ಅಂತಾರಾಷ್ಟ್ರೀಕ ಕಾರ್ಮಿಕ ಸಂಸ್ಥೆ (ILO) ಡೈರೆಕ್ಟರ್ ಜನರಲ್ ಆಗಿ ಗೈ ರೈಡರ್ ಪುನರ್ ಆಯ್ಕೆ

ಯುನೈಟೆಕ್ ಕಿಂಗ್ಡಮ್ ನ ಗೈ ರೈಡರ್ (Guy Ryder) ರವರು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿ ಪುನರ್ ಆಯ್ಕೆಯಾಗಿದ್ದಾರೆ. ಇವರ ಎರಡನೇ ಅವಧಿ ಮುಂದಿನ ಐದು ವರ್ಷಗಳ ತನಕ ಇರಲಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಆಡಳಿತ ಮಂಡಳಿ ಇವರನ್ನು ಆಯ್ಕೆಮಾಡಿದ್ದು, ರೈಡರ್ ಅವರು 56 ಮತಗಳ ಪೈಕಿ 54 ಮತಗಳನ್ನು ಪಡೆದರು. ರೈಡರ್ ಅವರು ಐಎಲ್ಒ ದ ಹತ್ತನೇ ಜನರಲ್ ಡೈರೆಕ್ಟರ್, ಮೇ 2012 ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದರು.

ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ:

  • ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವಿಶ್ವಸಂಸ್ಥೆಯ ಏಜೆನ್ಸಿಯಾಗಿದ್ದು, ಕಾರ್ಮಿಕ ಸಮಸ್ಯೆ ಅದರಲ್ಲೂ ಮುಖ್ಯವಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಸಾಮಾಜಿಕ ರಕ್ಷಣೆ ಮತ್ತು ಎಲ್ಲರಿಗೂ ದುಡಿಯುವ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಉದ್ದೇಶ.
  • ಮೊದಲ ವಿಶ್ವ ಸಮರದ ನಂತರ ಲೀಗ್ ಆಫ್ ನೇಷನ್ಸ್ ನ ಏಜೆನ್ಸಿಯಾಗಿ 1919 ರಲ್ಲಿ ಐಎಲ್ಒ ಅನ್ನು ಸ್ಥಾಪಿಸಲಾಗಿದೆ. ಎರಡನೇ ವಿಶ್ವ ಸಮರದ ನಂತರ ವಿಶ್ವಸಂಸ್ಥೆಯ ಏಜೆನ್ಸಿಯಾಗಿ ಇದು ಕಾರ್ಯನಿರ್ವಹಿಸುತ್ತಿದೆ.
  • ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಕೇಂದ್ರ ಕಚೇರಿ ಜಿನಿವಾ, ಸ್ವಿಟ್ಜರ್ಲ್ಯಾಂಡ್ ನಲ್ಲಿದೆ.
  • ಪ್ರಸ್ತುತ ಈ ಸಂಸ್ಥೆ 186 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ಕಾರ್ಮಿಕ ನೀತಿ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸುವ ಹಕ್ಕನ್ನು ಸಂಸ್ಥೆ ಹೊಂದಿದೆ. ಆದರೆ ಯಾವುದೇ ರಾಷ್ಟ್ರದ ಮೇಲೆ ನಿರ್ಬಂಧ ಹೇರುವ ಹಕ್ಕನ್ನು ಹೊಂದಿಲ್ಲ.
  • ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗೆ 1969 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಧಾನ ಮಂತ್ರಿ ಯುವ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ  

ದೇಶದಲ್ಲಿ ಯುವಕರಿಗೆ ಉದ್ಯಮಶೀಲ ವಾತಾವರಣವನ್ನು ಸೃಷ್ಠಿಸುವ ಸಲುವಾಗಿ ಪ್ರಧಾನ ಮಂತ್ರಿ ಯುವ ಯೋಜನೆಗೆ ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮ ಸಚಿವಾಲಯ ಚಾಲನೆ ನೀಡಿದೆ. ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೀವ್ ಪ್ರತಾಪ್ ರುಡಿ ಅವರು ಈ ಯೋಜನೆಗೆ ಚಾಲನೆ ನೀಡಿದರು.

ಯೋಜನೆ ಬಗ್ಗೆ:

  • ಪ್ರಧಾನ ಮಂತ್ರಿ ಯುವ ಯೋಜನೆ ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮ ಸಚಿವಾಲಯದ ಮಹತ್ವದ ಯೋಜನೆಯಾಗಿದೆ. ಮುಂದಿನ ಐದು ವರ್ಷ (2016-17 ರಿಂದ 2020-21) ಈ ಯೋಜನೆ ಚಾಲ್ತಿಯಲ್ಲಿ ಇರಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 499.94 ಕೋಟಿ ಮೀಸಲಿಟ್ಟಿದೆ.
  • ಈ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ ದೇಶದ 3,050 ಸಂಸ್ಥೆಗಳ ಮೂಲಕ ಏಳು ಲಕ್ಷ ವಿದ್ಯಾರ್ಥಿಗಳಿಗೆ ಉದ್ಯಮಶೀಲ ಶಿಕ್ಷಣ ಮತ್ತು ತರಭೇತಿ ನೀಡಲಾಗುವುದು.
  • ಯೋಜನೆಯಡಿ 2200 ಉನ್ನತ ಶಿಕ್ಷಣ ಸಂಸ್ಥೆಗಳು (ಕಾಲೇಜು, ವಿಶ್ವವಿದ್ಯಾಲಯ), 500 ಐಟಿಐ ಸಂಸ್ಥೆಗಳು, 300 ಶಾಲೆಗಳು ಮತ್ತು 50 ಉದ್ಯಮ ಅಭಿವೃದ್ದಿ ಸಂಸ್ಥೆಗಳನ್ನು ಬಳಸಿಕೊಂಡು ತರಭೇತಿ ನೀಡಲಾಗುವುದು.

ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷರಾಗಿ ಭಾರತದ ನರಿಂದರ್ ಬಾತ್ರಾ ಆಯ್ಕೆ

ಭಾರತದ ನರಿಂದರ್‌ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ 45ನೇ ವಾರ್ಷಿಕ ಮಹಾಧಿವೇಷನದ ವೇಳೆ ನಡೆದ ಚುನಾವಣೆಯಲ್ಲಿ ಅವರು ಅತಿ ಹೆಚ್ಚು ಮತಗಳನ್ನು ಗಳಿಸಿದರು.
‘ಹಾಕಿ ಇಂಡಿಯಾ’ದ ಅಧ್ಯಕ್ಷರೂ ಆಗಿರುವ ಬಾತ್ರಾ ಅವರು ಐಎಚ್‌ಎಫ್‌ನ ಅತ್ಯುನ್ನತ ಹುದ್ದೆಗೆ ನಡೆದ ಚುನಾವಣೆ ಯಲ್ಲಿ 68 ಮತಗಳನ್ನು ಗಳಿಸಿದರು. ಐರ್ಲೆಂಡ್‌ನ ಡೇವಿಡ್‌ ಬಲ್‌ಬಿರ್ನಿ  ಮತ್ತು ಆಸ್ಟ್ರೇಲಿಯಾದ ಕೆನ್‌ ರೀಡ್‌ ಕ್ರಮವಾಗಿ 29 ಮತ್ತು 13 ಮತಗಳನ್ನು ಗಳಿಸಲಷ್ಟೇ ಶಕ್ತರಾದರು.

  • ಬಾತ್ರಾ ರವರು ಈ ಹುದ್ದೆಗೆ ಏರಿದ ಏಷ್ಯಾ ಖಂಡದ ಮೊದಲ ವ್ಯಕ್ತಿ.
  • ಸ್ಪೇನ್‌ ದೇಶದ ಲಿಯಾಂಡ್ರೊ ಅವರು 2008 ರಿಂದ ಎಫ್‌ಐಎಚ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಿಯಾಂಡ್ರೊ ಅವರಿಗಿಂತ ಹಿಂದೆ ರೆನೆ ಫ್ರಾಂಕ್‌, ಎತಿ ಯೆನ್‌ ಗ್ಲಿಚಿಚ್‌, ಜಾನ್‌ ಅಂಟಾನಿಯೊ ಕಾಲ್‌ ಜಾಡೊ, ಎಲ್ಸ್‌ ವಾನ್‌ ಬ್ರೆಡಾ ಮುಂತಾದವರು ಐಎಚ್‌ಎಫ್‌ನ ಅಧ್ಯಕ್ಷರಾಗಿದ್ದರು.
  • ಅಂತರರಾಷ್ಟ್ರೀಯ ಹಾಕಿಯ ಆಡಳಿತ ವನ್ನು ಈವರೆಗೆ ಯುರೋಪ್‌ನ ದೇಶಗಳೇ ನೋಡಿಕೊಳ್ಳುತ್ತಿದ್ದವು. ಇದೀಗ ಏಷ್ಯಾಕ್ಕೆ ಆಡಳಿತದ ಚುಕ್ಕಾಣಿ ಸಿಕ್ಕಿದಂತಾಗಿದೆ.
  • ಬಾತ್ರಾ ಅವರು 2014ರ ಅಕ್ಟೋಬರ್‌ನಲ್ಲಿ ‘ಹಾಕಿ ಇಂಡಿಯಾ’ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಅವರು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

Leave a Comment

This site uses Akismet to reduce spam. Learn how your comment data is processed.