೊಂದಿದ್ದು, ರಕ್ತ ಪರಿಚಲನೆ, ಮೂಳೆ ಮತ್ತು ಮಾಂಸಖಂಡಗಳನ್ನು ಬಲಿಷ್ಠಗೊಳಿಸಲು ಬಳಸಲಾಗುತ್ತಿದೆ.
ಹಿನ್ನಲೆ:
ಮೃಗಾಲಯದಲ್ಲಿ ಕಳಚಿ ಬಿದ್ದಿರುವ ಜಿಂಕೆಗಳ ಕೊಂಬುಗಳನ್ನು ಸಂಗ್ರಹಿಸಿ ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಬಳಸಲು ಅನುಮತಿ ನೀಡುವಂತೆ ಕೇರಳ ರಾಜ್ಯದ ಸ್ಥಳೀಯ ಆಯುರ್ವೇದ ಔಷಧಿ ತಯಾರಕರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ವನ್ಯಜೀವಿ ಸಂರಕ್ಷಣೆ ಕಾಯಿದೆ-1972 ರಡಿ ಜಿಂಕೆಯ ಕೊಂಬುಗಳ ಮಾರಾಟ ಮತ್ತು ಬಳಸುವುದರ ಮೇಲೆ ನಿಷೇಧ ವಿಧಿಸಲಾಗಿದೆ. ಆಗಾಗಿ ಕೇರಳ ಸರ್ಕಾರ ವನ್ಯಜೀವಿ ಸಂರಕ್ಷಣೆ ಕಾಯಿದೆ-1972ಕ್ಕೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೊರೆ ಹೋಗಿದೆ.
Leave a Reply