ತೆರದ ಜಾಗದಲ್ಲಿ ತ್ಯಾಜ್ಯವನ್ನು ಸುಟ್ಟರೆ ರೂ 25,000 ದಂಡ: ರಾಷ್ಟ್ರೀಯ ಹಸಿರು ಮಂಡಳಿ

ತೆರೆದ ಸ್ಥಳದಲ್ಲಿ ತ್ಯಾಜ್ಯ ಸುಡುವುದನ್ನು ದೇಶಾದ್ಯಂತ ಸಂಪೂರ್ಣ ನಿಷೇಧಿಸಿ ರಾಷ್ಟ್ರೀಯ ಹಸಿರು ಮಂಡಳಿ ಆದೇಶ ನೀಡಿದೆ. ಇದನ್ನು ಉಲ್ಲಂಘಿಸಿದರೆ ಗರಿಷ್ಠ 25 ಸಾವಿರ ರೂ. ದಂಡ ವಿಧಿಸುವಂತೆ ಸೂಚಿಸಿದೆ. ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ, ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ತೀರ್ಪಿನ ಪ್ರಮುಖಾಂಶಗಳು:

  • ತೆರದ ಜಾಗದಲ್ಲಿ ಕಸ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ ಲ್ಯಾಂಡ್ ಪಿಲ್ಲ್ ಪ್ರದೇಶಗಳಲ್ಲೂ ಸುಡುವ ಆಗಿಲ್ಲ.
  • ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಯೋಜನೆ ನಿರ್ವಾಹಕರು, ವ್ಯಾಪಾರಿಗಳು ಸಣ್ಣ ಪ್ರಮಾಣದ ಕಸವನ್ನು ಸುಟ್ಟರೆ 5,000 ರೂ. ಹಾಗೂ ದೊಡ್ಡ ಪ್ರಮಾಣದಲ್ಲಿ ಸುಟ್ಟರೆ 25,000 ರೂ. ಪಾರಿಸರಿಕ ಪರಿಹಾರ ನೀಡಬೇಕು.
  • ನಿಗದಿತ ಕಾಲಾವದಿಯಲ್ಲಿ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು 2016ರ ಘನ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಪಾಲಿಸಬೇಕು.
  • ಕಡಿಮೆ ಬಾಳಿಕೆಯ ಪಿವಿಸಿ ಹಾಗೂ ಕ್ಲೋರಿನೇಟ್‌ಗೊಳಿಸಿದ ಪ್ಲಾಸ್ಟಿಕ್‌ಗಳನ್ನು ಆರು ತಿಂಗಳುಗಳ ಒಳಗೆ ನಿಷೇಧಿಸುವಂತೆ ಪರಿಸರ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಈ ಆದೇಶ ಹೊರಬಿದ್ದ ನಾಲ್ಕು ವಾರಗಳ ಒಳಗೆ ನಿರ್ದೇಶನಗಳು ಜಾರಿಗೆ ಬರಬೇಕು. ನಿಗದಿತ ಕಾಲಮಿತಿಯೊಳಗೆ ಹಂತ ಹಂತವಾಗಿ ಕಾರ್ಯಯೋಜನೆಯನ್ನು ದೇಶದಲ್ಲಿ ಜಾರಿಗೆ ತರಬೇಕೆಂದು ಸೂಚಿಸಲಾಗಿದೆ.
  • ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಹಾಗೂ ಹೂಳುವ ಸ್ಥಳದ ಆಯ್ಕೆ ಮತ್ತು ನಿರ್ಮಾಣವು 2016ರ ಕಾಯ್ದೆಯಂತೆಯೇ ಆಗಬೇಕು. ಜೈವಿಕವಾಗಿ ವಿಘಟನೆಯಾಗದ ತ್ಯಾಜ್ಯ ಮತ್ತು ಮರುಬಳಕೆಯಾಗದ ಪ್ಲಾಸ್ಟಿಕ್‌ಗಳನ್ನು ಹೂಳುವ ಸ್ಥಳದಿಂದ ಪ್ರತ್ಯೇಕಿಸಿ, ದೇಶಾದ್ಯಂತ ಕೈಗೊಳ್ಳುವ ರಸ್ತೆ ಮತ್ತು ತಟಗಳ ಗೋಡೆ ನಿರ್ಮಾಣ ಯೋಜನೆಗಳಲ್ಲಿ ಬಳಸಬೇಕೆಂದು ಆದೇಶದಲ್ಲಿ ವಿವರಿಸಲಾಗಿದೆ.

ರಾಷ್ಟ್ರೀಯ ಹಸಿರು ಮಂಡಳಿ:

ರಾಷ್ಟ್ರೀಯ ಹಸಿರು ಪೀಠ ಒಂದು ಶಾಸನಬದ್ದ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಹಸಿರು ಮಂಡಳಿ ಕಾಯಿದೆ-2010 ರ ಸೆಕ್ಷನ್ 3 ರಡಿ ಕೇಂದ್ರ ಸರ್ಕಾರದ ಅಧಿಸೂಚನೆ ಮೂಲಕ ಸ್ಥಾಪಿಸಲಾಗಿದೆ. ಪರಿಸರ ಸಂಬಂಧಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಭಾರತ ಸಂವಿಧಾನದ ವಿಧಿ 21 ರಡಿ ಪ್ರತಿಯೊಬ್ಬ ಪ್ರಜೆಗೂ ಉತ್ತಮ ವಾತಾವರಣದ ಹಕ್ಕು ಒದಗಿಸಲಾಗಿದೆ.

ಕೃಷ್ಣ ನದಿ ನಿರ್ವಹಣಾ ಮಂಡಳಿಯ ಸಹಾಯ ಸಮಿತಿ ಪುನರ್ ರಚನೆ

ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಕೃಷ್ಣಾ ನದಿ ನಿರ್ವಹಣಾ ಮಂಡಳಿಯ ಸಹಾಯ ಸಮಿತಿಯನ್ನು ಪುನರ್ ರಚನೆ ಮಾಡಿದೆ. ಕೇಂದ್ರ ಜಲ ಆಯೋಗದ ಮಾಜಿ ಮುಖ್ಯಸ್ಥರಾದ ಎ.ಕೆ.ಬಜಾಜ್ ರವರು ಹೊಸ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಗೋಪಾಲ ಕೃಷ್ಣನ್, ಆರ್.ಪಿ. ಪಾಂಡೆ, ಪ್ರದೀಪ್ ಕುಮಾರ್ ಶುಕ್ಲಾ, ಮತ್ತು ಎನ್. ಎನ್. ರಾಯ್ ರವರು ಸಮಿತಿಯ ಸದಸ್ಯರಾಗಿದ್ದಾರೆ.

ಸಮಿತಿಯ ಹೊಣೆಗಾರಿಕೆ:

  • ಆಂಧ್ರ ಪ್ರದೇಶ ಮತ್ತು ತೆಲಂಗಣ ರಾಜ್ಯಗಳಿಗೆ ಸಾಮಾನ್ಯವಾದ ಯೋಜನಾ ಕೈಪಿಡಿಯನ್ನು ರಚಿಸಲು ಕೃಷ್ಣಾ ನದಿ ನಿರ್ವಹಣಾ ಮಂಡಳಿಗೆ ಸಹಾಯ ಮಾಡುವುದು.
  • ಗೋದಾವರಿ ಜಲ ವಿವಾದ ಪ್ರಾಧಿಕಾರ ತೀರ್ಪಿಗೆ ಅನುಗುಣವಾಗಿ ಗೋದಾವರಿ ನದಿ ನೀರನ್ನು ಕೃಷ್ಣಾ ಬೇಸಿನ್ ಗೆ ಹೇಗೆ ವರ್ಗಾಯಿಸಬೇಕು ಎಂದು ನಿರ್ಧರಿಸುವುದು.

ಹಿನ್ನಲೆ:

ಕಳೆದ ಸೆಪ್ಟೆಂಬರ್ ನಲ್ಲಿ ಮೊಹಿಲೆ (Mohile) ಸಮಿತಿ ನೀಡಿದ ತೀರ್ಪು ಏಕಪಕ್ಷೀಯವಾಗಿದ್ದು, ಅನ್ಯಾಯವಾಗಿರುವುದಾಗಿ ತೆಲಂಗಣ ಸರ್ಕಾರ ವಿರೋದ ವ್ಯಕ್ತಪಡಿಸಿತ್ತು. ಆದ್ದರಿಂದ ಈ ಹೊಸ ಸಮಿತಿಯನ್ನು ರಚಿಸಲಾಗಿದೆ. ಕೃಷ್ಣಾ ನದಿ ನಿರ್ವಹಣಾ ಮಂಡಳಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಮೊಹಿಲೆ ಸಮಿತಿಯನ್ನು  ಸೆಪ್ಟಂಬರ್‍ನಲ್ಲಿ ರಚಿಸಲಾಗಿತ್ತು.

ಲಿಂಗ ವೇತನ ಅಸಮಾನತೆ ಭಾರತದಲ್ಲಿ ಅತ್ಯಧಿಕ: ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹೊರತಂದಿರುವ ಜಾಗತಿಕ ವೇತನ ವರದಿ-2016-17 ಯ ಪ್ರಕಾರ ಭಾರತದಲ್ಲಿ ಲಿಂಗ ವೇತನ ಅಸಮಾನತೆ ಅತ್ಯಧಿಕವಾಗಿದೆ ಎಂದು ಹೇಳಲಾಗಿದೆ. ಲಿಂಗ ವೇತನ ತಾರತಮ್ಯ ರಾಷ್ಟ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಪುರುಷ ಮತ್ತು ಮಹಿಳೆಯರ ನಡುವೆ ವೇತನ ಅಸಮಾನತೆ ಶೇ 30 ರಷ್ಟಿದೆ. ಅಂದರೆ ಸಮಾನ ಕೆಲಸಕ್ಕೆ ಪುರುಷರು ಮಹಿಳೆಯರಿಗಿಂತ ಶೇ 30 ರಷ್ಟು ಹೆಚ್ಚು ವೇತನ ಪಡೆಯುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿಯ ಪ್ರಮುಖಾಂಶಗಳು:

  • ಸಿಂಗಾಪುರ ಅತಿ ಕಡಿಮೆ ಲಿಂಗ ವೇತನ ಅಸಮಾನತೆ ಹೊಂದಿರುವ ರಾಷ್ಟ್ರವೆಸಿದೆ. ಸಿಂಗಾಪುರದಲ್ಲಿ ಶೇ 3% ರಷ್ಟು ಮಾತ್ರ ಲಿಂಗ ವೇತನ ಅಸಮಾನತೆ ಇದೆ. ವಿಶ್ವದ ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳ ಪೈಕಿ ಭಾರತಕ್ಕಿಂತ ದಕ್ಷಿಣ ಕೊರಿಯಾದಲ್ಲಿ ಶೇ 37% ರಷ್ಟು ಲಿಂಗ ವೇತನ ಅಸಮಾನತೆ ಇದೆ.
  • ಭಾರತದಲ್ಲಿ ಕಡಿಮೆ ವೇತನ ಪಡೆಯುತ್ತಿರುವವರಲ್ಲಿ ಮಹಿಳೆಯರ ಪಾಲು ಶೇ 60% ರಷ್ಟಿದೆ. ಆ ಮೂಲಕ ಮಹಿಳೆಯರಿಗೆ ಕಡಿಮೆ ವೇತನ ಪಾವತಿಸುತ್ತಿರುವುದಲ್ಲದೆ, ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ಕೆಲವರು ಮಹಿಳೆಯರು.

ವಲಯವಾರು ಅಸಮಾನತೆ:

  • ವೇತನ ಗಳಿಸುವವರಲ್ಲಿ ಮಹಿಳೆಯರ ಪಾಲು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕಡಿಮೆ ಇದೆ. ಜಾಗತಿಕ ಮಟ್ಟದಲ್ಲಿ ವೇತನ ಗಳಿಸುವವರ ಪಾಲು ಶೇ 40% ರಷ್ಟಿದ್ದರೆ, ಏಪ್ಯಾ-ಫೆಸಿಫಿಕ್ ವಲಯದಲ್ಲಿ ಶೇ 38% ರಷ್ಟಿದೆ. ಆದರೆ ದಕ್ಷಿಣ ಏಷ್ಯಾದಲ್ಲಿ ಶೇ 20% ರಷ್ಟಿದೆ.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO):

  • ಐಎಲ್ಒ ವಿಶ್ವಸಂಸ್ಥೆಯ ಏಜೆನ್ಸಿ ಸಂಸ್ಥೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಅದರಲ್ಲೂ ಕಾರ್ಮಿಕರ ಹಿತರಕ್ಷಣೆ, ಸಾಮಾಜಿಕ ರಕ್ಷಣೆ ಮತ್ತು ಎಲ್ಲರಿಗೂ ಉದ್ಯೋಗ ಅವಕಾಶ ಕಲ್ಪಿಸಲು ಹೋರಾಡುವ ಸಂಸ್ಥೆಯಾಗಿದೆ.
  • ಐಎಲ್ಒ ಅನ್ನು1919 ರಲ್ಲಿ ಸ್ಥಾಪಿಸಲಾಗಿದ್ದು, ಇದರ ಕೇಂದ್ರ ಕಚೇರಿ ಸ್ವಿಟ್ಜರ್ಲ್ಯಾಂಡ್ ನ ಜಿನಿವಾದಲ್ಲಿದೆ.

ಮುಖ್ಯಮಂತ್ರಿ ಆದರ್ಶ ಗ್ರಾಮದಡಿ 150 ಗ್ರಾಮಗಳ ಅಭಿವೃದ್ದಿ

ಕೇಂದ್ರ ಸರ್ಕಾರದ ಸಂಸದರ ಆದರ್ಶ ಗ್ರಾಮ ಮಾದರಿಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆ ಜಾರಿಗೆ ತರಲಾಗಿದ್ದು, ಈಯೋಜನೆಯಡಿ 150 ಗ್ರಾಮಗಳು ಮತ್ತು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 200 ಗ್ರಾಮಗಳನ್ನು ಅಭಿವೃದ್ದಿಪಡಿಸಲಾಗುವುದಾಗಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದ್ದಾರೆ.

ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆ

  • ಮುಖ್ಯಮಂತ್ರಿ ಆದರ್ಶ ಯೋಜನೆಯಡಿ ₹ 150 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ಹೆಚ್ಚಾಗಿರುವ 100 ಗ್ರಾಮಗಳು ಹಾಗೂ ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿರುವ 50 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
  • ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಶೇ 50 ಕ್ಕಿಂತ ಹೆಚ್ಚಿರುವ ಸುಮಾರು 2,000 ಗ್ರಾಮಗಳು ಕರ್ನಾಟಕದಲ್ಲಿವೆ. ಇದರಲ್ಲಿ, ಪರಿಶಿಷ್ಟ ಜಾತಿಯ 100 ಗ್ರಾಮಗಳು ಹಾಗೂ ಪರಿಶಿಷ್ಟ ಪಂಗಡದ 50 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
  • ಪ್ರತಿಯೊಂದು ಗ್ರಾಮವನ್ನು ತಲಾ ₹ 1 ಕೋಟಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಸತಿ, ವಿದ್ಯುತ್‌, ಸಮುದಾಯ ಭವನ, ಶಾಲಾ ಕಟ್ಟಡಗಳ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳ ಮೂಲಕ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
  • ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆಯ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ನೀಡಿರುವ ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ:

  • ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆಯಡಿ ಚಿತ್ರದುರ್ಗ, ಕೋಲಾರ, ಮೈಸೂರು, ಚಾಮರಾಜನಗರ ಹಾಗೂ ಕಲಬುರ್ಗಿ ಜಿಲ್ಲೆಗಳ 200 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ.
  • ಈ ಯೋಜನೆಗೆ ಕೇಂದ್ರ ಸರ್ಕಾರ ₹ 40.10 ಕೋಟಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು 2016–17 ನೇ ಸಾಲಿನ ಆಯವ್ಯಯದಲ್ಲಿ ₹ 40 ಕೋಟಿ ಮೀಸಲಿಟ್ಟಿದೆ. ಪ್ರತಿಯೊಂದು ಗ್ರಾಮಕ್ಕೆ ತಲಾ ₹ 40 ಲಕ್ಷ ನೀಡಲಾಗುವುದು. ಇದರಲ್ಲಿ ಕೇಂದ್ರದ ಪಾಲು ₹ 20 ಲಕ್ಷ ಮತ್ತು ರಾಜ್ಯದ ಪಾಲು ₹ 20 ಲಕ್ಷ ಬಿಡುಗಡೆ ಮಾಡಲಾಗುತ್ತದೆ.

Leave a Comment

This site uses Akismet to reduce spam. Learn how your comment data is processed.