ಭಾರತದಿಂದ ನೈಜೀರಿಯಾದಲ್ಲಿ ಉಡುಪು ತರಭೇತಿ ಕೇಂದ್ರ (Apparel Training Centre) ಸ್ಥಾಪನೆ

ನೈಜೀರಿಯಾದಲ್ಲಿ ಜವಳಿ ಕೈಗಾರಿಕೆಯನ್ನು ಉತ್ತೇಜಿಸುವ ಸಲುವಾಗಿ ಭಾರತ ನೈಜೀರಿಯಾದ ಕಡುನ (Kaduna)ದಲ್ಲಿ ಉಡುಪು ತರಭೇತಿ ಕೇಂದ್ರವನ್ನು ಸ್ಥಾಪಿಸಿದೆ. ಇದೇ ಮೊದಲ ಬಾರಿಗೆ ಭಾರತ ನೈಜೀರಿಯಾ ಸರ್ಕಾರದೊಂದಿಗೆ ಇಂತಹ ತರಭೇತಿ ಕೇಂದ್ರವನ್ನು ಸ್ಥಾಪಿಸಿದೆ.

  • ಈ ತರಭೇತಿ ಕೇಂದ್ರವನ್ನು ವಾಣಿಜ್ಯ ಇಲಾಖೆಯ “ಕಾಟನ್ ಟೆಕ್ನಿಕಲ್ ಅಸಿಸ್ಟನ್ಸ್ ಪೋಗ್ರಾಂ ಫಾರ್ ಆಫ್ರಿಕಾ” ಕಾರ್ಯಕ್ರಮದಡಿ ಸ್ಥಾಪಿಸಲಾಗಿದೆ.
  • ಈ ತರಭೇತಿ ಕೇಂದ್ರದ ಮೂಲಕ ಕೌಶಲ್ಯತೆಯನ್ನು ಹೆಚ್ಚಿಸಿ, ನೈಜೀರಿಯಾದಲ್ಲಿ ಜವಳಿ ಕೈಗಾರಿಕೆಯನ್ನು ಉತ್ತೇಜಿಸುವುದು ಇದರ ಮೂಲ ಆಶಯ.

ಭಾರತ-ನೈಜೀರಿಯಾ ಸಂಬಂಧ

ಭಾರತ ಮತ್ತು ನೈಜೀರಿಯಾ ನಡುವೆ ಅತ್ಯುತ್ತಮ ಭಾಂದವ್ಯವಿದೆ. ನೈಜೀರಿಯಾ ದೇಶ ಭಾರತದ ಪ್ರಮುಖ ವ್ಯಾಪಾರ ದೇಶಗಳಲ್ಲಿ ಒಂದು. ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು 2015-16 ರಲ್ಲಿ US 12.17 ಬಿಲಿಯನ್ ಡಾಲರ್ ಇದ್ದರೆ, 2014-15 ರಲ್ಲಿ 16.36 ಬಿಲಿಯನ್ ಡಾಲರ್ ರಷ್ಟಿತ್ತು. ಆಫ್ರಿಕಾದಲ್ಲೇ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ನೈಜೀರಿಯಾ ಭಾರತಕ್ಕೆ ತೈಲ ರಫ್ತು ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಔಷದೀಯ ಉತ್ಪನ್ನ, ಮಷಿನರಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಭಾರತದಿಂದ ಪ್ರಮುಖವಾಗಿ ರಫ್ತಾಗುವ ವಸ್ತುಗಳು.

ದೆಹಲಿಯಲ್ಲಿ ಬ್ರಿಕ್ಸ್ ದೇಶಗಳ ಡ್ರಗ್ ನಿಯಂತ್ರಣ ಪ್ರತಿನಿಧಿಗಳ ಸಭೆ

drug_upಬಿಕ್ಸ್ ದೇಶಗಳ ಮಾದಕ ವಸ್ತು ವಿರೋಧಿ ಪಡೆ ಸಭೆಯನ್ನು ರಾಜಧಾನಿ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಎರಡನೇ ಬಾರಿಗೆ ನಡೆದ ಈ ಸಭೆಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಮಾದಕ ವಸ್ತು ವಿರೋಧಿ ಪ್ರತಿನಿಧಿಗಳು ಭಾಗವಹಿಸಿದ್ದರು. ಒಂದು ದಿನದ ಈ ಸಭೆಯನ್ನು ಗೃಹ ಸಚಿವ ರಾಜನಾಥ್ ಸಿಂಗ್ ರವರು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

  • ಈ ಸಭೆಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆಯೋಜಿಸುತ್ತಿದೆ.
  • ಬ್ರಿಕ್ ಸದಸ್ಯ ರಾಷ್ಟ್ರಗಳ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣಾ ಆಫ್ರಿಕಾ) ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
  • ನಾರ್ಕೊ ಟೆರರಿಸಂ ಮತ್ತು ಮನಿ ಲಾಂಡರಿಗ್ ಬಗ್ಗೆ ವಿಶೇಷವಾಗಿ ಚರ್ಚಿಸಲಾಗಿತ್ತು.
  • ಭಾರತವನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಡೈರೆಕ್ಟರ್ ಜನರಲ್ ಆದ ರಾಜೀವ್ ರಾಯ್ ಭಟ್ನಗರ್ ರವರು ಪ್ರತಿನಿಧಿಸಿದ್ದರು.

ಸಭೆಯ ಬಗ್ಗೆ:

  • ಮಾದಕ ವಸ್ತು ವಿರೋಧಿ ಪಡೆಯ ಸಭೆಯನ್ನು “eThekwani Declaration” ಅನ್ವಯ ಆಯೋಜಿಸಲಾಗುತ್ತಿದೆ. eThekwani Declaration ಅನ್ನು 2013 ರಲ್ಲಿ ದಕ್ಷಿಣಾ ಆಫ್ರಿಕಾದ ಡರ್ಬನ್ ನಲ್ಲಿ ನಡೆದ ಬ್ರಿಕ್ಸ್ ಸಮ್ಮೇಳನದಲ್ಲಿ ಘೋಷಿಸಲಾಗಿದೆ. ಈ ಘೋಷಣೆ ಮುಖಾಂತರ ಬ್ರಿಕ್ಸ್ ರಾಷ್ಟ್ರಗಳು ಮಾದಕ ವಸ್ತು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವಿನಿಮಯ ಮಾಡಿಕೊಳ್ಳುವ ಉದ್ದೇಶಗಳನ್ನು ಹೊಂದಿವೆ.

ಮಹತ್ವಾಕಾಂಕ್ಷಿ “ನಮಾಮಿ ಗಂಗೆ” ಕೇಂದ್ರ ಸರ್ಕಾರದಿಂದ ಚಾಲನೆ

up_upಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಇತ್ತೀಚೆಗೆ ಉತ್ತರಖಂಡದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ಮಲಿನಗೊಂಡಿರುವ ಗಂಗಾ ನದಿ ಸ್ವಚ್ಚತೆ ಮಾಡುವ ಮಹತ್ವದ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಗಂಗಾನದಿಗೆ ಪ್ರತಿನಿತ್ಯ 1500 ದಶಲಕ್ಷ ಲೀಟರ್ ಕಚ್ಚಾ ಚರಂಡಿ ನೀರು ಸೇರುತ್ತದೆ. ಇದರ ಜತೆಗೆ 500 ದಶಲಕ್ಷ ಲೀ. ಕೈಗಾರಿಕಾ ತ್ಯಾಜ್ಯವು 700 ಮಾಲಿನ್ಯಕಾರಕ ಕಾರ್ಖಾನೆಗಳ ಮೂಲಕ ನಿತ್ಯ ಸೇರುತ್ತದೆ, ಇದರಿಂದ ಗಂಗಾ ನದಿ ತೀವ್ರವಾಗಿ ಮಾಲಿನ್ಯಗೊಂಡಿದೆ.

ಯೋಜನೆಯಲ್ಲಿ ಏನಿದೆ?

  • ಗಂಗಾ ನದಿ ಧಾರ್ಮಿಕ ಮಹತ್ವ ಪಡೆದಿದ್ದು, ಜನರ ನಂಬಿಕೆಗೆ ಧಕ್ಕೆಯಾಗದಂತೆ ಯೋಜನೆ ಕೈಗೆತ್ತಿಕೊಳ್ಳಲಾಗು ವುದು. ವಿಶ್ವದಲ್ಲಿ ಲಭ್ಯವಿರುವ ಎಲ್ಲ ಉನ್ನತ ತಂತ್ರಜ್ಞಾನ ಬಳಸಿ ಶುದ್ಧೀಕರಣ ನಡೆಸಲಾಗುವುದು.
  • ಗಂಗಾ ನದಿ ತಟದ 104 ಕಡೆ ಯೋಜನೆ ಆರಂಭ. ಇಲ್ಲಿ ಗಂಗೆಗೆ ಮಲಿನ ನೀರು ಸೇರದಂತೆ ಚರಂಡಿ ನೀರು ಸಂಸ್ಕರಣಾ ಘಟಕ.
  • ಗಂಗೆಯ ಮಾಲಿನ್ಯವನ್ನು ಅಳೆಯಲು ಅಪ್ಲಿಕೇಶನ್ ಮಾನಿಟರ್ ಸ್ಥಾಪನೆ
  • ಗಂಗಾ ನದಿಯಲ್ಲಿ ಹೆಣಗಳನ್ನು ತೇಲಿ ಬಿಡುವುದನ್ನು ತಡೆಯಲು ನದಿ ತಟದಲ್ಲಿ ಶವಸಂಸ್ಕಾರಕ್ಕೆ ಮೋಕ್ಷಧಾಮ ನಿರ್ಮಾಣ ಮಾಡಲಾಗುವುದು.
  • ಗಂಗಾ ನದಿ ದಂಡೆಯಲ್ಲಿರುವ ಕಾರ್ಖಾನೆಗಳ ತ್ಯಾಜ್ಯ ಸಂಸ್ಕರಣೆ, ಮರುಬಳಕೆ ಒಳಗೊಂಡಂತೆ ಕ್ರಮಕೈಗೊಳ್ಳಲಾಗುವುದು.
  • ಗಂಗಾ ನದಿ ಪಾತ್ರದಲ್ಲಿ ಪರಿಸರ ರಕ್ಷಣೆಗೆ ಗಿಡ ನೆಡುವಿಕೆ, ಇದಕ್ಕಾಗಿ 1.34 ಲಕ್ಷ ಹೆಕ್ಟೇರ್ನಲ್ಲಿ 2000 ಕೋಟಿ ವೆಚ್ಚದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. 5 ವರ್ಷದ ಯೋಜನೆಗೆ 20 ಸಾವಿರ ಕೋಟಿ ಮೀಸಲು ಇಡಲಾಗಿದೆ.

ಗುವಾಹಟಿ ನಗರ ಪ್ರಾಣೆಯಾಗಿ “ಡಾಲ್ಪಿನ್”

ಗಂಗಾ ನದಿ ಡಾಲ್ಪಿನ್ (Gangatic River Dolphin) ಅನ್ನು ಅಸ್ಸಾಂ ನ ಗುವಾಹಟಿ ನಗರದ ಪ್ರಾಣಿಯಾಗಿ ಘೋಷಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಗರವೊಂದು ನಗರ ಪ್ರಾಣಿಯನ್ನು ಆಯ್ದುಕೊಳ್ಳುವ ಮೂಲಕ ಗುವಾಹಟಿ ಇತಿಹಾಸ ನಿರ್ಮಿಸಿದೆ.

  • ಗುವಾಹಾಟಿಯ ಕುಮ್ರುಪ್ ಜಿಲ್ಲಾಡಳಿತ ಗಂಗಾ ನದಿ ಡಾಲ್ಫಿನ್(ಗೇಂಜಟಿಕ್ ರಿವರ್ ಡಾಲ್ಫಿನ್)ನನ್ನು ಗುವಾಹಾಟಿ ನಗರ ಪ್ರಾಣಿ ಎಂದು ಘೋಷಿಸಿದೆ.
  • ಅಸ್ಸಾಂನಲ್ಲಿರುವ ಅಪರೂಪದ ಮತ್ತು ವಿನಾಶದ ಅಂಚಿನಲ್ಲಿರುವ ಮೂರು ಪ್ರಾಣಿಗಳಾದ ಗಂಗಾನದಿ ಡಾಲ್ಫಿನ್, ಕಪ್ಪು ಮೃದುಚಿಪ್ಪಿನ ಆಮೆ, ದೊಡ್ಡ ಕೊಕ್ಕಿನ ಕೊಕ್ಕರೆ(ಹರ್ಗಿಲ)ಗಳಲ್ಲಿ ಆನ್ ಲೈನ್ ಮೂಲಕ ಸಮೀಕ್ಷೆ ಮಾಡುವ ಮೂಲಕ ನಗರ ಪ್ರಾಣಿಯನ್ನಾಗಿ ಘೋಷಿಸಲು ತೀರ್ಮಾನಿಸಲಾಗಿತ್ತು.
  • ಸ್ಥಳೀಯವಾಗಿ ಸಿಹು ಎಂದು ಕರೆಸಿಕೊಳ್ಳುವ ಗಂಗಾ ನದಿ ಡಾಲ್ಫಿನ್ ಹೆಚ್ಚು ಮತಗಳಿಸುವ ಮೂಲಕ ಗುವಾಹಟಿ ನಗರ ಪ್ರಾಣಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
  • ಪ್ರಸ್ತುತ ಡಾಲ್ಪಿನ್ ಗಳು ಅಳಿವಿನ ಮಟ್ಟವನ್ನು ತಲುಪಿವೆ. ಗುವಾಹಾಟಿಯ ಬ್ರಹ್ಮಪುತ್ರ ನದಿಯ ತೀರದಲ್ಲಿ ಈಗ ಕೇವಲ 2,000 ಡಾಲ್ಫಿನ್ಗಳು ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ. ವಿನಾಶದ ಅಂಚಿನಲ್ಲಿರುವ ಈ ಪ್ರಭೇದಗಳನ್ನು ಉಳಿಸಲು ಈ ಕ್ರಮಕೈಗೊಳ್ಳಲಾಗಿದೆ.