ಭ್ರೂಣ ಲಿಂಗ ಪತ್ತೆ ಪರಿಕರಗಳ ಮೇಲೆ ನಿಗಾವಹಿಸಲು ನೋಡಲ್ ಏಜೆನ್ಸಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ

ಇಂಟರ್ನೆಟ್ ಸರ್ಚ್ ಎಂಜಿನ್ ಗಳಾದ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಬಿಂಗ್ ತಾಣಗಳಲ್ಲಿ ಭ್ರೂಣ ಲಿಂಗ ಪತ್ತೆ ಪರೀಕ್ಷೆ ಜಾಹೀರಾತುಗಳನ್ನು ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ. ಅಲ್ಲದೇ ಈ ಸಂಬಂಧ ವೆಬ್ ಸೈಟ್ ಗಳ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರಕ್ಕೆ ನೋಡಲ್ ಏಜೆನ್ಸಿಯನ್ನು ರಚಿಸುವಂತೆ ಆದೇಶ ನೀಡಿದೆ.

ಏನಿದು ಪ್ರಕರಣ?

  • ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಡಾ. ಸಬು ಮ್ಯಾಥ್ಯು ಜಾರ್ಜ್ ರವರು 2008ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿತ್ತು. ಭ್ರೂಣ ಲಿಂಗ ಪತ್ತೆ ಪರಿಕರಗಳನ್ನು ಕಾನೂನು ಬಾಹಿರವೆಂದು 1994 ರಲ್ಲಿ ಘೋಷಿಸಿದ್ದರು, ಬಳಕೆಯಾಗುತ್ತಿರುವ ಬಗ್ಗೆ ಅರ್ಜಿದಾರರು ತಿಳಿಸಿದ್ದರು. ಅಲ್ಲದೇ ಆನ್ ಲೈನ್ ಸರ್ಚ್ ಎಂಜಿನ್ ಗಳಾದ ಗೂಗಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಬಿಂಗ್ ಕಾನೂನು ಉಲ್ಲಂಘಿಸಿ ಈ ಪರಿಕರಗಳ ಬಗ್ಗೆ ಜಾಹೀರಾತು ಪ್ರದರ್ಶಿಸುತ್ತಿವೆ ಎಂದು ತಿಳಿಸಿದ್ದರು.

ಸುಪ್ರೀಂಕೋರ್ಟ್ ಹೇಳಿದ್ದೇನು?

  • 1994ರ ಪ್ರಿ ಕನ್ಸಪ್ಷನ್ ಅಂಡ್ ಫ್ರಿ ನಾಟಲ್ ಡಯೋಗ್ನೊಸ್ಟಿಕ್ಸ್ ಟೆಕ್ನಿಕ್ಸ್ ಕಾಯಿದೆ (PCPNDT)ಯಡಿ ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ಪರಿಕರಗಳನ್ನು ಭಿತ್ತರಿಸಿದವರು ವಿರುದ್ದ ದೂರು ದಾಖಲಿಸಿಕೊಳ್ಳಲು ನೋಡಲ್ ಏಜೆನ್ಸಿಯನ್ನು ರಚಿಸಬೇಕು.
  • ಈ ನೋಡಲ್ ಏಜೆನ್ಸಿ ಕಾನೂನು ಬಾಹಿರವಾಗಿ ಜಾಹೀರಾತು ಪ್ರದರ್ಶಿಸುವ ಆನ್ ಲೈನ್ ಸರ್ಚ್ ಎಂಜಿನ್ ಅಧಿಕಾರಿಗಳನ್ನು ಸಂಪರ್ಕಿಸಿ 36 ಗಂಟೆಯೊಳಗೆ ಜಾಹೀರಾತನ್ನು ರದ್ದುಪಡಿಸುವುದು.
  • ತನ್ನ ಅಂತಿಮ ತೀರ್ಪನ್ನು ಪ್ರಕಟಿಸುವವರೆಗೂ ಈ ಮದ್ಯಂತರ ವ್ಯವಸ್ತೆಯನ್ನು ಮುಂದುವರೆಸಬೇಕು ಎಂದು ಹೇಳಿದೆ.

PCPNDT ಕಾಯಿದೆ-1994:

  • ಪ್ರಿ ಕನ್ಸಪ್ಷನ್ ಅಂಡ್ ಫ್ರಿ ನಾಟಲ್ ಡಯೋಗ್ನೊಸ್ಟಿಕ್ಸ್ ಟೆಕ್ನಿಕ್ಸ್ ಕಾಯಿದೆ-1994 ಭ್ರೂಣ ಲಿಂಗ ಪತ್ತೆಯನ್ನು ನಿಷೇಧಿಸಿದೆ. ಹೆಣ್ಣು ಭ್ರೂಣ ಹತ್ಯೆಯನ್ನು ನಿಲ್ಲಿಸಿ, ಕುಸಿಯುತ್ತಿರುವ ಲಿಂಗನುಪಾತವನ್ನು ತಡೆಯುವ ಸಲುವಾಗಿ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಕಾಯಿದೆಯಡಿ ಲಿಂಗ ತಾರತಮ್ಯ ಮತ್ತು ಲಿಂಗ ಆಯ್ಕೆಯನ್ನು ನಿಷೇಧಿಸಲಾಗಿದೆ.

ಭಾರತ ಉಕ್ಕು ಸಂಶೋಧನೆ ಮತ್ತು ತಂತ್ರಜ್ಞಾನ ಮಿಷನ್ ಸ್ಥಾಪಿಸಲಿರುವ ಉಕ್ಕು ಸಚಿವಾಲಯ

ಉಕ್ಕು ಮತ್ತು ಕಬ್ಬಿಣ ಉತ್ಪಾದನೆ ಕ್ಷೇತ್ರದಲ್ಲಿ ಜಂಟಿ ಸಂಶೋದನೆಗಳನ್ನು ಕೈಗೊಳ್ಳುವ ಸಲುವಾಗಿ ಕೇಂದ್ರ ಉಕ್ಕು ಸಚಿವಾಲಯವೂ ಉಕ್ಕು ಸಂಶೋಧನೆ ಮತ್ತು ತಂತ್ರಜ್ಞಾನ ಮಿಷನ್ (Steel Research and Technology Mission of India (SRTMI)) ಅನ್ನು ಸ್ಥಾಪಿಸಲು ಸಜ್ಜಾಗಿದೆ.  ಕೇಂದ್ರ ಉಕ್ಕು ಸಚಿವಾಲಯ ರಚಿಸಿದ್ದ ಉನ್ನತ ಮಟ್ಟದ ಕಾರ್ಯಪಡೆಯ ಶಿಫಾರಸ್ಸಿನ ಮೇರೆಗೆ SRTMI ಅನ್ನು ಸ್ಥಾಪಿಸಲಾಗುವುದು.

ಪ್ರಮುಖಾಂಶಗಳು:

  • SRTMI ಯನ್ನು ನೋಂದಾಯಿತ ಸಂಸ್ಥೆಯಾಗಿ ಸಂಸ್ಥೆಯಾಗಿ ಸ್ಥಾಪಿಸಲಾಗುವುದು.
  • ಉಕ್ಕು ಕಂಪನಿಗಳ ಸಿಇಓಗಳು, ತಜ್ಞರು ಮತ್ತು ಕೇಂದ್ರ ಉಕ್ಕು ಸಚಿವಾಲಯ ಪ್ರತಿನಿಧಿಗಳನ್ನು ಒಳಗೊಂಡಿರುವ ಆಡಳಿತ ಮಂಡಳಿಯನ್ನು ಹೊಂದಿರಲಿದೆ.
  • SRTMI ನಿರ್ದೇಶಕರು ಈ ಸಂಸ್ಥೆಯ ಕಾರ್ಯಕಾರಿ ಚಟುವಟಿಕೆಗಳನ್ನು ನಿಭಾಯಿಸಲಿದ್ದು, ಇವರಿ ಕರ್ತವ್ಯಕ್ಕೆ ನೆರವಾಗಲು ಅಗತ್ಯ ಸಿಬ್ಬಂದಿಯನ್ನು ಸಂಸ್ಥೆ ಹೊಂದಿರಲಿದೆ.
  • ರೂ 200 ಕೋಟಿ ಮೂಲ ಬಂಡವಾಳದೊಂದಿಗೆ SRTMI ಅನ್ನು ಸ್ಥಾಪಿಸಲಾಗುವುದು. ಕೇಂದ್ರ ಉಕ್ಕು ಸಚಿವಾಲಯ ಶೇ 50% ವೆಚ್ಚವನ್ನು ಭರಿಸಿದರೆ, ಉಕ್ಕು ಕಂಪನಿಗಳು ಉಳಿದ ಮೊತ್ತವನ್ನು ಭರಿಸಲಿವೆ.

ಮಹತ್ವ:

  • ಉಕ್ಕು ಮತ್ತು ಕಬ್ಬಿಣ ಉತ್ಪಾದನೆ ಕ್ಷೇತ್ರಕ್ಕೆ ಇದೊಂದು ವರದಾನವಾಗಲಿದೆ. ಈ ಕ್ಷೇತ್ರಕ್ಕೆ ಅಗತ್ಯವಿರುವ ಸಂಶೋಧನೆ ಮತ್ತು ಅಭಿವೃದ್ದಿ ಕೈಗೊಳ್ಳಲು ಸಂಸ್ಥೆ ನೆರವಾಗಲಿದೆ. ಆ ಮೂಲಕ ಉಕ್ಕು ಮತ್ತು ಕಬ್ಬಿಣ ಕ್ಷೇತ್ರಗಳ ಅಭಿವೃದ್ದಿಗೆ ಪೂರಕವಾಗಲಿದೆ.

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿಂದ ಹೊರನಡೆದ ರಷ್ಯಾ

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿಂದ ರಷ್ಯಾ ಅಧಿಕೃತವಾಗಿ ಹೊರ ಬಂದಿದೆ. ಈ ಸಂಬಂಧ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರವರು ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ. ಆದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ)ಗೆ ಸ್ಥಾನಮಾನ ಮತ್ತು ಅಧಿಕಾರ ನೀಡಿರುವ 2002 ರೋಮ್ ನಿಯಮದಿಂದ ರಷ್ಯಾ ಹೊರಬಂದಿರುವುದಾಗಿ ತಿಳಿಸಿದೆ.

ಏನಿದು ವಿವಾದ:

  • 2014 ರಲ್ಲಿ ಉಕ್ರೇನಿನ ಕ್ರಿಮಿಯ ಪರ್ಯಾಯದ್ವೀಪವನ್ನು ರಷ್ಯಾ ಸಶಸ್ತ್ರ ಸಂಘರ್ಷದ ಮೂಲಕ ಸ್ವಾಧೀನ ಪಡೆಸಿಕೊಂಡಿದೆ ಎಂದು ಐಸಿಸಿ ಹೇಳಿತ್ತು. ಆದರೆ ರಷ್ಯಾ ಈ ಹೇಳಿಕೆಯನ್ನು ಬಲವಾಗಿ ತಿರಸ್ಕರಿಸಿತ್ತು. ಅಲ್ಲದೇ ಸಿರಿಯಾ ಮೇಲೆ ರಷ್ಯಾ ನಡೆಸಿದ ಬಾಂಬ್ ದಾಳಿಯಿಂದ ಅಂತಾರಾಷ್ಟ್ರೀಯ ಒತ್ತಡಕ್ಕೆ ಒಳಗಾಗಿತ್ತು. ಆದರೆ ಇವೆಲ್ಲವನ್ನು ರಷ್ಯಾ ಅಲ್ಲಗೆಳೆದಿತ್ತು. ಇದರ ಜೊತೆಗೆ ರಷ್ಯಾ ಮತ್ತು ಜಾರ್ಜಿಯಾ ನಡುವೆ 2008 ರಲ್ಲಿ ನಡೆದ ಯುದ್ದ ಅಪರಾಧವನ್ನು ಐಸಿಸಿ ವಿಚಾರಣೆ ನಡೆಸುತ್ತಿತ್ತು.

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್:

  • ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನೆದರ್ಲ್ಯಾಂಡ್ ಹೇಗ್ ನಲ್ಲಿದೆ. ಇದು ಅಂತಾರಾಷ್ಟ್ರೀಯ ನ್ಯಾಯಾಲಯ ಪ್ರಾಧಿಕಾರವಾಗಿದೆ.
  • ಜುಲೈ 1998ರಲ್ಲಿ ಅಳವಡಿಸಿಕೊಳ್ಳಲಾದ ರೋಮ್ ನಿಯಮದಡಿ ಐಸಿಸಿಯನ್ನು ಸ್ಥಾಪಿಸಲಾಗಿದ್ದು, 2002 ರಿಂದ ಜಾರಿಗೆ ಬಂದಿದೆ.
  • ಪ್ರಸ್ತುತ 124 ರಾಷ್ಟ್ರಗಳು ರೋಮ್ ನಿಯಮಕ್ಕೆ ಸಹಿ ಮಾಡಿದ್ದು, ಐಸಿಸಿಯ ಸದಸ್ಯ ರಾಷ್ಟ್ರಗಳಾಗಿವೆ. ಭಾರತ ಮತ್ತು ಚೀನಾ ಇದರ ಸದಸ್ಯ ರಾಷ್ಟ್ರಗಳಲ್ಲ.

Leave a Comment

This site uses Akismet to reduce spam. Learn how your comment data is processed.